ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ನಾಡು ದಾವಣಗೆರೆಗೂ ಬಂದಿದ್ದರೂ ಜಾರ್ಜ್‌

Last Updated 29 ಜನವರಿ 2019, 11:20 IST
ಅಕ್ಷರ ಗಾತ್ರ

ದಾವಣಗೆರೆ: ‘ಅವರು ದಾವಣಗೆರೆಗೆ ಬರುವಾಗ ರಾತ್ರಿ ಸುಮಾರು 1 ಗಂಟೆ ದಾಟಿತ್ತು. ಅಷ್ಟು ಹೊತ್ತಿಗೂ ಹೈಸ್ಕೂಲ್ ಮೈದಾನದ ತುಂಬಾ ಜನ. ಅಂದು ಅವರದ್ದು ಅದ್ಭುತ ಭಾಷಣ. ಆ ಕನ್ನಡದ ನಿರರ್ಗಳ ಮಾತುಗಳು ಇನ್ನೂ ನನ್ನ ನೆನಪಲ್ಲಿ ಹಸಿರಾಗಿಯೇ ಇವೆ’ ಎಂದು ಜಾರ್ಜ್‌ ಫರ್ನಾಂಡಿಸ್‌ ಅವರನ್ನು ನೆನಪಿಸಿಕೊಂಡವರು ಕಾರ್ಮಿಕರ ಮುಖಂಡ ಎಚ್.ಕೆ. ರಾಮಚಂದ್ರಪ್ಪ.

‘ವರ್ಷ ಸರಿಯಾಗಿ ನೆನಪಿಲ್ಲ. ಆದರೆ, ಅದು ಪಂಪಣ್ಣ ಅವರು ವಿಧಾನಸಭೆಗೆ ಎರಡನೇ ಬಾರಿ ಚುನಾವಣೆಗೆ ನಿಂತ ಕಾಲ. ಅವರ ಚುನಾವಣೆ ಪ್ರಚಾರ ಭಾಷಣಕ್ಕೆ ಬಂದಿದ್ದ ಜಾರ್ಜ್‌ ಅವರು, ಮತಯಾಚನೆ ಮಾಡಿದರು. ಆ ಸಭೆಯಲ್ಲಿ ನಾನೇ ಸ್ವಾಗತ ಮಾಡಿದ್ದೆ. ಪಂಪಣ್ಣ ಕೂಡ ಮಾತನಾಡಿದ್ದರು. ಪಂಪಣ್ಣ ಆ ಚುನಾವಣೆ ಗೆದ್ದರು ಕೂಡ. ಆ ವೇಳೆ ರಾಜ್ಯದಲ್ಲಿ ಭಾರತೀಯ ಕಮ್ಯುನಿಸ್ಟ್‌ ಪಕ್ಷ, ದಳದೊಂದಿಗೆ ಹೊಂದಾಣಿಕೆ ಮಾಡಿಕೊಂಡಿತ್ತು’ ಎಂದು ಆಗಿನ ರಾಜಕೀಯ ವಾತಾವರಣವನ್ನು ಮೆಲುಕು ಹಾಕಿದರು ಅವರು.

‘ಭಾಷಣ ಮುಗಿದ ಮೇಲೆ ಕೊನೆಗೆ ಜಾರ್ಜ್‌ ಅವರು ನಮ್ಮ ಜತೆಗೆ ಬಂದರು. ಸ್ನೇಹಿತರೊಬ್ಬರ ಮನೆಯಲ್ಲಿ ನೆಲದ ಮೇಲೆ ಕುಳಿತು ಊಟ ಮಾಡಿದರು. ಬಹಳ ಸರಳ ವ್ಯಕ್ತಿ ಅವರು. ಅವರಿಗೆ ಒಬ್ಬರು ಅವರ ಜಾತಿ ಕೇಳಿದರು. ಅದಕ್ಕೆ ಅವರ ಉತ್ತರ ಹೀಗಿತ್ತು. ನನ್ನ ಅಪ್ಪ ಒಂದು ಜಾತಿ, ಆಮ್ಮ ಇನ್ನೊಂದು ಜಾತಿ. ನಾನು ಜಾತಿರಹಿತ ಎಂದಿದ್ದರು’ ಎಂದು ಸ್ಮರಿಸಿದರು.

‘ಅವರು ಸಮಾಜವಾದಿ ಸಿದ್ಧಾಂತದಲ್ಲಿ ಬೆಳೆದು ಬಂದವರು. ದೇಶದಲ್ಲಿ ಕಾರ್ಮಿಕರ ಚಳವಳಿಯನ್ನು ಕಟ್ಟುವಲ್ಲಿ ಅವರದ್ದು ದೊಡ್ಡ ಕೊಡುಗೆ. ರೈಲ್ವೆ ಇಲಾಖೆ ಕಾರ್ಮಿಕರನ್ನು ಸಂಘಟನೆ ಮಾಡಿದ ಮೊದಲಿಗರು. ಮುಂಬೈನಲ್ಲಿ ಡಾಂಗೆ ಅವರ ನಂತರದ ಹೆಸರು ಜಾರ್ಜ್‌ ಅವರದ್ದಾಗಿತ್ತು. ಬಂಧನದಲ್ಲಿದ್ದರೂ 3.5 ಲಕ್ಷ ಮತ ಪಡೆದು ಲೋಕಸಭೆಗೆ ಅವರು ಚುನಾಯಿತರಾಗಿದ್ದರು. ಅಧಿಕಾರಕ್ಕೆ ಬಂದ ಮೇಲೆ ಅವರು ಆನೇಕ ಕೆಲಸಗಳನ್ನು ಮಾಡಿದರು. ಮಂಗಳೂರು–ಮುಂಬೈ ಕೊಂಕಣ ರೈಲ್ವೆ ಯೋಜನೆಗೆ ಹಣವನ್ನು ಬಾಂಡ್‌ ಮೂಲಕ ಸಂಗ್ರಹಿಸಿ, ಕಾರ್ಯಗತಗೊಳಿಸಿದ್ದು ಅವರ ಸಾಧನೆಗಳಲ್ಲಿ ಒಂದು’ ಎಂದರು ರಾಮಚಂದ್ರಪ್ಪ.

ಸಂತಾಪ

ಜಾರ್ಜ್‌ ಫರ್ನಾಂಡಿಸ್‌ ನಿಧನಕ್ಕೆ ಭಾರತೀಯ ಕಮ್ಯುನಿಸ್ಟ್‌ ಪಕ್ಷ ಹಾಗೂ ಎಐಟಿಯುಸಿ ಸಂಘಟನೆ ತೀವ್ರ ಸಂತಾಪ ವ್ಯಕ್ತಪಡಿಸಿವೆ.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT