ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ ಇದೆ ಉಳಿವು ಅಳಿವಿನ ಆಟ

ಅತೃಪ್ತರ ವಿರುದ್ಧ ಅನರ್ಹತೆ ಅಸ್ತ್ರ?
Last Updated 17 ಜುಲೈ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಮೈತ್ರಿ ಸರ್ಕಾರದ ಅಳಿವು–ಉಳಿವು ನಿರ್ಣಾಯಕ ಘಟ್ಟ ತಲುಪಿದೆ. ಸರ್ಕಾರ ಉಳಿಸಲು ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿಕೂಟ ಹಾಗೂ ಉರುಳಿಸಲು ವಿರೋಧ ಪಕ್ಷ ಬಿಜೆಪಿಯ ನಾಯಕರು ತಮ್ಮದೇ ಪಟ್ಟುಗಳನ್ನು ಹಾಕುತ್ತಿದ್ದಾರೆ.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿಶ್ವಾಸಮತ ಯಾಚಿ ಸಲು ಗುರುವಾರ ( ಜುಲೈ 18) ಬೆಳಿಗ್ಗೆ 11ಗಂಟೆಗೆ ಸಮಯ ನಿಗದಿಯಾಗಿದೆ. ‘ಅದೇ ದಿನ ಮೈತ್ರಿ ಸರ್ಕಾರದ ಹಣೆಬರಹ ನಿರ್ಣಯವಾಗಲಿದೆ. ವಿರೋಧ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ನೂತನ ಸರ್ಕಾರ ಶುಕ್ರವಾರವೇ ಅಸ್ತಿತ್ವಕ್ಕೆ ಬರಲಿದೆ’ ಎಂಬ ಲೆಕ್ಕಾಚಾರಗಳು ರಾಜಕೀಯ ವಲಯದಲ್ಲಿ ನಡೆದಿದ್ದವು.

ಅತೃಪ್ತ 15 ಶಾಸಕರು ಸಲ್ಲಿಸಿದ್ದ ಅರ್ಜಿ ಕುರಿತು ಸುಪ್ರೀಂಕೋರ್ಟ್‌ ಸ್ಪಷ್ಟ ಸೂಚನೆ ನೀಡಲಿದೆ ಎಂಬ ಭರವಸೆ ಈ ಶಾಸಕರು ಹಾಗೂ ಬಿಜೆಪಿ ನಾಯಕರದ್ದಾಗಿತ್ತು. ಈ ಶಾಸಕರಿಗೆ ವಿಪ್ ಅನ್ವಯವಾಗುವುದಿಲ್ಲ ಎಂದು ನಿಖರವಾಗಿ ಹೇಳದ ಸುಪ್ರೀಂಕೋರ್ಟ್‌, ಕಲಾಪಕ್ಕೆ ಹಾಜರಾಗುವಂತೆ ಅವರ ಮೇಲೆ ಒತ್ತಡ ಹಾಕುವಂತಿಲ್ಲ ಎಂಬ ಷರತ್ತು ವಿಧಿಸಿ, ತೀರ್ಮಾನ ಕೈಗೊಳ್ಳುವ ವಿವೇಚನಾ ಅಧಿಕಾರ ಸಭಾಧ್ಯಕ್ಷರಿಗೆ ಇದೆ ಎಂದು ಪ್ರತಿಪಾದಿಸಿತು.

ವಿಪ್ ಅನ್ವಯವಾಗುವುದಿಲ್ಲ ಎಂದು ಕೋರ್ಟ್ ಹೇಳಿದ್ದೇ ತಡ ಬಿಜೆಪಿಯಲ್ಲಿ ಉತ್ಸಾಹ ಗರಿಗೆದರಿತು. ಶಾಸಕರು ಹಾಜರಾಗುವುದು ಕಡ್ಡಾಯ ವಾಗದೇ ಇರುವುದರಿಂದ ವಿಶ್ವಾಸ ಮತ ಯಾಚನೆಯಲ್ಲಿ ಕುಮಾರಸ್ವಾಮಿ ಸೋಲುವುದು ಖಚಿತ ಎಂಬ ನಿರ್ಣಯಕ್ಕೂ ಕಮಲ ಪಾಳಯ ಬಂದುಬಿಟ್ಟಿತು.

ಬದಲಾದ ಲೆಕ್ಕಾಚಾರ: ಈ ಬೆಳವಣಿಗೆ ಬೆನ್ನಲ್ಲೇ ಮೈತ್ರಿ ಕೂಟದ ನಾಯಕರು ದಿಢೀರ್ ರಂಗಪ್ರವೇಶ ಮಾಡಿ, ಹಲವು ಸುತ್ತಿನ ಕಾರ್ಯಾಚರಣೆ ನಡೆಸಿದರು.

‌ಸಭಾಧ್ಯಕ್ಷರನ್ನು ಭೇಟಿ ಮಾಡಿ, ರಾಮಲಿಂಗಾರೆಡ್ಡಿ ಬಿಟ್ಟು ತಮ್ಮ ಪಕ್ಷದ 12 ಶಾಸಕರು ಹಾಗೂ ಪಕ್ಷೇತರ ಸದಸ್ಯ ಆರ್. ಶಂಕರ್ ಅವರನ್ನು ಅನರ್ಹಗೊಳಿಸಬೇಕು ಎಂದು ದಾಖಲೆ ಸಮೇತ ಮನವಿ ಸಲ್ಲಿಸಿದರು. ಅಲ್ಲದೇ, ವಿಶ್ವಾಸ ಮತದ ಮೇಲಿನ ಚರ್ಚೆಗೆ ಸಮಯಾವಕಾಶವನ್ನೂ ಕೇಳಿದರು.

ಬಿಟಿಎಂ ಲೇಔಟ್‌ನ ಶಾಸಕ ರಾಮಲಿಂಗಾರೆಡ್ಡಿ ತಮ್ಮ ನಿಲುವು ಬದಲಿಸಿರುವುದು ಮೈತ್ರಿಕೂಟದ ವಿಶ್ವಾ ಸವನ್ನು ಇಮ್ಮಡಿಸಿದೆ. ರಾಜೀನಾಮೆ ವಾಪಸ್ ಪಡೆದು, ವಿಶ್ವಾಸ ಮತದ ವೇಳೆ ಪಕ್ಷದ ಪರ ಮತ ಹಾಕುವುದಾಗಿ ಅವರು ನಾಯಕರಿಗೆ ತಿಳಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಬೆಂಗಳೂರಿನ ಶಾಸಕರಾದ ಮುನಿರತ್ನ, ಎಸ್.ಟಿ. ಸೋಮಶೇಖರ್ ಹಾಗೂ ಬೈರತಿ ಬಸವರಾಜ್, ವಿಜಯನಗರ ಶಾಸಕ ಆನಂದ್‌ಸಿಂಗ್ ಕೂಡ ನಿಲುವು ಬದಲಾಯಿಸಲಿದ್ದಾರೆ. ಆ ಹೊತ್ತಿನಲ್ಲಿ ಪಕ್ಷೇತರರು ಧೋರಣೆ ಬದಲಿಸಬಹುದು ಎಂಬುದು ಮೈತ್ರಿ ನಾಯಕರ ಲೆಕ್ಕಾಚಾರ. ಈ ಕಾರಣಕ್ಕೆ ಕಲಾಪವನ್ನು ಮುಂದಿನವಾರದವರೆಗೂ ಮುಂದೂಡುವ ಯತ್ನ ನಡೆಸಲಾಗಿದೆ ಎಂದು ಮೂಲಗಳು ವಿವರಿಸಿವೆ.

ಬಿಜೆಪಿ ಬತ್ತಳಿಕೆಯ ಅಸ್ತ್ತಗಳು
ಸರ್ಕಾರ ರಚಿಸಿಯೇ ಸಿದ್ಧ ಎಂಬ ಉಮೇದಿನಲ್ಲಿರುವ ಬಿಜೆಪಿ ನಾಯಕರು, ವಿಶ್ವಾಸ ಮತ ಯಾಚನೆ ನಿರ್ಣಯವನ್ನು ಸೋಲಿಸಿ ಮೈತ್ರಿ ಸರ್ಕಾರ ಪತನಗೊಳಿಸುವ ತಂತ್ರಗಾರಿಕೆಯನ್ನು ಹೆಣೆದಿದ್ದಾರೆ.

ಕಾಂಗ್ರೆಸ್–ಜೆಡಿಎಸ್‌ನ 15 ಶಾಸಕರು ರಾಜೀನಾಮೆ ಕೊಟ್ಟಿರುವುದರಿಂದ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಹೆಚ್ಚು ಚರ್ಚೆಗೆ ಅವಕಾಶ ನೀಡದೇ, ಗುರುವಾರ ಸಂಜೆಯೊಳಗೆ ವಿಶ್ವಾಸಮತ ನಿರ್ಣಯವನ್ನು ಮತಕ್ಕೆ ಹಾಕುವಂತೆ ಒತ್ತಾಯಿಸಲಾಗುತ್ತದೆ ಎಂದು ಪಕ್ಷದ ಮೂಲಗಳು ಹೇಳಿವೆ.

ಸಭಾಧ್ಯಕ್ಷರು ಅದಕ್ಕೆ ಒಪ್ಪದೇ ಇದ್ದರೆ ಶಾಂತಿಯುತ ಧರಣಿ ನಡೆಸುವುದು. ಆಡಳಿತ ಪಕ್ಷದ ಸದಸ್ಯರ ಪ್ರಚೋದನಾತ್ಮಕ ಮಾತುಗಳಿಗೆ ಪ್ರತಿಕ್ರಿಯಿಸದೇ ಸಂಯಮ ಕಾಯ್ದುಕೊಳ್ಳುವುದು. ಸಭಾಧ್ಯಕ್ಷರು ಆಡಳಿತ ಪಕ್ಷದ ಬೇಡಿಕೆಗೆ ಮಣೆ ಹಾಕಿ, ನಾಲ್ಕೈದು ದಿನ ಚರ್ಚೆ ಮುಂದುವರಿಸುವ ಸಾಧ್ಯತೆ ಕಂಡರೆ ಅವರ ವಿರುದ್ಧವೇ
ಅವಿಶ್ವಾಸ ನಿರ್ಣಯ ಮಂಡಿಸುವುದು. ವಿಶ್ವಾಸಮತದ ವಿರುದ್ಧ ಮತ ಹಾಕುವಾಗ ತಮ್ಮ ಪಕ್ಷದ ಶಾಸಕರು ಗೈರಾಗುವ ಸಾಧ್ಯತೆ ಕಂಡು ಬಂದರೆ, ಅದಕ್ಕೆ ಪರ್ಯಾಯವಾಗಿ ಕಾಂಗ್ರೆಸ್–ಜೆಡಿಎಸ್ ಶಾಸಕರು ಗೈರಾಗುವಂತೆ ಮಾಡಿ ಸರ್ಕಾರ ಪತನಗೊಳಿಸುವ ಚಿಂತನೆಯೂ ನಡೆದಿದೆ ಎಂದು ಮೂಲಗಳು ಹೇಳಿವೆ.

‘ದೋಸ್ತಿ’ಗಳ ಮುಂದಿರುವ ದಾರಿಗಳು

ರಮೇಶ ಜಾರಕಿಹೊಳಿ, ಮಹೇಶ ಕುಮಠಳ್ಳಿ ಹಾಗೂ ಪಕ್ಷೇತರ ಸದಸ್ಯ ಆರ್‌. ಶಂಕರ್‌ ಅವರನ್ನು ಅನರ್ಹಗೊಳಿಸುವಂತೆ ಸಭಾಧ್ಯಕ್ಷರ ಮೇಲೆ ಒತ್ತಡ ಹೇರುವುದು. ಅವರನ್ನು ಅನರ್ಹಗೊಳಿಸಿ, ಪಕ್ಷದಿಂದ ದೂರ ಹೋಗಿರುವ ಎಲ್ಲ ಶಾಸಕರಿಗೆ ಇದೇ ಬೆದರಿಕೆ ಬಳಸಿ, ವಾಪಸ್ ಕರೆಸುವ ಲೆಕ್ಕಾಚಾರ ಮೈತ್ರಿಕೂಟದ ನಾಯಕರ ಮುಂದಿದೆ.

ವಿಶ್ವಾಸಮತದ ನಿರ್ಣಯದ ಮೇಲೆ ಚರ್ಚೆಗೆ ಕಾಲಮಿತಿ ಹಾಕದಂತೆ ಸಭಾಧ್ಯಕ್ಷರಿಗೆ ಮನವರಿಕೆ ಮಾಡಿ, ಮುಂದಿನ ಮಂಗಳವಾರದವರೆಗೆ ಚರ್ಚೆಯನ್ನು ಕೊಂಡೊಯ್ಯುವುದು. ಶನಿವಾರ–ಭಾನುವಾರ ಕಲಾಪ ಇಲ್ಲದೇ ಇರುವುದರಿಂದ ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಬೇಕಾದ ಕಾರ್ಯಾಚರಣೆ ನಡೆಸುವುದು ನಾಯಕರ ಚಿಂತನೆ.

ಸುಪ್ರೀಂಕೋರ್ಟ್‌ ನೀಡಿರುವ ತೀರ್ಪು ಪಕ್ಷಾಂತರ ನಿಷೇಧ ಕಾಯ್ದೆಗೆ ಪೆಟ್ಟು ನೀಡುವಂತಿದೆ ಎಂಬ ವಾದ ಮುಂದಿಟ್ಟು ಚರ್ಚೆಗೆ ಅವಕಾಶ ಕೋರುವುದು. ವಿಶ್ವಾಸ ಮತದ ನಿರ್ಣಯವನ್ನು ಮತಕ್ಕೆ ಹಾಕುವುದನ್ನು ಮುಂದೂಡುವುದು. ಸರ್ಕಾರದ ಪತನಕ್ಕೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಕುಮ್ಮಕ್ಕಿದೆ ಎಂದು ಟೀಕಿಸಿ ವಿರೋಧ ಪಕ್ಷದವರು ಗದ್ದಲ ಎಬ್ಬಿಸುವಂತೆ ಮಾಡುವುದು. ಇದಕ್ಕೆ ಬಿಜೆಪಿ ಬಲಿಯಾದರೆ ಕಲಾಪ ನಡೆಯುವವರೆಗೂ ಕೆಲವರನ್ನು ಅಮಾನತು ಮಾಡಿ, ವಿಶ್ವಾಸ ಮತ ಗೆಲ್ಲುವಂತೆ ನೋಡಿಕೊಳ್ಳುವುದು ಸದ್ಯದ ಗುರಿ ಎಂದು ಮೂಲಗಳು ಹೇಳಿವೆ.

ಸ್ಪೀಕರ್‌ಗೆ ವಿವೇಚನಾಧಿಕಾರ

ನವದೆಹಲಿ: ಅತೃಪ್ತ ಶಾಸಕರ ರಾಜೀನಾಮೆ ಅರ್ಜಿಗಳನ್ನು ನಿಯಮಾನುಸಾರ ಇತ್ಯರ್ಥಪಡಿಸುವಂತೆ ಸ್ಪೀಕರ್‌ಗೆ ಸೂಚಿಸಿ ಆದೇಶಿಸಿರುವ ಸುಪ್ರೀಂ ಕೋರ್ಟ್‌, ಅಧಿವೇಶನದಲ್ಲಿ ಪಾಲ್ಗೊಳ್ಳುವುದು ಶಾಸಕರ ವಿವೇಚನೆಗೆ ಬಿಟ್ಟ ವಿಷಯ ಎಂದು ಹೇಳಿದೆ.

ಮಂಗಳವಾರ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ಆದೇಶ ಕಾಯ್ದಿರಿಸಿದ್ದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠ ಬುಧವಾರ ಮಧ್ಯಂತರ ಆದೇಶ ಪ್ರಕಟಿಸಿತು.

‘ರಾಜೀನಾಮೆ ಕುರಿತು ಸಂವಿಧಾನವು ಸ್ಪೀಕರ್‌ಗೆ ನೀಡಿರುವ ವಿವೇಚನಾ ಅಧಿಕಾರದಲ್ಲಿ ನಾವು ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ. ಶಾಸಕರು ಅಧಿವೇಶನದಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸುವಂತಿಲ್ಲ. ಈ ಕುರಿತಾದ ನಿರ್ಧಾರ ಅವರಿಗೇ ಬಿಟ್ಟದ್ದು’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT