ಜೋಡುಪಾಲದಲ್ಲಿ ಮತ್ತೆ ನಾಲ್ವರ ರಕ್ಷಣೆ, ಗುಡ್ಡದಲ್ಲಿ ಸಿಲುಕಿರುವ 30 ಮಂದಿಗೆ ಶೋಧ

7

ಜೋಡುಪಾಲದಲ್ಲಿ ಮತ್ತೆ ನಾಲ್ವರ ರಕ್ಷಣೆ, ಗುಡ್ಡದಲ್ಲಿ ಸಿಲುಕಿರುವ 30 ಮಂದಿಗೆ ಶೋಧ

Published:
Updated:

ಮಂಗಳೂರು: ಕೊಡಗು ಜಿಲ್ಲೆಯ ಜೋಡುಪಾಲದಿಂದ ಮದೆನಾಡುವರೆಗಿನ ಘಟ್ಟ ಶ್ರೇಣಿಯಲ್ಲಿ ರಕ್ಷಣಾ ತಂಡ ಭಾನುವಾರ ನಾಲ್ವರನ್ನು ರಕ್ಷಿಸಿದೆ. ಗುಡ್ಡಗಾಡಿನಲ್ಲಿ ಸಿಲುಕಿಕೊಂಡಿರುವ 30 ಮಂದಿಯ ಪತ್ತೆಗೆ ಎನ್‌ಡಿಆರ್‌ಎಫ್‌ ತಂಡ ಸಂಜೆಯಿಂದ ಶೋಧ ಆರಂಭಿಸಿದೆ.

ಜೋಡುಪಾಲದಿಂದ ಮದೆನಾಡು, ಮಡಿಕೇರಿ ಸಂಪರ್ಕ ಸಂಪೂರ್ಣ ಕಡಿತಗೊಂಡಿರುವುದರಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತದ ನೇತೃತ್ವದಲ್ಲೇ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಸಂಪಾಜೆ ಮತ್ತು ಕಲ್ಲುಗುಂಡಿಯಲ್ಲಿ ತೆರೆದಿರುವ ಮೂರು ಪರಿಹಾರ ಕೇಂದ್ರಗಳಲ್ಲಿ ಈವರೆಗೆ 848 ಮಂದಿ ನೋಂದಣಿಯಾಗಿದ್ದು, 428 ಮಂದಿ ರಕ್ಷಣೆ ಪಡೆದಿದ್ದಾರೆ.

ಶನಿವಾರ ಸಂಜೆ ಕತ್ತಲಾದ ಬಳಿಕ ಸ್ಥಗಿತಗೊಂಡಿದ್ದ ರಕ್ಷಣಾ ಕಾರ್ಯಾಚರಣೆ ಭಾನುವಾರ ಬೆಳಿಗ್ಗೆಯೇ ಆರಂಭವಾಯಿತು. ಜೋಡುಪಾಲದ ಘಟ್ಟವೊಂದರಲ್ಲಿ ರಬ್ಬರ್‌ ಎಸ್ಟೇಟ್‌ ಕಾರ್ಮಿಕರು ಮರದಡಿ ಆಶ್ರಯ ಪಡೆದಿರುವ ಸುದ್ದಿ ತಿಳಿದ ಎನ್‌ಡಿಆರ್‌ಎಫ್‌ ತಂಡ, ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಸ್ವಯಂಸೇವಕರ ನೆರವಿನಲ್ಲಿ ಅವರ ರಕ್ಷಣೆಗೆ ಮುಂದಾಯಿತು.

ಕಡಿದಾದ ಕಣಿವೆಯಲ್ಲಿ ಸಾಗಿ ಸ್ಥಳ ತಲುಪಿದಾಗ ಬಿಹಾರದ ಸುದೀಪ್‌ ಎಂಬ ಕಾರ್ಮಿಕ ಪತ್ತೆಯಾಗಿದ್ದಾನೆ. ಆತನನ್ನು ಸ್ಟ್ರೆಚರ್ ಮೇಲೆ ಹೊತ್ತು ತರಲಾಯಿತು. ರಭಸವಾಗಿ ಹರಿಯುತ್ತಿದ್ದ ತೊರೆಯನ್ನು ಹಗ್ಗದ ನೆರವಿನಿಂದ ದಾಟಿ ಸಂಪಾಜೆಗೆ ಕರೆತರಲಾಯಿತು. ತೀವ್ರವಾಗಿ ಬಳಲಿರುವ ಕಾರ್ಮಿಕನಿಗೆ ಸಂಪಾಜೆ ಪರಿಹಾರ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ತನ್ನ ಜೊತೆ ಇನ್ನೂ ಇಬ್ಬರು ಇದ್ದರು ಎಂದು ರಕ್ಷಣೆಯಾದ ಕಾರ್ಮಿಕ ಮಾಹಿತಿ ನೀಡಿದ್ದ. ಆದರೆ, ಅವರು ಎಲ್ಲಿ ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಸದ್ಯ ರಕ್ಷಿಸಲಾದ ಕಾರ್ಮಿಕನೂ ಮಾತನಾಡುವ ಸ್ಥಿತಿಯಲ್ಲಿ ಇಲ್ಲ.

ಮನವೊಲಿಸಿ ಸ್ಥಳಾಂತರ

ಜೋಡುಪಾಲದ ಘಟ್ಟಶ್ರೇಣಿಯ ಮನೆಯೊಂದರಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳು ಅಲ್ಲೇ ಉಳಿದಿದ್ದರು. ಭಾನುವಾರ ಬೆಳಿಗ್ಗೆ ಅವರ ಮನೆ ಪತ್ತೆ ಮಾಡಿದ ಎನ್‌ಡಿಆರ್‌ಎಫ್‌ ತಂಡ ಪರಿಹಾರ ಕೇಂದ್ರಕ್ಕೆ ಕರೆತರಲು ಪ್ರಯತ್ನಿಸಿತು. ಆದರೆ, ತಮ್ಮ ಮನೆ ಸುರಕ್ಷಿತವಾಗಿದೆ ಎಂಬ ಕಾರಣ ನೀಡಿದ ಕುಟುಂಬ ಅಲ್ಲಿಂದ ಹೊರಬರಲು ನಿರಾಕರಿಸಿತು.

ಮಧ್ಯಾಹ್ನದವರೆಗೂ ತಾಯಿ ಮತ್ತು ಮಕ್ಕಳ ಜೊತೆ ಮಾತುಕತೆ ನಡೆಸಿದ ರಕ್ಷಣಾ ತಂಡ ಅವರನ್ನು ಮನವೊಲಿಸುವಲ್ಲಿ ಯಶಸ್ವಿಯಾಯಿತು. ಬಳಿಕ ಮೂವರನ್ನೂ ಸುರಕ್ಷಿತವಾಗಿ ಸಂಪಾಜೆ ಪರಿಹಾರ ಕೇಂದ್ರಕ್ಕೆ ಕರೆತರಲಾಯಿತು.

30 ಮಂದಿಗಾಗಿ ಶೋಧ: ಜೋಡುಪಾಲ ಘಟ್ಟ ಪ್ರದೇಶದಲ್ಲಿ ಇನ್ನೂ ಉಳಿದುಕೊಂಡಿರುವವರ ಮಾಹಿತಿ ಲಭ್ಯವಿಲ್ಲದ ಕಾರಣದಿಂದ ಭಾನುವಾರ ಸಂಜೆಯ ವೇಳೆಗೆ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಆದರೆ, ಘಟ್ಟ ಪ್ರದೇಶದಲ್ಲಿ 30 ಮಂದಿ ಸಿಲುಕಿರುವ ಬಗ್ಗೆ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಅವರಿಗೆ ಅಲ್ಲಿರುವ ಕೆಲವರು ದೂರವಾಣಿ ಮೂಲಕ ತಿಳಿಸಿದ್ದರು. ಬಳಿಕ ಅವರ ಪತ್ತೆ ಮತ್ತು ರಕ್ಷಣೆಗಾಗಿ ಸಂಜೆ ಪುನಃ ಶೋಧ ಆರಂಭಿಸಲಾಯಿತು.

ಸಚಿವರು ಮಾಹಿತಿಯನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ ಅವರಿಗೆ ವರ್ಗಾಯಿಸಿದರು. ತಕ್ಷಣವೇ ಎನ್‌ಡಿಆರ್‌ಎಫ್‌ ತಂಡವೊಂದನ್ನು ನಿಯೋಜಿಸಿದ ಜಿಲ್ಲಾಧಿಕಾರಿ, ಘಟ್ಟದಲ್ಲಿ ಸಿಲುಕಿರುವವರ ಪತ್ತೆಗೆ ಸೂಚಿಸಿದರು. ಪೊಲೀಸರು, ಅಗ್ನಿಶಾಮಕ ದಳ, ಗೃಹರಕ್ಷಕರು ಮತ್ತು ಸ್ಥಳೀಯ ಸ್ವಯಂಸೇವಕರು ಶೋಧ ನಡೆಸುತ್ತಿದ್ದಾರೆ.

ಶನಿವಾರ ರಾತ್ರಿ ಸಂಪಾಜೆ ಘಾಟಿ ಪ್ರದೇಶದಲ್ಲಿ ಭಾರಿ ಮಳೆ ಸುರಿದಿತ್ತು. ಪರಿಣಾಮವಾಗಿ ಪಯಸ್ವಿನಿ ನದಿಯ ನೀರಿನ ಮಟ್ಟ ಏರಿಕೆಯಾಗಿತ್ತು. ಪರ್ವತ ಶ್ರೇಣಿಯಿಂದ ಹರಿಯುವ ತೊರೆಗಳ ರಭಸವೂ ಹೆಚ್ಚಿತ್ತು. ಭಾನುವಾರ ಕೆಲಕಾಲ ದಟ್ಟವಾದ ಮಂಜು ಸುರಿಯುತ್ತಿತ್ತು. ಇದರಿಂದಾಗಿ ಕೆಲಕಾಲ ಕಾರ್ಯಾಚರಣೆಗೆ ಅಡಚಣೆ ಉಂಟಾಗಿತ್ತು.

ಹೊರಬರಲು ನಕಾರ: ಜೋಡುಪಾಲದ ಘಟ್ಟ ಶ್ರೇಣಿಯ ನಾಲ್ಕು ಕುಟುಂಬದವರು ಇನ್ನೂ ಮನೆಯಲ್ಲಿ ಉಳಿದಿದ್ದಾರೆ. ಜಾನುವಾರುಗಳನ್ನು ಬಿಟ್ಟು ಮನೆ ತೊರೆದು ಬರಲು ಈ ಕುಟುಂಬದವರು ನಿರಾಕರಿಸುತ್ತಿದ್ದಾರೆ. ರಕ್ಷಣಾ ತಂಡದ ಸದಸ್ಯರು ಅವರ ಮನವೊಲಿಕೆಯಲ್ಲಿ ತೊಡಗಿದ್ದಾರೆ.
ಇದನ್ನೂ ಓದಿರಿ..
ಕರಗಿದ ಬೆಟ್ಟಗಳು, ಗ್ರಾಮಗಳು ಕಣ್ಮರೆ
* ‘ಇಳಿದು ಹೋಗು ತಾಯಿ...’

ಬಿರುಸಾದ ಮಳೆ: ಮಡಿಕೇರಿ- ಮಂಗಳೂರು ನಡುವಿ‌ನ ರಾಷ್ಟ್ರೀಯ ಹೆದ್ದಾರಿ 275ರ ಸಂಪಾಜೆ ಘಾಟಿ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆಯಿಂದ ಮತ್ತೆ ಮಳೆ‌ ಬಿರುಸಾಗಿದೆ. ಜೋಡುಪಾಲದಿಂದ ಮದೆನಾಡುವರೆಗಿನ ಘಟ್ಟ ಶ್ರೇಣಿಯಲ್ಲಿ ಭೂಕುಸಿತದಿಂದ ತೊಂದರೆಗೆ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆಗೆ ಮಳೆ ಅಡ್ಡಿಯಾಗಿದೆ.

ಜೋರು ಮಳೆಯಿಂದಾಗಿ ಪಯಸ್ವಿನಿ ನದಿ ನೀರಿನ ಮಟ್ಟ ಏರಿಕೆಯಾಗಿದೆ. ಘಟ್ಟ ಶ್ರೇಣಿಯ ಬಹುತೇಕ ತೊರೆಗಳು ರಭಸದಿಂದ ಹರಿಯತ್ತಿದ್ದು, ರಕ್ಷಣಾ ತಂಡ ದಾಟಿ ಮುಂದಕ್ಕೆ ಹೋಗುವುದು ಕಷ್ಟವಾಗುತ್ತಿದೆ. ಕೆಲವು ಕಡೆಗಳಲ್ಲಿ ಗುಡ್ಡದಲ್ಲಿರುವ ಮನೆಗಳಿಗೆ ತೆರಳಿ ಅಲ್ಲಿ ಯಾರಾದರೂ ಉಳಿದಿದ್ದಾರೆಯೇ ಎಂಬುದನ್ನು ಪರಿಶೀಲನೆ ಮಾಡುವುದಕ್ಕೂ ಆಗುತ್ತಿಲ್ಲ.

ಜನದಟ್ಟಣೆ ನಿಯಂತ್ರಿಸಲು ಹರಸಾಹಸ: ಜೋಡುಪಾಲ ತಿರುವಿನಲ್ಲಿ ಭೂಕುಸಿತ ಸಂಭವಿಸಿರುವ ಪ್ರದೇಶ ವೀಕ್ಸಿಸಲು ಸಂಪಾಜೆ, ಸುಳ್ಯ ಸೇರಿದಂತೆ ಹಲವು ಕಡೆಗಳಿಂದ ಭಾರಿ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ಎರಡು ಕಿಲೋಮೀಟರ್ ಹಿಂದೆಯೇ ಬ್ಯಾರಿಕೇಡ್ ಅಳವಡಿಸಿದ್ದರೂ ಜನರು ಪೊಲೀಸರ ಕಣ್ತಪ್ಪಿಸಿ ಮುಂದಕ್ಕೆ ಹೋಗುತ್ತಿದ್ದಾರೆ. ಇದರಿಂದಾಗಿ ರಕ್ಷಣಾ ಕಾರ್ಯಾಚರಣೆಗೂ ಅಡ್ಡಿಯಾಗುತ್ತಿದೆ.

**
 


ಪ್ರವಾಹ ಪೀಡಿತ ಪ್ರದೇಶದ ವೈಮಾನಿಕ ನೋಟ

ಕೊಡಗು ಪರಿಸ್ಥಿತಿ ಮಾಹಿತಿ ಪಡೆದ ರಾಷ್ಟ್ರಪತಿ 
 ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ದೂರವಾಣಿ ಕರೆ ಮಾಡಿ ಕೊಡಗು ಜಿಲ್ಲೆಯ ಪರಿಸ್ಥಿತಿ ಕುರಿತು ಮಾಹಿತಿ ಪಡೆದರು.

‘ಕೊಡಗು ಜಿಲ್ಲಾಡಳಿತವು ರಕ್ಷಣೆ ಹಾಗೂ ಪರಿಹಾರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಸೇನಾ ಸಿಬ್ಬಂದಿ, ಎನ್‌ಡಿಆರ್‌ಎಫ್‌ ಮತ್ತಿತರ ರಕ್ಷಣಾ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ಈವರೆಗೆ 3,500ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ’ ಎಂದು ಮುಖ್ಯಮಂತ್ರಿ ಅವರು ರಾಷ್ಟ್ರಪತಿ ಅವರಿಗೆ ಮಾಹಿತಿ ನೀಡಿದರು.

‘ರಾಷ್ಟ್ರಪತಿಗಳು ಕರೆಮಾಡಿ ತೋರಿದ ಕಾಳಜಿಗೆ ಮುಖ್ಯಮಂತ್ರಿಗಳು ಕೃತಜ್ಞತೆ ಸಲ್ಲಿಸಿದರು’ ಎಂದು ಸಿಎಂ ಕಚೇರಿಯ ಪ್ರಕಟಣೆ ತಿಳಿಸಿದೆ. 
**
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಕೊಡಗಿನಲ್ಲಿ ಸುಮಾರು ಒಂದು ಗಂಟೆ 15 ನಿಮಿಷಗಳ ಕಾಲ ವೈಮಾನಿಕ ಸಮೀಕ್ಷೆ ನಡೆಸಿದರು. ಇಂದು ಅವರು ಮೈಸೂರು ವಿಮಾನ ನಿಲ್ದಾಣದಿಂದ ಹೊರಟು ಸೋಮವಾರಪೇಟೆ, ಶುಂಠಿ ಕೊಪ್ಪ, ಮಾದಾಪುರ, ಮುಕ್ಕೋಡ್ಲು, ಹಾರಂಗಿ ಹಿನ್ನೀರು ಪ್ರದೇಶ, ಸಿದ್ದಾಪುರ, ಕುಶಾಲನಗರ ಸುತ್ತಮುತ್ತಲಿನ ಪ್ರದೇಶಗಳ ಸಮೀಕ್ಷೆ ನಡೆಸಿದರು. ನಂತರ ಪಿರಿಯಾಪಟ್ಟಣ ಹೆಲಿಪ್ಯಾಡ್‌ನಲ್ಲಿ ಇಳಿದು ಮಡಿಕೇರಿಗೆ ತೆರಳಿದರು.


ವೈಮಾನಿಕ ವೀಕ್ಷಣೆ ವೇಳೆ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು 

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !