ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲ್ಬರ್ಗಾ ಗೆಲ್ಲಲು ಖರ್ಗೆ ₹100 ಕೋಟಿ ಖರ್ಚು: ಬಿಜೆಪಿ ಆರೋಪ

Last Updated 22 ಏಪ್ರಿಲ್ 2019, 11:20 IST
ಅಕ್ಷರ ಗಾತ್ರ

ಬೆಂಗಳೂರು: ‘ಗುಲಬರ್ಗಾ ಕ್ಷೇತ್ರದಲ್ಲಿ ಸೋಲಿನ ಭೀತಿಯಿಂದ ಕಂಗೆಟ್ಟಿರುವ ಕಾಂಗ್ರೆಸ್‌ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರು ಅಡ್ಡ ಮಾರ್ಗದಿಂದ ಚುನಾವಣೆಯಲ್ಲಿ ಗೆಲ್ಲಲು ₹100 ಕೋಟಿ ಖರ್ಚು ಮಾಡುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಆರೋಪಿಸಿದರು.

ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಖರ್ಗೆ ಅವರು ಈ ಹಿಂದೆ ಮ್ಯಾಚ್‌ ಫಿಕ್ಸಿಂಗ್‌ ಮಾಡಿ ಚುನಾವಣೆಯಲ್ಲಿ ಗೆಲ್ಲುತ್ತಿದ್ದರು. ಈಗ ಸಲ ಅವರಿಗೆ ನಿಜವಾದ ಸವಾಲು ಎದುರಾಗಿದೆ. ಅವರು ಒಂದು ಲಕ್ಷ ಮತಗಳ ಅಂತರದಿಂದ ಸೋಲಲಿದ್ದಾರೆ’ ಎಂದರು.

‘ಪ್ರಸ್ತುತ ಬೆಂಗಳೂರು ಡಿಸಿಪಿ (ಉತ್ತರ) ಆಗಿರುವ ಶಶಿಕುಮಾರ್ ಅವರು ಈ ಹಿಂದೆ ಕಲಬುರ್ಗಿಯಲ್ಲಿ ಎಸ್‌ಪಿ ಆಗಿದ್ದರು. ಖರ್ಗೆ ಅವರಿಗೆ ಸಹಾಯ ಮಾಡುವ ಉದ್ದೇಶದಿಂದ ಎರಡು ದಿನ ಕ್ಷೇತ್ರದಲ್ಲಿದ್ದು ಪರದೆಯ ಹಿಂದೆ ಕೆಲಸ ಮಾಡಿದ್ದಾರೆ. ಚಿತ್ತಾಪುರ, ವಾಡಿ ಹಾಗೂ ಕಮಲಾಪುರದ ಸಬ್‌ ಇನ್‌ಸ್ಪೆಕ್ಟರ್‌ಗಳು ಕಾಂಗ್ರೆಸ್‌ ಏಜೆಂಟರಂತೆ ಕೆಲಸ ಮಾಡಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿತ್ತು. ಆದರೂ, ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.

‘ಲಿಂಗಾಯತ– ವೀರಶೈವ ಸಮುದಾಯವನ್ನು ಒಡೆಯಲು ಸಿದ್ದರಾಮಯ್ಯ ಅವರಿಗೆ ಕುಮ್ಮಕ್ಕು ಕೊಟ್ಟವರೇ ಮಲ್ಲಿಕಾರ್ಜುನ ಖರ್ಗೆ. ಅವರು ಲಿಂಗಾಯತ ವಿರೋಧಿ. ಸಮುದಾಯದ ಜನರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ’ ಎಂದರು.

‘ನ್ಯಾಯಮೂರ್ತಿ ಎ.ಜೆ.ಸದಾಶಿವ ವರದಿ ಜಾರಿಗೆ ತರದಂತೆ ಅಡ್ಡಗಾಲು ಹಾಕಿದವರು ಖರ್ಗೆ. ನಾನು ಬಿಜೆಪಿ ಕಾರ್ಯಕರ್ತರ ಗಂಟು ತಿಂದಿದ್ದೇನಾ ಎಂದು ಖರ್ಗೆ ಕೇಳಿದ್ದಾರೆ. ಅವರು ರಾಜ್ಯದ ಜನರು ಗಂಟು ತಿಂದಿದ್ದಾರೆ. ಕಮಿಷನ್‌ ಆಸೆಯಿಂದ ಕಲಬುರ್ಗಿಯಲ್ಲಿ ಇಎಸ್‌ಐ ಆಸ್ಪತ್ರೆ ನಿರ್ಮಾಣ ಮಾಡಿದರು. ಎಲ್ಲ ಕಟ್ಟಡಗಳ ನಿರ್ಮಾಣದಲ್ಲಿ ಕಮಿಷನ್‌ ಪಡೆದಿದ್ದಾರೆ. ಅವರು ರಾಜ್ಯದ ಮಹಾಭ್ರಷ್ಟ ರಾಜಕಾರಣಿ’ ಎಂದು ಅವರು ಆರೋಪಿಸಿದರು.

‘ಕಲಬುರ್ಗಿ ಹಾಗೂ ಬೀದರ್‌ ಜಿಲ್ಲೆಗಳಲ್ಲಿರುವ ಕೋಲಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಬಿಜೆಪಿ ಸಂಕಲ್ಪ ಮಾಡಿದ್ದು, ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಸ್ವೀಕರಿಸಿದ ಎರಡು ತಿಂಗಳಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತದೆ. ಬೀದರ್‌ನಲ್ಲಿ ಗೊಂಡ (ಕುರುಬ ಉಪ ಸಮುದಾಯ) ಜಾತಿಯನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಲಾಗುತ್ತದೆ’ ಎಂದು ಅವರು ತಿಳಿಸಿದರು.

‘ನರೇಂದ್ರ ಮೋದಿ ತಮ್ಮ ಪಾದ ತೊಳೆದು ನೀರು ಕುಡಿಯಬೇಕು ಎಂದು ಪ್ರಿಯಾಂಕ್‌ ಖರ್ಗೆ ಹೇಳಿಕೆ ನೀಡಿದ್ದಾರೆ. ತಾವು ಅವತಾರ ಪುರುಷ ಎಂಬ ಭ್ರಮೆಯಲ್ಲಿದ್ದಾರೆ. ಅವರ ಮಾತಿಗೂ ಆಲೋಚನೆಗೂ ಸಂಬಂಧ ಇಲ್ಲ. ಈ ಕಾರಣದಿಂದ ಪುತ್ರನನ್ನು ಮಲ್ಲಿಕಾರ್ಜುನ ಖರ್ಗೆ ದೂರ ಇಟ್ಟಿದ್ದಾರೆ. 15 ದಿನಗಳಿಂದ ಅಪ್ಪ–ಮಗ ಪರಸ್ಪರ ಮಾತೇ ಆಡಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT