ಜಯಪ್ರಕಾಶ ನಾರಾಯಣ ಮಾದರಿಯಾಗಲಿ

7
ಕಾರ್ಯಕರ್ತರೊಂದಿಗೆ ಸಂವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ

ಜಯಪ್ರಕಾಶ ನಾರಾಯಣ ಮಾದರಿಯಾಗಲಿ

Published:
Updated:

ಮೈಸೂರು: ‘ಜಯಪ್ರಕಾಶ ನಾರಾಯಣ ಅವರು ತಮ್ಮ ಕೊನೆಯ ಉಸಿರಿನವರೆಗೂ ಜನಪರ ಚಳವಳಿಗಳಲ್ಲಿ ತೊಡಗಿಸಿಕೊಂಡು ದೇಶಕಟ್ಟಿದರು. ಅಂಥವರು ನಮ್ಮೆಲ್ಲರಿಗೂ ಮಾದರಿಯಾಗಿರಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ಮೈಸೂರು, ಆಗ್ರಾ, ಮಧ್ಯಪ್ರದೇಶದ ದಮೋಹ್, ರಾಜಾಸ್ತಾನದ ಕರೋಲಿ, ಛತ್ತೀಸಗಡದ ರಾಯಪುರ ಲೋಕಸಭಾ ಕ್ಷೇತ್ರಗಳ ಕಾರ್ಯಕರ್ತರೊಂದಿಗೆ ಬುಧವಾರ ಹಮ್ಮಿಕೊಂಡಿದ್ದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಮೈಸೂರಿನ ಕಾರ್ಯಕರ್ತರ ಪ್ರಶ್ನೆಗೆ ಹೀಗೆ ಪ್ರತಿಕ್ರಿಯಿಸಿದರು.

ಬಿಜೆಪಿಯ ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷ ಅರುಣ್ ಕುಮಾರ್ ಗೌಡ ಅವರು, ‘ಮಾದರಿ ಕಾರ್ಯಕರ್ತನಾಗುವುದು ಹೇಗೆ?’ ಎಂದು ಪ್ರಧಾನಿಗೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮೋದಿ, ‘ಅ. 11ರಂದು ಜಯಪ್ರಕಾಶ ನಾರಾಯಣ (ಜೆಪಿ) ಅವರ ಜನ್ಮದಿನ. ಜೆಪಿ ಅವರು ಗಾಂಧಿಯೊಂದಿಗೆ ಗುರುತಿಸಿಕೊಂಡಿದ್ದರು. ಅವರು ಮನಸು ಮಾಡಿದ್ದರೆ ಯಾವುದೇ ಖಾತೆಯ ಸಚಿವರಾಗಬಹುದಿತ್ತು. ಆದರೆ, ಅವರು ಸಚಿವರಾಗದೇ ಜನರೊಂದಿಗೆ ಉಳಿದುಕೊಂಡರು. 1970ರ ನಂತರ ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಾದಾಗ, ತುರ್ತುಪರಿಸ್ಥಿತಿ ಘೋಷಣೆಯಾಗಾಗ ಜನರನ್ನು ಸಂಘಟಿಸಿ ಚಳವಳಿಗಳನ್ನು ರೂಪಿಸಿದರು. ಸ್ವಾರ್ಥವಿಲ್ಲದ ಅವರ ರಾಜಕಾರಣ ಅನೇಕ ಯುವನಾಯಕರನ್ನು ಹುಟ್ಟುಹಾಕಿತು. ಇಂದು ನಮ್ಮ ನಡೆ ಜೆಪಿ ಮಾದರಿಯದಾದರೆ ದೇಶದ ಪ್ರಗತಿ ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ಮುರುಳಿ ಅವರು ‘ಅಂತರರಾಷ್ಟ್ರೀಯ ಮಟ್ಟದಕ್ಕೆ ದೇಶಕ್ಕೆ ಒಳ್ಳೆಯ ಹೆಸರು ಬಂದಲ್ಲಿ ಜನಜೀವನ ಸುಧಾರಿಸುವುದೇ?’ ಎಂದು ಪ್ರಶ್ನಿಸಿದರು. ‘ಜನಜೀವನ ಸುಧಾರಿಸಿದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಬೆಲೆ ಸಿಗುತ್ತದೆ. ದೇಶದ ಬೆಲೆ ಹೆಚ್ಚಾದರೆ ಜನರಿಗೆ ಅನುಕೂಲವಾಗುತ್ತದೆ. ಹೊಸ ಉದ್ದಿಮೆಗಳ ಸಂಖ್ಯೆ ಹೆಚ್ಚಿದೆ. 2014ರಲ್ಲಿ ವಿದೇಶಗಳಿಗೆ ವಿಮಾನದಲ್ಲಿ ಪಯಣಿಸುತ್ತಿದ್ದವರ ಸಂಖ್ಯೆ 70 ಲಕ್ಷವಿತ್ತು. ಈಗದು 1 ಕೋಟಿ ಮೀರಿದೆ’ ಎಂದು ಮೋದಿ ವಿವರಿಸಿದರು.

ಕರ್ನಾಟಕದಲ್ಲಿ ಅವಕಾಶವಾದಿ ರಾಜಕಾರಣ

‘ಕರ್ನಾಟಕದಲ್ಲಿ ಒಡೆದು ಆಳುವ ಪದ್ಧತಿ ಜೀವಂತವಾಗಿದೆ. ಆದರೆ, ಅದು ಹೆಚ್ಚು ದಿನ ನಡೆಯದು’ ಎಂದು ಪ್ರಧಾನಿ ಮೋದಿ ಹೇಳಿದರು.

‘ಇಲ್ಲಿ ಅವಕಾಶವಾದಿ ರಾಜಕಾರಣ ಹೆಚ್ಚು. ಇತರ ಪಕ್ಷಗಳಿಗೆ ಜನಹಿತ ಮುಖ್ಯವೇ ಆಗಿಲ್ಲ. ನಾವು ನಮ್ಮ ಸಾಧನೆಗಳನ್ನಷ್ಟೇ ಜನರ ಮುಂದೆ ಇಡೋಣ. ಚುನಾವಣೆಯಲ್ಲಿ ಗೆಲುವು ಮುಖ್ಯವೇ. ಆದರೆ, ಇತರರನ್ನು ಸೋಲಿಸುವುದು ನಮ್ಮ ಉದ್ದೇಶವಲ್ಲ. ಜನಸೇವೆಗೆ ಮತ್ತೊಂದು ಅವಕಾಶವನ್ನು ಪಡೆಯುವುದು ನಮ್ಮ ಆದ್ಯತೆಯಾಗಬೇಕು’ ಎಂದರು.

ಪ್ರಧಾನಿ ಕಚೇರಿಯಿಂದ ಬಂತು ದೂರವಾಣಿ ಕರೆ!

ಹೊಳಲ್ಕೆರೆ: ಪಟ್ಟಣದ ದಂತವೈದ್ಯ ಡಾ. ಕೆ.ವಿ.ಸಂತೋಷ್ ಅವರ ಮೊಬೈಲ್‌ಗೆ ಮಂಗಳವಾರ ಸಂಜೆ ಪ್ರಧಾನ ಮಂತ್ರಿ ಕಚೇರಿಯಿಂದ ದೂರವಾಣಿ ಕರೆ ಬಂದಿದ್ದು, ಅಧಿಕಾರಿಗಳು ಪತ್ರದಲ್ಲಿನ ಬೇಡಿಕೆಯ ಬಗ್ಗೆ ಮೂರು ನಿಮಿಷಗಳವರೆಗೆ ವಿಸ್ತೃತ ಚರ್ಚೆ ನಡೆಸಿದರು.

ಚಿತ್ರದುರ್ಗ-ತುಮಕೂರು ರೈಲು ಯೋಜನೆಯನ್ನು ಆರಂಭಿಸುವಂತೆ ಸಂತೋಷ್ ಕಳೆದ ಒಂದು ತಿಂಗಳ ಹಿಂದೆ ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದರು. ‘ಚಿತ್ರದುರ್ಗದಿಂದ ಬೆಂಗಳೂರಿಗೆ ನೇರ ರೈಲು ಮಾರ್ಗ ಇಲ್ಲದಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗಿದೆ. ಇದರಿಂದ ಸರಕು ಸಾಗಣೆ ವೆಚ್ಚ, ಇಂಧನ, ಸಮಯ ವ್ಯರ್ಥವಾಗುತ್ತಿದ್ದು, ಅಭಿವೃದ್ಧಿಗೂ ಹಿನ್ನಡೆ ಆಗಿದೆ. ಯೋಜನೆ ಜಾರಿಗೊಳಿಸುವುದಾಗಿ ಪ್ರಕಟಿಸಿ ಅನೇಕ ವರ್ಷಗಳಾದರೂ ಕಾಮಗಾರಿ ಆರಂಭವಾಗಿಲ್ಲ. ಆದ್ದರಿಂದ ಶೀಘ್ರವೇ ಕಾಮಗಾರಿಗೆ ಚಾಲನೆ ನೀಡಬೇಕು’ ಎಂದು ಮನವಿ ಮಾಡಿದ್ದರು.

ಪತ್ರಕ್ಕೆ ಸ್ಪಂದಿಸಿದ ಪ್ರಧಾನಿ ಕಾರ್ಯಾಲಯದ ಅಧಿಕಾರಿಯು ಸಂತೋಷ್ ಅವರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ.

ಬಳಿಕ ‘ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇವೆ. ನಂತರ ಮತ್ತೊಮ್ಮೆ ನಿಮ್ಮನ್ನು ಸಂಪರ್ಕಿಸುತ್ತೇವೆ’ ಎಂದು ತಿಳಿಸಿದ್ದಾರೆ.‌

 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !