ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇನ್ನೂ 4 ವರ್ಷ ನಾನೇ ಪಕ್ಷ ಕಟ್ಟುತ್ತೇನೆ’

ಪಕ್ಷವನ್ನು ಸ್ವಂತ ಅಧಿಕಾರಕ್ಕೆ ತರುವ ಪ್ರಯತ್ನದಲ್ಲಿ ಜೆಡಿಎಸ್‌
Last Updated 21 ಜೂನ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಂದಿನ ನಾಲ್ಕು ವರ್ಷ ಮೈತ್ರಿ ಸರ್ಕಾರಕ್ಕೆ ನನ್ನಿಂದ ಚ್ಯುತಿ ಬರುವುದಿಲ್ಲ. ಸರ್ಕಾರ ಉಳಿಸಿಕೊಳ್ಳುವ ಜವಾಬ್ದಾರಿ ಕಾಂಗ್ರೆಸ್‌ಗೂ ಇದೆ. ಸಿದ್ದರಾಮಯ್ಯ ಅವರು ಅವರ ಪಕ್ಷ ಕಟ್ಟಲಿ, ಇನ್ನೂ ನಾಲ್ಕು ವರ್ಷ ನಾನೇ ಪಕ್ಷ ಕಟ್ಟುತ್ತೇನೆ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.

ಇಲ್ಲಿನ ಅರಮನೆ ಮೈದಾನದಲ್ಲಿ ಶುಕ್ರವಾರ ಪಕ್ಷದ ಪರಾಜಿತ ಅಭ್ಯರ್ಥಿಗಳ ಸಭೆಯಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರದ ಉತ್ತಮ ಕೆಲಸಗಳನ್ನು ಚುನಾವಣೆಯಲ್ಲಿ ಉತ್ತಮ ಫಲಿತಾಂಶ ದೊರಕುವ ರೀತಿಯಲ್ಲಿ ಬಳಸಿಕೊಳ್ಳಬೇಕು. ಗ್ರಾಮ ವಾಸ್ತವ್ಯ ರಾಜ್ಯದ ಇತರ ಜಿಲ್ಲೆಗಳಲ್ಲೂ ನಡೆಯಬೇಕು ಎಂದರು.

‘ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಗೆಲುವು ಸುಲಭ ಅಲ್ಲ. ಆದರೆ ಪ್ರಾದೇಶಿಕ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟಿನ ಪ್ರಯತ್ನ ನಡೆಯಲೇಬೇಕು. ಮಹಿಳಾ ಸಮಾವೇಶ, ಪರಿಶಿಷ್ಟ ಜಾತಿ, ಪಂಗಡದವರ ಸಮಾವೇಶ ನಡೆಸುವ ಚಿಂತನೆ ಇದೆ. ಮುಸ್ಲಿಮರಿಗೆ ಪಕ್ಷ ನೀಡಿದಷ್ಟು ಪ್ರಾತಿನಿಧ್ಯ ಮತ್ಯಾರೂ ನೀಡಿಲ್ಲ. ಪಕ್ಷದ ಕಳಕಳಿಯನ್ನು ಜನಸಾಮನ್ಯರಿಗೆ ತಿಳಿಸುವ ಪ್ರಯತ್ನ ಮಾಡಿದರೆ ಮತ್ತೆ ಪಕ್ಷ ಕಟ್ಟಿ ಬೆಳೆಸುವುದು ಕಷ್ಟವಲ್ಲ’ ಎಂದು ದೇವೇಗೌಡರು ಹೇಳಿದರು.

‘ಜೆಡಿಎಸ್‌ನಲ್ಲಿ ಯಾವ ಗೊಂದಲವೂ ಇಲ್ಲ. ಪಕ್ಷ ಬಿಟ್ಟು ಹೋಗುತ್ತಾರೆ ಎಂದವರೆಲ್ಲ ನಮ್ಮ ಬಳಿ ಇದ್ದಾರೆ. ಬಿ.ಎಂ. ಫಾರೂಕ್‌ ಅವರಂತೂ ಸಚಿವ ಸ್ಥಾನ ನೀಡದಿದ್ದರೂ ಜತೆಯಲ್ಲೇ ಇರುವುದಾಗಿ ಹೇಳಿದ್ದಾರೆ. ಕಳೆದ ಬಾರಿಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗಲೂ ಗ್ರಾಮ ವಾಸ್ತವ್ಯ ಮಾಡಿದ್ದರು. ಆದರೆ ಜತೆಗಿದ್ದ ಪಕ್ಷದವರು ಅವರು ಕೈಗೊಂಡ ಉತ್ತಮ ಕೆಲಸ ಗ್ರಾಮದಲ್ಲಿ ಆಗದಂತೆ ನೋಡಿಕೊಂಡರು’ ಎಂದು ಅವರು ದೂರಿದರು.

ಎರಡು ಹಂತದಲ್ಲಿ ಪಾದಯಾತ್ರೆ
ಜೆಡಿಎಸ್‌ ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ಆಗಸ್ಟ್‌ನಿಂದ ಎರಡು ಹಂತದಲ್ಲಿ ಬೃಹತ್‌ ಪಾದಯಾತ್ರೆ ನಡೆಯಲಿದೆ. ಮೊದಲ ಹಂತದಲ್ಲಿ ಕಾವೇರಿಯಿಂದತುಂಗಭದ್ರಾವರೆಗೆ ಹಾಗೂ ಎರಡನೇ ಹಂತದಲ್ಲಿ ತುಂಗಭದ್ರಾದಿಂದ ಮಲಪ್ರಭಾದವರೆಗೆ ಪಾದಯಾತ್ರೆ ನಡೆಯಲಿದೆ. ಈ ಮೂಲಕ ರಾಜ್ಯದ ಉದ್ದಗಲಕ್ಕೆ 6ರಿಂದ 7 ಸಾವಿರ ಕಿ.ಮೀ.ನಷ್ಟು ದೂರದ ಪಾದಯಾತ್ರೆ ನಡೆಯಲಿದೆ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT