ಜೆಡಿಎಸ್ ಕ್ಷೇತ್ರಗಳಿಗೆ ಅನುದಾನದ ಹೊಳೆ

ಭಾನುವಾರ, ಮೇ 26, 2019
22 °C

ಜೆಡಿಎಸ್ ಕ್ಷೇತ್ರಗಳಿಗೆ ಅನುದಾನದ ಹೊಳೆ

Published:
Updated:

ಬೆಂಗಳೂರು: ಜೆಡಿಎಸ್ ಶಾಸಕರು ಪ್ರತಿನಿಧಿಸುವ ಮೂರು ಕ್ಷೇತ್ರಗಳಿಗೆ ಮತ್ತೆ ₹60 ಕೋಟಿ ಅನುದಾನ ಬಿಡುಗಡೆ ಮಾಡಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಮೈತ್ರಿ ಸರ್ಕಾರದಲ್ಲಿ ತೆನೆ ಹೊತ್ತ ಮಹಿಳೆಯ ಕ್ಷೇತ್ರಗಳಿಗೆ ಅನುದಾನದ ಹೊಳೆ ಹರಿದಿದೆ.

ಜೆಡಿಎಸ್‌ನ ಗಟ್ಟಿ ನೆಲೆಗಳಾದ ಹಾಸನ, ಮಂಡ್ಯ, ರಾಮನಗರ ಜಿಲ್ಲೆಗಳನ್ನೇ ಕೇಂದ್ರೀಕರಿಸಿ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಿದ್ದು ಆಡಳಿತ ಪಕ್ಷದಲ್ಲೇ ಟೀಕೆಗೆ ಕಾರಣವಾಗಿತ್ತು. ಇದೀಗ ಬೆಂಗಳೂರಿನ ಶಾಸಕರ ಕ್ಷೇತ್ರಗಳಿಗೆ ದೊಡ್ಡ ಮೊತ್ತದ ಅನುದಾನ ಮಂಜೂರು ಮಾಡಲಾಗಿದೆ.

₹8,015 ಕೋಟಿ ಮೊತ್ತದ ‘ಮುಖ್ಯಮಂತ್ರಿ ನವ ಬೆಂಗಳೂರು’ ಯೋಜನೆಯಡಿ ಕೆ.ಗೋಪಾಲಯ್ಯ ಪ್ರತಿನಿಧಿಸುವ ಮಹಾಲಕ್ಷ್ಮಿ ಲೇಔಟ್ ಹಾಗೂ ಆರ್. ಮಂಜುನಾಥ್ ಪ್ರತಿನಿಧಿಸುವ ದಾಸರಹಳ್ಳಿ ಕ್ಷೇತ್ರಗಳಿಗೆ ₹956 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ. ಅದರ ಬೆನ್ನಲ್ಲೇ, ಎಸ್ಎಫ್‌ಸಿ ಯೋಜನೆಯಡಿ ದಾಸರಹಳ್ಳಿ ಕ್ಷೇತ್ರಕ್ಕೆ ₹30 ಕೋಟಿ ಹಾಗೂ ಮಹಾಲಕ್ಷ್ಮಿ ಲೇಔಟ್ ಗೆ ₹25 ಕೋಟಿ ಬಿಡುಗಡೆ ಮಾಡಲಾಗಿದೆ.

ಅದೇ ಪಕ್ಷದ ಕೆ.ಎಂ. ಶಿವಲಿಂಗೇಗೌಡ ಪ್ರತಿನಿಧಿಸುವ ಅರಸೀಕೆರೆ ಕ್ಷೇತ್ರದ ನಗರಸಭೆಯ ಅಭಿವೃದ್ಧಿ ಕಾಮಗಾರಿಗಳಿಗೆ ₹5 ಕೋಟಿ ನೀಡಲಾಗಿದೆ. ಈ ಕಾಮಗಾರಿಗಳನ್ನು ಕರ್ನಾಟಕ ರಾಜ್ಯ ರಸ್ತೆ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಮೂಲಕ ಅನುಷ್ಠಾನ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ. 

‘ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ ನಮ್ಮ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಸಿಕ್ಕಿರಲಿಲ್ಲ. ಪಕ್ಕದ ಕ್ಷೇತ್ರಗಳಿಗೆ ದೊಡ್ಡ ಮೊತ್ತದ ಅನುದಾನ ಹಂಚಿಕೆ ಆಗಿತ್ತು. ಕ್ಷೇತ್ರದಲ್ಲಿ ರಾಜಕಾಲುವೆ ಅಭಿವೃದ್ಧಿ, ರಸ್ತೆ ಅಭಿವೃದ್ಧಿ ಸೇರಿದಂತೆ ಹಲವಾರು ಅಭಿವೃದ್ಧಿ ಕೆಲಸಗಳು ಆಗಬೇಕಿವೆ. ಇದಕ್ಕಾಗಿ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ’ ಎಂದು ಬೆಂಗಳೂರಿನ ಇಬ್ಬರು ಶಾಸಕರು ಸಮರ್ಥಿಸಿಕೊಂಡಿದ್ದಾರೆ.

ಆರ್. ಮಂಜುನಾಥ್ ಅವರು ತಿಂಗಳ ಹಿಂದೆ ಬಿಜೆಪಿಯ ಹಿರಿಯ ನಾಯಕ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿ ಸಮಾಲೋಚಿಸಿದ್ದರು. ಅವರು ಆಪರೇಷನ್ ಕಮಲಕ್ಕೆ ಒಳಗಾಗಬಹುದು ಎಂಬ ಭೀತಿಯಿಂದ ಸರ್ಕಾರ ಭರಪೂರ ಅನುದಾನ ನೀಡಿ‌ ಸಮಾಧಾನಪಡಿಸುತ್ತಿದೆ ಎಂದು ಬಿಜೆಪಿ ಶಾಸಕರು ಹೇಳುತ್ತಾರೆ. 

‘ನಾನು‌ ಈ ಹಿಂದೆ ಕೃಷ್ಣ ಅವರ ಬಳಿ ಗನ್ ಮ್ಯಾನ್ ಆಗಿದ್ದೆ. ಆ ಕಾರಣಕ್ಕೆ ಸೌಹಾರ್ದದ ಭೇಟಿ ಆಗಿದ್ದೆ. ಇದರಲ್ಲಿ ರಾಜಕೀಯ ಮಾಡುವ ಅಗತ್ಯ ಇಲ್ಲ’ ಎಂದು ಮಂಜುನಾಥ್ ಅವರು ಸ್ಪಷ್ಟಪಡಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 3

  Happy
 • 2

  Amused
 • 0

  Sad
 • 0

  Frustrated
 • 6

  Angry

Comments:

0 comments

Write the first review for this !