ಮಂಗಳವಾರ, ಡಿಸೆಂಬರ್ 10, 2019
26 °C
ತಿದ್ದುಪಡಿ ಮಸೂದೆ ಸಿಂಧುತ್ವ ವಿರೋಧಿಸಿರುವ ಅರ್ಜಿ

ಕಂಬಳ ವಿಚಾರಣೆ ಸಂವಿಧಾನ ಪೀಠಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕರಾವಳಿ ಜಿಲ್ಲೆಗಳಲ್ಲಿ ಜನಪ್ರಿಯವಾಗಿರುವ ಕಂಬಳಕ್ಕೆ ಅವಕಾಶ ಕಲ್ಪಿಸುವ ಕಾಯ್ದೆಯನ್ನು ವಿರೋಧಿಸಿ ಸ್ವಯಂ ಸೇವಾ ಸಂಘಟನೆಯಾದ ಪೆಟಾ ಇಂಡಿಯಾ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಐವರು ಸದಸ್ಯರ ಸಂವಿಧಾನ ಪೀಠಕ್ಕೆ ವರ್ಗಾಯಿಸಲಾಗಿದೆ.

ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮದನ್‌ ಬಿ.ಲೋಕೂರ್‌ ನೇತೃತ್ವದ ಪೀಠ, ಕಂಬಳಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ರಾಜ್ಯ ವಿಧಾನಸಭೆ ಅಂಗೀಕರಿಸಿದ್ದ ಪ್ರಾಣಿ ಹಿಂಸೆ ತಡೆ (ತಿದ್ದುಪಡಿ) ಮಸೂದೆ– 2017ರ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿತು.

ತಮಿಳುನಾಡಿನಲ್ಲಿ ಆಚರಿಸಲಾಗುವ ‘ಜಲ್ಲಿಕಟ್ಟು’ ಕ್ರೀಡೆಯನ್ನು ವಿರೋಧಿಸಿ  ಇದೇ ಸಂಸ್ಥೆ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಈಗಾಗಲೇ ಕೈಗೆತ್ತಿಕೊಂಡಿರುವ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠಕ್ಕೇ ಕಂಬಳ ಪ್ರಕರಣವನ್ನೂ ವರ್ಗಾಯಿಸಲು ನ್ಯಾಯಮೂರ್ತಿ ದೀಪಕ್‌ ಗುಪ್ತಾ ಅವರನ್ನೂ ಒಳಗೊಂಡಿರುವ ಈ ಪೀಠ ನಿರ್ಧರಿಸಿತು.

ಕಂಬಳಕ್ಕೆ ಅವಕಾಶ ನೀಡಿದಲ್ಲಿ ಕೇಂದ್ರದ ಪ್ರಾಣಿ ಹಿಂಸೆ ತಡೆ ಕಾಯ್ದೆ– 1960ರ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದೂ ಅರ್ಜಿದಾರರು ದೂರಿದ್ದರಿಂದ ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಹಾಗೂ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಗೆ ನ್ಯಾಯಪೀಠವು ನೋಟಿಸ್‌ ಜಾರಿ ಮಾಡಿದೆ.

ಕಂಬಳ ಕ್ರೀಡೆಯಲ್ಲಿ ಭಾಗವಹಿಸುವ ಕೋಣಗಳನ್ನು ಹಿಂಸಿಸುವುದರಿಂದ ಅವಕಾಶ ನೀಡಬಾರದು ಎಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.

ತಮಿಳುನಾಡಿನಲ್ಲಿ ಆಚರಣೆಯಲ್ಲಿರುವ ಜಲ್ಲಿಕಟ್ಟು ಕ್ರೀಡೆಯನ್ನು ನಿಷೇಧಿಸಿ ಸುಪ್ರೀಂ ಕೋರ್ಟ್‌ ಆದೇಶ ನೀಡಿದ್ದರಿಂದ ಅಲ್ಲಿನ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ಮತ್ತೆ ಅವಕಾಶ ಕಲ್ಪಿಸಿತ್ತು. ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರವೂ ಸುಗ್ರೀವಾಜ್ಞೆ ಹೊರಡಿಸಿ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿತ್ತು. ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿಯವರ ಅಂಕಿತ ದೊರೆತಿದೆ.

ಕಂಬಳದಲ್ಲಿ ಪಾಲ್ಗೊಳ್ಳುವ ಕೋಣಗಳನ್ನು ಕ್ರೂರವಾಗಿ ನಡೆಸಿಕೊಳ್ಳಲಾಗುತ್ತದೆ ಎಂಬ ಆರೋಪದಲ್ಲಿ ಹುರುಳಿಲ್ಲ. ತಪ್ಪು ಗ್ರಹಿಕೆಯಿಂದ ಕಂಬಳವನ್ನು ವಿರೋಧಿಸಿ ಮೇಲ್ಮನವಿ ಸಲ್ಲಿಸಲಾಗಿದೆ. ರಾಷ್ಟ್ರಪತಿಯವರ ಒಪ್ಪಿಗೆಯ ಮೇರೆಗೆ, ಅಗತ್ಯ ಮುನ್ನೆಚ್ಚರಿಕೆಯ ನಡುವೆಯೇ ರಾಜ್ಯದಲ್ಲಿ ಕಂಬಳಕ್ಕೆ ಅನುಮತಿ ನೀಡಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಹೇಳಿಕೆಯಲ್ಲಿ ಸ್ಪಷ್ಟಪಡಿಸಿತ್ತು.

ತಮ್ಮ ಗದ್ದೆಗಳನ್ನು ಹದಗೊಳಿಸಲು ರೈತರು ಕೋಣಗಳನ್ನು ಬಳಸುವುದು ವಾಡಿಕೆ. ಅಲ್ಲದೆ, ಅವುಗಳಿಗೆ ಯಾವುದೇ ರೀತಿಯ ನೋವಾಗದಂತೆ ಕೆಸರಿನಲ್ಲಿ ಓಡಿಸುವ ಸಂಪ್ರದಾಯವನ್ನು ಗ್ರಾಮೀಣ ಭಾಗದ ಜನರು ಮೊದಲಿನಿಂದಲೂ ಆಚರಿಸಿಕೊಂಡು ಬಂದಿದ್ದಾರೆ. ಕೆಸರು ಗದ್ದೆಯಲ್ಲಿ ಕೆಲಸ ಮಾಡುವ ಕೋಣಗಳನ್ನು ಕೆಸರಿನಲ್ಲಿ ಓಡಿಸುವುದರಿಂದ ಅವುಗಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು