ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷ ಸಂಘಟನೆಗೆ ಕೊನೆಯವರೆಗೂ ಹೋರಾಟ

ಬೆಳಗಾವಿ ವಿಭಾಗಮಟ್ಟದ ಜೆಡಿಎಸ್‌ ಕಾರ್ಯಕರ್ತರ ತರಬೇತಿ ಕಾರ್ಯಾಗಾರದಲ್ಲಿ ಎಚ್‌.ಡಿ.ದೇವೇಗೌಡ
Last Updated 9 ಮಾರ್ಚ್ 2020, 9:27 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಪಕ್ಷವನ್ನು ಉಳಿಸಿಕೊಳ್ಳುವುದು ತುಂಬಾ ಕಷ್ಟವಾಗಿದೆ. ಆದರೂ ಸಹ ಪಕ್ಷವನ್ನು ಕಟ್ಟಿಬೆಳೆಸಲು ನನ್ನ ಜೀವನದ ಕೊನೆಯ ಗಟ್ಟದ ವರೆಗೂ ಹೋರಾಟ ನಡೆಸುತ್ತೇನೆ. ಇದರಲ್ಲಿ ಎಳ್ಳಷ್ಟು ವಂಚನೆ ಇಲ್ಲ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಹೇಳಿದರು.

ನಗರದಲ್ಲಿ ಎರಡು ದಿನಗಳ ಕಾಲ ನಡೆದ ಬೆಳಗಾವಿ ವಿಭಾಗಮಟ್ಟದ ಜೆಡಿಎಸ್‌ ಕಾರ್ಯಕರ್ತರ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸದ್ಯದ ಪರಿಸ್ಥಿತಿಯಲ್ಲಿ ಪಕ್ಷ ಇಕ್ಕಟ್ಟಿನಲ್ಲಿದೆ. ನನ್ನ ಜೊತೆ ಬೆಳೆದವರೇ ಪಕ್ಷ ತುಳಿಯಲು ಹೊರಟಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಹುಬ್ಬಳ್ಳಿಗೆ ನೈರುತ್ಯ ರೈಲ್ವೆ ಕೇಂದ್ರ ಕಚೇರಿ ಬರದಂತೆ ದೇವೇಗೌಡ ತಡೆದರು ಎಂದು ನನ್ನ ವಿರುದ್ಧ ಈ ಭಾಗದಲ್ಲಿ ವಿಷ ಬೀಜ ಬಿತ್ತಲಾಗಿದೆ. ಇದರಿಂದಾಗಿ ಪಕ್ಷ ಸಂಘಟನೆಗೆ ಸಮಸ್ಯೆಯಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ನೈರುತ್ಯ ರೈಲ್ವೆ ಕೇಂದ್ರ ಕಚೇರಿ ಬೆಂಗಳೂರಿಗೆ ಬೇಕು ಎಂದು ರೈಲ್ವೆ ಕಮಿಟಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ, ಅಂದಿನ ಧಾರವಾಡ ಲೋಕಸಭಾ ಸದಸ್ಯ ವಿಜಯ ಸಂಕೇಶ್ವರ ಅವರು ಹುಬ್ಬಳ್ಳಿಗೆ ನೈರುತ್ಯ ರೈಲ್ವೆ ಕೇಂದ್ರ ಕಚೇರಿ ಮಂಜೂರು ಮಾಡುವಂತೆ ಒತ್ತಾಯಿಸಿ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಪರಿಣಾಮ ವಾಜಪೇಯಿ ಸರ್ಕಾರ ಹುಬ್ಬಳ್ಳಿಗೆ ಮಂಜೂರು ಮಾಡಿತು. ಇದರಲ್ಲಿ ನನ್ನ ಪಾತ್ರವಲ್ಲ. ಈ ತಪ್ಪು ತಿಳಿವಳಿಕೆಯನ್ನು ತೊಳೆಯಬೇಕಾಗಿದೆ’ ಎಂದರು.

‘ಸಾಮಾಜಿಕ ಜಾಲತಾಣದಲ್ಲಿ ಪಕ್ಷ ಹಿಂದೆ ಬಿದ್ದಿದೆ. ಇದರಿಂದ ಅನ್ಯ ಪಕ್ಷಗಳಿಂದ ಜೆಡಿಎಸ್‌ ಬಗ್ಗೆ ಅಪಪ್ರಚಾರ ಹೆಚ್ಚಾಗಿದೆ. ಇದರ ತಡೆಗೆ ಜೆಡಿಎಸ್‌ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳ ಬಳಕೆಗೆ ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು.

‘ಮುಂಬೈ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ ನಮ್ಮ ಶಕ್ತಿ ಕಡಿಮೆ ಇದೆ. ಈ ಶಕ್ತಿ ವೃದ್ಧಿಗೆ ತರಬೇತಿ ಕಾರ್ಯಾಗಾರ ನೆರವಾಗಲಿದೆ. ಈ ಭಾಗದಲ್ಲಿ ಯುವ ಸಮುದಾಯದ ಸಂಘಟನೆಗೆ ಯಾರಾದರೂ ನಾಯಕತ್ವ ವಹಿಸಿಕೊಳ್ಳಲು ಮುಂದೆ ಬಂದರೆ ಮುಕ್ತವಾಗಿ ಅವಕಾಶ ನೀಡಲಾಗುವುದು’ ಎಂದು ಅವರು ಹೇಳಿದರು.

ಹೊರಟ್ಟಿ ಅಸಮಾಧಾನ

‘ರಾಜಕೀಯ ಬೇಸರ ಆಗಿದೆ. ಆದರೆ, ದೇವೇಗೌಡರ ಮುಖನೋಡಿ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ನಮ್ಮ ಉಸಾಬರಿ ಏನಿದ್ದರೂ ದೇವೇಗೌಡರ ಜೊತೆಗೇ ಹೊರತು ಬೇರಾರ ಜೊತೆಯೂ ಇಲ್ಲ’ ಎಂದು ಹೇಳುವ ಮೂಲಕ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅವರು ಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

‘1983ರಿಂದಲೂ ಕಾಂಗ್ರೆಸ್‌, ಬಿಜೆಪಿ ಸೇರುವಂತೆ ನನಗೆ ಆಹ್ವಾನ ಬರುತ್ತಲೇ ಇದೆ. ಆದರೆ, ಅಂದಿನಿಂದ ಇಂದಿನವರೆಗೂ ನನ್ನ ಪಕ್ಷ ನಿಷ್ಠೆಬದಲಾಗಿಲ್ಲ’ ಎಂದು ಹೇಳಿದರು.

ಕರ್ನಾಟಕದ ಆಡಳಿತ ಕರ್ನಾಟಕದಿಂದ

‘ಕರ್ನಾಟಕದಲ್ಲಿ ಕಾಂಗ್ರೆಸ್‌ ಅಥವಾ ಬಿಜೆಪಿ ಆಡಳಿತ ನಡೆಸುವುದು ದೆಹಲಿಯಿಂದ. ಆದರೆ, ಕರ್ನಾಟಕದ ಆಡಳಿತ ಕರ್ನಾಟಕದಿಂದಲೇ ನಡೆಯಬೇಕು ಎಂದಾದರೆ ಅದು ಜೆಡಿಎಸ್‌ವೊಂದರಿಂದ ಮಾತ್ರ ಸಾಧ್ಯ. ಇದುವೇ ನಮ್ಮ ಘೋಷಣೆಯಾಗಬೇಕು’ ಎಂದು ಮುಖಂಡ ವೈ.ಎಸ್‌.ವಿ.ದತ್ತ ಹೇಳಿದರು.

‘ಕಾಂಗ್ರೆಸ್‌, ಬಿಜೆಪಿ ಮುಖಂಡರು ಕರ್ನಾಟಕದ ಪರವಾಗಿ ಎಷ್ಟೇ ಮಾತನಾಡಿದರೂ ಕೇಂದ್ರದಿಂದ ಒಪ್ಪಿಗೆ ಪಡೆಯಬೇಕು. ಹೈಕಮಾಂಡ್‌ ಗುಲಾಮಗಿರಿಯ ರಾಷ್ಟ್ರೀಯ ಪಕ್ಷಗಳಿಗಿಂತ ಸ್ವಾಭಿಮಾನಿ ಜೆಡಿಎಸ್‌ ರಾಜ್ಯಕ್ಕೆ ಮುಖ್ಯ. ಜೆಡಿಎಸ್‌ ಹೈಕಮಾಂಡ್‌ ಇರೋದು ಕರ್ನಾಟಕದಲ್ಲೇ ಎಂಬುದನ್ನು ಎಲ್ಲರೂ ಅರಿಯಬೇಕು’ ಎಂದರು.

‘ಜೆಡಿಎಸ್‌ ಪಕ್ಷ ಸಂಘಟನೆ ಮತ್ತು ಪ್ರಾಧಾನ್ಯತೆಯನ್ನು ಇನ್ನು ಮುಂದೆ ಹಾಸನ, ಮಂಡ್ಯದ ಬದಲು ಉತ್ತರ ಕರ್ನಾಟಕಕ್ಕೆ ನೀಡಲಾಗುವುದು’ ಎಂದು ಹೇಳಿದರು.

ಪ್ರಣಾಳಿಕೆ ಬಿಡುಗಡೆ

ವಿಧಾನ ಪರಿಷತ್‌ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರ ಅವರು, ಪಕ್ಷದ ಅಭ್ಯರ್ಥಿ ಶಿವಶಂಕರ ಕಲ್ಲೂರ ಅವರ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖಂಡರಾದ ಎನ್‌.ಎಚ್‌.ಕೋನರಡ್ಡಿ, ರಾಜಣ್ಣ ಕೊರವಿ, ಬಿ.ಬಿ.ಗಂಗಾಧರಮಠ, ಶಶಿಭೂಷಣ ಹೆಗಡೆ, ಆರ್‌.ಬಿ.ನಾಯಕ್‌, ಗುರುರಾಜ ಹುಣಸಿಮರದ, ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮೂಡಲಗಿ, ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಬೇವಿನಮರದ, ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಆರ್‌.ನಾಯಕ, ಗದಗ ಜಿಲ್ಲಾ ಘಟಕದ ಅಧ್ಯಕ್ಷ ಅಂದನಯ್ಯ ಕುರ್ತುಕೋಟಿಮಠ, ಬಾಗಲಕೋಟೆಯ ಹನುಮಂತ ಮಾವಿನಮರದ, ನಾಸೀರ್‌ ಭಾಗವಾನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT