ಕಮಲ್‌ನಾಥ್ ಮಧ್ಯಪ್ರದೇಶ ಮುಖ್ಯಮಂತ್ರಿಯಾಗುವುದು ಬೇಡ: ಆನ್‌ಲೈನ್ ಆಂದೋಲನ

7
ಬೆಂಗಳೂರಿನಲ್ಲಿಯೂ ಚುರುಕಾಗುತ್ತಿದೆ ಅಭಿಯಾನ

ಕಮಲ್‌ನಾಥ್ ಮಧ್ಯಪ್ರದೇಶ ಮುಖ್ಯಮಂತ್ರಿಯಾಗುವುದು ಬೇಡ: ಆನ್‌ಲೈನ್ ಆಂದೋಲನ

Published:
Updated:

ಬೆಂಗಳೂರು: 1984 ಸಿಖ್ ವಿರೋಧಿ ಗಲಭೆಗಳ ಆರೋಪಿಯಾಗಿರುವ ಕಮಲ್‌ನಾಥ್‌ ಅವರಿಗೆ ಮಧ್ಯಪ್ರದೇಶ ಮುಖ್ಯಮಂತ್ರಿಯಾಗುವ ಅವಕಾಶ ನೀಡಬಾರದು ಎಂದು ರಾಹುಲ್‌ ಗಾಂಧಿ ಅವರನ್ನು ಕೋರುವ ಆನ್‌ಲೈನ್ ಅಭಿಯಾನಕ್ಕೆ ನಗರದಲ್ಲಿಯೂ ಬೆಂಬಲ ವ್ಯಕ್ತವಾಗಿದೆ. ಸಾಹಿತಿ ಕಳಲೆ ಪಾರ್ಥಸಾರಥಿ ಸೇರಿದಂತೆ ಹಲವರು ಅಭಿಯಾನಕ್ಕೆ ದನಿಗೂಡಿಸಿದ್ದಾರೆ.

ಕಾರ್ತಿಕ್ ವೆಂಕಟೇಶ್ ಅವರು www.change.org ಮೂಲಕ ಗುರುವಾರ ಮಧ್ಯಾಹ್ನದಿಂದ ಅಭಿಯಾನ ಆರಂಭಿಸಿದ್ದಾರೆ. ಸಿಖ್ ವಿರೋಧಿ ಗಲಭೆಗಳಲ್ಲಿ ಕಮಲ್‌ನಾಥ್ ಸಕ್ರಿಯರಾಗಿ ಪಾಲ್ಗೊಂಡ ವಿಚಾರ ದಾಖಲಾಗಿದೆ. ಇವರನ್ನು ಮುಖ್ಯಮಂತ್ರಿ ಗಾದಿಯಲ್ಲಿ ಕೂರಲು ಅವಕಾಶ ಕೊಡುವುದು ದ್ವೇಷದ ರಾಜಕಾರಣದ ವಿರುದ್ಧ ಮತಚಲಾಯಿಸಿದವರಿಗೆ ಅವಮಾನ ಮಾಡಿದಂತೆ ಎಂದು ಕಾರ್ತಿಕ್ ಹೇಳಿದ್ದಾರೆ.

‘ಚುನಾವಣೆಗಳನ್ನು ಗೆಲ್ಲುವುದು ದೀರ್ಘ ಪ್ರಯಾಣವೊಂದರ ಮೊದಲ ಹೆಜ್ಜೆ ಮಾತ್ರ. ನಮ್ಮ ಪರವಾಗಿ, ನಮ್ಮ ಒಳಿತಿಗಾಗಿ ನೀವು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಿ ಎಂದು ನಿಮಗೆ ಅವಕಾಶ ಕೊಟ್ಟಿದ್ದೇವೆ. ಹೀಗೆಂದು ನಾವು ಸುಮ್ಮನೆ ಕೂರುವವರಲ್ಲ. ನೀವು ಇಡುವ ಪ್ರತಿ ಹೆಜ್ಜೆಯನ್ನೂ ನಾವು ಗಮನಿಸುತ್ತಲೇ ಇರುತ್ತೇವೆ’ ಎಂದು ಅವರು ಅಭಿಯಾನದ ಒಕ್ಕಣೆಯಲ್ಲಿ ಬರೆಯಲಾಗಿದೆ.

‘ತನ್ನ ಎದುರು ಇರುವ ಮೊದಲ ಪರೀಕ್ಷೆಯಲ್ಲಿಯೇ ಕಾಂಗ್ರೆಸ್‌ ಪಕ್ಷ ಸೋಲಬಾರದು. ಅದು ತೆಗೆದುಕೊಳ್ಳುವ ಮೊದಲು ನಿರ್ಧಾರ ಅತ್ಯಂತ ಕೆಟ್ಟದ್ದು ಆಗಿರಬಾರದು. ಕಮಲ್‌ನಾಥ್ ಅವರನ್ನು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಘೋಷಿಸುವ ಮೂಲಕ ನಿಮ್ಮ ಪಕ್ಷಕ್ಕೆ ಮತ ಹಾಕಿದ ಎಲ್ಲ ಮತದಾರರನ್ನೂ ನೀವು ಅವಮಾನ ಮಾಡುತ್ತಿದ್ದೀರಿ. ದ್ವೇಷ ರಾಜಕಾರಣವನ್ನು ವಿರೋಧಿಸಿ ಜನರು ನಿಮ್ಮನ್ನು ಬೆಂಬಲಿಸಿದ್ದರು ಎಂಬುದನ್ನು ಮರೆಯದಿರಿ’ ಎಂದು ಮನವಿ ಪತ್ರದಲ್ಲಿ ವಿನಂತಿಸಲಾಗಿದೆ.

‘1984ರ ಸಿಖ್ ವಿರೋಧಿ ಗಲಭೆಗಳಲ್ಲಿ ಕಮಲ್‌ನಾಥ್ ಅವರ ಪಾತ್ರ ಇರುವ ವಿಚಾರ ವಿವರವಾಗಿ ದಾಖಲಾಗಿದೆ. ರಾಜಕೀಯ ಸಭೆಗಳಲ್ಲಿ, ಮಾಧ್ಯಮಗೋಷ್ಠಿಗಳಲ್ಲಿ ನೀವು ಕೋಮು ಸೌಹಾರ್ದದ ಬಗ್ಗೆ ಮಾತನಾಡಿದ್ದೀರಿ. ನಿಮ್ಮ ಮಾತಿಗೆ ನೀವು ಬದ್ಧರಾಗಿರುವಿರಾ? ಬಿಜೆಪಿ ಸರ್ಕಾರವನ್ನು ವಿರೋಧಿಸಿ ಮತ ಚಲಾಯಿಸಿದ ನಾವೆಲ್ಲರೂ ಈ ಪ್ರಶ್ನೆಯನ್ನು ನಿಮಗೆ ಕೇಳುತ್ತಿದ್ದೇವೆ. 2002ರ (ಗೋಧ್ರಾ) ಕೊಲೆಗಾರರನ್ನು ವಿರೋಧಿಸಿದ ನಾವು 1984 ಕೊಲೆಗಡುಕರನ್ನು ಒಪ್ಪಲು ಸಾಧ್ಯವಿಲ್ಲ. 1984ರ ಅಪರಾಧಿಗಳಿಗೆ ಶಿಕ್ಷೆ ಸಿಗುವಂತೆ ಮಾಡಿ. ಆಗ ಮಾತ್ರ ನೀವು 2002ರ ಕೊಲೆಗಡುಕರ ವಿರುದ್ಧ ಜಯಗಳಿಸಿದ್ದೇವೆ ಎಂದು ಹೇಳಿಕೊಳ್ಳಬಹುದು’ ಎಂದು ಆ ಪತ್ರ ರಾಹುಲ್‌ ಗಾಂಧಿಗೆ ಸವಾಲು ಹಾಕಿದೆ.

ಗುರುವಾರ ಮಧ್ಯಾಹ್ನ ಆರಂಭವಾದ ಅಭಿಯಾನಕ್ಕೆ ದಿನಸರಿದಂತೆ ಚುರುಕಾಗುತ್ತಿದೆ. ರಾತ್ರಿ 8.20ರ ವೇಳೆಗೆ 313 ಮಂದಿ ಅಭಿಯಾನವನ್ನು ಬೆಂಬಲಿಸಿದ್ದರು.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 1

  Frustrated
 • 5

  Angry

Comments:

0 comments

Write the first review for this !