ಭಾರತ್ ಬಂದ್‌ಗೆ ಜೆಡಿಎಸ್‌ ಬೆಂಬಲ

7

ಭಾರತ್ ಬಂದ್‌ಗೆ ಜೆಡಿಎಸ್‌ ಬೆಂಬಲ

Published:
Updated:

ಬೆಂಗಳೂರು: ’ತೈಲ ಉತ್ಪನ್ನಗಳ ಬೆಲೆ ಏರಿಕೆ ಹಾಗೂ ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತ ವಿರೋಧಿಸಿ ಇದೇ 10ರಂದು ನಡೆಯುವ ಭಾರತ್‌ ಬಂದ್‌ಗೆ ಜೆಡಿಎಸ್‌ ಸಂಪೂರ್ಣ ಬೆಂಬಲ ನೀಡಲಿದೆ’ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ವಿಶ್ವನಾಥ್‌ ತಿಳಿಸಿದರು.

ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಲಿದ್ದಾರೆ. ನಗರದ ಪುರಭವನದ ಬಳಿ ನಡೆಯುವ ಪ್ರತಿಭಟನೆಯಲ್ಲಿ ನಮ್ಮ ಪಕ್ಷದ ಶಾಸಕರು ಹಾಗೂ ಬಿಬಿಎಂಪಿ ಸದಸ್ಯರು ಭಾಗವಹಿಸಲಿದ್ದಾರೆ’ ಎಂದರು.

‘ಕೇಂದ್ರ ಸರ್ಕಾರ ಉಳ್ಳವರ ಏಜೆಂಟ್ ಆಗಿ ಕೆಲಸ ಮಾಡುತ್ತಿದೆ. ವಸೂಲಾಗದ ಸಾಲದ ಪ್ರಮಾಣ ₹ 2 ಲಕ್ಷ ಕೋಟಿ ತಲುಪಿದೆ. ನೋಟು ರದ್ಧತಿ ಸಂಪೂರ್ಣ ವಿಫಲವಾಗಿದೆ. ಅಡುಗೆ ಅನಿಲ ಸಿಲಿಂಡರ್‌ ದರ ಶೀಘ್ರವೇ ₹ 1000 ತಲುಪಲಿದೆ. ರೂಪಾಯಿ ಮೌಲ್ಯ ದಿನೇ ದಿನೇ ಕುಸಿಯುತ್ತಿದೆ. ಪೆಟ್ರೋಲ್‌ ಮತ್ತು ಡಿಸೇಲ್ ದರ ಏರಿಕೆಯಿಂದ ಅಗತ್ಯವಸ್ತುಗಳ ಬೆಲೆಯಲ್ಲಿ ಭಾರಿ ಹೆಚ್ಚಳವಾಗಿದೆ. ಆರ್ಥಿಕ ಸ್ಥಿತಿ ಅಧೋಗತಿಗೆ ಹೋಗಿದೆ. ಇವೆಲ್ಲ ಕೇಂದ್ರ ಸರ್ಕಾರದ ಆಡಳಿತ ವೈಫಲ್ಯವನ್ನು ಎತ್ತಿ ತೋರಿಸುತ್ತಿವೆ’ ಎಂದರು.

’ರಾಜ್ಯದ ಸಂಸದರಾದ ಡಿ.ವಿ.ಸದಾನಂದ ಗೌಡ, ಅನಂತ ಕುಮಾರ್‌, ಅನಂತ ಕುಮಾರ್‌ ಹೆಗಡೆ, ಶೋಭಾ ಕರಂದ್ಲಾಜೆ ಅವರು ಯುಪಿಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್‌, ಡೀಸೆಲ್‌ ಹಾಗೂ ಅಡುಗೆ ಅನಿಲ ಸಿಲಿಂಡರ್‌ ಬೆಲೆ ಏರಿಕೆ ಆದಾಗ ಪ್ರತಿಭಟಿಸಿದ್ದರು. ಸಂಸದ ನಳಿನ್‌ಕುಮಾರ್‌ ಕಟೀಲ್‌, ಡಾಲರ್‌ ಎದುರು ರೂಪಾಯಿ ಬೆಲೆ ₹15ಕ್ಕೆ ಇಳಿಯಲಿದೆ ಎಂದು ಭಾಷಣವೊಂದರಲ್ಲಿ ಹೇಳಿದ್ದರು. ಈಗ ಅವರೆಲ್ಲ ಎಲ್ಲಿದ್ದಾರೆ’ ಎಂದು ಪ್ರಶ್ನಿಸಿದರು.

’ಸದಾ ಹೋರಾಟದ ಬಗ್ಗೆ ಮಾತನಾಡುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ’ಬಿ.ಎಸ್‌.ಯಡಿಯೂರಪ್ಪ ಈಗೆಲ್ಲಿದ್ದಾರೆ. ಮಹಾಭಾರತದ ಧುರ್ಯೋಧನನಂತೆ ವೈಶಂಪಾಯನ ಸರೋವರದಲ್ಲೇನಾದರೂ ಅಡಗಿದ್ದಾರೆಯೇ’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.

‘ನಿಮಗೀಗ ಬಿಡುವು ಇದೆಯಲ್ಲ. ಬನ್ನಿ ನಮ್ಮ ಹೋರಾಟಕ್ಕೆ ಕೈಜೋಡಿಸಿ’ ಎಂದು ಯಡಿಯೂರಪ‍್ಪ ಅವರಿಗೆ ಆಹ್ವಾನ ನೀಡಿದರು.

‘ಮನಮೋಹನ್ ಸಿಂಗ್ ಮತ್ತು ನರೇಂದ್ರ ಮೋದಿ ನೇತೃತ್ವದ ಸರ್ಕಾರಗಳ ನಡುವೆ ಅಜಗಜಾಂತರ ಇದೆ. ಮೋದಿ ಸರ್ಕಾರದ ಅವಧಿಯಲ್ಲಿ ಗೋಮಾಂಸ ರಫ್ತು ಶೇ 10 ರಷ್ಟು ಹೆಚ್ಚಳ ಆಗಿದೆ. ಮೋದಿ ಅವರ ಸಂಬಂಧಿ ಅಗರವಾಲ್‌ ಅಂತಹವರೇ ಗೋಮಾಂಸ ರಫ್ತು ಚಟುವಟಿಕೆಯಲ್ಲಿ ತೊಡಗಿದ್ದಾರೆ. ಇನ್ನೊಂದೆಡೆ ದನ ಹಿಡಿದುಕೊಂಡು ಹೋಗುವವರ ಮೇಲೆ, ದಲಿತರ ಮೇಲೆ ಹಾಗೂ ಮಕ್ಕಳ ಕಳ್ಳರು ಎಂಬ ಶಂಕೆಯಿಂದ ಗುಂಪು ದಾಳಿ ನಡೆಸುವ ಪ್ರಕರಣಗಳು ಹೆಚ್ಚುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಕೇಂದ್ರ ಸರ್ಕಾರವು ರಾಜಕೀಯ ವಿರೋಧಿಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಯಂತಹ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರಿಗೆ ಕಿರುಕುಳ ನೀಡುತ್ತಿದೆ’ ಎಂದು ಆರೋಪಿಸಿದರು. 
‘ಡಿ.ಕೆ.ಶಿವಕುಮಾರ್‌ ಅವರು ಸಮ್ಮಿಶ್ರ ಸರ್ಕಾರದ ಭಾಗ. ಕೇಂದ್ರವು ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿಕೊಂಡು ಅವರಿಗೆ ಅನ್ಯಾಯ ಮಾಡಿದರೆ ನಾವೂ ಅದನ್ನ ವಿರೋಧಿಸುತ್ತೇವೆ’ ಎಂದರು.

ವಿಧಾನ ಪರಿಷತ್‌ ಸದಸ್ಯ ರಮೇಶ್‌ ಬಾಬು, ‘ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ನವದೆಹಲಿಯಲ್ಲಿ ಸೋಮವಾರ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ವಿಶ್ವನಾಥ್‌ ಅವರು ಮೈಸೂರಿನಲ್ಲಿ ನಡೆಯುವ ಪ್ರತಿಭಟನೆಯ ನೇತೃತ್ವ ವಹಿಸಲಿದ್ದಾರೆ’ ಎಂದು ತಿಳಿಸಿದರು.

ಆಡಿಸಿ ನೋಡು, ಬೀಳಿಸಿ ನೋಡು ಉರುಳಿ ಹೋಗದು...

‘ಆಡಿಸಿ ನೋಡು, ಬೀಳಿಸಿ ನೋಡು ಉರುಳಿ ಹೋಗದು...’ ಎಂಬ ಸಿನಿಮಾ ಹಾಡಿನಂತೆ ನಮ್ಮ ಸರ್ಕಾರ. ಬಿಜೆಪಿ ಏನೇ ಪ್ರಯತ್ನ ಮಾಡಿದರೂ ಸರ್ಕಾರ ಉರುಳಿ ಹೋಗುವುದಿಲ್ಲ. ಏನೇ ಅಡೆತಡೆ ಬಂದರೂ ಎದುರಿಸಿ ಐದು ವರ್ಷ ಸುಭದ್ರ ಸರ್ಕಾರ ನೀಡಲಿದ್ದೇವೆ’ ಎಂದು ವಿಶ್ವನಾಥ್‌ ವಿಶ್ವಾಸ ವ್ಯಕ್ತಪಡಿಸಿದರು. 

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !