ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ಕಡಿತ: ಪ್ರಶಸ್ತಿಗಳನ್ನು ಕೈಬಿಟ್ಟ ಪ್ರಾಧಿಕಾರ

ಕೇವಲ ₹ 2 ಕೋಟಿ ಅನುದಾನ ನೀಡಿದ ಸರ್ಕಾರ
Last Updated 8 ಮೇ 2020, 16:56 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರವು ವಾರ್ಷಿಕ ಅನುದಾನವನ್ನು ಕಡಿತ ಮಾಡಿದ ಪರಿಣಾಮ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ವಿವಿಧ ಪ್ರಶಸ್ತಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನವನ್ನು ಸ್ಥಗಿತ ಮಾಡಿದೆ.

ಪ್ರತಿ ವರ್ಷ ಸರ್ಕಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ₹ 8 ಕೋಟಿ ಅನುದಾನ ನೀಡುತ್ತಿತ್ತು. ಆದರೆ, 2020–21ನೇ ಸಾಲಿನಲ್ಲಿ ಕೇವಲ ₹ 2 ಕೋಟಿ ಅನುದಾನ ನೀಡಿದೆ. ಇದರಿಂದ ಪ್ರಾಧಿಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ನೀಡಲಾದ ಅನುದಾನವು ಸಿಬ್ಬಂದಿ ವೇತನ ಹಾಗೂ ಕಾರ್ಯಕ್ರಮಗಳಿಗೆ ಸರಿಹೋಗಲಿದೆ. ಹಾಗಾಗಿ ಸರ್ವಸದಸ್ಯರ ಸಭೆಯಲ್ಲಿ ‘ಕನ್ನಡ ಮಾಧ್ಯಮ ಪ್ರಶಸ್ತಿ’, ‘ನ್ಯಾಯಾಂಗದಲ್ಲಿ ಕನ್ನಡ ಪ್ರಶಸ್ತಿ’ ಹಾಗೂ ಹೊರ ರಾಜ್ಯಗಳ ವಿಶ್ವವಿದ್ಯಾಲಯಗಳಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವವರಿಗೆ ನೀಡುವ ವಿದ್ಯಾರ್ಥಿ ವೇತನವನ್ನು ಪ್ರಾಧಿಕಾರ ಸ್ಥಗಿತ ಮಾಡಿದೆ.

ಪ್ರಾಧಿಕಾರ ತನ್ನ ನಿರ್ಧಾರವನ್ನು ಬದಲಾಯಿಸಿ, ಪ್ರಶಸ್ತಿಗಳು ಹಾಗೂ ವಿದ್ಯಾರ್ಥಿ ವೇತನವನ್ನು ಮುಂದುವರೆಸಬೇಕೆಂಬ ಅಭಿಪ್ರಾಯ ಸಾಂಸ್ಕೃತಿಕ ವಲಯದಲ್ಲಿ ವ್ಯಕ್ತವಾಗಿದೆ. ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಬೇಕೆಂಬ ಒತ್ತಾಯವೂ ಕೇಳಿಬಂದಿದೆ.

‘ಹೊರನಾಡಿನ ಕನ್ನಡ ವಿಭಾಗಗಳು ಕೇವಲ ಕನ್ನಡ ಬೋಧನೆಯನ್ನು ಮಾತ್ರ ಮಾಡುತ್ತಿಲ್ಲ. ರಾಷ್ಟ್ರ ಮಟ್ಟದಲ್ಲಿ ಭಾಷೆ ಹಾಗೂ ಸಂಸ್ಕೃತಿಯನ್ನು ಪ್ರಸಾರ ಮಾಡುತ್ತಿವೆ. ತಮಿಳು ಭಾಷೆ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ರಾರಾಜಿಸುತ್ತಿದೆ. ಕನ್ನಡವನ್ನು ಕನಿಷ್ಠ ಪಕ್ಷ ದೇಶದ ವ್ಯಾಪ್ತಿಯಲ್ಲಿ ಉಳಿಸಿ, ಬೆಳೆಸುವುದು ರಾಜ್ಯ ಸರ್ಕಾರದ ಕರ್ತವ್ಯ. ಈಗ ಸರ್ಕಾರವೇ ಅಸಡ್ಡೆ ಧೋರಣೆ ತಳೆದಿರುವುದು ಖಂಡನೀಯ. ಈ ಕುರಿತು ಹೋರಾಟ ಅಗತ್ಯ. ನಾಡಿನ ಸಾಹಿತಿಗಳು ಹಾಗೂ ಕನ್ನಡಾಭಿಮಾನಿಗಳು ಬೆಂಬಲ ನೀಡಬೇಕು’ ಎಂದು ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಉಪಾಧ್ಯ ಅವರು ಒತ್ತಾಯಿಸಿದ್ದಾರೆ.

ಸ್ಥಗಿತ ಅನಿವಾರ್ಯ: ‘ಅನುದಾನವನ್ನು ಏಕಾಏಕಿ ಕಡಿತ ಮಾಡಿರುವುದರಿಂದ ನಾವು ಅಸಹಾಯಕರಾಗಿದ್ದೇವೆ. ₹ 2 ಕೋಟಿ ಅನುದಾನದಲ್ಲಿ ಸಿಬ್ಬಂದಿಯ ವೇತನಕ್ಕೆ ₹ 1 ಕೋಟಿ ಬೇಕು. ಪ್ರಶಸ್ತಿಗಳಿಗೆ ₹ 4.5 ಕೋಟಿ ಅನುದಾನ ಬೇಕಾಗುತ್ತದೆ. ಈ ಹಣವನ್ನು ಎಲ್ಲಿಂದ ತರುವುದು’ ಎಂದು ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಪ್ರಶ್ನಿಸಿದರು.

‘ಹೊರ ರಾಜ್ಯಗಳಲ್ಲಿ ಕನ್ನಡದಲ್ಲಿ ಎಂ.ಎ ವ್ಯಾಸಂಗ ಮಾಡುತ್ತಿರುವವರಲ್ಲಿ ಪ್ರತಿ ವರ್ಷ ನೂರಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಗುರುತಿಸಿ,ತಲಾ ₹ 25 ಸಾವಿರದಿಂದ ₹ 35 ಸಾವಿರದ ವರೆಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದೆವು. ಕಳೆದ ವರ್ಷ 130 ವಿದ್ಯಾರ್ಥಿಗಳಿಂದ ₹ 80 ಲಕ್ಷ ಹಣ ನೀಡಿದ್ದೇವೆ. ‘ನ್ಯಾಯಾಂಗದಲ್ಲಿ ಕನ್ನಡ ಪ್ರಶಸ್ತಿ’ಗೆ ಕಳೆದ ಸಾಲಿನಲ್ಲಿ ₹ 2.95 ಕೋಟಿ ವೆಚ್ಚವಾಗಿದೆ. 1,305 ವಿದ್ಯಾರ್ಥಿಗಳಿಗೆ ‘ಕನ್ನಡ ಮಾಧ್ಯಮ ಪ್ರಶಸ್ತಿ’ ನೀಡಲಾಗಿದ್ದು, ಇದಕ್ಕೆ ₹ 1.80 ಕೋಟಿ ವೆಚ್ಚವಾಗಿದೆ.ಶಾಲೆಗಳಿಗೆ ಪೀಠೋಪಕರಣ ಹಾಗೂ ಪಾಠೋಪರಕಣಗಳನ್ನು ನೀಡುತ್ತಿದ್ದೆವು. ಕಳೆದ ವರ್ಷ ₹ 1.25 ಕೋಟಿ ವೆಚ್ಚ ಮಾಡಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT