ಶನಿವಾರ, ಅಕ್ಟೋಬರ್ 19, 2019
27 °C
ಕಲ್ಯಾಣ ಕರ್ನಾಟಕ ಉತ್ಸವ

ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಘೋಷಿಸಿದ ಮುಖ್ಯಮಂತ್ರಿ ಬಿಎಸ್‌ವೈ

Published:
Updated:
Prajavani

ಕಲಬುರ್ಗಿ: ‘ಹೈದರಾಬಾದ್‌ ಕರ್ನಾಟಕ’ ಪ್ರದೇಶಕ್ಕೆ ‘ಕಲ್ಯಾಣ ಕರ್ನಾಟಕ’ ಎಂದು ಘೋಷಣೆ ಮಾಡಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಈ ಭಾಗದ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯವನ್ನು ಕಲಬುರ್ಗಿಯಲ್ಲಿ ಆರಂಭಿಸುವುದಾಗಿ ಪ್ರಕಟಿಸಿದರು.

‘ಹೈ–ಕ ವಿಮೋಚನಾ ದಿನ’ದ ಬದಲು ಸರ್ಕಾರ ಈ ವರ್ಷದಿಂದ ಆಚರಿಸುತ್ತಿರುವ ‘ಕಲ್ಯಾಣ ಕರ್ನಾಟಕ ಉತ್ಸವ ದಿನ’ದಲ್ಲಿ ಪಾಲ್ಗೊಂಡ ಅವರು, ‘ಹೆಸರು ಬದಲಿಸಿದ್ದೇ ಸಾಧನೆ ಎಂದು ನಾನು ತಿಳಿದಿಲ್ಲ. ಈ ಭಾಗದ ಜನ ಕಲ್ಯಾಣ ಪರ್ವವನ್ನು ಇಂದಿನಿಂದಲೇ ಆರಂಭಿಸುವೆ’ ಎಂದು ವಾಗ್ದಾನ ಮಾಡಿದರು.

‘ಪ್ರವಾಹದಿಂದಾಗಿ ಈ ವರ್ಷ ಹೆಚ್ಚಿನ ಅನುದಾನ ನೀಡಲಾಗುತ್ತಿಲ್ಲ. ಮುಂದಿನ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಲಾಗುವುದು’ ಎಂದು ತಿಳಿಸಿದರು.

ಈ ಭಾಗದವರಿಗೆ ಶಿಕ್ಷಣ, ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ರಾಜ್ಯ ಸರ್ಕಾರದ ಕಾಯ್ದೆಗೆ ಅಗತ್ಯಬಿದ್ದರೆ ತಿದ್ದುಪಡಿ ತರುವ ಭರವಸೆ ನೀಡಿದರು.

371 (ಜೆ) ಕಲಂ ಅಡಿ ಕಲ್ಪಿಸಿರುವ ಮೀಸಲಾತಿಗೆ ಸಂಬಂಧಿಸಿದ ವಿಶೇಷ ಕೋಶದ ಕಚೇರಿ ಬೆಂಗಳೂರಿನಲ್ಲಿದೆ. ಇಲ್ಲಿ ಪ್ರಾದೇಶಿಕ ಕಚೇರಿ ತೆರೆದು. ನೇಮಕಾತಿ, ಬಡ್ತಿ ಸೌಲಭ್ಯ ಕಲ್ಪಿಸಿ ಅನ್ಯಾಯ ಸರಿಪಡಿಸಲಾಗುವುದು ಎಂದರು.

ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳಲ್ಲಿ 32,343 ಹುದ್ದೆಗಳು ಖಾಲಿ ಇದ್ದವು. ಈ ಪೈಕಿ 13,619 ಹುದ್ದೆ ಭರ್ತಿ ಆಗಿದೆ. 10,748 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಉಳಿದ ಹುದ್ದೆ ಭರ್ತಿ ನಡೆಯಲಿದೆ ಎಂದರು.

ಈ ಭಾಗದ ಇತಿಹಾಸ ಪಠ್ಯದಲ್ಲಿ ಸೇರಿಸಲು,ಗುಲಬರ್ಗಾ ವಿ.ವಿಯಲ್ಲಿ ಅಧ್ಯಯನ ಪೀಠ ಸ್ಥಾಪಿಸುವುದಾಗಿ ಹೇಳಿದರು.

ಕೆಎಟಿ ಪೀಠ ಉದ್ಘಾಟನೆ: ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ)ಯ ಕಲಬುರ್ಗಿ ಪೀಠ ಉದ್ಘಾಟಿಸಿದರು. ‘ಗುಲಬರ್ಗಾ ವಿಮಾನ ನಿಲ್ದಾಣ’ವನ್ನು ಮುಂದಿನ ತಿಂಗಳು ಪ್ರಧಾನಿಯಿಂದ ಉದ್ಘಾಟಿಸುವುದಾಗಿ ತಿಳಿಸಿದರು.

ಯಾದಗಿರಿ, ಬೀದರ್‌, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲೂ ಕಲ್ಯಾಣ ಕರ್ನಾಟಕ ಉತ್ಸವ ದಿನವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಕಲಬುರ್ಗಿ ಅನುಭವ ಮಂಟಪಕ್ಕೆ ₹ 50 ಕೋಟಿ: ‘ಕಲಬುರ್ಗಿಯಲ್ಲಿ ₹ 50 ಕೋಟಿ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಿಸಲಾಗುವುದು. ಇದಕ್ಕಾಗಿ ಮುಂದಿನ 15 ದಿನಗಳಲ್ಲಿ ಮೊದಲ ಕಂತಾಗಿ ₹20 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಘೋಷಿಸಿದರು.

ಕಲಬುರ್ಗಿ ಅನುಭವ ಮಂಟಪಕ್ಕೆ ₹ 50 ಕೋಟಿ

‘12ನೇ ಶತಮಾನದಲ್ಲಿ ಬಸವಣ್ಣನವರು ಕಟ್ಟಿದ ಅನುಭವ ಮಂಟಪದ ಮಾದರಿಯಲ್ಲಿ ಕಲಬುರ್ಗಿಯಲ್ಲಿ ₹ 50 ಕೋಟಿ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಿಸಲಾಗುವುದು. ಇದಕ್ಕಾಗಿ ಮುಂದಿನ 15 ದಿನಗಳಲ್ಲಿ ಮೊದಲ ಕಂತಾಗಿ ₹ 20 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದರು.

ಮಠಾಧೀಶರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ನಗರದಲ್ಲಿಯ ಹಳೆಯ ಅನುಭವ ಮಂಟಪದ ಪಕ್ಕದಲ್ಲಿ 20 ಎಕರೆ ಜಾಗ ಇದೆ. ಅಲ್ಲಿ ಅನುಭವ ಮಂಟಪ, ಸಭಾಂಗಣ, ಧ್ಯಾನಮಂದಿರ ನಿರ್ಮಿಸಲಾಗುವುದು’ ಎಂದು ತಿಳಿಸಿದರು.

‘ಕಲಬುರ್ಗಿಯ ವೀರಶೈವ ಟ್ರಸ್ಟ್‌ಗೆ ದಾನಿಗಳು ನೀಡಿರುವ ಒಂದು ಎಕರೆ ಜಾಗದಲ್ಲಿ ಸಮಾಜದ ಮಕ್ಕಳಿಗೆ ವಸತಿ ನಿಲಯ ಕಟ್ಟಿಸಲು ₹3 ಕೋಟಿ ಅನುದಾನ ನೀಡುವೆ’ ಎಂದೂ ಘೋಷಿಸಿದರು.

Post Comments (+)