ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪಾಲ ಬೆಟ್ಟ: ಯೇಸು ಪ್ರತಿಮೆ ಜಾಗ ವಾಪಸ್?

ಜಮೀನು ವಾಪಸ್ ಪಡೆಯಲು ಸರ್ಕಾರ ಸಿದ್ಧತೆ
Last Updated 1 ಜನವರಿ 2020, 21:19 IST
ಅಕ್ಷರ ಗಾತ್ರ

ಬೆಂಗಳೂರು: ಕನಕಪುರ ಸಮೀಪದ ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆ ಸ್ಥಾಪನೆಗೆ ಹಿಂದಿನ ಸರ್ಕಾರ ನೀಡಿದ್ದ ಸರ್ಕಾರಿ ಗೋಮಾಳದ ಜಮೀನು ವಾಪಸ್ ಪಡೆಯಲು ಸರ್ಕಾರ ಸಿದ್ಧತೆ ನಡೆಸಿದೆ.

ಕಪಾಲ ಬೆಟ್ಟ ಸರ್ಕಾರಿ ಗೋಮಾಳ ಆಗಿರುವುದರಿಂದ ಅದನ್ನು ಬೇಕಾಬಿಟ್ಟಿ ಹಂಚಿಕೆ ಮಾಡಲು ಸಾಧ್ಯವಿಲ್ಲ. ಈಗ ಹಂಚಿಕೆ ಮಾಡಿರುವುದು ಸರ್ಕಾರದ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದೆ. ವಿಸ್ತೃತ ವರದಿ ಸಿಕ್ಕಿದ ಬಳಿಕವಾಪಸ್‌ ಪಡೆಯಲು ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಸರ್ಕಾರದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಜಮೀನು ಹಿಂದಕ್ಕೆ ಪಡೆಯುವ ಪ್ರಕ್ರಿಯೆ ಕಾನೂನಿನ ಪ್ರಕಾರವೇ ನಡೆಯುತ್ತದೆ. ನಿರ್ದಿಷ್ಟ ಧರ್ಮದವರಿಗೆ ಜಮೀನು ನೀಡದಿದ್ದರೆ ಮುಜುಗರಕ್ಕೆ ಸರ್ಕಾರ ತುತ್ತಾಗಬಹುದು ಎನ್ನುವುದಕ್ಕಿಂತ, ಒಮ್ಮೆ ಇಂತಹ ಪರಂಪರೆಗೆ ನಾಂದಿ ಹಾಡಿದರೆ, ಮರುಕ್ಷಣವೇ ಅರ್ಜಿಗಳ ಮಹಾಪೂರವೇ ಹರಿದು ಬರಬಹುದು. ಗೋಮಾಳ ಜಮೀನನ್ನು ಹೀಗೆ ಎಲ್ಲ ಧರ್ಮೀಯರಿಗೂ ಕೊಡುತ್ತಾ ಹೋದರೆ, ಅದಕ್ಕೆ ಅಂತ್ಯವೇ ಇಲ್ಲವಾಗುತ್ತದೆ ಎಂದು ಮೂಲಗಳು ಹೇಳಿವೆ.

ಗೋಮಾಳ ಜಮೀನನ್ನು ಅನ್ಯ ಉದ್ದೇಶಗಳಿಗೆ ಬಳಸುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಆದೇಶವೇ ಇದೆ. ಒಂದು ವೇಳೆ ಯಾರಾದರೂ ನ್ಯಾಯಾಲಯದ ಮೆಟ್ಟಿಲು ಹತ್ತಿದರೆ, ಸರ್ಕಾರ ಕೂಡ ಛೀಮಾರಿ ಹಾಕಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿವೆ.

ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸುವ ಉದ್ದೇಶವಿತ್ತು. ಆದರೆ, ಮುಖ್ಯಮಂತ್ರಿಯವರು ತರಾತುರಿಯಲ್ಲಿ ಇದ್ದ ಕಾರಣ, ಅದನ್ನು ಪ್ರಸ್ತಾಪಿಸಲು ಸಾಧ್ಯವಾಗಿಲ್ಲ. ಇದು ಧರ್ಮ ಸೂಕ್ಷ್ಮ ವಿಷಯವಾಗಿರುವುದರಿಂದ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ ಎಂಬುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಸಚಿವರಿಗೆ ಕಿವಿ ಮಾತು ಹೇಳಿದ್ದಾರೆ ಎನ್ನುವುದರಲ್ಲಿ ಯಾವುದೇ ಹುರುಳಿಲ್ಲ. ಅಂತಹ ಯಾವುದೇ ಸೂಚನೆಯನ್ನೂ ನೀಡಿಲ್ಲ ಎಂದು ಸಚಿವರಾದ ಕೆ.ಎಸ್‌.ಈಶ್ವರಪ್ಪ, ಸಿ.ಟಿ.ರವಿ ತಿಳಿಸಿದ್ದಾರೆ.

ವಿದ್ಯುತ್ ಅಕ್ರಮ ಸಂಪರ್ಕ
ಕನಕಪುರ ತಾಲ್ಲೂಕಿನ ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣಕ್ಕೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಬುಧವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಯೇಸು ಪ್ರತಿಮೆ ನಿರ್ಮಾಣ ಕೆಲಸ ಸ್ಥಗಿತಗೊಂಡಿದ್ದು, ಟ್ರಸ್ಟ್‌ನವರೇ ಕೆಲಸ ನಿಲ್ಲಿಸಿರಬಹುದು. ಅಲ್ಲಿ ಕೊಳವೆ ಬಾವಿ ಕೊರೆಸಿದ್ದು, 2 ಕಿ.ಮೀ ರಸ್ತೆಯನ್ನು ಅನಧಿಕೃತವಾಗಿ ನಿರ್ಮಿಸಲಾಗಿದೆ’ ಎಂದು ತಿಳಿಸಿದರು.

‘ಈ ಬಗ್ಗೆ ರಾಮನಗರ ಜಿಲ್ಲಾಧಿಕಾರಿ, ಕನಕಪುರ ತಹಶೀಲ್ದಾರ್ ಅವರಿಂದ ವರದಿ ನೀಡುವಂತೆ ಕೇಳಿದ್ದೇನೆ. ಈಗಾಗಲೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಮೌಖಿಕವಾಗಿ ವಿವರಣೆ ಕೊಟ್ಟಿದ್ದಾರೆ. ಲಿಖಿತವಾಗಿ ವರದಿ ನೀಡುವಂತೆ ಸೂಚಿಸಿದ್ದು, ವರದಿ ಕೈಸೇರಿದ ನಂತರ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ’ ಎಂದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT