ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನ್ ತಿಂಗಳ ಅರ್ಧ ವೇತನ ಸರ್ಕಾರದಿಂದ ಪಾವತಿ

ಸಾರಿಗೆ ನಿಗಮಗಳ ನೌಕರರಿಗೆ ಡಿಸಿಎಂ ಲಕ್ಷ್ಮಣ ಸವದಿ ಅಭಯ
Last Updated 17 ಜೂನ್ 2020, 20:02 IST
ಅಕ್ಷರ ಗಾತ್ರ

ಬಾಗಲಕೋಟೆ: ಸಾರಿಗೆ ನಿಗಮಗಳ ನೌಕರರ ಜೂನ್ ತಿಂಗಳ ವೇತನ ಬಾಬ್ತು ₹326 ಕೋಟಿಯಲ್ಲಿ ಅರ್ಧಭಾಗ ಸರ್ಕಾರದಿಂದಲೇ ಪಾವತಿಸಲಾಗುವುದು ಎಂದು ಸಾರಿಗೆ ಸಚಿವರೂ ಆದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಮುಧೋಳದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್-19 ಹಿನ್ನೆಲೆಯಲ್ಲಿ ಜನರು ಬಸ್‌ಗಳ ಹತ್ತಲು ಇನ್ನೂ ಹಿಂಜರಿಯುತ್ತಿದ್ದಾರೆ. ಜೊತೆಗೆ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಬಸ್‌ಗಳಲ್ಲಿ ಆಸನ ಸಾಮರ್ಥ್ಯಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತಿದೆ. ಹೀಗಾಗಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ನಷ್ಟದಲ್ಲಿವೆ. ಸರ್ಕಾರದ ನೆರವು ಪಡೆಯುವುದು ಅನಿವಾರ್ಯ ಎಂದರು.

ಕೋವಿಡ್-19 ಲಾಕ್‌ಡೌನ್ ಅವಧಿಯಲ್ಲಿ ಸಾರಿಗೆ ನಿಗಮಗಳಿಗೆ ₹2,300 ಕೋಟಿ ನಷ್ಟವಾಗಿದೆ. ಅದರಿಂದಲೂ ಚೇತರಿಸಿಕೊಳ್ಳಬೇಕಿದೆ. ಈ ಸಂಕಷ್ಟ ಸಂಪೂರ್ಣ ಪರಿಹಾರವಾಗಿ ನಿಗಮಗಳ ದೈನಂದಿನ ವಹಿವಾಟು ಸಹಜ ಸ್ಥಿತಿಗೆ ಬರುವವರೆಗೂ ನೌಕರರ ವೇತನ ಪಾವತಿಸಲು ಸರ್ಕಾರದ ನೆರವು ಪಡೆಯುವ ಬಗ್ಗೆ ಅದಕ್ಕೆ ವಿಶೇಷ ನಿಧಿ ಸ್ಥಾಪಿಸುವ ಕುರಿತು ಸಿಎಂ ಜೊತೆ ಚರ್ಚಿಸಿ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಜೂನ್ ತಿಂಗಳು ಸೇರಿದಂತೆ ಮುಂದಿನ ದಿನಗಳಲ್ಲಿ ವೇತನದ ಬಗ್ಗೆ ಸಾರಿಗೆ ಸಂಸ್ಥೆ ನೌಕರರು ಚಿಂತಿಸುವ ಅಗತ್ಯವಿಲ್ಲ. ಯಾರಿಗೂ ಸಂಬಳ ಕಡಿತ ಮಾಡೊಲ್ಲ. ಎಲ್ಲರಿಗೂ ನಿಗದಿತ ಅವಧಿಯಲ್ಲಿಯೇ ಸಂಬಳ ನೀಡಲಾಗುವುದು. ವೆಚ್ಚ ಕಡಿತದ ಕಾರಣಕ್ಕೆ ಸಿಬ್ಬಂದಿ ಕಡಿತಗೊಳಿಸುವ ಇಲ್ಲವೇ ಗುತ್ತಿಗೆ ನೌಕರರನ್ನು ಮನೆಗೆ ಕಳಿಸುವ ಯಾವುದೇ ಪ್ರಸ್ತಾಪ ಇಲ್ಲ. ಎಲ್ಲರೂ ನಿಶ್ಚಿಂತೆಯಾಗಿ ಕೆಲಸ ಮಾಡಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT