ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಗವಾಡ ಕ್ಷೇತ್ರಕ್ಕೂ, ‘ಕಾಗೆ’ಗೂ ಇದು 2ನೇ ಉಪ ಚುನಾವಣೆ!

ಸಾರ್ವತ್ರಿಕ ಚುನಾವಣೆಯಲ್ಲಿ ಸೋತು, ಉಪ ಸಮರದಲ್ಲಿ ಗೆದ್ದಿದ್ದರು
Last Updated 22 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಬೆಳಗಾವಿ: ರಾಜ್ಯದ ಗಮನಸೆಳೆದಿರುವ ಜಿಲ್ಲೆಯ ಕಾಗವಾಡ ವಿಧಾನಸಭಾ ಕ್ಷೇತ್ರಕ್ಕೆ ಹಾಗೂ ಅಲ್ಲಿನ ಅಭ್ಯರ್ಥಿ ಭರಮಗೌಡ (ರಾಜು) ಕಾಗೆ ಅವರಿಗೆ ಈ ಬಾರಿ ನಡೆಯುತ್ತಿರುವುದು 2ನೇ ಉಪ ಚುನಾವಣೆಯಾಗಿದೆ.

ಕ್ಷೇತ್ರದಲ್ಲಿ 1967ರಿಂದ ಈವರೆಗೆ 12 ಸಾರ್ವತ್ರಿಕ ಚುನಾವಣೆಗಳು ಮತ್ತು ಒಮ್ಮೆ ಉಚುನಾವಣೆ ನಡೆದಿದೆ. 1999ರಲ್ಲಿ ಮೊದಲ ಬಾರಿಗೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ಭರಮಗೌಡ ಕಾಗೆ ಸೋಲುಂಡಿದ್ದರು. ಆಗ, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಪಾಸಗೌಡ (ಪೋಪಟ್) ಅಪ್ಪಗೌಡ ಪಾಟೀಲ 31,462 ಮತಗಳಿಂದ ಗೆದ್ದಿದ್ದರು. ಅವರ ನಿಧನದಿಂದಾಗಿ 2000ನೇ ಇಸವಿಯಲ್ಲಿ ನಡೆದಿದ್ದ ಉಪ ಚುನಾವಣೆಯಲ್ಲಿ ಸಂಯುಕ್ತ ಜನತಾದಳದಿಂದ (ಜೆಡಿಯು) ಗೆದ್ದಿದ್ದ ಭರಮಗೌಡ ವಿಧಾನಸಭೆ ಪ್ರವೇಶಿಸಿದ್ದರು. ಕಾಂಗ್ರೆಸ್‌ನ ವಿಜಯಾ ಪಾಸಗೌಡ ಪಾಟೀಲ ವಿರುದ್ಧ 1,019 ಮತಗಳ ಕಡಿಮೆ ಅಂತರದಿಂದ ಗೆದ್ದಿದ್ದರು.

ಮೂರು ಬಾರಿ ಬಿಜೆಪಿಯುಂದ: ಬಳಿಕ 3 ಬಾರಿ ಬಿಜೆಪಿಯಿಂದ ಗೆದ್ದು ಕ್ಷೇತ್ರದಲ್ಲಿ ‘ಕಮಲ’ವನ್ನು ಅರಳಿಸಿದ್ದರು. 2018ರ ಚುನಾವಣೆಯಲ್ಲಿ ಜನರು ಬದಲಾವಣೆ ಬಯಸಿದ್ದರಿಂದಾಗಿ ಕಾಂಗ್ರೆಸ್‌ನ ಶ್ರೀಮಂತ ಪಾಟೀಲ ವಿರುದ್ಧ ಸೋಲು ಅನುಭವಿಸಿದ್ದರು.

ಇಲ್ಲಿ ಉಪಚುನಾವಣೆ ನಡೆದು 19 ವರ್ಷಗಳೇ ಕಳೆದಿವೆ. ಇಷ್ಟು ವರ್ಷಗಳ ನಂತರ ಭರಮಗೌಡ ಕಾಗೆ ಮತ್ತೊಂದು ಉಪಚುನಾವಣೆಗೆ ಸಜ್ಜಾಗಿದ್ದಾರೆ. 2ನೇ ಉಪ ಚುನಾವಣೆಯಲ್ಲೂ ಅವರ ಪಕ್ಷ ಬದಲಾಗಿದೆ. 2018ರಲ್ಲಿ ಗೆದ್ದಿದ್ದ ಶ್ರೀಮಂತ ಪಾಟೀಲ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದಾಗಿ, ತೆರವಾದ ಸ್ಥಾನಕ್ಕೆ ಈಗ ಉಪಚುನಾವಣೆ ನಡೆಯುತ್ತಿದೆ.

ಕೇವಲ ಒಂದೂವರೆ ವರ್ಷದ ಅವಧಿಯಲ್ಲೇ ಎದುರಾದ ಚುನಾವಣೆಗೆ ‘ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ’ ಪ್ರಮುಖ ಅಭ್ಯರ್ಥಿಗಳ ಪಕ್ಷಗಳು ಅದಲು–ಬದಲಾಗಿವೆ. ಕಾಂಗ್ರೆಸ್‌ನಲ್ಲಿದ್ದವರು ಬಿಜೆಪಿಗೆ, ಬಿಜೆಪಿಯಲ್ಲಿದ್ದವರು ಕಾಂಗ್ರೆಸ್‌ಗೆ ಬಂದು ತೊಡೆ ತಟ್ಟಿದ್ದಾರೆ.

ಪಕ್ಷ ಬದಲಿಸಿದವರೇ: ಹೋದ ವರ್ಷವಷ್ಟೇ ವಿಧಾನಸಭೆ ಪ್ರವೇಶಿಸಿದ್ದ ‘ಶ್ರೀಮಂತ’, ‘ಅನುಭವಿ’ ಕಾಗೆ ಎದುರು ಪೈಪೋಟಿಗೆ ಸಜ್ಜಾಗಿದ್ದಾರೆ. ಕಾಗೆ ಇಲ್ಲಿ ‘ಹ್ಯಾಟ್ರಿಕ್’ ಗೆಲುವಿನ ಸಾಧನೆ ಮಾಡಿದ್ದಾರೆ. 2 ಬಾರಿ ಸೋಲನುಭವಿಸಿದ್ದಾರೆ. 7ನೇ ಬಾರಿಗೆ ವಿಧಾನಸಭಾ ಚುನಾವಣೆ ಎದುರಿಸುತ್ತಿರುವ ಅವರೂ ಪಕ್ಷಾಂತರ ಮಾಡಿದವರೇ. ಮೊದಲಿಗೆ ಪಕ್ಷೇತರರಾಗಿದ್ದರು. ಬಳಿಕ 2 ಪಕ್ಷಗಳಿಂದ (ಜೆಡಿಯು, ಬಿಜೆಪಿ) ಗೆದ್ದಿದ್ದಾರೆ. ಈಗ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ.

ಶ್ರೀಮಂತ ಪಾಟೀಲ, ‌2008ರಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್‌ ದೊರೆಯದೇ ಕೊನೆ ಕ್ಷಣದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ, 2013ರಲ್ಲೂ ಜೆಡಿಎಸ್‌ನಿಂದಲೇ ಕಣಕ್ಕಿಳಿದು ಕಾಗೆ ವಿರುದ್ಧ ಸೋಲು ಅನುಭವಿಸಿದ್ದರು. 2018ರಲ್ಲಿ ಕಾಂಗ್ರೆಸ್‌ನಿಂದ ತಮ್ಮ ‘ಸಾಂಪ್ರದಾಯಿಕ ಎದುರಾಳಿ’ ಕಾಗೆ ವಿರುದ್ಧ ಗೆದ್ದು ಸೇಡು ತೀರಿಸಿಕೊಂಡಿದ್ದರು. ಇದೀಗ, ಮತ್ತೊಂದು ಚುನಾವಣೆಗೆ ಸಜ್ಜಾಗಿದ್ದಾರೆ.

ನೇರ ಹಣಾಹಣಿ: ಒಂದು ಉಪ ಚುನಾವಣೆ ಸೇರಿದಂತೆ 13 ಚುನಾವಣೆಗಳಿಗೆ ಸಾಕ್ಷಿಯಾಗಿರುವ ಈ ಕ್ಷೇತ್ರದಲ್ಲಿ 6 ಬಾರಿ ಕಾಂಗ್ರೆಸ್‌ ಗೆದ್ದಿದೆ. ಪಕ್ಷಕ್ಕಿಂತ ಕೆಲವೊಮ್ಮೆ ವ್ಯಕ್ತಿಗೂ ಇಲ್ಲಿನ ಮತದಾರರು ಮಣೆ ಹಾಕಿದ್ದಾರೆ. 1967ರಲ್ಲಿ ಗೆದ್ದಿದ್ದ ಚಂಪಾಬಾಯಿ ಬೋಗಲೆ, ಕ್ಷೇತ್ರದ ಏಕೈಕ ಮಹಿಳಾ ಶಾಸಕಿ ಎನಿಸಿದ್ದಾರೆ.

ಈ ಬಾರಿ ಜೆಡಿಎಸ್‌ನಿಂದ ಶ್ರೀಶೈಲ ತುಗಶೆಟ್ಟಿ ಕಣದಲ್ಲಿದ್ದಾರೆ. ಆದರೆ, ಬಿಜೆಪಿ–ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಕಂಡುಬರುತ್ತಿದೆ. ಪೈಪೋಟಿ ಜೋರಾಗಿಯೇ ಇದೆ. ಪ್ರಮುಖ ರಾಜಕೀಯ ಪಕ್ಷಗಳ ರಾಜ್ಯಮಟ್ಟದ ನಾಯಕರು ಬಂದ ನಂತರ, ಪ್ರಚಾರ ಕಣ ಮತ್ತಷ್ಟು ರಂಗೇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT