ವಿಭಾಗ, ಉಪವಿಭಾಗ ಕಚೇರಿ ಹುದ್ದೆಗಳ ಸಮೇತ ಹಾಸನಕ್ಕೆ ಸ್ಥಳಾಂತರ

7
ಬೆಳಗಾವಿ, ಬಸವನ ಬಾಗೇವಾಡಿಯಲ್ಲಿದ್ದವು

ವಿಭಾಗ, ಉಪವಿಭಾಗ ಕಚೇರಿ ಹುದ್ದೆಗಳ ಸಮೇತ ಹಾಸನಕ್ಕೆ ಸ್ಥಳಾಂತರ

Published:
Updated:
Deccan Herald

ಬೆಳಗಾವಿ: ಬೆಳಗಾವಿ ಹಾಗೂ ವಿಜಯಪುರದಲ್ಲಿದ್ದ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ (ಕೆ–ಶಿಪ್) ವಿಭಾಗ ಹಾಗೂ ಉಪವಿಭಾಗ ಕಚೇರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹುದ್ದೆಗಳ ಸಮೇತ ಸ್ಥಳಾಂತರಿಸಿ ಸರ್ಕಾರ ಆದೇಶ ಹೊರಡಿಸಿದೆ.

ಲೋಕೋಪಯೋಗಿ, ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆ (ಸೇವೆಗಳು–ಎ) ಅಧೀನ ಕಾರ್ಯದರ್ಶಿ ಎಂ.ಜಿ. ವೆಂಕಟೇಶಯ್ಯ ಜುಲೈ 27ರಂದು ಆದೇಶ ಹೊರಡಿಸಿದ್ದಾರೆ.

ಬೆಳಗಾವಿ ವಿಭಾಗವನ್ನು, ಹಾಸನದಲ್ಲಿ ಹೊಸದಾಗಿ ಸೃಜಿಸಿದ ಕಚೇರಿಗೆ ಸ್ಥಳಾಂತರಿಸಲಾಗಿದೆ. ಆ ವ್ಯಾಪ್ತಿಯಲ್ಲಿ ಅರಕಲಗೂಡು, ಆಲೂರು, ಬೇಲೂರು, ಸಕಲೇಶ‍ಪುರ ಉಪ ವಿಭಾಗಗಳು ಕಾರ್ಯನಿರ್ವಹಿಸುತ್ತವೆ. ಬೆಳಗಾವಿ ಉಪವಿಭಾಗ ಕಚೇರಿಯನ್ನು ಮಡಿಕೇರಿ ಉಪವಿಭಾಗ, ವಿಜಯಪುರದ ಬಸವನಬಾಗೇವಾಡಿಯ ಉಪ ವಿಭಾಗ ಕಚೇರಿಯನ್ನು ಬೇಲೂರು, ಸಕಲೇಶಪುರದ ಉಪವಿಭಾಗವನ್ನು ಹೊಳೆನರಸೀಪುರ, ಶಿವಮೊಗ್ಗದಲ್ಲಿದ್ದ ಲೋಕೋಪಯೋಗಿ ವಿಶೇಷ ಉಪವಿಭಾಗವನ್ನು ಅರಸೀಕೆರೆ ಮತ್ತು ಬೆಂಗಳೂರಿನಲ್ಲಿದ್ದ ಇಎಸ್‌ಐ ಕಟ್ಟಡಗಳ ವಿಭಾಗವನ್ನೂ ಹುದ್ದೆಗಳ ಸಮೇತ ಹಾಸನಕ್ಕೆ ಸ್ಥಳಾಂತರಿಸಲಾಗಿದೆ.

ಬೆಳಗಾವಿ ಹಾಗೂ ಬಸವನಬಾಗೇವಾಡಿ ಉಪವಿಭಾಗದ ಕಾಮಗಾರಿಗಳನ್ನು ರಾಯಚೂರು ಹಾಗೂ ಗೋಕಾಕ ಕಚೇರಿಯವರು ನಿರ್ವಹಿಸಬೇಕು ಎಂದು ತಿಳಿಸಲಾಗಿದೆ.

