ಗುರುವಾರ , ಅಕ್ಟೋಬರ್ 17, 2019
27 °C
ತೋಟ, ಮನೆಯೊಂದಿಗೆ ಬದುಕಿನ ಭರವಸೆಯನ್ನೂ ಕಳೆದುಕೊಳ್ಳುತ್ತಿರುವ ನೆರೆ ಸಂತ್ರಸ್ತರು

ಕಳಸ: ಸ್ವಾಭಿಮಾನದ ಮಣ್ಣಲ್ಲಿ ಮರಣ ಮೃದಂಗ

Published:
Updated:
ಕಳಕೋಡು ಗ್ರಾಮದಲ್ಲಿ ಭೂಕುಸಿತದಿಂದ ನಾಶ ಆಗಿರುವ ತೋಟದ ಮುಂದೆ ಶಾಮಾಚಾರ್

ಕಳಸ: ಕಳಸ ಹೋಬಳಿಯಲ್ಲಿ ರೈತರ ಆತ್ಮಹತ್ಯೆಯ ಪ್ರಕರಣಗಳೇ ಅಪರೂಪ. ಈವರೆಗೆ ಸಾಲದ ಒತ್ತಡದಿಂದ ರೈತರು ಜೀವ ಕಳೆದುಕೊಂಡಿದ್ದೇ ಇಲ್ಲ ಎನ್ನುವಷ್ಟು ಕಡಿಮೆ. ಆದರೆ, ಈಗ ಇಂತಹ ಮಣ್ಣಲ್ಲಿ ಮರಣ ಮೃದಂಗ ಬಾರಿಸುತ್ತಿದೆ.

ಕಾರಗದ್ದೆಯ ಚನ್ನಪ್ಪಗೌಡ ಸೆ.14ರಂದು ತಮ್ಮ ಕಾಫಿ ತೋಟದಲ್ಲೇ ಗುಂಡಿಕ್ಕಿಕೊಂಡು ಪ್ರಾಣ ಬಿಟ್ಟರು. ಈಗ ಎಸ್.ಕೆ. ಮೇಗಲ್ ಗ್ರಾಮದ ಕೃಷಿಕ ಚಂದ್ರೇಗೌಡ ಗದ್ದೆಗೆ ಸಿಂಪಡಿಸಲು ತಂದಿದ್ದ ಕೀಟನಾಶಕ ಕುಡಿದು ಸಾವನ್ನಪ್ಪಿದ್ದಾರೆ. ಆಗಸ್ಟ್ ಮೊದಲ ವಾರದ ಅತಿವೃಷ್ಟಿಯಿಂದ ಧರೆ ಕುಸಿದು ತಾವು ಸ್ವತಃ ನೆಟ್ಟು 5 ಎಕರೆ ತೋಟದಲ್ಲಿ ಬೆಳೆಸಿದ್ದ ಕಾಫಿ, ಅಡಿಕೆ, ಮೆಣಸಿನ ಗಿಡಗಳನ್ನು ಕಂಡು ಚನ್ನಪ್ಪಗೌಡ ಮರುಗುತ್ತಿದ್ದರು. ವರ್ಷಗಳ ಶ್ರಮ ನಿಮಿಷದಲ್ಲಿ ಮಣ್ಣುಪಾಲು ಆದಾಗ ಸಹಜವಾಗಿಯೇ ಧೃತಿಗೆಟ್ಟಿದ್ದರು. ತೋಟದಲ್ಲಿ ಕಾಡುಪ್ರಾಣಿಗಳ ಉಪಟಳ ತಡೆಯಲು ಹೊಂದಿದ್ದ ಕೋವಿಯನ್ನು ತನ್ನದೆಗೆ ಇರಿಸಿಕೊಂಡು ಜೀವ ಕಳೆದುಕೊಂಡಿದ್ದರು.

ಇನ್ನು ಎಸ್.ಕೆ.ಮೇಗಲ್ ಗ್ರಾಮದ ಚಂದ್ರೇಗೌಡ ಅವರ ಭತ್ತದ ಗದ್ದೆಯು ಮಳೆಯಲ್ಲಿ ಕೊಚ್ಚಿ ಹೋಗಿ ಉಳಿದಿದ್ದು ಹೂಳು ಮಾತ್ರ. ಇದ್ದ ಒಂದು ಎಕರೆ ಕಾಫಿ ತೋಟದಲ್ಲೂ ಕಾಫಿ, ಮೆಣಸಿನ ಫಸಲೆಲ್ಲ ಅತಿಯಾದ ಮಳೆಗೆ ನೆಲಕಚ್ಚಿತ್ತು. ಅರಣ್ಯ ಇಲಾಖೆಯ ಕಠಿಣ ಕಾನೂನಿನ ಕಾರಣಕ್ಕೆ ಸ್ವಂತ ಹಿಡುವಳಿ ಆಗದ ಒತ್ತುವರಿ ಭೂಮಿಯಲ್ಲೇ ಅವರ ಕಾಫಿ ಬೇಸಾಯದ ಕನಸು ಕೈಗೂಡಲೇ ಇಲ್ಲ.

‘ಮಲೆನಾಡಿನಲ್ಲಿ ನೀರು-ರಸ್ತೆ ಬಿಟ್ಟರೆ ಜನ ಇನ್ನೇನನ್ನೂ ಸರ್ಕಾರದಿಂದ ಕೇಳಲ್ಲ. ಸ್ವಾಭಿಮಾನಿಗಳು ಎಂಬ ಮಾತಿಗೆ ವ್ಯತಿರಿಕ್ತವಾಗಿ ಈ ಬಾರಿ ಕೃಷಿಕರು ಅತಿವೃಷ್ಟಿ ಪರಿಹಾರಕ್ಕಾಗಿ ಕಾದು ಕುಳಿತಿದ್ದಾರೆ. ಮನೆ ಜರಿದು ಬೇರೊಬ್ಬರ ಹಂಗಿನ ಮನೆಯಲ್ಲಿ ಇರಬೇಕಾಗಿದೆ. ಭತ್ತದ ಗದ್ದೆಯ ಮೇಲೆ ಹಳ್ಳ ಹರಿದು ಸಾಗುವಳಿ ಮಾಡಲಾರದೆ ಚಿಂತೆಯಲ್ಲಿ ಮುಳುಗಿದ್ದಾರೆ’ ಎಂದು ವಿಶ್ಲೇಷಿಸುತ್ತಾರೆ ಕಳಸ ಸಹಕಾರಿ ಸಂಘದ ಅಧ್ಯಕ್ಷ ಜಿ.ಕೆ. ಮಂಜಪ್ಪಯ್ಯ.

‘ಅತಿವೃಷ್ಟಿ ತಂದ ಆಘಾತದಿಂದ ಚೇತರಿಸಿಕೊಳ್ಳುವ ಮೊದಲೇ ಇದೀಗ ಆತ್ಮಹತ್ಯೆಯ ಸಮೂಹ ಸನ್ನಿ ಆವರಿಸಿರುವುದು ಅಪಾಯಕಾರಿ. ಅತಿವೃಷ್ಟಿ ನಂತರದ 2 ತಿಂಗಳಲ್ಲಿ ಕಂದಾಯ ಇಲಾಖೆ, ಜನಪ್ರತಿನಿಧಿಗಳು ಮತ್ತು ಸರ್ಕಾರಗಳ ಆಮೆವೇಗದ ಕಾರ್ಯವು ಪರಿಹಾರದ ಆಸೆಯನ್ನು ಬಹುತೇಕ ಜನರು ಬಿಡುವಂತೆ ಮಾಡಿದೆ. ಇದರಿಂದಲೇ ಕೃಷಿಕರಲ್ಲಿ ಹತಾಶೆಯು ಹೆಚ್ಚುತ್ತಿದೆ’ ಎನ್ನುತ್ತಾರೆ ಅವರು.

‘ನಮ್ಮ ಮನೆಗೆ ಪರಿಹಾರ ಕೊಡಬೇಕಾದರೆ ನಾವು ಹಿಂದಿದ್ದ ಮನೆ ಜಾಗವನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕಂತೆ. ನಾವು ಬೇರೆ ಎಲ್ಲೋ ಹೋಗಿ ಮನೆ ಕಟ್ಕೊಂಡು ಜೀವನ ಮಾಡಲು ಸಾಧ್ಯವೇ’ ಎಂದು ಪ್ರಶ್ನಿಸುತ್ತಾರೆ ಕಳಕೋಡಿನಲ್ಲಿ ಮನೆ ಕಳೆದುಕೊಂಡ ಮೌನೇಶಾಚಾರ್.

‘ನಮ್ಮ ಮನೆ ಬಿದ್ದು ಹೋಗಿದ್ದೂ ನಂಗೆ ಅಷ್ಟು ಬೇಜಾರಿಲ್ಲ. ಆದ್ರೆ 20 ವರ್ಷ ಹಳ್ಳದಿಂದ ನೀರು ಹೊತ್ಕಂಡು ಬಂದು 500 ಅಡಿಕೆ ಮರ, ಕಾಫಿ ಗಿಡ ಬದುಕಿಸಿದ್ದೆ. ಒಂದೇ ಹೊಡೆತಕ್ಕೆ ಎಲ್ಲ ಹೋಯ್ತಲ್ಲ. ನಾವು ಇದ್ದು ಏನು ಪ್ರಯೋಜನ?’ ಎಂದು ಕೃಷಿಕ ಶಾಮಾಚಾರ್ ಕಣ್ಣೀರಾಗುತ್ತಾರೆ.

‘ನಾವು ಎಲ್ಲಾ ಮಾಹಿತಿಯನ್ನು ಹಿರಿಯ ಅಧಿಕಾರಿಗಳಿಗೆ ಒಪ್ಪಿಸಿದ್ದೇವೆ. ಪರಿಹಾರ ಸಿಗುವ ಭರವಸೆ ಇದೆ’ ಎನ್ನುತ್ತಾರೆ ಕಂದಾಯ ಇಲಾಖೆ ಸಿಬ್ಬಂದಿ.

Post Comments (+)