ಕೆ.ಸಿ. ವ್ಯಾಲಿ: ‘ಸುಪ್ರೀಂ’ ವಿಚಾರಣೆ ಮಾರ್ಚ್‌ 11ರಿಂದ

ಶನಿವಾರ, ಮಾರ್ಚ್ 23, 2019
34 °C
ತಡೆಯಾಜ್ಞೆ ತೆರವು ಕೋರಿ ರಾಜ್ಯದ ಅರ್ಜಿ

ಕೆ.ಸಿ. ವ್ಯಾಲಿ: ‘ಸುಪ್ರೀಂ’ ವಿಚಾರಣೆ ಮಾರ್ಚ್‌ 11ರಿಂದ

Published:
Updated:

ನವದೆಹಲಿ: ಕೆ.ಸಿ. ವ್ಯಾಲಿ (ಕೋರಮಂಗಲ ಮತ್ತು ಚಲ್ಲಘಟ್ಟ ಕಣಿವೆ) ಯೋಜನೆಗೆ ತಡೆ ನೀಡಿರುವ ಆದೇಶ ಮಾರ್ಪಾಡು ಮಾಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿರುವ ರಾಜ್ಯ ಸರ್ಕಾರ, ಪ್ರಕರಣದ ತ್ವರಿತ ವಿಚಾರಣೆಗೆ ಒತ್ತಾಯಿಸಿದೆ.

ಕರ್ನಾಟಕದ ಅಡ್ವೋಕೇಟ್‌ ಜನರಲ್‌ ಉದಯ್‌ ಹೊಳ್ಳ ಅವರು ಶುಕ್ರವಾರ ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ ಹಾಗೂ ಸಂಜಯ್ ಕಿಶನ್ ಕೌಲ್ ಅವರಿದ್ದ ಪೀಠ, ಪ್ರಕರಣದ ವಿಚಾರಣೆಯನ್ನು ಇದೇ 11ರಿಂದ ಕೈಗೆತ್ತಿಕೊಳ್ಳಲು ಸಮ್ಮತಿ ಸೂಚಿಸಿದೆ.

ಬೆಂಗಳೂರು ನಗರದಿಂದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಗ್ರಾಮಾಂತರ ಜಿಲ್ಲೆಗಳ 191 ಕೆರೆಗಳಿಗೆ ಶುದ್ಧೀಕರಿಸಿದ ಚರಂಡಿ ನೀರು ಹರಿಸುವ ಈ ಮಹತ್ವದ ಯೋಜನೆಗೆ ಅನುಮತಿ ನೀಡಿ ರಾಜ್ಯ ಹೈಕೋರ್ಟ್‌ 2018ರ ಸೆಪ್ಟೆಂಬರ್‌ 28ರಂದು ನೀಡಿದ್ದ ಮಧ್ಯಂತರ ಆದೇಶಕ್ಕೆ ಕಳೆದ ಜನವರಿ 7ರಂದು ಸುಪ್ರೀಂ ಕೋರ್ಟ್‌ ತಡೆ ನೀಡಿತ್ತು.

ಹೈಕೋರ್ಟ್‌ ಆದೇಶಕ್ಕೆ ತಡೆ ಕೋರಿ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆರ್‌.ಆಂಜನೇಯ ರೆಡ್ಡಿ ಅವರು ಮೇಲ್ಮನವಿ ಸಲ್ಲಿಸಿದ್ದರು.

ರೆಡ್ಡಿ ಅವರು ಸಲ್ಲಿಸಿರುವ ಮೇಲ್ಮನವಿಯು ದುರುದ್ದೇಶದಿಂದ ಕೂಡಿದೆ. ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿರುವ ಬರಪೀಡಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಜನತೆಗೆ ಕೆ.ಸಿ. ವ್ಯಾಲಿ ಮತ್ತು ಎಚ್‌.ಎನ್‌. ವ್ಯಾಲಿ ಯೋಜನೆಗಳಿಂದ ಅನುಕೂಲವಾಗಲಿದೆ ಎಂದು ಕರ್ನಾಟಕ ಸಲ್ಲಿಸಿರುವ ಮೇಲ್ಮನವಿಯಲ್ಲಿ ತಿಳಿಸಿದೆ.

‘ಶುದ್ಧ ಕುಡಿಯುವ ನೀರನ್ನು ಕೋರುವ ಜನರ ಹಕ್ಕನ್ನು ಕಿತ್ತುಕೊಂಡಂತಾಗಲಿದೆ, ಜನರ ಆರೋಗ್ಯದ ಮೇಲೂ ತೀವ್ರ ರೀತಿಯ ದುಷ್ಪರಿಣಾಮ ಉಂಟಾಗಲಿದೆ’ ಎಂಬ ಅರ್ಜಿದಾರರ ಆರೋಪದಲ್ಲಿ ಹುರುಳಿಲ್ಲ ಎಂದು ಸರ್ಕಾರ ಹೇಳಿದೆ.

ಯೋಜನೆ ಮೂಲಕ ಕೆರೆಗಳಿಗೆ ಕಲುಷಿತ ನೀರು ಹರಿಸದೆ, ಶುದ್ಧೀಕರಿಸಿದ ನೀರನ್ನು ಹರಿಸುವುದರಿಂದ ಜನತೆಗೆ ಅನುಕೂಲವಾಗಲಿದೆ. ನೀರು ಭೂಮಿಯೊಳಗೆ ಇಂಗುವ ಸಂದರ್ಭ ನೈಸರ್ಗಿಕವಾಗಿ ಮತ್ತೆ ಶುದ್ಧೀಕರಣಗೊಳ್ಳುವುದರಿಂದ ಕೊಳವೆ ಬಾವಿ ಮೂಲಕ ಪಡೆಯುವ ನೀರನ್ನು ಕುಡಿಯುವುದಕ್ಕೆ ಹಾಗೂ ನೀರಾವರಿ ಬಳಕೆಗೆ ಅಪಾಯ ಎದುರಾಗದು ಎಂದು ವಿವರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !