ಗುರುವಾರ , ಸೆಪ್ಟೆಂಬರ್ 19, 2019
29 °C

ವಿವಾದಕ್ಕೆ ಕಾರಣವಾದ ‘ಕಲ್ಯಾಣ ಕರ್ನಾಟಕ ವಿಮೋಚನಾ’ ದಿನಾಚರಣೆ ಆದೇಶ

Published:
Updated:

ಕಲಬುರ್ಗಿ: ಹೈದರಾಬಾದ್‌ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ‘ಕಲ್ಯಾಣ ಕರ್ನಾಟಕ ವಿಮೋಚನಾ ದಿನ’ವನ್ನಾಗಿ ಆಚರಿಸುವಂತೆ ಸರ್ಕಾರ ಹೊರಡಿಸಿರುವ ಆದೇಶ ವಿವಾದಕ್ಕೆ ಕಾರಣವಾಗಿದೆ.

ಸರ್ಕಾರದ ಕ್ರಮವನ್ನು ಬಿಜೆಪಿಯವರು ಸಮರ್ಥಿಸಿಕೊಂಡಿದ್ದರೆ, ಕಾಂಗ್ರೆಸ್‌ನವರು ‘ಇದು ಶರಣರಿಗೆ ಮಾಡುವ ಅವಮಾನ’ ಎಂದು ಟೀಕಿಸಿದ್ದಾರೆ.

‘ಹೈದರಾಬಾದ್‌ ಕರ್ನಾಟಕ ಎಂಬ ಪದ ಎಲ್ಲೆಲ್ಲಿ ಬಳಕೆಯಾಗಿದೆಯೋ ಅಲ್ಲೆಲ್ಲ ಕಲ್ಯಾಣ ಕರ್ನಾಟಕ ಎಂದು ವಿವೇಚನೆ ಇಲ್ಲದೇ ಬಳಸಿದ್ದರಿಂದ ಸಾಕಷ್ಟು ಗೊಂದಲವುಂಟಾಗಿದೆ. ಕಲ್ಯಾಣ ಕರ್ನಾಟಕದಿಂದಲೇ ವಿಮೋಚನೆ ಎಂಬ ತಪ್ಪು ಅರ್ಥವೂ ಹೊರ
ಹೊಮ್ಮುವ ಸಾಧ್ಯತೆ ಇದೆ. ಹೀಗಾಗಿ ಈ ಗೊಂದಲವನ್ನು ತಕ್ಷಣ ಪರಿಹರಿಸಬೇಕು’ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಒತ್ತಾಯಿಸಿದರು.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆಮಾತನಾಡಿದ ಅವರು, ‘ಈ ತಪ್ಪು ಸರಿಪಡಿಸುವಂತೆ ಮುಖ್ಯ ಕಾರ್ಯದರ್ಶಿ ಅವರ ಗಮನ ಸೆಳೆಯುತ್ತೇನೆ’ ಎಂದರು.

‘ಸರ್ಕಾರದ ಈ ಕುರುಡು ನಿರ್ಧಾರ ಬಸವ ಧರ್ಮದ ಅನುಯಾಯಿಗಳಿಗೆ ನೋವು ತಂದಿದೆ. ಈ ಆದೇಶವನ್ನು ಸರ್ಕಾರ ವಾಪಸ್‌ ಪಡೆಯಬೇಕು’ ಎಂದು ಕಾಂಗ್ರೆಸ್‌ ಮುಖಂಡ ಅಲ್ಲಮಪ್ರಭು ಪಾಟೀಲ ಒತ್ತಾಯಿಸಿದರು.

‘ಸರ್ಕಾರದ ಆದೇಶದಲ್ಲಿ ಗೊಂದಲ ಇಲ್ಲ. ಕಲ್ಯಾಣ ಕರ್ನಾಟಕವಾಗಿದ್ದ ಈ ಭಾಗ ಹೈದರಾಬಾದ್‌ ನಿಜಾಮರ ಆಳ್ವಿಕೆಗೆ ಒಳಪಟ್ಟಿತ್ತು. 1948ರ ಸೆಪ್ಟೆಂಬರ್‌ 17ರಂದು ವಿಲೀನಗೊಂಡಿತು. ಈ ವಿಮೋಚನಾ ದಿನವನ್ನು ಸಂತಸ ದಿಂದ ಆಚರಿಸಬೇಕೇ ಹೊರತು ಮೊಸರಿನಲ್ಲಿ ಕಲ್ಲು ಹುಡುಕಬಾರದು’ ಎಂದು ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಸಮರ್ಥಿಸಿಕೊಂಡರು.

‘ಮೈಸೂರು ದಸರಾ ಮಾದರಿ ಉತ್ಸವ ಮಾಡಿ’

ಕಲಬುರ್ಗಿ: ‘ಮೈಸೂರು ದಸರಾ ಮಾದರಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವವನ್ನು ಪ್ರತಿ ವರ್ಷ ಕಲಬುರ್ಗಿಯಲ್ಲಿ ಆಯೋಜಿಸಬೇಕು’‌ ಎಂದು  ‘ಹೈ–ಕ ವಿಮೋಚನಾ ಮತ್ತು ಅಭಿವೃದ್ಧಿ ಸಮಿತಿ’ಯ ಅಧ್ಯಕ್ಷ ಶಶೀಲ್‌ ಜಿ.ನಮೋಶಿ ಮತ್ತು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದಾರೆ.

Post Comments (+)