ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಯಾಕ್ಸೋಫೋನ್‌ ಚಕ್ರವರ್ತಿ’ ಕದ್ರಿ ಗೋಪಾಲನಾಥ್‌ ಇನ್ನಿಲ್ಲ

Last Updated 11 ಅಕ್ಟೋಬರ್ 2019, 20:00 IST
ಅಕ್ಷರ ಗಾತ್ರ

ಮಂಗಳೂರು: ‘ಸ್ಯಾಕ್ಸೋಫೋನ್‌ ಚಕ್ರವರ್ತಿ’ ಎಂದೇ ಖ್ಯಾತರಾಗಿದ್ದ ಹಿರಿಯ ಕಲಾವಿದ ಕದ್ರಿ ಗೋಪಾಲನಾಥ್‌ (69) ಶುಕ್ರವಾರ ಬೆಳಿಗ್ಗೆ ನಿಧನರಾದರು.

ನಾಲ್ಕು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗೋಪಾಲನಾಥ್‌ ಅವರು, ಚೆನ್ನೈನಿಂದ ಮಂಗಳೂರಿಗೆ ಮರಳಿ ಇಲ್ಲಿಯೇ ನೆಲೆಸಿದ್ದರು. ಗುರುವಾರ ರಾತ್ರಿ ಅವರಿಗೆ ಹೃದಯಾಘಾತವಾಗಿತ್ತು. ತಕ್ಷಣವೇ ಇಲ್ಲಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಬೆಳಗ್ಗಿನ ಜಾವ 4.45ಕ್ಕೆ ಕೊನೆಯುಸಿರೆಳೆದರು.

ಗೋಪಾಲನಾಥ್‌ ಅವರಿಗೆ ಪತ್ನಿ ಸರೋಜಿನಿ, ಪುತ್ರರಾದ ಗುರುಪ್ರಸಾದ್‌, ಸಂಗೀತ ನಿರ್ದೇಶಕ ಎ.ಆರ್‌.ಮಣಿಕಾಂತ್‌ ಮತ್ತು ಮಗಳು ಅಂಬಿಕಾ ಮೋಹನ್‌ ಇದ್ದಾರೆ. ಪಾರ್ಥಿವ ಶರೀರವನ್ನು ಎ.ಜೆ.ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದು, ಹಿರಿಯ ಮಗ ಕುವೈತ್‌ನಿಂದ ಹಿಂದಿರುಗಿದ ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.

‘ಅಣ್ಣ ಕುವೈತ್‌ನಿಂದ ಬರುವುದನ್ನು ಕಾಯುತ್ತಿದ್ದೇವೆ. ಆ ಬಳಿಕವೇ ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ಆರಂಭಿಸಲಾಗುವುದು’ ಎಂದು ಎ.ಆರ್‌.ಮಣಿಕಾಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತನಿಯಪ್ಪ ಮತ್ತು ನಾಗಮ್ಮ ದಂಪತಿಯ ಮಗನಾಗಿ ಕದ್ರಿ ಗೋಪಾಲನಾಥ್‌ ಅವರು 1949ರ ಡಿಸೆಂಬರ್‌ 6ರಂದು ಜನಿಸಿದ್ದರು. ಪಾಣೆಮಂಗಳೂರಿನ ಶಾರದಾ ಪ್ರೌಢ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿವರೆಗೆ ಶಿಕ್ಷಣ ಪಡೆದಿದ್ದರು.

ತಂದೆ ನಾದಸ್ವರ ಕಲಾವಿದರಾಗಿದ್ದರು. ಇದರಿಂದಾಗಿ ಗೋಪಾಲನಾಥ್‌ ಅವರ‌ಲ್ಲೂ ಸಂಗೀತದ ಬಗ್ಗೆ ಆಸಕ್ತಿ ಬೆಳೆದಿತ್ತು. ಮೈಸೂರು ಅರಮನೆಯಲ್ಲಿ ಕಲಾವಿದರೊಬ್ಬರು ಸ್ಯಾಕ್ಸೋಫೋನ್‌ ವಾದನ ಪ್ರಸ್ತುತಪಡಿಸಿದ್ದನ್ನು ಕಂಡ ಬಳಿಕ ಅದರತ್ತ ಅವರಿಗೆ ಪ್ರೀತಿ ಹುಟ್ಟಿತ್ತು.

ಮಂಗಳೂರಿನ ಕಲಾನಿಕೇತನದ ಗೋಪಾಲಕೃಷ್ಣ ಅಯ್ಯರ್‌ ಬಳಿ ಆರಂಭಿಕ ಹಂತದ ತರಬೇತಿ ಪಡೆದಿದ್ದರು. ಬಳಿಕ ಚೆನ್ನೈನ ಟಿ.ವಿ.ಗೋಪಾಲಕೃಷ್ಣ ಅವರಲ್ಲಿ ತರಬೇತಿ ಗೋಪಾಲನಾಥ್‌, ಹಂತ ಹಂತವಾಗಿ ಎತ್ತರಕ್ಕೆ ಬೆಳೆದಿದ್ದರು. ಸ್ಥಳೀಯವಾಗಿ ಕಾರ್ಯಕ್ರಮ ನೀಡುತ್ತಿದ್ದ ಅವರು ಕೆ.ಬಾಲಚಂದರ್‌ ನಿರ್ದೇಶನದ ‘ಡ್ಯೂಯೆಟ್‌’ ತಮಿಳು ಸಿನಿಮಾದ ಎರಡು ಗೀತೆಗಳಿಗೆ ಸ್ಯಾಕ್ಸೋಫೋನ್‌ ನುಡಿಸುವ ಮೂಲಕ ಪ್ರಸಿದ್ಧಿಗೆ ಬಂದಿದ್ದರು.

1994ರಲ್ಲಿ ಬಿಬಿಸಿಯ ಅಂತರರಾಷ್ಟ್ರೀಯ ಸಂಗೀತೋತ್ಸವದಲ್ಲಿ ಸ್ಯಾಕ್ಸೋಫೋನ್‌ ವಾದನಕ್ಕೆ ಇವರಿಗೆ ಅವಕಾಶ ದೊರಕಿತ್ತು. ನಂತರ ಹಲವು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದರು. ಹಲವು ಆಲ್ಬಮ್‌ಗಳನ್ನೂ ಹೊರತಂದಿದ್ದರು.

ಪದ್ಮಶ್ರೀ, ತಮಿಳುನಾಡು ರಾಜ್ಯ ಸರ್ಕಾರದ ‘ಕಲೈಮಾಮಣಿ’, ರಾಜ್ಯ ಸಂಗೀತ ಮತ್ತು ನೃತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಗಳನ್ನು ಪಡೆದಿದ್ದರು. ದೇಶದ ಹಲವು ಮಠ, ಪೀಠಗಳಿಂದ ‘ಆಸ್ಥಾನ ವಿದ್ವಾನ್‌’ ಬಿರುದು ದೊರಕಿತ್ತು. ‘ಸ್ಯಾಕ್ಸೋಫೋನ್‌ ಚಕ್ರವರ್ತಿ’, ‘ಸ್ಯಾಕ್ಸೋಫೋನ್‌ ಸಾಮ್ರಾಟ’ ಸೇರಿದಂತೆ ಹಲವು ಬಿರುದುಗಳನ್ನು ಪಡೆದಿದ್ದ ಇವರಿಗೆ ಮಂಗಳೂರು ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿದ್ದವು.

ಸೋಮವಾರ ಅಂತ್ಯಕ್ರಿಯೆ

‘ಸೋಮವಾರ ಬೆಳಿಗ್ಗೆ 10.30ಕ್ಕೆ ಪಾರ್ಥಿವ ಶರೀರವನ್ನು ನಗರದ ಪುರಭವನಕ್ಕೆ ತರಲಾಗುವುದು. ಸಂಜೆ 4 ಗಂಟೆಯವರೆಗೂ ಅಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು’ ಎಂದು ಕದ್ರಿ ಗೋಪಾಲನಾಥ್‌ ಅವರ ಮಗ ಮಣಿಕಾಂತ್‌ ಕದ್ರಿ ತಿಳಿಸಿದ್ದಾರೆ.

4 ಗಂಟೆಯ ಬಳಿಕ ಅಂತ್ಯಸಂಸ್ಕಾರ ನೆರವೇರಲಿದೆ. ಸರ್ಕಾರದಿಂದ ಸ್ಮಾರಕ ನಿರ್ಮಾಣದ ಕುರಿತು ಚರ್ಚೆ ನಡೆಯುತ್ತಿದೆ. ಸ್ಥಳವನ್ನು ಸರ್ಕಾರವೇ ನಿರ್ಧರಿಸಲಿದ್ದು, ಅಲ್ಲಿಯೇ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT