ಭಾನುವಾರ, ಡಿಸೆಂಬರ್ 8, 2019
21 °C
ಶುದ್ಧನೀರಿಗೆ ಮುಳ್ಳು, ಬಾಳೆ ದಿಂಡು, ತ್ಯಾಜ್ಯ ಎಣ್ಣೆ ಹಾಕಿದ ದುಷ್ಕರ್ಮಿಗಳು

ಕಲ್ಲುಕ್ವಾರಿ ವಿರೂಪಗೊಳಿಸಿದ ಕಿಡಿಗೇಡಿಗಳು!

ಸಾಂತೇನಹಳ್ಳಿ ಸಂದೇಶ ಗೌಡ Updated:

ಅಕ್ಷರ ಗಾತ್ರ : | |

Deccan Herald

ಹೊಳಲ್ಕೆರೆ: ಪರಿಶುದ್ಧ ನೀರು ಸಂಗ್ರಹವಾಗಿದ್ದ ತಾಲ್ಲೂಕಿನ ಬೊಮ್ಮನಕಟ್ಟೆ ಸಮೀಪದ ಕಲ್ಲುಕ್ವಾರಿಗೆ ಕಿಡಿಗೇಡಿಗಳು ಮುಳ್ಳು, ಬಾಳೆದಿಂಡು ಹಾಕಿ ವಿರೂಪಗೊಳಿಸಿದ್ದಾರೆ. ಕ್ವಾರಿಗೆ ಜಾಲಿಮುಳ್ಳಿನ ಮರ, ಸೀಮೆಜಾಲಿಗಳನ್ನು ಹಾಕಿದ್ದಾರೆ. ಯಾರೂ ಈಜಾಡದಂತೆ ತ್ಯಾಜ್ಯದ ಎಣ್ಣೆ ಹಾಕಿ ನೀರನ್ನು ಮಲಿನಗೊಳಿಸಿದ್ದಾರೆ.

ಹತ್ತಾರು ವರ್ಷ ಇಲ್ಲಿ ಕಲ್ಲುಗಣಿಗಾರಿಕೆ ನಡೆಸಿದ್ದರಿಂದ ಮೂರ್ನಾಲ್ಕು ತಿಂಗಳ ಹಿಂದೆ ಕ್ವಾರಿಯಲ್ಲಿ ಅಂತರ್ಜಲ ಉಕ್ಕಿತ್ತು. ಕ್ವಾರಿಯಲ್ಲಿ ಸುಮಾರು 30 ಅಡಿ ನೀರು ಸಂಗ್ರಹ ಆಗಿತ್ತು. ಸ್ಫಟಿಕದಂತೆ ಕಾಣುತ್ತಿದ್ದ ನೀರು ಎಲ್ಲರನ್ನು ಆಕರ್ಷಿಸುತ್ತಿತ್ತು. ಅ.28ರಂದು ‘ಪ್ರಜಾವಾಣಿ’ಯಲ್ಲಿ ‘ಕಲ್ಲು ಕ್ವಾರಿಯಲ್ಲಿ ಉಕ್ಕಿದ ಅಂತರ್ಜಲ!’ ಎಂಬ ಸುದ್ದಿ ಪ್ರಕಟವಾಗಿತ್ತು. ಸುದ್ದಿ ಪ್ರಕಟವಾದ ನಂತರ ಈ ಸ್ಥಳ ಹೆಚ್ಚು ಪ್ರಚಾರಕ್ಕೆ ಬಂದಿತ್ತು. ಸುದ್ದಿ ಓದಿದ ಸುತ್ತಮುತ್ತಲಿನ ಜಿಲ್ಲೆಗಳ ನೂರಾರು ಜನ ಕ್ವಾರಿಗೆ ಭೇಟಿ ನೀಡಿ ಸಂತಸ ವ್ಯಕ್ತಪಡಿಸಿದ್ದರು.

ಸುತ್ತಲಿನ ಹತ್ತಾರು ಕಿ.ಮೀ.ದೂರದ ಹಳ್ಳಿಗಳಿಂದ ಯುವಕರು ಈಜಲು ಬರುತ್ತಿದ್ದರು. ಪತ್ರಿಕೆ ಹಾಗೂ ಫೇಸ್‌ಬುಕ್, ವಾಟ್ಸ್ಆ್ಯಪ್‌ಗಳಲ್ಲಿ ಕ್ವಾರಿಯ ಚಿತ್ರ, ವಿಡಿಯೊ ನೋಡಿದ ದಾವಣಗೆರೆ, ಶಿವಮೊಗ್ಗ ಕಡೆಯ ಜನರೂ ಇಲ್ಲಿಗೆ ಬರುತ್ತಿದ್ದರು. ಕ್ವಾರಿಯ ಜನಪ್ರಿಯತೆ ಹೆಚ್ಚುತ್ತಿದ್ದಂತೆ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿತ್ತು.

ಈಜಲು ಹೆಚ್ಚು ಅಪಾಯಕಾರಿ ಸ್ಥಳವೆಂದು ‘ಪ್ರಜಾವಾಣಿ’ಯಲ್ಲಿ ಎಚ್ಚರಿಕೆಯ ಸಂದೇಶವನ್ನೂ ನೀಡಲಾಗಿತ್ತು. ಕ್ವಾರಿಯಲ್ಲಿ ಸಂಗ್ರಹವಾಗಿರುವ ನೀರು ಅತ್ಯಂತ ಪರಿಶುದ್ಧವಾಗಿದ್ದು, ಕುಡಿಯುವ ನೀರಿಗೆ ಬಳಸಬಹುದು ಎಂದು ಜಲತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕ್ವಾರಿಗೆ ಈಜಲು ಬರುವ ಜನ ಹೆಚ್ಚಾದಂತೆ ಒಂದೆರಡು ದಿನ ಇಬ್ಬರು ಪೊಲೀಸರನ್ನೂ ನಿಯೋಜಿಸಲಾಗಿತ್ತು. ಕ್ವಾರಿಯ ಒಳಗೆ ವಾಹನಗಳು ಹೋಗದಂತೆ ಪ್ರವೇಶದ್ವಾರದಲ್ಲಿ ಕಂದಕ ತೋಡಲಾಗಿತ್ತು.

ಆದರೆ ಈಗ ಕಂದಕವನ್ನು ಮುಚ್ಚಿದ್ದು, ವಾಹನಗಳು ಒಳಗೆ ಹೋಗುವಂತೆ ಮಾಡಿದ್ದಾರೆ. ಬೇರೆಡೆಯಿಂದ ಮುಳ್ಳಿನ ಮರಗಳನ್ನು ತಂದು ಕ್ವಾರಿಯಲ್ಲಿ ಹಾಕಿದ್ದಾರೆ.

‘ನಿತ್ಯ ಹೆಚ್ಚು ಜನ ಬರುತ್ತಿರುವುದರಿಂದ ಕ್ವಾರಿಯಲ್ಲಿನ ಕಲ್ಲುಗಳನ್ನು ಸಾಗಿಸಲು ತೊಂದರೆಯಾಗುತ್ತದೆ ಎಂದು ಕಲ್ಲು ಸಾಗಿಸುವವರು ಈ ಕೃತ್ಯ ಮಾಡಿರಬಹುದು. ಜನ ಈಜಬಾರದು ಎಂದು ಮುಳ್ಳುಗಳನ್ನು ಹಾಕಿದ್ದಾರೆ. ನೀರು ಕಲುಷಿತವಾಗಲು ಬಾಳೆ ದಿಂಡು, ತೈಲ ಹಾಕಿದ್ದಾರೆ. ಕ್ವಾರಿಯ ಕಡೆ ಯಾರೂ ಬರಬಾರದು ಎಂಬ ಉದ್ದೇಶದಿಂದ ಈ ಕೃತ್ಯ ಮಾಡಿರಬಹುದು’ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಾರೆ.

**

ಕ್ವಾರಿಯಲ್ಲಿ ಸಂಗ್ರಹವಾಗಿದ್ದ ಅಪರೂಪದ ಜಲರಾಶಿಯನ್ನು ಸಂರಕ್ಷಿಸಿ, ಪ್ರಸಿದ್ಧ ಪ್ರವಾಸಿ ತಾಣವಾಗಿ ಜಿಲ್ಲಾಡಳಿತ ಅಭಿವೃದ್ಧಿ ಮಾಡಬೇಕು.
- ಜಿ.ಎಚ್. ಶಿವಪ್ರಕಾಶ್, ಪ್ರವಾಸಿಗ

**

ಜನ ಈಜುತ್ತಾರೆಂದು ನೀರನ್ನೇ ಕಲುಷಿತಗೊಳಿಸುವುದು ಸರಿಯಲ್ಲ. ಕ್ವಾರಿಯ ಸೌಂದರ್ಯವನ್ನು ಉಳಿಸಬೇಕು.
- ಜಿ.ಕರಿಯಾ ನಾಯ್ಕ, ಬೊಮ್ಮನಕಟ್ಟೆ ಗ್ರಾಮಸ್ಥ

**

ನಾನು ಸ್ಥಳಕ್ಕೆ ಹೋಗಿ ಪರಿಶೀಲಿಸಿದೆ. ಕ್ವಾರಿ ಸ್ಥಳಕ್ಕೆ ವಾಹನಗಳು ಸಂಚರಿಸದಂತೆ ರಸ್ತೆಯಲ್ಲಿ ಕಂದಕ ನಿರ್ಮಿಸಲು ಕ್ರಮ ಕೈಗೊಳ್ಳುವೆ.
- ವೈ. ತಿಪ್ಪೇಸ್ವಾಮಿ, ತಹಶೀಲ್ದಾರ್

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು