ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಗ್ರಾಮ ಕಟ್ಟಡ ಕಳಪೆಯಾದರೆ ನಿರ್ದಾಕ್ಷಿಣ್ಯ ಕ್ರಮ: ಸಿ.ಟಿ.ರವಿ ಎಚ್ಚರಿಕೆ

Last Updated 23 ಜೂನ್ 2020, 11:00 IST
ಅಕ್ಷರ ಗಾತ್ರ

ಬೆಂಗಳೂರು:ಕಲೆ ಮತ್ತು ಸಂಸ್ಕೃತಿ ಉಳಿಸಿ ಪೋಷಿಸುವ ನಿಟ್ಟಿನಲ್ಲಿ ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾನಿಲಯದ ಬಳಿ ನಿರ್ಮಾಣವಾಗುತ್ತಿರುವ ಕಲಾಗ್ರಾಮ ಕಟ್ಟಡ ಕಾಮಗಾರಿಯಲ್ಲಿ ಕಳಪೆಯಾಗಿರುವುದು ಕಂಡುಬಂದರೆ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಕನ್ನಡ ಮತ್ತು ಸಂಸ್ಕೃತಿಇಲಾಖೆ ಸಚಿವ ಸಿ.ಟಿ.ರವಿ ಎಚ್ಚರಿಕೆ ನೀಡಿದ್ದಾರೆ.

ಇಂದು ಅಧಿಕಾರಿಗಳ ಜತೆ ಕಲಾಗ್ರಾಮಕ್ಕೆ ಭೇಟಿ ನೀಡಿ ಕಟ್ಟಡ ಕಾಮಗಾರಿ ಹಾಗೂ ಇಲ್ಲಿನ ಚಟುವಟಿಕೆಗಳ ಕುರಿತಂತೆ ಅವರು ಪರಿಶೀಲನೆ ನಡೆಸಿದರು. ಕಲಾಗ್ರಾಮ ಕಟ್ಟಡ ನಿರ್ಮಾಣದಲ್ಲಿ ಯಾವುದೇ ರೀತಿಯ ಕಳಪೆ ಕಾಮಗಾರಿ ನಡೆಯಬಾರದು. ಒಂದು ವೇಳೆ ಎಲ್ಲಾದರೂ ಸಣ್ಣಪುಟ್ಟ ದೋಷ ಕಂಡುಬಂದರೆ ಅಂತಹ ಅಕಾರಿಗಳ ಮೇಲೆ ಮುಲಾಜಿಲ್ಲದೆ ಶಿಸ್ತುಕ್ರಮ ಜರುಗಿಸುವುದಾಗಿ ಹೇಳಿದರು.

ಕಾಲಮಿತಿಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಆರ್ಥಿಕ ಇತಿಮಿತಿಯೊಳಗೆ ಕಟ್ಟಡವನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಬೇಕು. ಆದಷ್ಟು ಶೀಘ್ರ ಇಲ್ಲಿ ಪೂರ್ಣ ಪ್ರಮಾಣದ ಚಟುವಟಿಕೆಗಳು ಆರಂಭವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಪ್ರಗತಿಯಲ್ಲಿರುವ ಕಾಮಗಾರಿ ಪೂರ್ಣಗೊಳ್ಳಲು ಸುಮಾರು 30 ಕೋಟಿ ಅನುದಾನದ ಅಗತ್ಯವಿದೆ. ಮುಂದಿನ ಆಯವ್ಯಯದಲ್ಲಿ ಈ ಹಣವನ್ನು ಮೀಸಲಿಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ನಮಗೆ ಅನುದಾನ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.

ಕಲಾಗ್ರಾಮದ ಸಮಗ್ರ ಅಭಿವೃದ್ಧಿಗೆ ರಾಜ್ಯಸರ್ಕಾರ ಬಿಡುಗಡೆ ಮಾಡಿರುವ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಲಾಗಿದೆ. ಕೇಂದ್ರ ಸರ್ಕಾರ ನೀಡಲು ಉದ್ದೇಶಿಸಿರುವ ಅನುದಾನದ ಮಂಜೂರಾತಿ ಪಡೆಯಲು ಸಚಿವ ಸಂಪುಟದ ಮುಂದೆ ಪ್ರಸ್ತಾಪಿಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.

ಲಲಿತಕಲೆ ಹಾಗೂ ಶಿಲ್ಪಕಲೆಗಳ ಚಟುವಟಿಕೆಗೆ ಕಲಾಗ್ರಾಮವು ಅತ್ಯಂತ ಪ್ರಶಸ್ಥ ಸ್ಥಳವಾಗಿದೆ. ಈ ಕಾರಣ ಕರ್ನಾಟಕ ಲಲಿತಕಲಾ ಅಕಾಡೆಮಿ ಮತ್ತು ಬೆಂಗಳೂರು ನಗರ ಜಿಲ್ಲೆಯ ಸಹಾಯಕ ನಿರ್ದೇಶಕರ ಕಚೇರಿಗಳನ್ನು ಆಡಳಿತ ಭವನದ ಕಟ್ಟಡಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಂಡಿದೆ ಎಂದು ಹೇಳಿದರು.

ಕಲಾಭವನವನ್ನು ಸುವರ್ಣ ಸಮುಚ್ಛಯದ ಐಹೊಳೆಯ ದುರ್ಗಿ ಗುಡಿ ಮಾದರಿಯಲ್ಲಿ ನಿರ್ಮಿಸಲಾಗಿದೆ. ಒಟ್ಟು ಮೂರು ಮಹಡಿಗಳನ್ನು ಹೊಂದಿದ್ದು, ಸಮುಚ್ಛಯದಲ್ಲಿ 300 ಆಸನಗಳುಳ್ಳ ಸಭಾಂಗಣವನ್ನು ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.

ಬಯಲು ರಂಗಮಂದಿರದಲ್ಲಿ ಸಾಂಸ್ಕøತಿಕ ಚಟುವಟಿಕೆಗಳನ್ನು ನಡೆಸಲು ಅನುಕೂಲವಾಗುವಂತೆ ಎರಡು ಪ್ರಸಾದನ ಕೊಠಡಿ, ಒಂದು ರಂಗ ಪರದೆ ಮತ್ತು ವಸ್ತುಗಳನ್ನು ಕಾಯ್ದಿರಿಸಲು ಕೊಠಡಿ ನಿರ್ಮಾಣ, ಕುವೆಂಪು ಭಾಷಾಭಾರತಿ ಪ್ರಾಕಾರದಲ್ಲಿ ಅವರ ಮನೆಯ ಮಾದರಿಯಂತೆ ಆಡಳಿತ ಕಚೇರಿಯನ್ನು ವಿಶ್ವಚೇತನ ಮತ್ತು ಅನುವಾದ ಕಮ್ಮಟ ಹಾಗೂ ಡಿಪ್ಲೊಮಾ ಕೋರ್ಸ್‍ಗಳ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ಸಿ.ಟಿ.ರವಿ ಮಾಹಿತಿ ನೀಡಿದರು.

ಕಲಾಗ್ರಾಮದ ಪ್ರವೇಶದ್ವಾರದ ಪಕ್ಕದಲ್ಲಿ ಟೈಮ್ ಆಫೀಸ್ ನಿರ್ಮಿಸಲಾಗಿದೆ. ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಪ್ರಕಟಣೆಗಳನ್ನು ಮಾರಾಟ ಮಾಡಲು ಇದರಿಂದ ಅನುಕೂಲವಾಗಲಿದೆ.

ಸಾಹಿತಿಗಳು, ಕಲಾವಿದರು, ಶಿಲ್ಪಿಗಳು ಸೃಜನಶೀಲ ಕಾರ್ಯಗಳನ್ನು ನಡೆಸಿಕೊಡಲು ನಾಲ್ಕು ಕುಟೀರಗಳನ್ನು ನಿರ್ಮಾಣ ಮಾಡಲಾಗಿದೆ. ಉಳಿದ ಎರಡು ಕೊಠಡಿಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT