ಯಾರಾದರೂ ಹೋಗಲಿ, ಪಕ್ಷ ಕಟ್ಟುತ್ತೇನೆ: ಎಚ್.ಡಿ.ದೇವೇಗೌಡ

ಭಾನುವಾರ, ಜೂನ್ 16, 2019
29 °C
ಜೆಡಿಎಸ್‌ನಿಂದ ಆಯ್ಕೆಯಾದ ನಗರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಎಚ್‌.ಡಿ. ದೇವೇಗೌಡ

ಯಾರಾದರೂ ಹೋಗಲಿ, ಪಕ್ಷ ಕಟ್ಟುತ್ತೇನೆ: ಎಚ್.ಡಿ.ದೇವೇಗೌಡ

Published:
Updated:
Prajavani

ಬೆಂಗಳೂರು: ‘ಲೋಕಸಭೆ ಚುನಾವಣೆ ಸೋಲಿನಿಂದ ಎದೆಗುಂದಿ ಮನೆಯಲ್ಲಿ ಕುಳಿತುಕೊಳ್ಳುವುದಿಲ್ಲ. ಸೋಲವನ್ನು ಸವಾಲಾಗಿ ಸ್ವೀಕರಿಸಿದ್ದು, ಹಳ್ಳಿ ಸುತ್ತಿ, ಪಾದಯಾತ್ರೆ ಮಾಡಿ ಪಕ್ಷ ಕಟ್ಟುತ್ತೇನೆ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ಜೆಡಿಎಸ್ ಪಕ್ಷದಿಂದ ನಗರ ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆಯಾದವರಿಗೆ ಶುಕ್ರವಾರ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಸೋಲಿನಿಂದ ಮನೆಯಲ್ಲಿ ಇರುತ್ತೇನೆ ಎಂದು ಯಾರೂ ಭಾವಿಸಬೇಕಿಲ್ಲ. ನನ್ನ ಆರೋಗ್ಯ ಕೆಟ್ಟಿದ್ದರೂ ಪಕ್ಷದ ಆರೋಗ್ಯ ಸರಿಪಡಿಸುವ ಕೆಲಸ ಮಾಡುತ್ತೇನೆ’ ಎಂದು ಮುಖಂಡರಿಗೆ ಧೈರ್ಯ ತುಂಬಿದರು.

‘ಯಾರು ಪಕ್ಷ ಬಿಟ್ಟು ಹೋದರೂ ಕಂಗೆಡುವುದಿಲ್ಲ. ಪಕ್ಷಕ್ಕೆ ನಿಷ್ಠೆ ಇಲ್ಲದವರು ಬಿಟ್ಟು ಹೋಗಬಹುದು. ಇರುವ ನಿಷ್ಠರನ್ನೇ ಇಟ್ಟುಕೊಂಡು ಸಂಘಟಿಸುತ್ತೇನೆ. ನಾಯಕ, ಕುರುಬ, ಒಕ್ಕಲಿಗ, ಲಿಂಗಾಯತ ಸೇರಿದಂತೆ ಯಾವ ಜಾತಿ ಸಮುದಾಯದ ಜನರಿಗೂ ಜೆಡಿಎಸ್ ಮೋಸ ಮಾಡಿಲ್ಲ. ಪಕ್ಷದಲ್ಲಿ ಇದ್ದುಕೊಂಡು ಮೋಸ ಮಾಡಬೇಡಿ’ ಎಂದು ಪರೋಕ್ಷವಾಗಿ ಕೆಲವು ನಾಯಕರಿಗೆ ವಿರುದ್ಧ ಚಾಟಿ ಬೀಸಿದರು.

ಮೈತ್ರಿ ಟೀಕೆಗೂ ಪ್ರತ್ಯುತ್ತರ: ಮೈತ್ರಿಯಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದೇವೆ ಎಂದು ಕೆಲವರು ಹೇಳುತ್ತಿದ್ದಾರೆ. ಸಾಕಷ್ಟು ರಾಜ್ಯಗಳಲ್ಲಿ ಕಾಂಗ್ರೆಸ್ ಅಸ್ತಿತ್ವದಲ್ಲಿ ಇದ್ದರೂ, ಅಲ್ಲೆಲ್ಲ ಒಂದೆರಡು ಸ್ಥಾನಗಳನ್ನು ಗೆದ್ದಿದೆ. ಆಯ್ಕೆಯಾದವರೂ ಪಕ್ಷ ತೊರೆಯುತ್ತಿದ್ದಾರೆ. ಅಲ್ಲೆಲ್ಲ ಯಾವ ಮೈತ್ರಿ ಪರಿಣಾಮ ಬೀರಿತು. ಈ ಭಾಗದಲ್ಲಿ ಒಕ್ಕಲಿಗರು ಯಾವ ರೀತಿ ಅನ್ಯಾಯ ಮಾಡಿದರು ಎಂದು ಪ್ರಶ್ನಿಸಿದರು.

‘ಪಕ್ಷ ಕಟ್ಟುವ ಜವಾಬ್ದಾರಿಯನ್ನು ನಾನು ಹೊತ್ತಿದ್ದೇನೆ. ಸರ್ಕಾರ ಉಳಿಸಿಕೊಂಡು ಮುಂದುವರಿಸುವ ಹೊಣೆ ಕುಮಾರಸ್ವಾಮಿ ಮೇಲಿದೆ. ಸಣ್ಣ ಪುಟ್ಟ ಸಮುದಾಯ, ಈವರೆಗೂ ಪರಿಗಣಿಸದ ಜಾತಿಗಳಿಗೆ ಸರ್ಕಾರದಿಂದ ತಲಾ ₹10ಕೋಟಿಯಿಂದ 15 ಕೋಟಿ ನೆರವು ನೀಡುವಂತೆ ಹೇಳಿದ್ದೇನೆ. ಈ ಕೆಲಸ ಪೂರ್ಣಗೊಂಡು, ಸರ್ಕಾರದ ಅವಧಿ ಮುಗಿದ ನಂತರ ಚುನಾವಣೆ ಎದುರಿಸೋಣ. ಆಗ ಪಕ್ಷಕ್ಕೆ ಎಲ್ಲಿಂದ ಹಿನ್ನಡೆ ಆಗುತ್ತದೆ ನಾನೂ ನೋಡುತ್ತೇನೆ’ ಎಂದರು.

ಯಾರನ್ನೂ ಮೆಚ್ಚಿಸುತ್ತಿಲ್ಲ: ‘ಡಂಭಾಚಾರಕ್ಕಾಗಿ, ಯಾರನ್ನೋ ಮೆಚ್ಚಿಸಲು, ಲೋಕಸಭೆ ಚುನಾವಣೆ ಸೋಲಿನಿಂದ ಗ್ರಾಮ ವಾಸ್ತವ್ಯ ಮಾಡುತ್ತಿಲ್ಲ. ಸುಮ್ಮನೆ ಸ್ಟಂಟ್ ಮಾಡುತ್ತಿಲ್ಲ. ಈಗ ಆರೋಗ್ಯ ಸುಧಾರಿಸಿದ್ದು, ಗ್ರಾಮ ವಾಸ್ತವ್ಯ ಮಾಡುತ್ತಿದ್ದೇನೆ. ಸರ್ಕಾರ ಭದ್ರವಾಗಿರಲು ಏನೆಲ್ಲ ಮಾಡಬೇಕು ಅದೆಲ್ಲ ಮಾಡಿದ್ದೇನೆ. ಕಳೆದ ಒಂದು ವರ್ಷದಲ್ಲಿ ಆಗಿರುವ ಲೋಪ ಸರಿಪಡಿಸಿಕೊಂಡು ಜನರ ಮನೆ ಬಾಗಿಲಿಗೆ ಹೋಗುತ್ತಿದ್ದೇನೆ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

2 ತಿಂಗಳಲ್ಲಿ ಬಾಕಿ ಪಾವತಿ: ‘ರೈತರ ಸಾಲ ಮನ್ನಾದ ಬಾಕಿ ಹಣವನ್ನು ಪೂರ್ಣ ಪ್ರಮಾಣದಲ್ಲಿ ಇನ್ನೆರಡು ತಿಂಗಳಲ್ಲಿ ಬಿಡುಗಡೆ ಮಾಡಲಾಗುವುದು. ಮೊನ್ನೆ ಅಂಗಿ ಬಿಚ್ಚಿಕೊಂಡು ಪ್ರತಿಭಟನೆ ಮಾಡಿದ ರೈತ ಮುಖಂಡರನ್ನು ವಿಧಾನಸೌಧಕ್ಕೆ ಕರೆಸಿ ಮಾತನಾಡಿದೆ. ಪ್ರತಿಭಟನೆ ಮಾಡಿದವರೇ ಸಾಲ ಮನ್ನಾದಿಂದ ಅನುಕೂಲವಾಗಿದೆ ಎಂದು ಹೇಳಿದರು. ಆದರೂ ಕೆಲವರು ಹಸಿರು ಟವಲ್ ಬೀಸಿ ಪ್ರತಿಭಟನೆ ಮಾಡುತ್ತಾರೆ’ ಎಂದರು.

ಸಚಿವರಾದ ಬಂಡೆಪ್ಪ ಕಾಶೆಂಪೂರ, ವೆಂಕಟರಾವ್ ನಾಡಗೌಡ, ಎಂ.ಸಿ.ಮನಗೂಳಿ ಉಪಸ್ಥಿತರಿದ್ದರು.

ವಿಶ್ವನಾಥ್ ಗೈರು

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಈಚೆಗೆ ರಾಜೀನಾಮೆ ನೀಡಿರುವ ಎಚ್.ವಿಶ್ವನಾಥ್ ಸಮಾವೇಶದಿಂದ ದೂರ ಉಳಿದರು.

ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಯನ್ನು ಪ್ರತಿನಿಧಿಸುವ ಜೆಡಿಎಸ್‌ನ ಯಾವ ಸಚಿವರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ.

ಕೆಲ ಮಾಧ್ಯಮಗಳ ವಿರುದ್ಧ ಎಚ್‌ಡಿಕೆ ಗುಡುಗು

ಟಿ.ವಿ ಹಾಗೂ ಕೆಲವು ಮಾಧ್ಯಮದವರ ವಿರುದ್ಧ ಕುಮಾರಸ್ವಾಮಿ ಮತ್ತೊಮ್ಮೆ ಗುಡುಗಿದರು.

‘ಬಳ್ಳಾರಿ ವಿಜಯನಗರ ವಿಶ್ವವಿದ್ಯಾಲಯ ಬೋಧಕೇತರ ಸಿಬ್ಬಂದಿ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ಪಬ್ಲಿಕ್ ಟಿ.ವಿ ವರದಿಗಾರನ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಆದರೆ ನಾನೇ ತಪ್ಪು ಮಾಡಿದಂತೆ ಆ ಟಿ.ವಿಯವರು ಟೀಕೆ ಮಾಡುತ್ತಿದ್ದಾರೆ’ ಎಂದು ಹೇಳಿದರು.

‘ಹುಷಾರ್, ಸುಳ್ಳು ಸುದ್ದಿಮಾಡಿ ನಮ್ಮನ್ನೇ ಎದುರಿಸುತ್ತೀರಾ. ನಮ್ಮ ತಂಟೆಗೆ ಬರಬೇಡಿ. ಇಲ್ಲಿಂದಲೇ ಪಂಥಾಹ್ವಾನ ನೀಡುತ್ತಿದ್ದೇನೆ. ಆಗಿದ್ದೆಲ್ಲ ಆಗಲಿ’ ಎಂದು ಎಚ್ಚರಿಸಿದರು.

 **

ಲಿಂಗಾಯತ ಸಮುದಾಯದ ನಾಯಕರಿಗೆ ನಾನು ಕೊಟ್ಟಷ್ಟು ಅವಕಾಶಗಳನ್ನು ಯಾರೂ ನೀಡಿಲ್ಲ. ಪಕ್ಷದ ಅಧ್ಯಕ್ಷ ಸ್ಥಾನ ಕೊಟ್ಟೆ, ಸಚಿವ ಸಂಪುಟದಲ್ಲಿ ಅವಕಾಶ ಕಲ್ಪಿಸಿದೆ.
- ಎಚ್‌.ಡಿ. ದೇವೇಗೌಡ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 7

  Angry

Comments:

0 comments

Write the first review for this !