ಮುಕ್ತಾಯದ ಹಂತದಲ್ಲಿರುವುದರಿಂದ: ‘ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ವಿಶ್ವಬ್ಯಾಂಕ್ ಹಾಗೂ ಏಷಿಯನ್ ಬ್ಯಾಂಕ್‌ ನೆರವಿನಿಂದ ಕೆಶಿಪ್–2ರ ಅಡಿಯಲ್ಲಿ ನಿರ್ವಹಿಸಲಾಗಿದೆ. ಈ ಕಾಮಗಾರಿಗಳು ಮುಕ್ತಾಯದ ಹಂತದಲ್ಲಿರುವುದರಿಂದ ವಿಭಾಗ ಹಾಗೂ ಉಪವಿಭಾಗದ ಕಚೇರಿಗಳನ್ನು ರದ್ದಗೊಳಿಸುವಂತೆ ಯೋಜನಾ ನಿರ್ದೇಶಕರು ಕೋರಿದ್ದಾರೆ. ಸಚಿವ ಎಚ್.ಡಿ. ರೇವಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ. ಹಾಸನ ವ್ಯಾಪ್ತಿಯ ವಿಭಾಗಗಳನ್ನು ಮರು ಹೊಂದಾಣಿಕೆ ಮಾಡಿ, ಅಲ್ಲಿ ವಿಶೇಷ ವಿಭಾಗ ಪ್ರಾರಂಭಿಸುವಂತೆ ಸೂಚಿಸಲಾಗಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸಚಿವಾಲಯಗಳ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು ಮತ್ತು ಅಧಿಕಾರ ವಿಕೇಂದ್ರೀಕರಣ ಮಾಡಬೇಕು ಎಂಬ ಕೂಗು ಹೆಚ್ಚುತ್ತಿರುವ ಸಂದರ್ಭದಲ್ಲಿ, ಇಲ್ಲಿದ್ದ ಕಚೇರಿಗಳನ್ನು ಬೇರೆಡೆಗೆ ಸ್ಥಳಾಂತರಿಸಿರುವುದು ಈ ಭಾಗದವರ ಆಕ್ರೋಶಕ್ಕೆ ಕಾರಣವಾಗಿದೆ.

‘ಬೆಳಗಾವಿಯನ್ನು 2ನೇ ರಾಜಧಾನಿಯನ್ನಾಗಿ ಘೋಷಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಈಚೆಗೆ ಹೇಳಿದ್ದರು. ವಿಧಾನಸೌಧದಿಂದ ಸುವರ್ಣವಿಧಾನಸೌಧಕ್ಕೆ ಕಚೇರಿಗಳ ಸ್ಥಳಾಂತರಕ್ಕೆ ಕನ್ನಡ ಸಂಘಟನೆಗಳು ಹಲವು ವರ್ಷಗಳಿಂದಲೂ ಒತ್ತಾಯಿಸುತ್ತಲೇ ಬಂದಿವೆ. ಹೀಗಿರುವಾಗ, ಸಚಿವ ರೇವಣ್ಣ ಬೆಳಗಾವಿಯಿಂದ 2 ಕಚೇರಿಗಳನ್ನು ಹೈಜಾಕ್ ಮಾಡಿರುವುದು ಸರಿಯಲ್ಲ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಆಶೋಕ ಚಂದರಗಿ ಟೀಕಿಸಿದ್ದಾರೆ.

‘ಉತ್ತರ ಕರ್ನಾಟಕದಲ್ಲಿ ಈಗಿರುವ ರಾಜ್ಯ ಮಟ್ಟದ ಯಾವ ಕಾರ್ಯಾಲಯವನ್ನೂ ಸ್ಥಳಾಂತರಿಸುವ ದುಸ್ಸಾಹಕ್ಕೆ ಕೈ ಹಾಕಬಾರದು. ಸ್ಥಳಾಂತರಗೊಳಿಸಲು ನಿರ್ಧರಿಸಿರುವ ಕೆ–ಶಿಪ್ ಕಚೇರಿಗಳನ್ನು ಇಲ್ಲಿಯೇ ಉಳಿಸಬೇಕು’ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ಮುಖಂಡ ಅಶೋಕ ಪೂಜಾರಿ ಒತ್ತಾಯಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !