ಸೋಮವಾರ, ಅಕ್ಟೋಬರ್ 21, 2019
22 °C

ಯಡಿಯೂರಪ್ಪ ಕೇಳಿದ್ದು 36 ಸಾವಿರಕೋಟಿ, ಕೇಂದ್ರ ಕೊಟ್ಟಿದ್ದು 1200 ಕೋಟಿ: ದೇವೇಗೌಡ

Published:
Updated:

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ನೆರೆಯಿಂದ ಸಾಕಷ್ಟು ಹಾನಿಯಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಒಟ್ಟು ₹36 ಸಾವಿರ ಕೋಟಿ ಪರಿಹಾರ ಕೇಳಿದ್ದರು. ಆದರೆ ಕೇಂದ್ರ ಸರ್ಕಾರ ಕೇವಲ ₹1200 ಕೋಟಿ ಮಾತ್ರ ಬಿಡುಗಡೆ ಮಾಡಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಹೇಳಿದರು.

ಪ್ರವಾಹ ಸಂತ್ರಸ್ತರ ಮೇಲೆ ರಾಜ್ಯ, ಕೇಂದ್ರ ಸರ್ಕಾರದ ನಿರ್ಲಕ್ಷ್ಯ, ವಿರೋಧ ಪಕ್ಷದ ಶಾಸಕರ ಅನುದಾನ ಸ್ಥಗಿತ ವಿರೋಧಿಸಿ ಜೆಡಿಎಸ್ ಆಯೋಜಿಸಿರುವ ಬೃಹತ್‌ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿದ ಅವರು, ‘ಮೈತ್ರಿ ಸರ್ಕಾರ ಬಿಡುಗಡೆ ಮಾಡಿದ್ದ ಅನುದಾನವನ್ನು ಸಂಪೂರ್ಣವಾಗಿ ರದ್ದು ಮಾಡಿದ್ದಾರೆ. ಇದು ಹೇಯವಾದ ಕೃತ್ಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಇದು ನಮ್ಮ ಪಕ್ಷದಿಂದ ಮಾತ್ರ ಮಾಡುತ್ತಿರುವ ಪ್ರತಿಭಟನೆ’ ಎಂದು ಸ್ಪಷ್ಟಪಡಿಸಿದ ಅವರು, 
ಅಧಿವೇಶನಕ್ಕೆ ಮಾಧ್ಯಮಗಳನ್ನು ನಿರ್ಬಂಧಿಸಿದ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. ‘ಇದನ್ನ ನೋಡ್ತಿದ್ರೆ ರಾಜ್ಯಕ್ಕೆ ಏನೋ ಕಾದಿದೆ’ ಎಂದು ಮುಗುಮ್ಮಾಗಿ ನುಡಿದರು.

ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ಮನೆ ಮೇಲೆ ನಡೆದ ಐಟಿ ದಾಳಿಯನ್ನೂ ದೇವೇಗೌಡ ಖಂಡಿಸಿದರು.

ಸರ್ಕಾರಗಳಿಗೆ ಬಿಸಿ ಮುಟ್ಟಿಸಬೇಕಿದೆ

‘ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಫಲವಾಗಿವೆ. ಸರ್ಕಾರಗಳಿಗೆ ಬಿಸಿ ಮುಟ್ಟಿಸಲೆಂದು ನಮ್ಮ ಪಕ್ಷದ ವತಿಯಿಂದ ಪ್ರತಿಭಟನೆ ಮಾಡುತ್ತಿದ್ದೆವೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

‘ಬಿದಿಗಿಳಿದು ಪ್ರತಿಭಟನೆ ಮಾಡಿದ ನಂತರವೂ ಎಚ್ಚೆತ್ತುಕೊಳ್ಳದಿದ್ದರೆ, ಮೂರು ದಿನಗಳ ಅಧಿವೇಶನದ ಕಲಾಪದಲ್ಲೂ ನಮ್ಮ ಹೋರಾಟ ಮುಂದುವರೆಯುತ್ತೆ. ಮೂರು ತಿಂಗಳಲ್ಲಿ ಸರ್ಕಾರದಿಂದ ಆದ ವೈಫಲ್ಯವನ್ನು ಸದನದಲ್ಲಿ ಎಳೆಎಳೆಯಾಗಿ ತೆರೆದಿಡುವ ಕೆಲಸ ಮಾಡುತ್ತೇನೆ’ ಎಂದು ಘೋಷಿಸಿದರು.

ವಿಧಾನಸಭೆ ಕಲಾಪದಲ್ಲಿ ಮಾಧ್ಯಮಗಳಿಗೆ ಕಡಿವಾಣ ಹಾಕುವ ಅವಶ್ಯಕತೆ ಇರಲಿಲ್ಲ. ಈ ಹಿಂದೆ ಅಧಿಕಾರದಲ್ಲಿದ್ದಾಗ ಮಾಡಿದ ತಪ್ಪನ್ನು, ಈಗ ಮತ್ತೆ ಮುಂದುವರೆಸುವುದಕ್ಕೆ ಯಾವುದೇ ಸಮಸ್ಯೆ ಆಗಬಾರದೆಂದು ಮಾಧ್ಯಮಗಳಿಗೆ ಕಡಿವಾಣ ಹಾಕಿದ್ದಾರೆ ಎಂದು ಈ ಹಿಂದೆ ಬಿಜೆಪಿ ನಾಯಕರು ಅಶ್ಲೀಲ ವಿಡಿಯೊ ನೋಡಿದ ಪ್ರಸಂಗವನ್ನು ಪರೋಕ್ಷವಾಗಿ ಉಲ್ಲೇಖಿಸಿ ವ್ಯಂಗ್ಯವಾಡಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)