ಮಂಗಳವಾರ, ಸೆಪ್ಟೆಂಬರ್ 22, 2020
26 °C
ರಾಜ್ಯ ಘಟಕದ ಅಧ್ಯಕ್ಷರಾಗಿ ಎಚ್.ಕೆ.ಕುಮಾರಸ್ವಾಮಿ ನೇಮಕ

ನಿಖಿಲ್‌ಗೆ ಯುವ ಘಟಕದ ಸಾರಥ್ಯ ಬಡ್ತಿ ಪಡೆದ ಮಧು ಬಂಗಾರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಜೆಡಿಎಸ್ ರಾಜ್ಯ ಘಟಕಪುನರ್ ರಚಿಸಿದ್ದು, ಯುವ ಘಟಕದ ಅಧ್ಯಕ್ಷರನ್ನಾಗಿ ನಿಖಿಲ್ ಕುಮಾರಸ್ವಾಮಿಯನ್ನು ನೇಮಕ ಮಾಡಲಾಗಿದೆ. ಎಚ್.ಡಿ.ದೇವೇಗೌಡ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದು, ಮೊಮ್ಮಗ ನಿಖಿಲ್ ಯುವ ಘಟಕದಲ್ಲಿ ಸ್ಥಾನ ಪಡೆದಿದ್ದಾರೆ.

ರಾಜ್ಯ ಘಟಕದ ಅಧ್ಯಕ್ಷರಾಗಿ ಸಕಲೇಶಪುರ ಶಾಸಕ ಎಚ್.ಕೆ.ಕುಮಾರಸ್ವಾಮಿ ನೇಮಕಗೊಂಡಿದ್ದು, ಈವರೆಗೆ ಯುವ ಘಟಕದ ಅಧ್ಯಕ್ಷರಾಗಿದ್ದ ಎಸ್.ಮಧು ಬಂಗಾರಪ್ಪ ಅವರು ಕಾರ್ಯಾಧ್ಯಕ್ಷ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಗುರುವಾರ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ಗಮಿತ ಅಧ್ಯಕ್ಷ ಎಚ್.ವಿಶ್ವನಾಥ್ ಅಧಿಕಾರ ಹಸ್ತಾಂತರಿಸಿದರು.

‘ನೂತನ ಅಧ್ಯಕ್ಷರಿಗೆ ಕೇವಲ ಅಧಿಕಾರ ನೀಡಿದರೆ ಪಕ್ಷ ಕಟ್ಟಲಾಗದು. ಜವಾಬ್ದಾರಿಯ ಜತೆಗೆ ಆರ್ಥಿಕ ಸಂಪನ್ಮೂಲವನ್ನೂ ಒದಗಿಸಬೇಕು’ ಎಂದು ಎಚ್.ವಿಶ್ವನಾಥ್ ಸಲಹೆ ಮಾಡಿದರು.

‘ಪ್ರಮುಖರ ಸಮಿತಿಯಲ್ಲಿ ಇರುತ್ತೇನೆ’

‘ನಾನು ಎಲ್ಲೂ ಹೋಗುವುದಿಲ್ಲ. ಜೆಡಿಎಸ್‌ನಲ್ಲೇ ಇರುತ್ತೇನೆ. ಎಚ್.ಡಿ.ದೇವೇಗೌಡ ಅಧ್ಯಕ್ಷತೆಯಲ್ಲಿ ಪ್ರಮುಖರ ಸಮಿತಿ ರಚನೆ ಆಗಲಿದ್ದು, ಅದರಲ್ಲಿ ನಾನೂ ಇರುತ್ತೇನೆ’ ಎಂದು ಎಚ್.ವಿಶ್ವನಾಥ್ ಸ್ಪಷ್ಟಪಡಿಸಿದರು.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಅವರು ಪಕ್ಷ ತೊರೆಯಲಿದ್ದಾರೆ ಎಂಬ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ದಲಿತ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ

ಆರನೇ ಬಾರಿಗೆ ಶಾಸಕರಾಗಿರುವ ದಲಿತ ಸಮುದಾಯದ ಎಚ್.ಕೆ.ಕುಮಾರಸ್ವಾಮಿ (55) ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ.

ಹಾಸನ ಜಿಲ್ಲೆ ಬೇಲೂರು ಮೀಸಲು ಕ್ಷೇತ್ರದ ಮೂಲಕ ವಿಧಾನಸಭೆ ಪ್ರವೇಶಿಸಿದ್ದು, ಇಲ್ಲಿಂದ ಮೂರು ಸಲ ಶಾಸಕರಾಗಿ ಆಯ್ಕೆಯಾಗಿದ್ದರು. ಕ್ಷೇತ್ರ ಪುನರ್ ವಿಂಗಡಣೆ ನಂತರ ಬೇಲೂರು ಸಾಮಾನ್ಯ ಕ್ಷೇತ್ರವಾಗಿ ಬದಲಾಗಿದ್ದು, ನಂತರ ಸಕಲೇಶಪುರಕ್ಕೆ ವಲಸೆ ಬಂದು ರಾಜಕೀಯ ಜೀವನ ಕಂಡುಕೊಂಡರು. ಈ ಕ್ಷೇತ್ರದಲ್ಲೂ ಸತತವಾಗಿ ಮೂರು ಬಾರಿ ಆಯ್ಕೆ ಆಗಿದ್ದಾರೆ.

ಬಿಎಸ್‌ಸಿ, ಎಲ್‌ಎಲ್‌ಬಿ ಪದವೀಧರರಾಗಿದ್ದು, ಮೂಲತಃ ಹೊಳೆನರಸೀಪುರ ತಾಲ್ಲೂಕಿನವರು. ಜೆಡಿಎಸ್– ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾಗಿದ್ದರು.

ಕಾರ್ಯಾಧ್ಯಕ್ಷ ಸ್ಥಾನಕ್ಕೆ ಮಧು

ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷರಾಗಿದ್ದ ಮಧು ಬಂಗಾರಪ್ಪ ಈಗ ಪಕ್ಷದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಏಳು ವರ್ಷಗಳ ಕಾಲ ಈ ಸ್ಥಾನ ನಿರ್ವಹಿಸಿದ್ದರು.

ಸೊರಬ ಕ್ಷೇತ್ರದಿಂದ ಒಮ್ಮೆ ಶಾಸಕರಾಗಿ ಆಯ್ಕೆ ಆಗಿದ್ದು, ಲೋಕಸಭೆಗೆ ಎರಡು ಬಾರಿ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಪದವೀಧರರಾಗಿದ್ದು, ಸಿನಿಮಾ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದರು.

‘ಅಪಾಯ ಇಲ್ಲ’

‘ಹಿರಿಯರು ಹಾಗೂ ಯುವಕರನ್ನು ಒಳಗೊಂಡ ಪದಾಧಿಕಾರಿಗಳ ತಂಡ ರಚಿಸಿದ್ದು, ಪಕ್ಷ ಸಂಘಟಿಸಲಾಗುತ್ತಿದೆ. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ಧತೆ ನಡೆಸಲಾಗಿದೆ. ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ನಾನು ಎಲ್ಲೂ ಹೇಳಿಲ್ಲ. ಸಮ್ಮಿಶ್ರ ಸರ್ಕಾರ ಇರುತ್ತದೆ. ಯಾರು ಏನೇ ಹೇಳಿದರೂ ಮೈತ್ರಿ ಸರ್ಕಾರಕ್ಕೆ ಅಪಾಯ ಇಲ್ಲ ಎಂದು ಎಚ್.ಡಿ.ದೇವೇಗೌಡ ಸ್ಪಷ್ಟನೆ ನೀಡಿದರು.

***

ಮಂಡ್ಯ ಕ್ಷೇತ್ರದಲ್ಲಿ ನನಗೆ ಮತ ಹಾಕದವರ ಮನ ಗೆಲ್ಲಲು ಪ್ರಯತ್ನಿಸುತ್ತೇನೆ.

- ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು