ಸೋಮವಾರ, ನವೆಂಬರ್ 18, 2019
29 °C

ಕಲಬುರ್ಗಿ, ರಾಯಚೂರು ಜಿಲ್ಲೆಗಳಲ್ಲಿ ಉತ್ತಮ ಮಳೆ

Published:
Updated:

ರಾಯಚೂರು: ಜಿಲ್ಲೆಯ ವಿವಿಧೆಡೆ ಗುರುವಾರ ರಾತ್ರಿ ಉತ್ತಮ ಮಳೆ ಸುರಿದಿದೆ. 

ಧಾರಾಕಾರ ಮಳೆಯಿಂದ ಮಾನ್ವಿ ಪಟ್ಟಣದ ಐದು ವಾರ್ಡ್‌ಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಅಲ್ಲಲ್ಲಿ ಕಟ್ಟಡಗಳ ಗೋಡೆ ಕುಸಿದಿವೆ. ಗ್ರಾಮೀಣ ಭಾಗದ ಹಳ್ಳ ತುಂಬಿ ಹರಿಯುತ್ತಿವೆ.

ಮುಷ್ಟೂರು ಗ್ರಾಮದ ಹಳ್ಳದ ಸೇತುವೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವ ಕಾರಣ ಗ್ರಾಮಸ್ಥರು ರಂಗದಾಳ, ಬುದ್ದಿನ್ನಿ ಮೂಲಕ ಮಾನ್ವಿಗೆ ಸಂಚರಿಸಬೇಕಿದೆ. ಸಿರವಾರದಲ್ಲಿ ಬಹುತೇಕ ವಾರ್ಡ್‌ಗಳಲ್ಲಿ ಮನೆಗಳಿಗೆ ನೀರು ನುಗ್ಗಿ, ಜನರು ತೊಂದರೆ ಅನುಭವಿಸಿದರು. ನುಗಡೋಣಿ ಹೊಸೂರು ಗ್ರಾಮ ಸಮೀಪದ ಹಳ್ಳ ತುಂಬಿ ಹರಿದ ಪರಿಣಾಮ ಹಳ್ಳದ ದಂಡೆಯ ಪಕ್ಕದ ಜಮೀನುಗಳಿಗೆ ನೀರು ನುಗ್ಗಿ 70 ಎಕರೆ ಜಮೀನಿನಲ್ಲಿ ನಾಟಿ ಮಾಡಿದ್ದ ಭತ್ತದ ಸಸಿಗಳು ಕೊಚ್ಚಿಹೋಗಿವೆ.

ಕರಾವಳಿಯಲ್ಲಿ 23ರಂದು ಮಳೆ:  ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಇದೇ 23ರಂದು ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಎರಡೂ ಭಾಗದಲ್ಲಿ ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 

ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಯವರೆಗೆ ಮಳೆ ಪ್ರಮಾಣ ಕಡಿಮೆ ಇರಲಿದೆ. ಬಳಿಕ ರಾಜ್ಯದ ಹಲವೆಡೆ ಸೋಮವಾರದಿಂದ ಮಳೆ ಪ್ರಮಾಣ ಹೆಚ್ಚಾಗಲಿದೆ. ದಕ್ಷಿಣ ಒಳನಾಡಿನಲ್ಲಿ ಸೆಪ್ಟೆಂಬರ್‌ 24ರವರೆಗೆ ಹಗುರದಿಂದ ಸಾಧಾರಣ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದೆ.‌

ಪ್ರತಿಕ್ರಿಯಿಸಿ (+)