ಶನಿವಾರ, ಡಿಸೆಂಬರ್ 14, 2019
24 °C
ಕುರುಬ ಸಮುದಾಯದ ಕ್ಷಮೆ ಕೇಳಿದ ಮುಖ್ಯಮಂತ್ರಿ ಯಡಿಯೂರಪ್ಪ

ಹುಳಿಯಾರು–ಹೊಸದುರ್ಗ ರಸ್ತೆಯ ವೃತ್ತಕ್ಕೆ ಕನಕದಾಸರ ಹೆಸರು: ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

B S Yediyurappa

ಬೆಂಗಳೂರು: ‘ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರಿನಲ್ಲಿ ಹುಳಿಯಾರು– ಹೊಸದುರ್ಗ ರಸ್ತೆಯಲ್ಲಿರುವ  ವೃತ್ತಕ್ಕೆ ಕನಕ ವೃತ್ತ ಎಂದು ನಾಮಕರಣ ಮಾಡುವ ಬಗ್ಗೆ ಎದ್ದಿರುವ ಗೊಂದಲ ಅನಾವಶ್ಯಕ. ವೃತ್ತಕ್ಕೆ ಕನಕದಾಸರ ಹೆಸರಿಡಲು ವಿರೋಧವೂ ಇಲ್ಲ ಅಭ್ಯಂತರವೂ ಇಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

‘ಕನಕದಾಸರ ಹೆಸರಿಡಲು ಮಾಧುಸ್ವಾಮಿ ವಿರೋಧ ಮಾಡಿಲ್ಲ. ಅವರ ಮಾತಿನಿಂದ ಆದ ಗೊಂದಲದ ಬಗ್ಗೆ ನಾನೇ ಕ್ಷಮೆ ಕೇಳಿದ್ದೇನೆ. ಕನಕಪೀಠದ ಈಶ್ವರಾನಂದಪುರಿ ಸ್ವಾಮೀಜಿಯವರೂ ಕೂಡ ಮಾಧುಸ್ವಾಮಿ ಏಕವಚನದಲ್ಲಿ ಸಂಭೋದಿಸಿಲ್ಲ ಎಂದಿದ್ದಾರೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಹುಳಿಯಾರು ಮತ್ತು ಬೇರೆ ಕಡೆ ಇರುವ ಕುರುಬ ಸಮುದಾಯದ ಜನ ಮತ್ತು ಕನಕದಾಸರ ಭಕ್ತರು ಉದ್ವೇಗಕ್ಕೆ ಒಳಗಾಗಬಾರದು. ಚುನಾವಣೆ ಮುಗಿದ ನಂತರ ಸರ್ಕಾರದ ವತಿಯಿಂದ ವೃತ್ತ ನಿರ್ಮಾಣ ಮಾಡಿ ಕನಕದಾಸ ವೃತ್ತ ಎಂದು ನಾಮಕರಣ ಮಾಡುತ್ತೇವೆ’ ಎಂದು ಭರವಸೆ ನೀಡಿದ್ದಾರೆ.

‘ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಕನಕದಾಸರ ಜಯಂತಿ ಆರಂಭಿಸಿದ್ದೂ, ಅಲ್ಲದೆ ಕಾಗಿನೆಲೆ ಕನಕಗುರು ಪೀಠದ ಅಭಿವೃದ್ಧಿಗೆ ಶ್ರಮಿಸಿದ್ದು ಬಿಜೆ‍ಪಿ ಸರ್ಕಾರ. ನನ್ನ ಜೀವನದಲ್ಲಿ ಗುರುಗಳಿಗೆ, ಸಂತರಿಗೆ, ದಾಸರಿಗೆ ಮತ್ತು ಶರಣರಿಗೆ ಅತ್ಯಂತ ಗೌರವದಿಂದ ನಡೆದುಕೊಂಡಿದ್ದೇನೆ’ ಎಂದು ಹೇಳಿದ್ದಾರೆ.

ಕನಕವೃತ್ತದ ಬಗ್ಗೆ ಎದ್ದ ವಿವಾದಕ್ಕೆ ತೆರೆ ಎಳೆದು, ಶಾಂತಿ ಕಾಪಾಡಬೇಕು. ಪ್ರತಿಭಟನೆ ಮತ್ತು ಬಂದ್‌ ಆಚರಿಸಕೂಡದು ಎಂದು ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಇದಕ್ಕೆ ಮುನ್ನ ಬೆಳಿಗ್ಗೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಯಡಿಯೂರಪ್ಪ, ‘ಈ ಘಟನೆಯಿಂದ ಕುರುಬ ಸಮಾಜಕ್ಕೆ ನೋವಾಗಿದ್ದಾರೆ, ಕ್ಷಮೆಯಾಚಿಸುತ್ತೇನೆ’ ಎಂದು ಹೇಳಿದರು.

ವಿಷಾದ ವ್ಯಕ್ತಪಡಿಸುತ್ತೇನೆ: ‘ಕುರುಬ ಸಮುದಾಯ ಅಥವಾ ಸ್ವಾಮೀಜಿಗೆ ಅವಹೇಳನ ಮಾಡಿಲ್ಲ. ಅಂತಹ ಸಂಸ್ಕೃತಿ ನನ್ನದಲ್ಲ. ಕ್ಷಮೆ ಕೇಳುವಷ್ಟು ತಪ್ಪು ನನ್ನಿಂದಾಗಿದ್ದರೆ ಘಟನೆಗೆ ವಿಷಾದ ವ್ಯಕ್ತಪಡಿಸುತ್ತೇನೆ’ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

ನಿಮ್ಮ ವ್ಯಭಿಚಾರದಿಂದ ಗೊಂದಲ: ಈಶ್ವರಪ್ಪ

‘ನೀವು (ಮಾಧ್ಯಮ) ರಾಜಕಾರಣ ಮಾಡಲು ಹೊರಟರೆ ಹೇಗೆ? ನೀವು ಮಾಡಿದ ವ್ಯಭಿಚಾರಕ್ಕೆ ಇಷ್ಟೆಲ್ಲ ಗೊಂದಲ ಉಂಟಾಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಕಿಡಿ ಕಾರಿದ್ದಾರೆ.

ಮಾಧುಸ್ವಾಮಿ ಕ್ಷಮೆ ಕೇಳುವಂತ ತಪ್ಪು ಏನು ಮಾಡಿದ್ದಾರೆ. ಆದ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಚುನಾವಣೆ ಮುಗಿಯುವ ತನಕ ಈ ವಿಷಯವನ್ನು ಬಿಡುವುದಿಲ್ಲ ಎಂದು ಅವರು ಹರಿಹಾಯ್ದರು.

‘ಮಾಧುಸ್ವಾಮಿಗೆ ಸಂಸ್ಕೃತಿಯೇ ಇಲ್ಲ’

ಮೈಸೂರು: ‘ಯಾವುದೇ ಧರ್ಮದ ಗುರುಗಳು, ಸ್ವಾಮೀಜಿಗಳನ್ನು ಗೌರವಿಸುವುದು ನಮ್ಮ ಸಂಸ್ಕೃತಿ. ಆದರೆ, ಸಚಿವ ಮಾಧುಸ್ವಾಮಿಗೆ ಸಂಸ್ಕೃತಿಯೇ ಇಲ್ಲ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬುಧವಾರ ಮೈಸೂರು ಹಾಗೂ ಹುಣಸೂರಿನಲ್ಲಿ ವಾಗ್ದಾಳಿ ನಡೆಸಿದರು.

‘ಬಿಜೆಪಿಗೂ, ಅದರ ನಾಯಕರಿಗೂ ಸಂಸ್ಕೃತಿಯೇ ಇಲ್ಲ. ನೈಜ ಮಾತುಗಳನ್ನು ಆಡುವುದಿಲ್ಲ. ಸುಳ್ಳನ್ನು ಪದೇಪದೇ ಹೇಳಿ ಜನರನ್ನು ನಂಬಿಸಲು ಪ್ರಯತ್ನಿಸುತ್ತಾರೆ. ಇದು ಹಿಟ್ಲರ್ ಮನಸ್ಥಿತಿ’ ಎಂದು ಟೀಕಿಸಿದರು.

ತಾವು ಕೊಟ್ಟ ಹಣದಿಂದ ಸಿದ್ದರಾಮಯ್ಯ ಚುನಾವಣೆ ಗೆದ್ದರು ಎಂಬ ಹೋಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಟಿ.ಬಿ.ನಾಗರಾಜ್‌ ಹೇಳಿಕೆಗೂ ತಿರುಗೇಟು ನೀಡಿದರು.

‘ಎಂ.ಟಿ.ಬಿ ಒಬ್ಬ ಯಕಶ್ಚಿತ್ ರಾಜಕಾರಣಿ. ಅವನ ಬಳಿ‌ ನಾನ್ ಯಾಕ್ರೀ ದುಡ್ಡು ತಗೊಳ್ಳಲಿ? ಜನರೇ ನನಗೆ ದುಡ್ಡು ಕೊಟ್ಟು ಗೆಲ್ಸಿದ್ದಾರೆ. ನಾನ್ ಯಾಕ್ರಿ ಆತನ ಬಳಿ ಸಾಲ ತಗೊಳ್ಳಲಿ? ಈ ಬಾರಿಯ ಚುನಾವಣೆಯಲ್ಲಿ ಜನರೇ ಅವನಿಗೆ ಉತ್ತರ ಕೊಡ್ತಾರೆ’ ಎಂದು ಏಕವಚನದಲ್ಲಿ ಕಿಡಿಕಾರಿದರು.

‘ಬಿಜೆಪಿಯವರಿಗೂ ನಾನೇ ಟಾರ್ಗೆಟ್. ಜೆಡಿಎಸ್‌ನವರಿಗೂ ನಾನೇ ಟಾರ್ಗೆಟ್. ಅನರ್ಹರ ಟಾರ್ಗೆಟ್ ಕೂಡ ನಾನೇ. ಇದನ್ನೆಲ್ಲಾ ನೋಡಿದರೆ ಅವರಿಗೆಲ್ಲಾ ನನ್ನನ್ನು ಕಂಡರೆ ಭಯ ಇರಬಹುದೇನೋ’ ಎಂದರು. 

ಸಚಿವ ಮಾಧುಸ್ವಾಮಿ ಹೇಳಿಕೆಗೆ ಖಂಡನೆ

ಬಾಗಲಕೋಟೆ: ‘ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಕನಕ ಗುರು ಪೀಠಾಧೀಶರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದು ಖಂಡನೀಯ. ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು’ ಎಂದು ರಾಜ್ಯ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ರಾಜೇಂದ್ರ ಸಣ್ಣಕ್ಕಿ ಆಗ್ರಹಿಸಿದರು.

‘ಸ್ವಾಮೀಜಿಯ ಕ್ಷಮೆ ಯಾಚಿಸದಿದ್ದರೆ ಸಚಿವರು ಹೋದ ಕಡೆಯೆಲ್ಲ ಸಮಾಜದವರು ಅವರ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು. 

ಇಂದು ಹುಳಿಯಾರು ಬಂದ್

ತುಮಕೂರು: ಕಾಗಿನೆಲೆ ಕನಕಗುರು ಪೀಠದ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಅವರಿಗೆ ಅಗೌರವ ತೋರಿರುವ ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಸಚಿವ ಸ್ಥಾನದಿಂದ ಕೈ ಬಿಡಬೇಕು ಎಂದು ಆಗ್ರಹಿಸಿ ಗುರುವಾರ (ನ. 21) ಕುರುಬ ಸಮಾಜದವರು ಹುಳಿಯಾರು ಪಟ್ಟಣ ಬಂದ್‌ಗೆ ಕರೆ ನೀಡಿದ್ದಾರೆ.

ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಶಾಂತಿಯುತವಾಗಿ ಬಂದ್ ನಡೆಸಲು ಹಾಗೂ 11ಕ್ಕೆ ಮೆರವಣಿಗೆ ನಡೆಸಲು ನಿರ್ಧರಿಸಿದ್ದಾರೆ.

ವಿವಾದ ಮುಗಿಸಿ: ಕನಕ ವೃತ್ತಕ್ಕೆ ಸಂಬಂಧಿಸಿದ ವಿವಾದವನ್ನು ಇಲ್ಲಿಗೆ ಕೈ ಬಿಟ್ಟು ಎರಡು ಸಮುದಾಯಗಳು ಸಹಬಾಳ್ವೆಯಿಂದ ಬದುಕಬೇಕು ಎಂದು ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಮ್ಮಡಿಹಳ್ಳಿ ಮಠದ ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ ಮನವಿ ಮಾಡಿದರು.

ಕನಕದಾಸರು, ಶಿವಕುಮಾರ ಸ್ವಾಮೀಜಿ ಅವರ ಹೆಸರು ಮುಂದಿಟ್ಟುಕೊಂಡು ಸಮಾಜದ ಸ್ವಾಸ್ಥ್ಯ ಕದಡುವುದು ಬೇಡ. ಈ ವಿವಾದ ಎರಡು ಸಮಾಜಗಳು ತಲೆ ತಗ್ಗಿಸುವಂತೆ ಮಾಡಿದೆ. ಇದನ್ನು ಕೆಲವರು ಬಂಡವಾಳ ಮಾಡಿಕೊಂಡು ವಿಷಬೀಜ ಬಿತ್ತುತ್ತಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸ್ವಾಮೀಜಿ ಅವರನ್ನು ಅಗೌರವಿಸಿಲ್ಲ: ‘ಶಾಂತಿ ಸಭೆಯಲ್ಲಿ ಮಾಧುಸ್ವಾಮಿ ಅವರು ಈಶ್ವರಾನಂದಪುರಿ ಸ್ವಾಮೀಜಿ ಅವರಿಗೆ ಅಗೌರವ ತೋರಿಲ್ಲ’ ಎಂದು ಕುರುಬ ಸಮುದಾಯದ ಕೆಲವು ಮುಖಂಡರು ತಿಳಿಸಿದರು.

ಮಾಧುಸ್ವಾಮಿ ಅವರನ್ನು ಬೆಂಬಲಿಸಿ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿದರು.

‘ಸಚಿವರಿಗೆ ಕೆಟ್ಟ ಹೆಸರು ತರಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅವರ ಮಾತನ್ನು ತಿರುಚಿದ್ದಾರೆ. ಸಚಿವರು ಮಾತನಾಡುವಾಗ ಸ್ವಾಮೀಜಿ ಮಧ್ಯಪ್ರವೇಶಿಸಿದರು. ಆಗ ನಾನು ಮಾತನಾಡಿದ ನಂತರ ಮಾತನಾಡಿ ಎಂದು ಮಾಧುಸ್ವಾಮಿ ಹೇಳಿದರು. ಸ್ವಾಮೀಜಿ ಅವರ ಜತೆ ಅಗೌರವದಿಂದ ನಡೆದುಕೊಂಡಿಲ್ಲ’ ಎಂದು ಕುರುಬ ಸಮುದಾಯದ ಮುಖಂಡ ಇಟ್ಟಿಗೆ ರಂಗಸ್ವಾಮಯ್ಯ ಹೇಳಿದರು.

‘ಹುಳಿಯಾರಿನಲ್ಲಿ ವೀರಶೈವ/ ಲಿಂಗಾಯತರು ಮತ್ತು ಕುರುಬ ಸಮಾಜದವರು ಅಣ್ಣ ತಮ್ಮಂದಿರ ರೀತಿ ಬದುಕುತ್ತಿದ್ದಾರೆ. ಕೆಲವರು ಎರಡು ಸಮಾಜದ ಸಾಮರಸ್ಯಕ್ಕೆ ಹುಳಿ ಹಿಂಡುವ ಕೆಲಸ ಮಾಡುತ್ತಿರುವುದು ಸರಿಯಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)