ಗೋಕರ್ಣದ ವಿಜ್ಞಾನಿಗೆ ಅಂತರರಾಷ್ಟ್ರೀಯ ಗೌರವ

7
‘ಜರ್ನಲ್ ಆಫ್ ಆರ್ಗೊನೊ ಕೆಮಿಸ್ಟ್ರಿ’ವಿಶೇಷ ಸಂಚಿಕೆ ಪ್ರಕಟ

ಗೋಕರ್ಣದ ವಿಜ್ಞಾನಿಗೆ ಅಂತರರಾಷ್ಟ್ರೀಯ ಗೌರವ

Published:
Updated:
ಡಾ.ನಾರಾಯಣ ಹೊಸ್ಮನೆ

ಗೋಕರ್ಣ (ಉತ್ತರ ಕನ್ನಡ): ಅಮೆರಿಕದ ‘ಬೋರಾನ್ ಕೆಮಿಸ್ಟ್ರಿ’ ಸಂಸ್ಥಾಪಕ, ವಿಜ್ಞಾನಿ ಡಾ.ನಾರಾಯಣ ಹೊಸ್ಮನೆ ಅವರ 70ನೇ ಜನ್ಮದಿನದ ಪ್ರಯುಕ್ತ, ಅಲ್ಲಿನ ಪ್ರಸಿದ್ಧ ಪತ್ರಿಕೆ ‘ಜರ್ನಲ್ ಆಫ್ ಆರ್ಗೊನೊ ಕೆಮಿಸ್ಟ್ರಿ’ಯು ವಿಶೇಷ ಸಂಚಿಕೆ ಹೊರತಂದಿದೆ.

ಗೋಕರ್ಣದವರಾದ ಡಾ. ನಾರಾಯಣ, ಹಲವು ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದಾರೆ. ಜೂನ್ 30 ಅವರ ಜನ್ಮದಿನ. ಅಮೆರಿಕ, ರಷ್ಯಾ, ಕೊಲಂಬಿಯಾ ಹಾಗೂ ಯುರೋಪ್‌ನ ವಿವಿಧ ರಾಷ್ಟ್ರಗಳಿಂದ ಪ್ರಕಟವಾಗುವ ಈ ಪತ್ರಿಕೆಯ ಜೂನ್ ತಿಂಗಳ ಸಂಚಿಕೆಯನ್ನು ಅವರಿಗೆ ಸಮರ್ಪಿಸಲಾಗಿದೆ.

ಈ ಕುರಿತು ಸಂಪಾದಕರಾದ ರಿಚರ್ಡ್ ಎಡಮ್ಸ್ ಮತ್ ವ್ಲಾಡಿಮಿರ್ ಬ್ರೆಗಾಜೆ ಅವರು ವಿಶೇಷ ಸಂಪಾದಕೀಯ ಬರೆದಿದ್ದಾರೆ.

‘ಕ್ಯಾನ್ಸರ್‌ನ ಔಷಧ ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಬೋರಾನ್ ಕೆಮಿಸ್ಟ್ರಿ ಅಥವಾ ಅಲೋಹ ರಾಸಾಯನ ವಿಜ್ಞಾನವನ್ನು ಅಮೆರಿಕಕ್ಕೆ ಪರಿಚಯಿಸಿದ ಕೀರ್ತಿ ಡಾ.ನಾರಾಯಣ ಹೊಸ್ಮನೆ  ಅವರದ್ದಾಗಿದೆ. 70ರ ದಶಕದಲ್ಲಿ ಅಮೆರಿಕಕ್ಕೆ ಬಂದ ಅವರು, ಮೊದಲ ಬಾರಿಗೆ ಇಲ್ಲಿ ಪ್ರಾರಂಭಿಸಿದ ಬೋರಾನ್ ವಿಜ್ಞಾನ ಸಂಶೋಧನಾ ಸಂಸ್ಥೆಯು, ನಾಲ್ಕು ದಶಕಗಳಲ್ಲಿ ವಿಶ್ವದ ಗರಿಷ್ಠ ಗೌರವಕ್ಕೆ ಪಾತ್ರವಾಗಿದೆ. ಇದಕ್ಕೆ ಡಾ.ಹೊಸ್ಮನೆ ಕಾರಣರಾಗಿದ್ದಾರೆ’ ಎಂದು ಅವರು ಉಲ್ಲೇಖಿಸಿದ್ದಾರೆ. 

‘ವಿಶ್ವದ ಇಂತಹ ಅಪರೂಪದ ವಿಜ್ಞಾನಿಗೆ ಈ ಸಂಚಿಕೆಯನ್ನು ಅರ್ಪಿಸುವ ಮೂಲಕ ಅವರಿಗೆ ಜಾಗತಿಕ ಗೌರವವನ್ನು ಸಮರ್ಪಿಸಲಾಗುತ್ತಿದೆ’ ಎಂದು ಅವರು ತಮ್ಮ ಲೇಖನದಲ್ಲಿ ವಿವರಿಸಿದ್ದಾರೆ.

ಡಾ.ನಾರಾಯಣ ಸದಾಶಿವ ಹೊಸ್ಮನೆ ಅವರು ಗೋಕರ್ಣದ ವೈದಿಕ ಮನೆತನದಲ್ಲಿ ಜನಿಸಿದವರು. ಭದ್ರಕಾಳಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿ, ಮುಂದಿನ ವಿದ್ಯಾಭ್ಯಾಸ ವನ್ನು ಧಾರವಾಡದಲ್ಲಿ ಮಾಡಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದಚಿನ್ನದ ಪದಕ ಸಹಿತ ಎಂಎಸ್ಸಿ ಪೂರೈಸಿದರು. 1974ರಲ್ಲಿ ಸ್ಕಾಟ್ಲೆಂಡ್‌ನಲ್ಲಿ ವಿಶೇಷ ವಿದ್ಯಾರ್ಥಿ ವೇತನದ ಮೂಲಕ ಡಾಕ್ಟರೇಟ್ ಪದವಿ ಪಡೆದರು.

ಎಡಿನ್‌ಬರೊ ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿ ವೇತನ ಪಡೆದ ಏಕೈಕ ವಿದೇಶಿ ವಿದ್ಯಾರ್ಥಿ ಎಂಬ ಹೆಗ್ಗಳಿಕೆಯೂ ಅವರದ್ದಾಗಿದೆ. ಸ್ಕಾಟ್‌ಲೆಂಡ್‌ನಲ್ಲಿ ತಮ್ಮ ದೇಶದ ಹೊರತಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದಿಲ್ಲ. ಆದರೆ, ಅವರ ಬುದ್ಧಿಮತ್ತೆಗೆ ತಲೆದೂಗಿದ ಅಲ್ಲಿನ ವಿಶ್ವವಿದ್ಯಾಲಯ ಸಮಿತಿ ನಿಯಮ ಸಡಿಲಿಸಿತು.

1976ರಲ್ಲಿ ಅಮೆರಿಕಕ್ಕೆ ತೆರಳಿ ಕಾರ್ಯಾರಂಭ ಮಾಡಿದ ಡಾ.ಹೊಸ್ಮನೆ,  ಉತ್ತರ ಇಲಿನಾಯ್‌ ವಿಶ್ವವಿದ್ಯಾಲಯದಲ್ಲಿ ವಿಶೇಷ ಸಂಶೋಧಕರಾಗಿ ಸದ್ಯ ಕಾರ್ಯನಿರ್ವಹಿಸುತ್ತಿದ್ದಾರೆ. ಬೋರಾನ್ ರಾಸಾಯನ ವಿಜ್ಞಾನದ ಬಗ್ಗೆ 350 ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದು, ಇದು ಈ ಕ್ಷೇತ್ರದಲ್ಲಿ ಮಾಡಿದ ಸಾರ್ವಕಾಲಿಕ ದಾಖಲೆ ಎನ್ನಲಾಗಿದೆ. ಈ ಬಗ್ಗೆ ಅವರು ಬರೆದಿರುವ ಐದು ಪುಸ್ತಕಗಳು ಜಾಗತಿಕ ಗೌರವಕ್ಕೆ ಪಾತ್ರವಾಗಿವೆ.

Tags: 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !