ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಾನಂದ ಶಿವಾಚಾರ್ಯರ ಅಂತ್ಯಸಂಸ್ಕಾರ

ಹಣ್ಣೆ ಶ್ರೀಶೈಲ ಶಾಖಾಮಠದ ಸ್ವಾಮೀಜಿ ವಿಧಿವಶ– ನೂತನ ಪಟ್ಟಾಧ್ಯಕ್ಷರ ನೇಮಕ
Last Updated 15 ಜೂನ್ 2018, 11:17 IST
ಅಕ್ಷರ ಗಾತ್ರ

ಅಜ್ಜಂಪುರ: ಹೃದಯಾಘಾತದಿಂದ ನಿಧನರಾದ ಪಟ್ಟಣ ಸಮೀಪ ಶ್ರೀಶೈಲ ಶಾಖಾ ಹಣ್ಣೆ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿಯವರ ಅಂತ್ಯಸಂಸ್ಕಾರ ಗುರುವಾರ ಶ್ರೀಮಠದ ಪಕ್ಕದ ಗದ್ದುಗೆಯಲ್ಲಿ ಹತ್ತಾರು ಶಿವಾಚಾರ್ಯರ, ಅಪಾರ ಭಕ್ತ ಸಮೂಹದ ಅಶ್ರು ತರ್ಪಣದಲ್ಲಿ ಗುರುವಾರ ನೆರವೇರಿತು.

ಹುಲಿಕೆರೆ ದೊಡ್ಡ ಮಠದ ವಿರೂಪಾಕ್ಷೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ಎಡೆಯೂರು ರೇಣುಕಶಿವಾಚಾರ್ಯರ ಮಾರ್ಗದರ್ಶನದಲ್ಲಿ ಬೀರೂರಿನ ರುದ್ರಮುನಿ ಶಿವಾಚಾರ್ಯರು, ತಾವರೆಕೆರೆಯ ಅಭಿನವ ಸಿದ್ದಲಿಂಗ ಶಿವಾಚಾರ್ಯರು, ನಂದೀಪುರದ ನಂದೀಶ್ವರ ಶಿವಾಚಾ
ರ್ಯರು, ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯ ಅವರು ನಿಧನರಾದ ಶಿವಾನಂದ ಶಿವಾಚಾರ್ಯರ ಅಂತ್ಯಸಂಸ್ಕಾರ ನಡೆಸಿದರು.

ವೀರಶೈವ ಧರ್ಮದ ವಿಧಿವಿಧಾನದಂತೆ ಪಂಚಕಳಸ, ಪುಣ್ಯಾಹ, ನಾಂದಿ, ಅಷ್ಠದಿಕ್ಭಲಕ, ಏಕದಶಾರುದ್ರಾಭಿಷೇಕ ಸೇರಿದಂತೆ ಧಾರ್ಮಿಕ ಸಂಪ್ರದಾಯದ ಪೂಜೆ ನಡೆಸಲಾಯಿತು. ಶಿವಾಚಾರ್ಯರ ಮಂತ್ರಾ ಹಾಗೂ ವೇದಘೋಷಗಳ ನಡುವೆ ಪೂರ್ಣ ಬಿಲ್ವಪತ್ರೆ ಮತ್ತು ವಿಭೂತಿಯೊಂದಿಗೆ ಕ್ರಿಯಾ ಸಮಾಧಿಯ ಮೂಲಕ ಅಂತ್ಯಕ್ರಿಯೆ ಜರುಗಿತು.

ಇದಕ್ಕೂ ಮೊದಲು ಜಿಲ್ಲೆ ಹಾಗೂ ಹೊರಜಿಲ್ಲೆಯ ಸಾವಿರಾರು ಭಕ್ತರು ಹಾಗೂ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಶ್ರೀಗಳ ಪಾರ್ಥಿವ ಶರೀರದ ದರ್ಶನ ಪಡೆದರು. ಬಳಿಕ ನಡೆದ ಅಂತ್ಯಸಂಸ್ಕಾರವನ್ನು ಅಲ್ಲಲ್ಲಿ ಅಳವಡಿಸಿದ ಟಿವಿ ಪರದೆಯಲ್ಲಿ ಭಕ್ತರು ವೀಕ್ಷಿಸಿದರು.

ವಿವಿಧ ಮಠಗಳ ಶಿವಾಚಾರ್ಯರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

ಚನ್ನಗಿರಿ ಶಾಸಕ ಮಾಡಾಳು ವಿರುಪಾಕ್ಷಪ್ಪ, ಶಾಸಕ ಬೆಳ್ಳಿಪ್ರಕಾಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಚೈತ್ರಶ್ರೀ, ಸದಸ್ಯ ಕೆ.ಆರ್. ಆನಂದಪ್ಪ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಶಂಭೈನೂರು ಆನಂದಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ ಮತ್ತಿತರರು ಅಗಲಿದ ಶಿವಾಚಾರ್ಯರ ದರ್ಶನ ಪಡೆದರು.

ಶಾಸಕ ಡಿ.ಎಸ್.ಸುರೇಶ್, ‘ಕ್ಷೇತ್ರ ವ್ಯಾಪ್ತಿಯ ಹಣ್ಣೆ ಶ್ರೀಗಳು ನೇರ ಮತ್ತು ನಿಷ್ಠರ ನುಡಿಯಿಂದಲೇ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದರು. ಸಾಮಾಜಿಕ ಸೇವಾ ಕಾರ್ಯಗಳಲ್ಲೂ ಹೆಚ್ಚಿನ ಕೆಲಸ ಮಾಡಿದ್ದರು’ ಎಂದು ವಿಷಾದ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಧರ್ಮೇಗೌಡ, ‘ಶ್ರೀಗಳು ಎಲ್ಲಾ ಸಮಾಜದವರನ್ನೂ ಸಮಾನವಾಗಿ ಕಾಣುತ್ತಿದ್ದರು. ಸಾಹಿತ್ಯದ ಮೂಲಕವೇ ಸಮಾಜಕ್ಕೊಂದು ಉತ್ತಮ ಸಂದೇಶ ನೀಡಿದ್ದರು. ಅವರ ಸಾವು ಸಮಾಜಕ್ಕೆ ತುಂಬಲಾರದ ನಷ್ಟ ತಂದಿದೆ’ ಎಂದರು.

ಮಾಜಿ ಶಾಸಕ ಜಿ.ಎಚ್.ಶ್ರೀನಿವಾಸ್, ‘ಶಿವಾಚಾರ್ಯರು ಉತ್ತಮ ವಾಗ್ಮಿಗಳಾಗಿ, ಸಮಾಜ ಸೇವಕರಾಗಿ, ಧರ್ಮ ಉಪದೇಶಕ ರಾಗಿಯೂ ಕೆಲಸ ಮಾಡಿದ್ದರು.’ ಎಂದರು.

ಕಡೂರು ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಆರ್.ಪ್ರಕಾಶ್, ಶಿವಾಚಾರ್ಯರು ಸಾಹಿತ್ಯದಲ್ಲಿ ಅಪಾರ ಕೃಷಿ ಮಾಡಿದ್ದರು ಎಂದರು.

ಬುಧವಾರವೇ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರು ಹಾಗೂ ಉಜ್ಜಯಿನಿಯ ಸಿದ್ದಲಿಂಗ ಶಿವಾಚಾರ್ಯರು ಶ್ರೀಮಠಕ್ಕೆ ಭೇಟಿ ನೀಡಿ, ಮೃತ ಶಿವಾಚಾರ್ಯರ ದರ್ಶನ ಪಡೆದರು. ಹಾಗೂ ಶಿವಾಚಾರ್ಯರ ಉತ್ತರಾಧಿಕಾರಿಯಾಗಿ ಶ್ರೀಶೈಲ ಶಿವಾಚಾರ್ಯರ ಅನುಮತಿಯ ಮೇರೆಗೆ ವಂಶಪಾರಂಪರ್ಯವಾಗಿ ನಡೆದು ಬಂದ ಮಠಕ್ಕೆ ಹಣ್ಣೆಯ ವೇದಮೂರ್ತಿ ಮರುಳಸಿದ್ದಯ್ಯ ಮತ್ತು ಶಾರದಮ್ಮ ದಂಪತಿಯ ಮಗನಾದ ‘ಸಂತೋಷ’ ಅವರನ್ನು ನೂತನ ಪಟ್ಟಾಧ್ಯಕ್ಷರಾಗಿ ನೇಮಿಸಲಾಯಿತು.

23ರಂದು ಶಿವ ಸ್ಮರಣೋತ್ಸವ

ಇದೇ 23 ರಂದು ಹಣ್ಣೆ ಮಠದ ಆವರಣದಲ್ಲಿ ಬಾಳೇಹೊನ್ನೂರು ರಂಭಾಪುರಿ ಶಿವಾಚಾರ್ಯರು, ಉಜ್ಜಯಿನಿಯ ಶಿವಾಚಾರ್ಯರು, ಶ್ರೀಶೈಲ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ನಿಧನರಾದ ಹಣ್ಣೆ ಮಠದ ಶಿವಾನಂದ ಶಿವಾಚಾರ್ಯರ ‘ಶಿವ ಸ್ಮರಣೋತ್ಸವ (ಲಿಂಗೈಕ್ಯ ಶಿವಾಚಾರ್ಯರ ಪುಣ್ಯಾರಾಧನೆ) ನಡೆಯಲಿದೆ ಎಂದು ತಾವರೆಕೆರೆ ಶಿಲಾಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯರು ತಿಳಿಸಿದ್ದಾರೆ.

ರಂಭಾಪುರಿ ಜಗದ್ಗುರುಗಳ ಸಂತಾಪ

ರಂಭಾಪುರಿ ಪೀಠ (ಬಾಳೆಹೊನ್ನೂರು): ತರೀಕೆರೆ ತಾಲ್ಲೂಕಿನ ಹಣ್ಣೆ ಬೃಹನ್ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿಯ ನಿಧನಕ್ಕೆ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ರಂಭಾಪುರಿ ಪೀಠದ ಜಗದ್ಗುರು ರುದ್ರಮುನಿ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ಪಟ್ಟಾಧಿಕಾರ ಸ್ವೀಕರಿಸಿದ ಅವರು, ರಂಭಾಪುರಿ ಪೀಠದ 3 ಜನ ಜಗದ್ಗುರುಗಳ ಸಹಯೋಗದಲ್ಲಿ ಸೇವೆ ಸಲ್ಲಿಸಿದ ಸೌಭಾಗ್ಯ ಅವರದಾಗಿತ್ತು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT