ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತರಿಗೆ ನೆರೆ ಪರಿಹಾರ ತಲುಪಿಯೇ ಇಲ್ಲ

₹ 10 ಸಾವಿರ ಪಡೆಯಲು ₹ 3 ಸಾವಿರ ಲಂಚ: ಕುಮಾರಸ್ವಾಮಿ
Last Updated 10 ಅಕ್ಟೋಬರ್ 2019, 19:17 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿ ಹೇಳಿಕೊಂಡಂತೆನೆರೆ ಸಂತ್ರಸ್ತರಿಗೆ ಪರಿಹಾರ ದುಡ್ಡು ಸಿಕ್ಕಿಯೇ ಇಲ್ಲ. ₹ 10 ಸಾವಿರ ಪರಿಹಾರ ಪಡೆಯಲೂ ₹3 ಸಾವಿರ ಲಂಚ ಕೊಡಬೇಕಾದ ಸ್ಥಿತಿ ಇದೆ. ಇದನ್ನು ಸರ್ಕಾರ ಎಂದು ಕರೆಯುತ್ತೀರಾ?’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌. ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

ನೆರೆ ಪರಿಹಾರದಲ್ಲಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ನಿರ್ಲಕ್ಷ್ಯ ಹಾಗೂ ಕೇಂದ್ರ, ರಾಜ್ಯ ಸರ್ಕಾರಗಳ ವೈಫಲ್ಯವನ್ನು ಖಂಡಿಸಿ ಪಕ್ಷದ ವತಿಯಿಂದ ನಗರದಲ್ಲಿ ಗುರುವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

‘ರೈತರಿಗೆ ಬೆಲೆ ಪರಿಹಾರ ನೀಡಲು ಸರಿಯಾದ ಮಾಹಿತಿ ಸಂಗ್ರಹಿಸಲೂ ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ, ಒಂದು ಕಡೆಯೂ ₹ 5 ಲಕ್ಷದ ಮನೆ ನಿರ್ಮಾಣ ಆರಂಭವಾಗಿಲ್ಲ. ಭಾಗಶಃ ಹಾನಿಗೊಳಗಾದ ಮನೆಗಳಿಗೆ ಸಹ ₹ 1 ಲಕ್ಷ ದೊರೆತಿಲ್ಲ. ಒಂದು ವೇಳೆ ನಾನು ಯಡಿಯೂರಪ್ಪ ಅವರ ಸ್ಥಾನದಲ್ಲಿ ಇರುತ್ತಿದ್ದರೆ ರಾಜ್ಯದ ಬೊಕ್ಕಸದಿಂದಲೇ ₹ 15 ಸಾವಿರ ಕೋಟಿ ಬಿಡುಗಡೆ ಮಾಡುತ್ತಿದ್ದೆ’ ಎಂದರು.

‘ಕೇವಲ ಮೂರು ದಿನ ವಿಧಾನಮಂಡಲದ ಅಧಿವೇಶವನ್ನು ಕರೆದಿರುವುದರಿಂದ ನೆರೆ ಹಾವಳಿ ಕುರಿತು ಯಾವ ರೀತಿ ಚರ್ಚೆ ನಡೆಸಲು ಸಾಧ್ಯವಿದೆ?’ ಎಂದು ಪ್ರಶ್ನಿಸಿದ ಅವರು,‘ಮೈತ್ರಿ ಸರ್ಕಾರದ ವಿರುದ್ಧ ಮಾಧ್ಯಮಗಳಿಗೆ ಬಹಳ ಸಿಟ್ಟಿತ್ತು. ಈಗ ಮಾಧ್ಯಮ ಸ್ವಾತಂತ್ರ್ಯಕ್ಕೇ ಕಡಿವಾಣ ಹಾಕಲಾಗಿದೆ.ಈ ಸರ್ಕಾರಕ್ಕೆ ಏನಂತೀರಿ?’ ಎಂದು ಕುಟುಕಿದರು.

ತಕ್ಷಣ ಹೆಚ್ಚುವರಿ ಪರಿಹಾರ ನೀಡಿ:‘ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ₹ 1,200 ಕೋಟಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಕೇಳಿದ ದುಡ್ಡು ಇರಬೇಕು ಎಂಬ ಸಂಶಯ ಇದೆ. ಪರಿಹಾರ ಕಾರ್ಯಗಳಿಗೆ ಈ ಮೊತ್ತ ಏನೇನೂ ಸಾಲದು. ತಕ್ಷಣ ಇನ್ನಷ್ಟು ಪರಿಹಾರ ಮೊತ್ತ ಬಿಡುಗಡೆ ಮಾಡಲೇಬೇಕು’ ಎಂದು ಪಕ್ಷದ ವರಿಷ್ಠ ಎಚ್‌. ಡಿ. ದೇವೇಗೌಡಒತ್ತಾಯಿಸಿದರು.

‘ನಾನು ಇಂದು ಲೋಕಸಭೆಯಲ್ಲಿ ಮಾತನಾಡುವ ಶಕ್ತಿ ಕಳೆದುಕೊಂಡಿದ್ದೇನೆ ನಿಜ. ಆದರೆ ರಾಜ್ಯದ ಜನತೆಗಾಗಿ ಕೊನೆಯ ಉಸಿರು ಇರುವವರೆಗೂ ಹೋರಾಟ ಮಾಡುತ್ತೇನೆ. ಜನತೆಗಾಗಿ ನಾನು ಹಲವಾರು ಬಾರಿ ನನ್ನ ಆರೋಗ್ಯವನ್ನೂ ಲೆಕ್ಕಿಸದೆ ಹೋರಾಟ ಮಾಡಿದ್ದೇನೆ.ನಾನು ಎಲ್ಲ ಸಮುದಾಯದವರನ್ನೂ ಬೆಳೆಸಿದ್ದೇನೆ, ರಾಜ್ಯ ಜನ ಖಂಡಿತ ಇದೆಲ್ಲವನ್ನೂ ಗಮನಿಸುತ್ತಿದ್ದಾರೆ ಎಂಬ ನಂಬಿಕೆ ನನಗಿದೆ’ ಎಂದರು.

‘ಬಿ. ಎಸ್‌. ಯಡಿಯೂರಪ್ಪ ಹೇಳಿದಂತೆ ಅಪ್ಪ, ಮಗ ಸೇರಿ ಕಾಂಗ್ರೆಸ್‌ ನಾಯಕಸಿದ್ದರಾಮಯ್ಯ ಅವರನ್ನು ಮುಗಿಸುವುದು ಸಾಧ್ಯವಿದೆಯೇ? ಜನನಾಯಕರನ್ನು ಮೂಲೆಗೆ ಕೂರಿಸುವುದು ಏನಿದ್ದರೂ ಜನತೆ, ಉಳಿದ ಯಾರಿಗೂ ಆ ಶಕ್ತಿ ಇಲ್ಲ’ ಎಂದರು.

ಓಕುಳಿಪುರದಲ್ಲಿರುವಪಕ್ಷದ ಕಚೇರಿ ಜೆ.ಪಿ.ಭವನದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಯಿತು. ದೇವೇಗೌಡರು ತೆರೆದ ವಾಹನದಲ್ಲಿ ಆನಂದರಾವ್ ವೃತ್ತದವರೆಗೆ ಮೆರವಣಿಗೆಯಲ್ಲಿ ಬಂದರೆ, ಮಹಾತ್ಮ ಗಾಂಧಿ ಪ್ರತಿಮೆಗೆ ಹೂಹಾರ ಹಾಕಿದ ಬಳಿಕ ಸ್ವಾತಂತ್ರ್ಯ ಉದ್ಯಾನದವರೆಗೆ ನಡೆದುಕೊಂಡೇ ಬಂದರು.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌. ಕೆ. ಕುಮಾರಸ್ವಾಮಿ, ಪಕ್ಷದ ಪ್ರಮುಖರಾದ ಬಂಡೆಪ್ಪ ಕಾಶೆಂಪೂರ್‌, ವೈ. ಎಸ್. ವಿ. ದತ್ತ, ಬಹುತೇಕ ಶಾಸಕರು ಇದ್ದರು.

***

ಜನರ ನೋವಿಗೆ ಸ್ಪಂದಿಸಲು ವಿಫಲವಾದ ಸರ್ಕಾರದ ವಿರುದ್ಧ ನವೆಂಂಬರ್ 1ರಂದು ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ವತಿಯಿಂದ ಪ್ರತಿಭಟನೆ ನಡೆಯಲಿದೆ
-ಎಚ್‌. ಡಿ. ಕುಮಾರಸ್ವಾಮಿ,ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT