ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇವಮಾನವ’ ಕಲ್ಕಿ ಭಗವಾನ್‌ ಮನೆಯಲ್ಲಿ ₹43.9 ಕೋಟಿ ನಗದು, 88 ಕೆ.ಜಿ.ಚಿನ್ನ ವಶ

ಐ.ಟಿ. ದಾಳಿ: 18 ಕೋಟಿ ಡಾಲರ್‌ ವಶ
Last Updated 19 ಅಕ್ಟೋಬರ್ 2019, 6:06 IST
ಅಕ್ಷರ ಗಾತ್ರ

ಚೆನ್ನೈ: ಸ್ವಯಂ ಘೋಷಿತ ‘ದೇವಮಾನವ’ ಕಲ್ಕಿ ಭಗವಾನ್‌ ಸುಮಾರು ₹ 500 ಕೋಟಿಯಷ್ಟು ತೆರಿಗೆ ವಂಚಿಸಿದ್ದಾರೆ ಎಂದು ಹೇಳಲಾಗಿದೆ. ಇವರ ಆಶ್ರಮಗಳಿಂದ 88 ಕೆ.ಜಿ. ಚಿನ್ನ ಸೇರಿದಂತೆ ಅಪಾರ ಪ್ರಮಾಣದ ಹಣವನ್ನು ವಶಕ್ಕೆ ಪಡೆಯಲಾಗಿದೆ.

ಆದಾಯ ತೆರಿಗೆ ಇಲಾಖೆ ನಡೆಸಿದ ಶೋಧದ ವೇಳೆ ವಂಚನೆ ಪ್ರಕರಣ ಬಯಲಾಗಿದೆ.

ಕಲ್ಕಿ ಭಗವಾನ್‌ ಮತ್ತು ಅವರ ಮಗ ಕೃಷ್ಣ, ಮಾಲೀಕತ್ವದ ಸ್ಥಳಗಳಲ್ಲಿ ಬುಧವಾರದಿಂದ ಈ ಶೋಧ ಕಾರ್ಯ ಆರಂಭವಾಗಿದೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇದುವರೆಗೆ ₹43.9 ಕೋಟಿ ನಗದು ಹಾಗೂ ಡಾಲರ್‌ ರೂಪದಲ್ಲಿದ್ದ 18 ಕೋಟಿ ಮತ್ತು ₹26 ಕೋಟಿ ಮೌಲ್ಯದ 88 ಕೆ.ಜಿ. ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಕೋಟ್ಯಂತರ ರೂಪಾಯಿ ತೆರಿಗೆ ವಂಚಿಸಲಾಗಿದೆ ಎನ್ನುವ ಖಚಿತ ಮಾಹಿತಿ ಪಡೆದು ಬೆಂಗಳೂರು, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ವರದೈಪಾಲಂ ಮತ್ತು ಚೆನ್ನೈನ ಆಶ್ರಮಗಳು ಸೇರಿದಂತೆ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಲಾಗಿತ್ತು.

ಈ ಸ್ಥಳಗಳಲ್ಲಿ ವಶಪಡಿಸಿಕೊಳ್ಳಲಾದ ದಾಖಲೆಗಳ ಅನ್ವಯ ₹500 ಕೋಟಿ ತೆರಿಗೆಯನ್ನು ವಂಚಿಸಿರುವುದು ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.

ಕೆಲವು ಉದ್ಯಮಗಳಲ್ಲಿ ಅಪಾರ ಹಣವನ್ನು ಕೃಷ್ಣ ಹೂಡಿಕೆ ಮಾಡಿದ್ದು, ಇವುಗಳ ಮೂಲಕವೇ ತೆರಿಗೆ ವಂಚಿಸಲಾಗಿದೆ ಎನ್ನುವ ಅನುಮಾನ ಮೂಡಿದೆ. ತಂದೆಯ ಆಶ್ರಮದ ಹಣವನ್ನು ತನ್ನ ಕಂಪನಿಗಳಿಗೆ ಈತ ವರ್ಗಾಯಿಸಿದ್ದ.

ಟ್ರಸ್ಟ್‌ ಮತ್ತು ಕಂಪನಿಗಳ ಹೆಸರಿನಲ್ಲಿ ವಹಿವಾಟು ನಡೆಸಲಾಗಿದೆ. ಆಸ್ತಿಗಳ ಮಾರಾಟದಿಂದಲೂ ನಗದು ಹಣವನ್ನು ಪಡೆಯಲಾಗಿದೆ. ಆದರೆ, ಈ ಹಣಕ್ಕೆ ಯಾವುದೇ ದಾಖಲೆಗಳಿಲ್ಲ. 2014–15ನೇ ಹಣಕಾಸು ವರ್ಷದಿಂದ ಈ ರೀತಿ ದಾಖಲೆಗಳು ಇಲ್ಲದೆಯೇ ₹409 ಕೋಟಿಯಷ್ಟು ವಹಿವಾಟು ನಡೆಸಲಾಗಿದೆ ಎನ್ನುವುದು ಶೋಧ ಸಂದರ್ಭದಲ್ಲಿ ಪತ್ತೆಯಾಗಿದೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಆದರೆ, ಆದಾಯ ತೆರಿಗೆ ಇಲಾಖೆಯು ‘ಕಲ್ಕಿ ಭಗವಾನ್‌’ ಎಂದು ಹೆಸರಿಸಿಲ್ಲ. ಬದಲಾಗಿ ಧಾರ್ಮಿಕ ಗುರು ಎಂದು ಕರೆದಿದೆ.

‘ಭಗವಾನ್‌ ಮಾಲೀಕತ್ವ ಹೊಂದಿರುವ ಆಶ್ರಮದಿಂದ ಅಪಾರ ಪ್ರಮಾಣದಲ್ಲಿ ನಗದು ಮತ್ತು ಚಿನ್ನ ವಶಪಡಿಸಿಕೊಳ್ಳಲಾಗಿದೆ. ದಾಖಲೆಗಳನ್ನು ಆಶ್ರಮ ಮತ್ತು ಇತರ ಸ್ಥಳಗಳಲ್ಲಿ ವಶಪಡಿಸಿಕೊಳ್ಳಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಶೇಷ ದರ್ಶನಕ್ಕೆ ₹25 ಸಾವಿರ!
ಹಲವು ಕಾರಣಗಳಿಗಾಗಿ ಆಶ್ರಮ ಕುಖ್ಯಾತಿ ಪಡೆದಿತ್ತು. ಕೇವಲ ಹಣ ಗಳಿಕೆಯೇ ಈ ಆಶ್ರಮದ ಉದ್ದೇಶವಾಗಿತ್ತು ಎನ್ನುವ ಆರೋಪಗಳು ಕೇಳಿ ಬಂದಿವೆ. ದಂಪತಿಯ ಸಾಮಾನ್ಯ ದರ್ಶನಕ್ಕೆ ₹5 ಸಾವಿರ ಮತ್ತು ವಿಶೇಷ ದರ್ಶನಕ್ಕೆ ₹25ಸಾವಿರ ನಿಗದಿಪಡಿಸಲಾಗಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಅಕ್ರಮವಾಗಿ ಜಮೀನು ಸ್ವಾಧೀನಪಡಿಸಿಕೊಂಡಿರುವ ಆರೋಪವನ್ನು ಸಹ ಕಲ್ಕಿ ಭಗವಾನ್‌ ಎದುರಿಸುತ್ತಿದ್ದಾರೆ.

ಕ್ಲರ್ಕ್‌ ಆಗಿದ್ದ ‘ದೇವಮಾನವ’
ಕಲ್ಕಿ ಭಗವಾನ್‌ ಮೂಲ ಹೆಸರು ವಿಜಯಕುಮಾರ್ ನಾಯ್ಡು. ಭಾರತೀಯ ಜೀವ ವಿಮಾ ನಿಗಮದಲ್ಲಿ ಕ್ಲರ್ಕ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಸ್ನೇಹಿತರೊಬ್ಬರ ಜತೆ ಸೇರಿ ಚಿತ್ತೂರಿನಲ್ಲಿ ವಸತಿ ಶಾಲೆಯನ್ನು ಆರಂಭಿಸಿದ್ದರು. 1990ರ ಅವಧಿಯಲ್ಲಿ ಕಲ್ಕಿ ಭಗವಾನ್‌ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಅಪಾರ ಜನಪ್ರಿಯರಾಗಿದ್ದರು. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಾದ್ಯಂತ ಕಲ್ಕಿ ಭಗವಾನ್‌ ಆಶ್ರಮಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಅಧ್ಯಾತ್ಮ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಕೋರ್ಸ್‌ಗಳನ್ನು ನಡೆಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT