ಮಂಗಳವಾರ, ಮೇ 18, 2021
28 °C
ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ಮಹತ್ವದ ಸಭೆ * ಪಟ್ಟು ಸಡಿಲಿಸದಿದ್ದರೆ ಹೊಂದಾಣಿಕೆ ಜಟಿಲ

ಸೀಟು ಹಂಚಿಕೆ: ಕಿತ್ತಾಟಕ್ಕೆ ಇಂದು ತೆರೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಆಪರೇಷನ್‌ ಕಮಲ’ಕ್ಕೆ ಬ್ರೇಕ್‌ ಹಾಕಿ ಬಜೆಟ್‌ ಅಧಿವೇಶನ ಯಶಸ್ವಿಯಾಗಿ ಮುಗಿಸಿರುವ ‘ದೋಸ್ತಿ’ ಪಕ್ಷಗಳ ನಾಯಕರು, ಲೋಕಸಭೆ ಚುನಾವಣಾ ಪೂರ್ವ ಮೈತ್ರಿ ಹಿನ್ನೆಲೆಯಲ್ಲಿ ಸೋಮವಾರ (ಮಾರ್ಚ್‌ 4) ಮಹತ್ವದ ಚರ್ಚೆ ನಡೆಸಲಿದ್ದಾರೆ.

ಆದರೆ, ಸೀಟು ಹಂಚಿಕೆ ಕಿತ್ತಾಟ ಉಭಯ ಪಕ್ಷಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಮಂಡ್ಯ, ಮೈಸೂರು, ಬೆಂಗಳೂರು ಉತ್ತರ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ ಕ್ಷೇತ್ರಗಳ ಹಂಚಿಕೆ ವಿಷಯದಲ್ಲಿ ಎರಡೂ ಪಕ್ಷಗಳ ನಾಯಕರು ಪಟ್ಟು ಸಡಿಲಿಸದಿದ್ದರೆ ಹೊಂದಾಣಿಕೆ ಜಟಿಲವಾಗಲಿದೆ ಎಂದು ಹೇಳಲಾಗುತ್ತಿದೆ.

28 ಲೋಕಸಭಾ ಕ್ಷೇತ್ರಗಳ ಪೈಕಿ, ಕಾಂಗ್ರೆಸ್ ಹಾಲಿ ಪ್ರತಿನಿಧಿಸುತ್ತಿರುವ ಎರಡು ಕ್ಷೇತ್ರಗಳ ಸಹಿತ 12 ಕ್ಷೇತ್ರಗಳನ್ನು ಬಿಟ್ಟು ಕೊಡಬೇಕೆಂದು ಜೆಡಿಎಸ್ ಷರತ್ತು ವಿಧಿಸಿದೆ. ಪಕ್ಷದ ಸಂಸದರಿರುವ 10 ಕ್ಷೇತ್ರಗಳ ಪೈಕಿ ಯಾವುದೇ ಕ್ಷೇತ್ರ ಬಿಟ್ಟುಕೊಡಲು ಸಾಧ್ಯವಿಲ್ಲ ಎಂಬ ಗಟ್ಟಿ ನಿಲುವಿಗೆ ಕಾಂಗ್ರೆಸ್‌ ಬಂದಿದೆ.

ಬಿಜೆಪಿ ವಿರುದ್ಧ ಕಾರ್ಯತಂತ್ರ ರೂಪಿಸಿ, 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವಿನ ದಡ ಸೇರುವುದು ಮುಖ್ಯ. ಹೀಗಾಗಿ, ಗೆಲುವೊಂದೇ ಮಾನದಂಡವಾಗಬೇಕು ಎನ್ನುವುದು ಕಾಂಗ್ರೆಸ್‌ ರಾಜ್ಯ ನಾಯಕರ ವಾದ. ಆದರೆ, ತಮ್ಮ ಪ್ರಾಬಲ್ಯದ ಕ್ಷೇತ್ರಗಳನ್ನು ತಮಗೇ ಬಿಟ್ಟು ಕೊಡಬೇಕೆನ್ನುವುದು ಜೆಡಿಎಸ್‌ ಹಟ.

ಬೆಂಗಳೂರು ಉತ್ತರ, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮಂಡ್ಯ, ಉತ್ತರ ಕನ್ನಡ, ಬೆಳಗಾವಿ ಅಥವಾ ಬೀದರ್ ಸ್ಥಾನಗಳನ್ನು ಜೆಡಿಎಸ್‍ಗೆ ಬಿಟ್ಟುಕೊಡಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಆದರೆ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರಗಳನ್ನು ಜೆಡಿಎಸ್ ಕೇಳುತ್ತಿದೆ. ಮೈತ್ರಿ ಮಾತುಕತೆ ಅಂತಿಮವಾದರೆ ಲೋಕಸಭೆ ಚುನಾವಣೆಗೆ ಮೈತ್ರಿ ಸಲೀಸಾಗುತ್ತದೆ ಮತ್ತು ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗುತ್ತದೆ ಎಂಬುದು ಉಭಯ ಪಕ್ಷಗಳ ನಾಯಕರ ಲೆಕ್ಕಾಚಾರ.

ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರ ಜೊತೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮೊದಲ ಸುತ್ತಿನ ಚರ್ಚೆ ನಡೆಸಿದ್ದಾರೆ. ಬಳಿಕ,  ದಿನೇಶ್‌, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌. ವಿಶ್ವನಾಥ್‌, ಸಚಿವ ಎಚ್‌.ಡಿ. ರೇವಣ್ಣ ಎರಡನೇ ಸುತ್ತಿನ ಚರ್ಚೆ ನಡೆಸಿದ್ದರು. ಆದರೆ, ಚುನಾವಣಾ ತಯಾರಿ, ಗೆಲುವಿನ ಸಾಧ್ಯಾಸಾಧ್ಯತೆ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡಿದ್ದರು. ಆದರೆ, ಸೀಟು ಹಂಚಿಕೆ ಕುರಿತಂತೆ ಯಾವುದೇ ತೀರ್ಮಾನಕ್ಕೆ ಬಂದಿರಲಿಲ್ಲ.

ಮಂಡ್ಯ, ಹಾಸನ ಕ್ಷೇತ್ರಗಳನ್ನು ಬಿಟ್ಟುಕೊಡುವ ಜೊತೆಗೆ, ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳು ಹೆಚ್ಚಾಗಿರುವುದರಿಂದ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡುವುದು ಸೂಕ್ತ ಎಂಬ ನಿರ್ಧಾರಕ್ಕೆ ‘ಕೈ’ ನಾಯಕರು ಬಂದಿದ್ದಾರೆ. ಬೆಂಗಳೂರು ಕೇಂದ್ರದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿ ಒಮ್ಮತದಿಂದ ಕಣಕ್ಕಿಳಿದರೆ ಗೆಲುವು ಸುಲಭವಾಗುತ್ತದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‍ಗೆ ಹೆಚ್ಚು ಬೆಂಬಲವಿದೆ. ಜೆಡಿಎಸ್ ಸಾಥ್ ನೀಡಿದರೆ ಈ ಕ್ಷೇತ್ರ ಮೈತ್ರಿ ಪಾಲಾಗುವುದರಲ್ಲಿ ಅನುಮಾನವಿಲ್ಲ ಎಂಬುದು ರಾಜಕೀಯ ಲೆಕ್ಕಾಚಾರ.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲೂ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವ ತಂತ್ರ ರೂಪಿಸಲಾಗಿದೆ. ಧಾರವಾಡ, ಉತ್ತರ ಕನ್ನಡ, ಬೆಳಗಾವಿ ಮುಂತಾದ ಕಡೆ ಎರಡೂ ಪಕ್ಷಗಳ ಪ್ರಭಾವ ಅಷ್ಟಾಗಿಲ್ಲ. ಇಲ್ಲಿ ದೋಸ್ತಿ ಪಕ್ಷಗಳು ಯಾವ ರೀತಿ ಚುನಾವಣಾ ತಂತ್ರ ರೂಪಿಸುತ್ತವೆ ಎಂಬುದರ ಮೇಲೆ ಗೆಲುವಿನ ಲೆಕ್ಕಾಚಾರ ನಿಂತಿದೆ. ಒಡಕಿಗೆ ಆಸ್ಪದ ಇಲ್ಲದಂತೆ ಸೀಟು ಹಂಚಿಕೆಯಾಗಿ ಒಮ್ಮತದ ಅಭ್ಯರ್ಥಿಗಳು ಕಣಕ್ಕಿಳಿದರೆ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲೇ ಉಭಯ
ಪಕ್ಷಗಳ ನಾಯಕರು ಮಾತುಕತೆ ನಡೆಸಲಿದ್ದಾರೆ.

ದೇವೇಗೌಡ– ‘ಕೈ’ ನಾಯಕರ ಸಭೆ?

ಕುಮಾರಕೃಪಾದಲ್ಲಿ ನಡೆಯಲಿರುವ ಸಮನ್ವಯ ಸಮಿತಿ ಸಭೆಗೂ ಮೊದಲು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಜೊತೆ ಕಾಂಗ್ರೆಸ್‌ ನಾಯಕರು ಚರ್ಚೆ ನಡೆಸುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಅಧ್ಯಕ್ಷತೆಯ ಸಮನ್ವಯ ಸಮಿತಿ ಸಭೆಯಲ್ಲಿ ಸಮಿತಿಯ ಸದಸ್ಯರಾದ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಡ್ಯಾನಿಷ್‌ ಅಲಿ ಭಾಗವಹಿಸಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು