ಬುಧವಾರ, ಡಿಸೆಂಬರ್ 11, 2019
27 °C

ಹೆಜ್ಜೆ ಹಾಕಿ ಜುಂಬಾ ಎನ್ನಿರಿ...

Published:
Updated:
Deccan Herald

ಅಷ್ಟೊತ್ತಿಗಾಗಲೇ ಸೂರ್ಯ ಆಗಸದಿಂದ ಮರೆಯಾಗಿದ್ದ. ಅದೇ ಹೊತ್ತಿನಲ್ಲಿ ಮಹದೇವಪುರದ ವಿಆರ್ ಬೆಂಗಳೂರು ಮಾಲ್‌ ಟೆರೇಸ್‌ನ ವಿಶಾಲವಾದ ಜಾಗದಲ್ಲಿ ಸಾವಿರಾರು ಮಂದಿ ನೆರೆದಿದ್ದರು. ಅವರ‍್ಯಾರು ನಿಂತಲ್ಲಿ ನಿಂತಿರಲಿಲ್ಲ. ಕಿವಿಗೆ ಬೀಳುತ್ತಿದ್ದ ಸಂಗೀತಕ್ಕೆ ತಕ್ಕಂತೆ ಸೊಗಸಾಗಿ ಮೈ ಬಳಕಿಸುತ್ತಿದ್ದರು. ಎಲ್ಲ ಒತ್ತಡಗಳನ್ನು ಮರೆತು ಬೇರೊಂದು ಲೋಕದಲ್ಲಿದ್ದಂತೆ ನುಲಿಯುತ್ತಿದ್ದರು.

ಹೌದು, ಜಾಗತಿಕವಾಗಿ ಯೋಗದಷ್ಟೇ ಜನಪ್ರಿಯತೆವುಳ್ಳ ಜುಂಬಾ ಫಿಟ್‌ನೆಸ್‌ ತರಬೇತಿಯನ್ನು ಜುಂಬಾ ಇನ್‌ಸ್ಟ್ರಕ್ಟರ್ ನಮ್ರತಾ ವರ್ಮಾ ಅವರು ಆಯೋಜಿಸಿದ್ದರು. ಅಲ್ಲಿ ನೆರೆದಿದ್ದವರಿಗೆ ಜುಂಬಾ ಸೆಲೆಬ್ರಿಟಿ ಲೊರೆಟ್ಟಾ ಬೇಟ್ಸ್ ತರಬೇತಿ ನೀಡುತ್ತಿದ್ದರು. ಅವರನ್ನು ಅನುಕರಿಸಿ, ಫಿಟ್‌ನೆಸ್ ಟ್ರೆಂಡ್‌ಗಳಲ್ಲಿ ಅಗ್ರಸ್ಥಾನದಲ್ಲಿರುವ ಜುಂಬಾ ಫಿಟ್‌ನೆಸ್‌ ವರ್ಕ್‌ಔಟ್‌ನಲ್ಲಿ ಸಾವಿರಾರು ಮಂದಿ ಮೈಮರೆತಿದ್ದರು. ನೀರಿನ ಅಲೆಗಳಂತೆಯೇ, ಅಲೆಅಲೆಯಾಗಿ ತೇಲಿಬರುವ ಪಾಶ್ಚಿಮಾತ್ಯ ಸಂಗೀತದೊಂದಿಗೆ ಅರಿವಿಲ್ಲದೆಯೇ ಬೆಸೆದುಕೊಂಡಿದ್ದರು.

ತರಬೇತಿಯ ಬಳಿಕ ಮಾತಿಗೆ ಸಿಕ್ಕರುಲೊರೆಟ್ಟೊ ಅವರ ಮಾತುಗಳು ಇಲ್ಲಿವೆ.

ಜುಂಬಾ ಎಂದರೇನು?

ದೇಹದ ಫಿಟ್‌ನೆಸ್‌ ಕಾಯ್ದುಕೊಳ್ಳುವ ಹೊಸ ಮಾರ್ಗವೇ ಜುಂಬಾ. ಸಂಗೀತಕ್ಕೆ ತಕ್ಕಂತೆ ದೇಹವನ್ನು ಕುಲುಕಿಸಿ ಆರೋಗ್ಯ ಕಾಪಾಡಿಕೊಳ್ಳುವ ಪ್ರಕಾರ ಇದಾಗಿದ್ದು, ಭಾರತೀಯ ಸಂಗೀತ ಸೇರಿದಂತೆ ಪಾಶ್ಚಿಮಾತ್ಯ ಸಂಗೀತದ ಮೂಲಕ ಇದರಲ್ಲಿ ಪಾಲ್ಗೊಳ್ಳಬಹುದು. ಬರೀ ಆರೋಗ್ಯಕ್ಕಷ್ಟೇ ಇದು ಸೀಮಿತವಾಗಿಲ್ಲ. ಅದರೊಟ್ಟಿಗೆ ಸಂತಸ, ನೃತ್ಯ, ಸಂಗೀತವೆಲ್ಲವೂ ಇಲ್ಲಿದೆ.

ವಿಶ್ವದಲ್ಲೆಡೆ ಜುಂಬಾ ಟ್ರೆಂಡ್ ಹಾಗೂ ಜನರ ಪ್ರತಿಕ್ರಿಯೆ ಹೇಗಿದೆ?

ಮುಖ್ಯವಾಗಿ ಹೇಳುವುದಾದರೆ, ಜುಂಬಾ ಟ್ರೆಂಡ್ ಅಲ್ಲ. ನೃತ್ಯ ಹಾಗೂ ಸಂಗೀತವೂ ಅಲ್ಲ. ಜುಂಬಾವನ್ನು ಟ್ರೆಂಡ್ ಎನ್ನುವುದರ ಬದಲಿಗೆ ಫಿಟ್‌ನೆಸ್ ಎನ್ನುವುದೇ ಸೂಕ್ತ.

ವಿಶ್ವದೆಲ್ಲೆಡೆ ಜುಂಬಾ ಬಗ್ಗೆ ಈಗೀಗ ಆಸಕ್ತಿ ಹೆಚ್ಚುತ್ತಿದೆ. ನೃತ್ಯ ಹಾಗೂ ಸಂಗೀತವನ್ನು ಅತಿಯಾಗಿ ಪ್ರೀತಿಸುವವರು ಇದಕ್ಕೆ ಥಟ್ಟನೆ ಮಾರುಹೋಗುತ್ತಿದ್ದಾರೆ. ತಲ್ಲೀನರಾಗಿ ಮೈಮರೆಯುತ್ತಿದ್ದಾರೆ. ಹೊಸತಾಗಿ ಜುಂಬಾ ಕಲಿತವರು ತುಂಬ ಖುಷಿ ಪಡುತ್ತಿದ್ದಾರೆ. ಈ ಫಿಟ್‌ನೆಸ್ ಪ್ರಕಾರದಲ್ಲಿ ತೊಡಗಿಕೊಂಡ ಬಳಿಕ ತಮ್ಮಲ್ಲಾದ ಬದಲಾವಣೆಗಳ ಬಗ್ಗೆ ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಒಟ್ಟಾರೆ ಹೇಳುವುದಾರೆ, ಜುಂಬಾದ ಬಗ್ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಮೊದಲು ದೇಶಗಳ ಮಟ್ಟದಲ್ಲಿ ಜುಂಬಾ ತರಬೇತಿ ಹಾಗೂ ಶಿಬಿರಗಳನ್ನು ಮಾಡುತ್ತಿದ್ದೆವು. ಆದರೆ, ಈಗ ಮೆಟ್ರೊ ನಗರಗಳು ಹಾಗೂ ಜಿಲ್ಲಾ ಮಟ್ಟದಲ್ಲಿ ಜುಂಬಾ ತರಬೇತಿ ಆಯೋಜಿಸುತ್ತಿದ್ದೇವೆ. ಬಹುತೇಕರು ಸ್ವಯಂಪ್ರೇರಿತರಾಗಿ ತಮ್ಮ ಪ್ರದೇಶಗಳಲ್ಲಿ ಜುಂಬಾ ಆಯೋಜಿಸುತ್ತಿದ್ದಾರೆ. ಈ ವೇಗ ಕಂಡರೆ, ಮುಂದಿನ ದಿನಗಳಲ್ಲಿ ಗ್ರಾಮಾಂತರ ಪ್ರದೇಶಕ್ಕೂ ಕಾಲಿಡುವ ವಿಶ್ವಾಸ ಮೂಡುತ್ತಿದೆ.

ದೇಹದ ಆರೋಗ್ಯಕ್ಕೆ ಜುಂಬಾ ಎಷ್ಟರ ಮಟ್ಟಿಗೆ ಅಗತ್ಯ?

ಒತ್ತಡ ಬದುಕಿನಲ್ಲಿ ಜುಂಬಾ ಪ್ರತಿಯೊಬ್ಬರಿಗೂ ಅನಿವಾರ್ಯ. ಜುಂಬಾವು, ಎಲ್ಲ ಒತ್ತಡಗಳನ್ನು ಬದಿಗಿರಿಸಿ ಮೈಂಡ್ ರೀಫ್ರೆಶ್ ಮಾಡುತ್ತದೆ. ನಿಯಮಿತವಾಗಿ ಜುಂಬಾ ಫಿಟ್‌ನೆಸ್ ಕಾಯ್ದುಕೊಂಡರೆ ಯಾವುದೇ ಆಸ್ಪತ್ರೆಗಳಿಗೆ ಹೋಗುವ ಅವಶ್ಯಕತೆ ಇರುವುದಿಲ್ಲ. ವಾರದಲ್ಲಿ ಮೂರು ದಿನ ಮೂರು ತಾಸು ಜುಂಬಾ ಮಾಡಿದರೆ, ನಿತ್ಯವೂ 60 ನಿಮಿಷ ಜುಂಬಾ ಮಾಡಿದರೆ ದೇಹದ ಆರೋಗ್ಯಕ್ಕೆ ಒಳಿತು. ದೇಹಕ್ಕಷ್ಟೇ ಅಲ್ಲ ಮನಸಿಗೂ ಮದ್ದು ಇದು. ಒತ್ತಡರಹಿತವಾಗಿ ಕ್ಯಾಲೊರಿ ಇಳಿಸುವ ಕಲೆ ಇದಕ್ಕಿದೆ.

ದೇಹವನ್ನು ಹುರಿಗೊಳಿಸಿ, ಇಷ್ಟದ ಆಕಾರಕ್ಕೆ ಒಗ್ಗಿಸಬೇಕೆನ್ನುವವರಿಗೆ ಜುಂಬಾ ಟೋನಿಂಗ್, ಹೃದಯ ಆರೋಗ್ಯ ಸೇರಿದಂತೆ ಒಟ್ಟಾರೆ ದೇಹದ ಆರೋಗ್ಯಕ್ಕಾಗಿ ಜುಂಬಾ ಫಿಟ್‌ನೆಸ್, 50 ವರ್ಷ ದಾಟಿದವರಿಗೆ ಜುಂಬಾ ಗೋಲ್ಡ್‌, ಮಂಡಿ ನೋವು ಇರುವವರಿಗೆ ಅಕ್ವಾ ಜುಂಬೊ, ಪುಟ್ಟ ಮಕ್ಕಳಿಗೆ ಜುಂಬಾ ಕಿಡ್ಸ್ ಸೂಕ್ತ

ಜುಂಬಾದೊಂದಿಗಿನ ನಂಟು ಹೇಗಿದೆ?

ಕಳೆದ 12 ವರ್ಷಗಳಿಂದ ಜುಂಬಾದಲ್ಲಿ ತೊಡಗಿಕೊಂಡಿದ್ದೇನೆ. ಇದು ನನ್ನ ದೇಹದ ಆರೋಗ್ಯವನ್ನು ಚೆನ್ನಾಗಿಟ್ಟಿದೆ. ಮನಸ್ಸನ್ನು ನಿತ್ಯವೂ ಪ್ರಫುಲ್ಲಗೊಳಿಸುತ್ತದೆ. ನನಗೆ ಜುಂಬಾ ದಿನನಿತ್ಯದ ಜೀವನಶೈಲಿಯೇ ಆಗಿದೆ.

ಜುಂಬಾದಲ್ಲಿ ಪಾಲ್ಗೊಳ್ಳುವುದೆಂದರೆ, ಹೊಸತನದ ಜೀವನಶೈಲಿಗೆ ನೀವು ಒಗ್ಗಿಕೊಂಡಂತೆ. ಈ ಫಿಟ್‌ನೆಸ್‌ನಲ್ಲಿ ಪಾಲ್ಗೊಳ್ಳುವಾಗ ಇತರರು ನಿಮ್ಮನ್ನು ನೋಡಿ ಆಡಿಕೊಳ್ಳುತ್ತಾರೆಂದು ಎಂದಿಗೂ ಭಾವಿಸಬೇಡಿ. ನೀವು ಹೊಸತನಕ್ಕೆ ತುಡಿಯುತ್ತಿದ್ದೀರಿ. ಹೊಸತನವನ್ನು ನಿಮ್ಮ ಜೀವನಕ್ಕೆ ಅಳವಡಿಸಿಕೊಳ್ಳುತ್ತಿದ್ದೀರಿ. ಬೆನ್ನ ಹಿಂದೆ ನಿಂತು ಮಾತಾಡಿಕೊಳ್ಳುವವರ ಬಗ್ಗೆ ಚಿಂತೆ ಬಿಟ್ಟು ಜುಂಬಾದ ಸಂತಸ ಹಾಗೂ ಉತ್ಸಾಹವನ್ನು ಅನುಭವಿಸಿ

ನಿಮ್ಮ ಫಿಟ್‌ನೆಸ್ ಗುಟ್ಟೇನು?

ನನಗೆ ಜುಂಬಾವೇ ಎಲ್ಲವೂ. ನಿಂತರೂ ಕುಂತೂರು ನನಗೆ ಜುಂಬಾ ಫಿಟ್‌ನೆಸ್ ಎಲ್ಲವೂ ಆಗಿದೆ. ತುತ್ತಿನ ಚೀಲವನ್ನೂ ಇದೇ ತುಂಬಿಸುತ್ತಿದೆ. ನಿತ್ಯ ತಪ್ಪದೇ ಜುಂಬಾದಲ್ಲಿ ತೊಡಗಿಕೊಳ್ಳುತ್ತೇನೆ. ಅದರಿಂದಲೇ ನಾನು ಫೀಟ್ ಆ್ಯಂಡ್ ಫೈನ್ ಆಗಿದ್ದೇನೆ. ದೇಶ–ವಿದೇಶ ಸುತ್ತಿ ಆಸಕ್ತರಿಗೆ ತರಬೇತಿ ನೀಡುತ್ತೇನೆ.

ಬೆಂಗಳೂರಿನ ಬಗ್ಗೆ ಏನಂತೀರಾ?

ಈ ಹಿಂದೆ ನಾನು ಹಲವಾರು ಬಾರಿ ಭಾರತಕ್ಕೆ ಬಂದಿದ್ದೇನೆ. ಆದರೆ, ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಬಂದಿರುವುದು. ಇಲ್ಲಿನ ಜನರ ಪ್ರೀತಿ ಹಾಗೂ ಜುಂಬಾ ಮೇಲಿನ ಆಸಕ್ತಿಗೆ ನಿಜಕ್ಕೂ ನಾನು ಮಾರುಹೋದೆ. ನಾನು ಕಂಡಂತೆ ಬೆಂಗಳೂರು ಅಮೆಜಿಂಗ್ ನಗರ. ಅತ್ಯಂತ ತ್ವರಿತವಾಗಿ ಬೆಳೆಯುತ್ತಿರುವ ಈ ನಗರ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ. ಸುಂದರವಾದ ನಗರವೂ ಹೌದು. ಇದುವರೆಗೆ ನನ್ನನ್ನು ಭೇಟಿಯಾದ ಪ್ರತಿಯೊಬ್ಬ ಭಾರತೀಯರು ಸಹ ಗೌರವಯುತವಾಗಿ ನನ್ನೊಂದಿಗೆ ನಡೆದುಕೊಂಡಿದ್ದಾರೆ. ಭಾರತೀಯರ ಈ ವರ್ತನೆಯೆಂದರೆ ನನಗೆ ಬಲುಪ್ರೀತಿ.

ಜುಂಬಾದ ಕುಟುಂಬ ಇದೆಯಂತೆ ಹೌದಾ?

ಜುಂಬಾ ಕಲಿಯುವವರು ಹಾಗೂ ಕಲಿತವರು ನಾವೆಲ್ಲರೂ ಒಂದೇ ಕುಟುಂಬದವರು. ವಿಶ್ವದಲ್ಲಿ ಈಗೀಗ ಜುಂಬಾ ಸಮುದಾಯವೇ ದೊಡ್ಡಮಟ್ಟದಲ್ಲಿ ತಲೆ ಎತ್ತುತ್ತಿದೆ. ನಾವೆಲ್ಲರೂ ಜುಂಬಾ ಸಮುದಾಯದವರು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ.

ಪ್ರತಿಕ್ರಿಯಿಸಿ (+)