ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ ನಮ್ಮ ಶತ್ರುವಲ್ಲ: ವೇಣುಗೋಪಾಲ್‌

ಮಧ್ಯರಾತ್ರಿವರೆಗೆ ಸಭೆ ನಡೆಸಿದ ಕಾಂಗ್ರೆಸ್ ಉಸ್ತುವಾರಿ: ಜೆಡಿಎಸ್‌ಗೆ 5ಕ್ಕಿಂತ ಹೆಚ್ಚು ಸ್ಥಾನ ಬಿಟ್ಟುಕೊಟ್ಟರೆ ನಷ್ಟ
Last Updated 22 ಫೆಬ್ರುವರಿ 2019, 19:43 IST
ಅಕ್ಷರ ಗಾತ್ರ

ಬೆಂಗಳೂರು: ಮಿತ್ರ ಪಕ್ಷ ಜೆಡಿಎಸ್ ಹಾಗೂ ಅದರ ನಾಯಕರನ್ನು ಶತ್ರುವಿನಂತೆ ಭಾವಿಸಬೇಡಿ. ಅಂತಹ ಧೋರಣೆ, ಹೇಳಿಕೆಗಳನ್ನು ಹೈಕಮಾಂಡ್ ಸಹಿಸುವುದಿಲ್ಲ ಎಂದು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ಗುರುವಾರ ರಾತ್ರಿ ಬೆಂಗಳೂರಿಗೆ ಬಂದಿದ್ದ ವೇಣುಗೋಪಾಲ್‌ ಅವರು ನಾಯಕರಾದ ಸಿದ್ದರಾಮಯ್ಯ, ಜಿ. ಪರಮೇಶ್ವರ, ಡಿ.ಕೆ. ಶಿವಕುಮಾರ್‌ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಜತೆರಾತ್ರಿ 2 ಗಂಟೆಯವರೆಗೂ ಸಮಾಲೋಚನೆ ನಡೆಸಿದರು. ಲೋಕಸಭೆ ಚುನಾವಣೆ, ರಾಹುಲ್ ಗಾಂಧಿ ಪ್ರವಾಸ ಹಾಗೂ ಪಕ್ಷದ ಸಂಘಟನೆ ಕುರಿತು ಚರ್ಚಿಸಿದರು.

ಲೋಕಸಭೆಯ ವಿವಿಧ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್ ಸಾಮರ್ಥ್ಯ ಎಷ್ಟಿದೆ? ಕಳೆದ ಚುನಾವಣೆಗಳಲ್ಲಿ ಪಡೆದ ಶೇಕಡಾವಾರು ಮತಗಳೆಷ್ಟು? ಯಾವ ಕ್ಷೇತ್ರ ಬಿಟ್ಟುಕೊಡಬಹುದು? ಬಿಟ್ಟುಕೊಟ್ಟರೆ ಆಗುವ ಲಾಭ–ನಷ್ಟ ಏನು ಎಂಬ ಬಗ್ಗೆಯೂ ಮಾಹಿತಿ ಪಡೆದರು.

‘ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದೇವೆ. ಸಣ್ಣ ಪುಟ್ಟ ಲೋಪದೋಷಗಳಿವೆ. ಮೈತ್ರಿ ಎಂದ ಮೇಲೆ ಹೊಂದಾಣಿಕೆ ಅನಿವಾರ್ಯ. ನಮ್ಮ ನಿರೀಕ್ಷೆಯನ್ನು ಪೂರ್ಣವಾಗಿ ಈಡೇರಿಸಲು ಸಾಧ್ಯವಾಗದೇ ಇದ್ದರೂ ಪಕ್ಷಕ್ಕೆ ವರ್ಚಸ್ಸು ತರುವ ರೀತಿಯಲ್ಲಿ ರಾಜ್ಯ ಸರ್ಕಾರ ಮುನ್ನಡೆಯುತ್ತಿದೆ. ಈ ಮೈತ್ರಿ ಸರ್ಕಾರ ಐದು ವರ್ಷ ಪೂರ್ಣಗೊಳಿಸಬೇಕು ಎಂಬುದು ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಅಪೇಕ್ಷೆ. ಇದನ್ನು ಅರಿತು ಎಲ್ಲರೂ ಕೆಲಸ ಮಾಡುವಂತೆ ವೇಣುಗೋಪಾಲ್‌ ಹೇಳಿದರು’ ಎಂದು ಮೂಲಗಳು ತಿಳಿಸಿವೆ.

‘ಎಷ್ಟು ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕು ಎಂಬ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ತೀರ್ಮಾನವಾಗಲಿದೆ. ‘ಕೆಲವು ಕ್ಷೇತ್ರಗಳನ್ನು ಬಿಟ್ಟುಕೊಡಲಾಗುವುದಿಲ್ಲ, ದೇವೇಗೌಡರು ನಿಂತರೆ ಮಾತ್ರ ಹಾಸನದಲ್ಲಿ ಬೆಂಬಲ’ ಎಂದೆಲ್ಲ ಕೆಲವರು ಹೇಳಿಕೆ ನೀಡುತ್ತಿದ್ದಾರೆ. ಇವು ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಸುದ್ದಿಯಾಗುತ್ತಿವೆ. ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಭಾವನೆ ಮೂಡಲು ಇದು ಕಾರಣವಾಗಿದೆ. ಸ್ಥಳೀಯ ಮಟ್ಟದಿಂದ ರಾಜ್ಯ ನಾಯಕರವರೆಗೆ ಯಾರೊಬ್ಬರೂ ಲೋಕಸಭೆ ಕ್ಷೇತ್ರ ಹಂಚಿಕೆ ವಿಷಯದಲ್ಲಿ ಬಹಿರಂಗವಾಗಿ ಹೇಳಿಕೆ ನೀಡಬಾರದು. ಇದನ್ನು ನೀವೂ ಪಾಲಿಸಿ; ನಿಮ್ಮ ಜತೆಗಿರುವ ಸ್ಥಳೀಯ ಮಟ್ಟದ ನಾಯಕರಿಗೂ ತಿಳಿಹೇಳಿ ಎಂದು ತಾಕೀತು ಮಾಡಿದರು’ ಎಂದು ಮೂಲಗಳು ಹೇಳಿವೆ.

ಪಕ್ಷಕ್ಕೆ ನಷ್ಟ: ಜೆಡಿಎಸ್‌ ನಾಯಕರು 12 ಸ್ಥಾನ ಕೇಳುತ್ತಿದ್ದಾರೆ. ಕನಿಷ್ಠ ಎಂಟು ಸ್ಥಾನ ಬಿಟ್ಟುಕೊಟ್ಟರೂ ಕಾಂಗ್ರೆಸ್‌ಗೆ ದೊಡ್ಡ ಮಟ್ಟದ ನಷ್ಟವಾಗಲಿದೆ. ಹಾಸನ, ಮಂಡ್ಯ, ಶಿವಮೊಗ್ಗವನ್ನು ಬಿಟ್ಟುಕೊಡಲು ಅಭ್ಯಂತರವಿಲ್ಲ. ಅದರ ಜತೆಗೆ ಹೆಚ್ಚೆಂದರೆ 2 ಅಥವಾ 3 ಸ್ಥಾನಗಳನ್ನು ಮಾತ್ರ ಬಿಟ್ಟು ಕೊಡೋಣ. ಕಾಂಗ್ರೆಸ್ ಸಂಸದರಿರುವ ಚಾಮರಾಜನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಹಾಗೂ ಕಾಂಗ್ರೆಸ್‌ಗೆ ಭದ್ರ ನೆಲೆ ಇರುವ ಮೈಸೂರು, ದಾವಣಗೆರೆ ಕ್ಷೇತ್ರಗಳನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದು ಬೇಡ. ಈ ವಿಷಯದಲ್ಲಿ ನೀವು ವರಿಷ್ಠರ ಮನವೊಲಿಸಿ ಎಂದು ಹಿರಿಯ ನಾಯಕರು ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಬೂತ್ ಮಟ್ಟಕ್ಕೆ ಕೈ ಪಡೆ
ಬಿಜೆಪಿ ಮಾದರಿಯಲ್ಲೇ ತಳಮಟ್ಟದಲ್ಲಿ ಪಕ್ಷ ಸಂಘಟನೆಗೆ ವೇಗ ನೀಡಲು ಕಾಂಗ್ರೆಸ್‌ ಮುಂದಾಗಿದೆ. ಪ್ರತಿಯೊಂದು ಬೂತ್‌ ಮಟ್ಟದಲ್ಲಿ ಸಂಘಟನೆಯನ್ನು ಬಲ‍ಪಡಿಸಲು ಹಾಗೂ ಸಮ್ಮಿಶ್ರ ಸರ್ಕಾರದ ಜನಪರ ಕಾರ್ಯಕ್ರಮಗಳು, ಹಿಂದಿನ ಕಾಂಗ್ರೆಸ್‌ ಸರ್ಕಾರದ ಸಾಧನೆಗಳನ್ನು ತಿಳಿಸಲು ಜನಸಂಪರ್ಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಜಿಲ್ಲಾಧ್ಯಕ್ಷರು ಹಾಗೂ ಪ್ರಮುಖರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಬೂತ್‌ ಅಧ್ಯಕ್ಷರು ಹಾಗೂ ಬೂತ್‌ ಮಟ್ಟದ ಏಜೆಂಟರಿಗೆ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ತರಬೇತಿ ನೀಡಲಾಗುತ್ತಿದ್ದು, 32 ಕ್ಷೇತ್ರಗಳ ತರಬೇತಿ ಪೂರ್ಣಗೊಂಡಿದೆ. ನಾಲ್ಕು ಹಂತಗಳಲ್ಲಿ ಉಳಿದ ಕ್ಷೇತ್ರಗಳ ತರಬೇತಿ ಪೂರ್ಣಗೊಳಿಸಲು ನಿಶ್ಚಯಿಸಲಾಗಿದೆ. ರಾಹುಲ್‌ ಗಾಂಧಿ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ‘ಶಕ್ತಿ’ ಕಾರ್ಯಕ್ರಮದ ಅಡಿಯಲ್ಲಿ ರಾಜ್ಯದಲ್ಲಿ ಈಗಾಗಲೇ 15,29,492 ಕಾರ್ಯಕರ್ತರು ನೋಂದಣಿ ಮಾಡಿಕೊಂಡಿದ್ದಾರೆ.

**

ದೇವೇಗೌಡರೊಂದಿಗೆ ಮತ್ತೊಮ್ಮೆ ಚರ್ಚೆ ಮಾಡುತ್ತೇವೆ. ಯಾವುದೇ ಸಮಸ್ಯೆಯಿಲ್ಲದೆ ಕ್ಷೇತ್ರ ಹಂಚಿಕೆ ವಿಷಯ ಬಗೆಹರಿಸಿಕೊಳ್ಳುತ್ತೇವೆ
- ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT