ಶನಿವಾರ, ಜನವರಿ 25, 2020
22 °C
ಮೂರ್ನಾಲ್ಕು ದಿನದಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆ

ಎಚ್‌ಡಿಕೆ ಕರೆದರೂ ಬಾರದ ಶಾಸಕರು: ಚುನಾವಣೆಯಲ್ಲಿ ಶೂನ್ಯ ಸಂಪಾದನೆಯಿಂದ ಅಭದ್ರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಉಪಚುನಾವಣೆಯಲ್ಲಿ ಸೋಲುಂಟಾದ ಬಳಿಕ ಜೆಡಿಎಸ್‌ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಸವಾಲು ಪಕ್ಷದ ವರಿಷ್ಠರಿಗೆ ಎದುರಾಗಿದ್ದು, ಶುಕ್ರವಾರ ಎಚ್‌.ಡಿ.ಕುಮಾರಸ್ವಾಮಿ ಅವರ ಷಷ್ಠ್ಯಬ್ದ ಪೂರ್ತಿ ಕಾರ್ಯಕ್ರಮಕ್ಕೂ ಹಲವು ಶಾಸಕರು ಗೈರು ಹಾಜರಾಗಿದ್ದರು.

‘ಇದೊಂದು ಧಾರ್ಮಿಕ ಕಾರ್ಯಕ್ರಮವಾಗಿತ್ತು. ಹೀಗಾಗಿ ಎಲ್ಲ ಶಾಸಕರೂ ಬರಲೇಬೇಕೆಂದಿಲ್ಲ, ನಗರದಲ್ಲಿ ಇದ್ದವರು ಬಂದಿದ್ದರು’ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕುಮಾರಸ್ವಾಮಿ ಅವರು ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆಯನ್ನು ಶೀಘ್ರ ಕರೆಯಲಿದ್ದಾರೆ. ಅಸಮಾಧಾನಗೊಂಡಿರುವ ಶಾಸಕರನ್ನು ಸಮಾಧಾನಪಡಿಸಿ, ಪಕ್ಷದಲ್ಲಿ ಜತೆಯಾಗಿ ಕರೆದೊಯ್ಯುವ ಕುರಿತು ಅವರು ಕಾರ್ಯತಂತ್ರ ರೂಪಿಸಲಿದ್ದಾರೆ’ ಎಂದು ಅವರು ಹೇಳಿದರು.

ಶಾಸಕರನ್ನು ಸೆಳೆಯಲು ಯತ್ನ: ಬಿಜೆಪಿ ಸರ್ಕಾರಕ್ಕೆ ಸದ್ಯ ಸ್ವಂತ ಬಲ ಬಂದಿದೆ. ಜೆಡಿಎಸ್‌ ಶಾಸಕರನ್ನು ಸೆಳೆಯುವ ಅಗತ್ಯ ಇಲ್ಲ. ಆದರೂ ಭವಿಷ್ಯದಲ್ಲಿ ಜೆಡಿಎಸ್‌ ಬಾಹುಳ್ಯದ ಜಿಲ್ಲೆಗಳಲ್ಲಿ ಬಿಜೆಪಿಯನ್ನು ಗಟ್ಟಿಗೊಳಿಸುವ ಸಲುವಾಗಿ ಮೂರನೇ ಒಂದರಷ್ಟು ಶಾಸಕರನ್ನು ಪಕ್ಷಕ್ಕೆ ಸೆಳೆಯುವ ತಂತ್ರಗಾರಿಕೆಯನ್ನು ಬಿಜೆಪಿ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.

ಈ ಕೆಲಸಕ್ಕಾಗಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಒಬ್ಬ ಪ್ರಭಾವಿ ಸಚಿವರು ಹಾಗೂ ಸಂಘಟನೆಯಲ್ಲಿ ಪ್ರಮುಖರಾದ ಶಾಸಕರೊಬ್ಬರಿಗೆ ಹೊಣೆ ಒಪ್ಪಿಸಲಾಗಿದೆ. ಬಿಜೆಪಿಗೆ ಬರುವುದಾದರೆ ಪಕ್ಷಾಂತರ ನಿಷೇಧ ಕಾಯ್ದೆಯ ಕುಣಿಕೆಯಿಂದ ತಪ್ಪಿಸಿಕೊಳ್ಳುವ ತಂತ್ರ ರೂಪಿಸಬೇಕಿದೆ. ವಿಧಾನಸಭೆಯ 34 ಶಾಸಕರಲ್ಲಿ 18 ಮಂದಿ ಹಾಗೂ ವಿಧಾನ ಪರಿಷತ್‌ನ 14ರಲ್ಲಿ 9 ಮಂದಿ ಬಿಜೆಪಿಗೆ ಬರಬೇಕು ಎಂಬ ಷರತ್ತು ಒಡ್ಡಲಾಗಿದೆ. ಈ ಸಂಖ್ಯೆಯನ್ನು ಒಟ್ಟುಗೂಡಿಸಲು ಅತೃಪ್ತ ಜೆಡಿಎಸ್‌ ಶಾಸಕರು ಸಮಯ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಿರಾಸಕ್ತಿ ಕಾಡುತ್ತಿದೆಯೇ?: ಕೆ.ಆರ್‌.ಪೇಟೆಯಂತಹ ಪಕ್ಷದ ಭದ್ರ ಕೋಟೆ ಯಲ್ಲೇ ಸೋಲು ಉಂಟಾದ ಬಳಿಕ ಎಚ್‌.ಡಿ.ಕುಮಾರಸ್ವಾಮಿ ಪಕ್ಷ ಸಂಘಟನೆಯಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಆತಂಕಕ್ಕೆ ಕಾರಣ ಏನು?

ಚುನಾವಣೆಯಲ್ಲಿ ಪಕ್ಷದ ಶೂನ್ಯ ಸಂಪಾದನೆಯಿಂದಾಗಿ ಶಾಸಕರಿಗೆ ಅಭದ್ರತೆ ಮೂಡಿದ್ದು, ಪಕ್ಷದ ‘ಚೌಕಾಸಿ’ ಅವಕಾಶ ತಪ್ಪಿ ಹೋದ ಕಾರಣ ಇನ್ನು ತಮ್ಮನ್ನು ಕೇಳುವವರೇ ಇಲ್ಲ ಎಂಬ ಭಾವನೆ ಕಾಡತೊಡಗಿದೆ. ಹೀಗಾಗಿ ವಿಧಾನಸಭೆಯಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಿಕೊಳ್ಳುವಂತಹ ಅಥವಾ ದೊಡ್ಡ ಮಟ್ಟದಲ್ಲಿ ಪಕ್ಷಾಂತರಗೊಳ್ಳುವಂತಹ ಚಿಂತನೆಯಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ.

ದೇವೇಗೌಡರಿಗೆ ವಯಸ್ಸಾಯಿತು, ಕುಮಾರಸ್ವಾಮಿ ಅವರಿಗೆ ನಿರಾಸಕ್ತಿ ಕಾಡುತ್ತಿದೆ, ಎಚ್‌.ಡಿ.ರೇವಣ್ಣ ಪ್ರಭಾವ ಹಾಸನ ಜಿಲ್ಲೆಗಷ್ಟೇ ಸೀಮಿತ. ಹೀಗಾಗಿ ಪಕ್ಷದ ಶಾಸಕರಿಗೆ ಭವಿಷ್ಯದ ಚಿಂತೆ ಶುರುವಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು