ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೈತ್ರಿ’ ಪ್ರಚಾರಕ್ಕೆ 31ರಂದು ರಾಹುಲ್ ರಣಕಹಳೆ

Last Updated 19 ಮಾರ್ಚ್ 2019, 19:56 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿಯನ್ನು ಜೊತೆಯಾಗಿ ಎದುರಿಸಬೇಕೆಂದು ಸಮ್ಮಿಶ್ರ ಸರ್ಕಾರ ರಚನೆಯಾದ ಸಂದರ್ಭದಲ್ಲೇ ತೀರ್ಮಾನಿಸಿದ್ದೆವು. ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದರಿಂದಲೇ ಉಪಚುನಾವಣೆಯಲ್ಲಿ ನಾಲ್ಕು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು. ಲೋಕಸಭೆ ಚುನಾವಣೆಯಲ್ಲೂ ಈ ಹೊಂದಾಣಿಕೆ ಮತ್ತಷ್ಟು ಗಟ್ಟಿಯಾಗಿ ಮುಂದುವರಿಯಲಿದೆ’ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಮಂಗಳವಾರ ನಡೆದ ಜೆಡಿಎಸ್‌– ಕಾಂಗ್ರೆಸ್‌ ನಾಯಕರ ಜಂಟಿ ಸಭೆಯ ಬಳಿಕ ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

‘ಭಿನ್ನಾಭಿಪ್ರಾಯಗಳನ್ನು ಮರೆತು ಕೆಲಸ ಮಾಡುವಂತೆ ಜಿಲ್ಲಾ ಘಟಕಗಳಿಗೆ ಕಟ್ಟುನಿಟ್ಟಿನ ಆದೇಶ ‌ನೀಡುತ್ತೇವೆ. ಮಾರ್ಚ್‌ 31ರಂದು ಜಂಟಿಯಾಗಿ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಿದ್ದೇವೆ. ಆ ಸಮಾವೇಶದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಚುನಾವಣಾ ರಣಕಹಳೆ ಮೊಳಗಿಸಲಿದ್ದಾರೆ. ಆ ಮೂಲಕ, ರಾಜ್ಯವಷ್ಟೇ ಅಲ್ಲ, ರಾಷ್ಟ್ರೀಯ ಮಟ್ಟದಲ್ಲೂ ಮೈತ್ರಿ ಸಂದೇಶ ರವಾನೆಯಾಗಲಿದೆ’ ಎಂದರು.

‘ಕೆಲವು ಕಡೆಗಳಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿವೆ. ಅದನ್ನು ಆರಂಭದಲ್ಲೇ ಶಮನ ಮಾಡುತ್ತೇವೆ. ಏನೇ ಬಿಕ್ಕಟ್ಟಿದ್ದರೂ ಒಕ್ಕಟ್ಟಿನಿಂದ ಕೆಲಸ ಮಾಡುವ ಹೊಣೆಯನ್ನು ನಾನು ಮತ್ತು ಸಿದ್ದರಾಮಯ್ಯ ಹೊರುತ್ತೇವೆ. ಬಿಕ್ಕಟ್ಟು ಹೇಗೆ ಶಮನ ಮಾಡುತ್ತೇವೆಂದು ನೋಡಿ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ ದೇವೇಗೌಡ ಹೇಳಿದರು.

‘ಮಹಾಘಟಬಂಧನ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಲಘುವಾಗಿ ಮಾತನಾಡಿದ್ದಾರೆ. 15 ರಾಜ್ಯಗಳಲ್ಲಿ ಅವರೂ ಮೈತ್ರಿ ಸರ್ಕಾರವನ್ನೇ ನಡೆಸುತ್ತಿದ್ದಾರೆ. ಅವರಿಗೆ ಘಟಬಂಧನ್ ಬಗ್ಗೆ ಅರಿವು ಇಲ್ಲ ಅನಿಸುತ್ತದೆ’ ಎಂದು ವ್ಯಂಗ್ಯವಾಡಿದರು.

‘ಇವತ್ತಿನ ಸಭೆಗೆ ಪರಮೇಶ್ವರ ಬಾರದಿರುವುದು ಆಕಸ್ಮಿಕ. ಇದಕ್ಕೆ ನೀವು (ಮಾಧ್ಯಮದವರು) ಬೇರೆಯೇ ವ್ಯಾಖ್ಯಾನ ಮಾಡಬೇಡಿ’ ಎಂದು ವಿನಂತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT