ಗುರುವಾರ , ಮಾರ್ಚ್ 4, 2021
25 °C
ವಿದ್ಯಾರ್ಥಿಗಳ ಸಬಲೀಕರಣಕ್ಕಾಗಿ ‘ಚೈಲ್ಡ್‌ ಸ್ಪಾನ್ಸರ್‌ಶಿಪ್‌’ ಮತ್ತು ‘ಅನ್ನದಾನ’ ಯೋಜನೆ

ನೆರವಿನ ನಿರೀಕ್ಷೆಯಲ್ಲಿ ಕಲಕೇರಿ ಕಲಿಕಾರ್ಥಿಗಳು

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

Deccan Herald

ಹುಬ್ಬಳ್ಳಿ: ‌ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ನೂರಾರು ಬಡ ಮಕ್ಕಳಿಗೆ ಆಶ್ರಯ ನೀಡಿ, ಉಚಿತ ಶಿಕ್ಷಣ ಮತ್ತು ಸಂಗೀತ ತರಬೇತಿ ನೀಡುತ್ತಿರುವ ಧಾರವಾಡ ಜಿಲ್ಲೆಯ ‘ಕಲಕೇರಿ ಸಂಗೀತ ವಿದ್ಯಾಲಯ’ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.

ಕೆನಡಾ ಮೂಲದ ಮ್ಯಾಥ್ಯೂ ಫೋರ್ಟಿಯರ್‌ ಮತ್ತು ಅಗಾಥಾ ಫೋರ್ಟಿಯರ್‌ ದಂಪತಿ 2002ರಲ್ಲಿ ಕಲಕೇರಿ ಗ್ರಾಮದ ಕಾಡಂಚಿನ 3 ಎಕರೆ ಪ್ರದೇಶದಲ್ಲಿ ಗುರುಕುಲ ಮಾದರಿಯ ಈ ವಸತಿ ಶಾಲೆಯನ್ನು ಆರಂಭಿಸಿದರು. ನಿರ್ಗತಿಕ ಮತ್ತು ಶೋಷಿತ ಮಕ್ಕಳನ್ನು ಪತ್ತೆ ಹಚ್ಚಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದೇ ಈ ಶಾಲೆಯ ಮುಖ್ಯ ಧ್ಯೇಯ.

12 ಮಕ್ಕಳಿಂದ ಆರಂಭವಾದ ಈ ಶಾಲೆಯಲ್ಲಿ, ಈಗ ಬರೋಬ್ಬರಿ 230 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 1ರಿಂದ 9ನೇ ತರಗತಿವರೆಗೆ ರಾಜ್ಯ ಪಠ್ಯಕ್ರಮಕ್ಕನುಗುಣವಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಬೆಳಿಗ್ಗೆ 8.15ರಿಂದ 11.15ರವರೆಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಬೆಳಿಗ್ಗೆ 11.30ರಿಂದ ಸಂಜೆ 4.30ರವರೆಗೆ ಔಪಚಾರಿಕ ಶಿಕ್ಷಣ ನೀಡಲಾಗುತ್ತಿದೆ. ಇದರ ಜತೆಯಲ್ಲಿ ಕ್ರೀಡೆ, ನಾಟಕ, ನೃತ್ಯ, ಪರಿಸರ ಶಿಕ್ಷಣ, ಇಂಗ್ಲಿಷ್‌ ಸ್ಪೀಕಿಂಗ್‌ ಹಾಗೂ ಕಂಪ್ಯೂಟರ್‌ ಕಲಿಕೆಗೂ ಒತ್ತು ನೀಡಲಾಗಿದೆ. ಈ ಶಾಲೆಯಲ್ಲಿ 29 ಶಿಕ್ಷಕರು ಮತ್ತು 38 ಬೋಧಕೇತರ ಸಿಬ್ಬಂದಿ ಇದ್ದಾರೆ. ಇವರ ಜತೆಯಲ್ಲಿ ಫ್ರಾನ್ಸ್‌, ಕೆನಡಾ, ಜರ್ಮನಿ, ಇಂಗ್ಲೆಂಡ್‌ ದೇಶಗಳಿಂದ ಬಂದ 11 ಸ್ವಯಂಸೇವಕರು ಉಚಿತವಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ದೇಣಿಗೆಯೇ ಜೀವಾಳ: ‘ಸರ್ಕಾರದ ಅನುದಾನವಿಲ್ಲದೆ ನಡೆಯುತ್ತಿರುವ ಈ ಖಾಸಗಿ ವಸತಿ ಶಾಲೆಗೆ ಸಂಘ– ಸಂಸ್ಥೆ ಮತ್ತು ದಾನಿಗಳು ನೀಡುವ ದೇಣಿಗೆಯೇ ಜೀವಾಳ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ತಿಂಡಿ, ಊಟ ನೀಡುವ ಜತೆಗೆ ಸಿಬ್ಬಂದಿ ವೇತನ ಮತ್ತು ಇತರೆ ಖರ್ಚುಗಳೂ ದಿನದಿಂದ ದಿನಕ್ಕೆ ಏರುತ್ತಿವೆ. ಅಲ್ಲದೆ, ಇಲ್ಲಿ 9ನೇ ತರಗತಿವರೆಗೂ ಓದಿ, ನಂತರ ಬೇರೆ ಕಡೆ ಎಸ್ಸೆಸ್ಸೆಲ್ಸಿಯಿಂದ ಸ್ನಾತಕೋತ್ತರ ಪದವಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಹಣಕಾಸು ನೆರವು ನೀಡುತ್ತಿದ್ದೇವೆ. ಈ ಎಲ್ಲ ವೆಚ್ಚಗಳನ್ನು ಭರಿಸುವುದು ಸಂಸ್ಥೆಗೆ ದೊಡ್ಡ ಸವಾಲಾಗಿದೆ’ ಎನ್ನುತ್ತಾರೆ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಸಂಯೋಜಕ ಸಂತೋಷ ಪೂಜಾರಿ.

ಆಸಕ್ತರು, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಹೊಸಯಲ್ಲಾಪುರ ಶಾಖೆ, ಶಾಖೆಯ ಕೋಡ್‌: 7964, ಖಾತೆ ಸಂಖ್ಯೆ: 30029977616, ಐಎಫ್‌ಎಸ್‌ಸಿ: SBIN0007964 ಈ ಖಾತೆಗೆ ಹಣ ಕಳುಹಿಸಬಹುದು. ಮಾಹಿತಿಗೆ ಮೊ: 99459 06721 ಸಂಪರ್ಕಿಸಿ.

ಚೈಲ್ಡ್‌ ಸ್ಪಾನ್ಸರ್‌ಶಿಪ್‌

‘ಶಾಲೆಗೆ ಆರ್ಥಿಕ ನೆರವು ಅಗತ್ಯವಾಗಿದೆ. ಹಾಗಾಗಿ ‘ಚೈಲ್ಡ್‌ ಸ್ಪಾನ್ಸರ್‌ಶಿಪ್‌’ ಯೋಜನೆಯನ್ನು ಜಾರಿಗೊಳಿಸಿದ್ದೇವೆ. ಈ ಯೋಜನೆಯಡಿ, ದಾನಿಗಳು ತಿಂಗಳಿಗೆ ₹1,800 ರಂತೆ ವರ್ಷಕ್ಕೆ ₹21,600 ಸಂಸ್ಥೆಗೆ ನೀಡಿ, ತಮಗೆ ಬೇಕಾದ ವಿದ್ಯಾರ್ಥಿಯನ್ನು ಓದಿಸಬಹುದು. ದಾನಿಗಳು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿ ಮತ್ತು ಯೋಗ– ಕ್ಷೇಮದ ಮಾಹಿತಿಯನ್ನು ಪ್ರತಿ ತಿಂಗಳು ಪತ್ರ, ಆಡಿಯೊ, ವಿಡಿಯೊ ಮೂಲಕ ಕಳುಹಿಸಿಕೊಡುತ್ತೇವೆ. ಈ ಮೂಲಕ ಬಡ ವಿದ್ಯಾರ್ಥಿಯ ಕನಸಿನ ಸಾಕಾರಕ್ಕೆ ಕೈ ಜೋಡಿಸಬಹುದು’ ಎನ್ನುತ್ತಾರೆ ಸಂಸ್ಥೆಯ ನಿರ್ದೇಶಕ ಆ್ಯಡಂ ವುಡ್‌ವರ್ಡ್‌.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು