ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗೆ ಕೆಲಸ, ನೀರು ನೀಡಿ | ಸಚಿವ ಕೆ.ಎಸ್. ಈಶ್ವರಪ್ಪಗೆ ಅಹವಾಲುಗಳ ಸರಮಾಲೆ

Last Updated 25 ಏಪ್ರಿಲ್ 2020, 21:09 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮೂರಿನಲ್ಲಿರುವ ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗಿವೆ. ರಸ್ತೆಗಳು ಸರಿ ಇಲ್ಲ. ಉದ್ಯೋಗ ಖಾತ್ರಿ ಯೋಜನೆಯಡಿ ಸರಿಯಾಗಿ ಕೆಲಸ ಕೊಡುತ್ತಿಲ್ಲ, ಗ್ರಾಮ ಪಂಚಾಯ್ತಿ ಸಿಬ್ಬಂದಿಗೆ ವೇತನ ಸಿಗುತ್ತಿಲ್ಲ...’

‘ಪ್ರಜಾವಾಣಿ’ ಶನಿವಾರ ಆಯೋಜಿಸಿದ್ದ ಫೋನ್‌–ಇನ್ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ನೂರಾರು ಜನ ಇಂತಹ ಅನೇಕ ಅಹವಾಲುಗಳನ್ನು ಸಲ್ಲಿಸಿದರು. ಎಲ್ಲರ ಪ್ರಶ್ನೆಗಳಿಗೆ ಉತ್ಸಾಹದಿಂದ ಉತ್ತರಿಸಿದ ಸಚಿವರು, ಕಡಿಮೆ ಅವಧಿಯಲ್ಲಿ ಹೆಚ್ಚು ಕರೆಗಳನ್ನು ಸ್ವೀಕರಿಸಲು ಆಸಕ್ತಿ ತೋರಿಸಿದರು.

* ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿ ಮಾಡಿಸಿ, ನೀರು ಪೂರೈಸಲು ವ್ಯವಸ್ಥೆ ಮಾಡಿ.
– ತಿಪ್ಪೇಶ್ ಬಳ್ಳಾರಿ, ಮೋಹನ್‌ಕುಮಾರ್ ತುಮಕೂರು, ರವೀಂದ್ರ ಬೆಳಗಾವಿ,ಮಲ್ಲನಗೌಡ ಪಾಟೀಲ

‌ಸಚಿವರು: ಆಯಾ ಕ್ಷೇತ್ರದ ಶಾಸಕರ ಗಮನಕ್ಕೆ ತನ್ನಿ. ಸರಿ ಮಾಡುತ್ತಾರೆ. ಘಟಕಗಳನ್ನು ದುರಸ್ತಿಗೊಳಿಸಿ ನೀರು ಪೂರೈಕೆಗೆ ವ್ಯವಸ್ಥೆ ಮಾಡಲು ಎಲ್ಲ ಗ್ರಾಮ ಪಂಚಾಯ್ತಿಯವರಿಗೆ ಸೂಚಿಸಲಾಗಿದೆ. ಹೆಚ್ಚಿನ ಘಟಕಗಳು ಹದಗೆಟ್ಟು ಹೋಗಿರುವುದನ್ನು ಗಮನಿಸಿ, ಎಪ್ಸಾಸ್‌ ಎಂಬ ಕಂಪನಿಯವರಿಗೆ ತನಿಖೆ ನಡೆಸಲು ಸೂಚನೆ ನೀಡಲಾಗಿದೆ. ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು.

* ಆಳಂದ ತಾಲ್ಲೂಕಿನ ಹೆಬ್ಳಿ ಗ್ರಾಮ ಪಂಚಾಯ್ತಿಯಲ್ಲಿ ಐದು ವರ್ಷಗಳಿಂದ ಗ್ರಾಮಸಭೆಯನ್ನೇ ಮಾಡಿಲ್ಲ, ಬೇಡಿಕೆಗಳನ್ನು ಆಲಿಸುತ್ತಿಲ್ಲ.
–ದತ್ತಾತ್ರೇಯ, ಕಲಬುರ್ಗಿ

ಸಚಿವರು: ಗ್ರಾಮಸಭೆ ನಡೆಸಲೇಬೇಕು. ಸಭೆ ನಡೆಸದಿರಲು ಕಾರಣ ಏನು ಎಂದು ತಿಳಿದುಕೊಳ್ಳಲಾಗುವುದು.

ಸಚಿವರು: ಎಲ್ಲವೂ ಆನ್‌ಲೈನ್‌ನಲ್ಲಿಯೇ ಆಗುತ್ತಿದೆ. ಆದರೂ, ತನಿಖೆ ನಡೆಸಲಾಗುವುದು. ಸೂಕ್ತ ಸಾಕ್ಷಿ ನೀಡಿದರೆ ಕ್ರಮ ಕೈಗೊಳ್ಳಲಾಗುವುದು.

* ಕೊರೊನಾ ಸೋಂಕು ಪರಿಹಾರ ಕಾರ್ಯ ಹಾಗೂ ಗ್ರಾಮ ಪಂಚಾಯ್ತಿ ಕಾರ್ಯ ಎರಡೂ ಮಾಡಬೇಕಾಗಿರುವುದರಿಂದ ಒತ್ತಡವಾಗುತ್ತಿದೆ.
– ಯಡಗೂರೇಶ, ಗುಡೂರು, ಬಾಗಲಕೋಟೆ (ಇಲಾಖೆ ಸಿಬ್ಬಂದಿ)

ಸಚಿವರು: ಮನೆಯವರಿಗೆ ಕಾಯಿಲೆ ಬಂದಾಗ ಎರಡೂ ಕೆಲಸ ಮಾಡುವಂತೆಯೇ ಈ ಪರಿಸ್ಥಿತಿಯನ್ನೂ ನಿಭಾಯಿಸಬೇಕು. ಲಾಕ್‌ಡೌನ್‌ ಅವಧಿ ಮುಗಿಯುವವರಿಗೆ ಸಹಿಸಿಕೊಂಡು ಕೆಲಸ ಮಾಡಿ.

ಕೆ.ಸಿ. ವ್ಯಾಲಿ ಯೋಜನೆ ಮೂಲಕ ಮಾಲೂರು ಕೆರೆಗೆ ಮಾತ್ರ ನೀರು ಹರಿಸಲಾಗುತ್ತಿದೆ. ಬಂಗಾರಪೇಟೆಯ ಕೆರೆಗಳಿಗೆ ನೀರು ಬಿಡುತ್ತಿಲ್ಲ
–ಚನ್ನಕೃಷ್ಣ, ಕೋಲಾರ

ಸಚಿವರು: ಕೋಲಾರದಲ್ಲಿ ನೀರಿನ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಒಂದು ಕೆರೆ ಭರ್ತಿಯಾದ ನಂತರ ಮತ್ತೊಂದು ಕೆರೆಗೆ ನೀರು ಹರಿಸಲಾಗುವುದು

ಗ್ರಾಮ ಪಂಚಾಯ್ತಿಯಲ್ಲಿ ಸಮಾಲೋಚಕರಾಗಿ (ಬಿಆರ್‌ಸಿ) ಕೆಲಸ ಮಾಡುತ್ತಿದ್ದೇವೆ. ಮಾ.31ಕ್ಕೆ ಗುತ್ತಿಗೆ ಅವಧಿ ಮುಗಿದಿದೆ. ಇದನ್ನು ನವೀಕರಿಸಿ ನಮ್ಮನ್ನೇ ಮುಂದುವರಿಸುವ ಮೂಲಕ ಸೇವಾ ಭದ್ರತೆ ನೀಡಬೇಕು

ಸಚಿವರು: ಗುತ್ತಿಗೆ ಆಧಾರದ ಮೇಲೆ ತೆಗೆದುಕೊಂಡಿರುವ ಹುದ್ದೆಗಳಿವು. ಸೇವಾ ಭದ್ರತೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಒಪ್ಪಂದದಂತೆ ಗುತ್ತಿಗೆ ಅವಧಿ ಮುಗಿದಿದೆ. ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು

ನರೇಗಾ ಅಡಿ 100 ದಿನ ಉದ್ಯೋಗ ಸಿಗುತ್ತಿಲ್ಲ. ಹಳೆಯ ಬಾಕಿಯನ್ನೂ ಪಾವತಿ ಮಾಡಿಲ್ಲ.
–ಶಿವರಾಜ್, ಜಗಳೂರು, ದಾವಣಗೆರೆ

ಸಚಿವರು: ನರೇಗಾ ಅಡಿ ಕೆಲಸ ನೀಡಲೇಬೇಕು. ಉದ್ಯೋಗ ಖಾತ್ರಿಯಡಿ ಕೆಲಸ ಪ್ರಾರಂಭಿಸಿ ಎಂದು ಎಲ್ಲ ಜಿಲ್ಲೆಗಳಿಗೂ ಹೇಳಿದ್ದೇವೆ. ಎರಡು ದಿನಗಳಲ್ಲಿ ಕೆಲಸ ಶುರುವಾಗಿಲ್ಲ ಎಂದರೆ ನನ್ನ ಗಮನಕ್ಕೆ ತನ್ನಿ.

‘ಉದ್ಯೋಗಕ್ಕೆ ತೊಂದರೆ ಇಲ್ಲ’
‘ಅಂತರ್ಜಲ ಮಟ್ಟವನ್ನು 40 ವರ್ಷಗಳ ಹಿಂದಿನ ಮಟ್ಟಕ್ಕೆ ತಲುಪಿಸುವ ಮಹತ್ವಾಕಾಂಕ್ಷಿ ‘ಅಂತರ್ಜಲ ಚೇತನ’ ಯೋಜನೆಯನ್ನೂ ನರೇಗಾ ವ್ಯಾಪ್ತಿಗೆ ಸೇರಿಸಲಾಗಿದೆ. 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವವರ ಹಲವು ಕೃಷಿ ಕಾರ್ಯಗಳಿಗೂ ಈ ಯೋಜನೆಯನ್ನು ವಿಸ್ತರಿಸಲಾಗಿದೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಉದ್ಯೋಗ ಮತ್ತು ಕೂಲಿಗೆ ಯಾವ ತೊಂದರೆಯೂ ಇಲ್ಲದಂತಹ ವ್ಯವಸ್ಥೆ ರೂಪಿಸಲಾಗಿದೆ’ ಎಂದು ಸಚಿವರು ತಿಳಿಸಿದರು.

‘ಸಂಬಳ ಕೊಡುತ್ತಿಲ್ಲ’
ಗ್ರಾಮ ಪಂಚಾಯ್ತಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಸರಿಯಾಗಿ ಸಂಬಳ ನೀಡುತ್ತಿಲ್ಲ ಎಂದು ಶ್ರೀನಿವಾಸಪುರದ ಮಂಜುನಾಥ, ಮೈಸೂರಿನ ಶಿವಪ್ರಸಾದ್ ಮೊದಲಾದವರು ದೂರಿದರು.

‘ಗ್ರಾಮ ಪಂಚಾಯ್ತಿಯಿಂದಲೇ ವೇತನ ಪಾವತಿಸಬೇಕು. ತೆರಿಗೆ ಸಮರ್ಪಕವಾಗಿ ಸಂಗ್ರಹವಾಗಿದ್ದರೆ ವೇತನ ನೀಡಲೇಬೇಕು. ಸಂಬಂಧಪಟ್ಟ ಪಿಡಿಒ ಸಂಪರ್ಕಿಸಿ. ಇಒ ಅವರನ್ನು ಕರೆಸಿ, ವೇತನ ಪಾವತಿಯಾಗದಿರುವುದಕ್ಕೆ ಕಾರಣ ತಿಳಿದುಕೊಳ್ಳಲಾಗುವುದು’ ಎಂದು ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT