ಕನ್ನಡ ಪುಸ್ತಕಗಳ ಖರೀದಿ ಬಂದ್‌!

ಶನಿವಾರ, ಮಾರ್ಚ್ 23, 2019
28 °C
ಖರೀದಿ ಪುನರಾರಂಭಕ್ಕೆ ಒತ್ತಾಯಿಸಿ ಸಾಹಿತಿ, ಲೇಖಕರಿಂದ ಸಿಎಂಗೆ ಪತ್ರ

ಕನ್ನಡ ಪುಸ್ತಕಗಳ ಖರೀದಿ ಬಂದ್‌!

Published:
Updated:
Prajavani

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆ, ಕಾಲೇಜು ಶಿಕ್ಷಣ, ವಾರ್ತಾ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿ ಹಲವು ಇಲಾಖೆಗಳು ಪುಸ್ತಕಗಳ ಖರೀದಿ ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಹಿರಿಯ ಸಾಹಿತಿಗಳು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.

ಹಿರಿಯ ಕವಿ ಚೆನ್ನವೀರ ಕಣವಿ, ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ, ಡಾ.ಹೇಮಾ ಪಟ್ಟಣಶೆಟ್ಟಿ, ಡಾ.ನಾ.ಮೊಗಸಾಲೆ, ರಹಮತ್‌ ತರೀಕೆರೆ, ಟಿ.ಎಸ್‌.ನಾಗಾಭರಣ ಮುಂತಾದವರು ಪತ್ರಕ್ಕೆ ಸಹಿ ಮಾಡಿದ್ದಾರೆ.

ಕನ್ನಡ ಪುಸ್ತಕೋದ್ಯಮ ಮತ್ತು ಕನ್ನಡ ಪುಸ್ತಕಗಳ ಮಾರಾಟ ಸಂಕಷ್ಟದಲ್ಲಿರುವಾಗ ಸರ್ಕಾರ ನೆರವಿಗೆ ನಿಲ್ಲದಿದ್ದರೆ, ಕನ್ನಡದ ನಾಡು– ನುಡಿಗೆ ತುಂಬಲಾಗದ ನಷ್ಟ ಆಗುತ್ತದೆ. ಸರ್ಕಾರದ ಅನುದಾನ ಮತ್ತು ಗ್ರಂಥಾಲಯ ಕರದಿಂದ ಪುಸ್ತಕಗಳನ್ನು ಖರೀದಿಸಲಾಗುತ್ತಿತ್ತು. ಈಗ ಅದನ್ನು ನಿಲ್ಲಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಅಧೀನದಲ್ಲಿರುವ ಸಾವಿರಾರು ಶಾಲೆಗಳಿಗೆ ₹ 40 ಲಕ್ಷ ಮೌಲ್ಯದ ಪಠ್ಯ ಪೂರಕ ಪುಸ್ತಕಗಳನ್ನು ಖರೀದಿಸಿ ಪೂರೈಕೆ ಮಾಡುವುದನ್ನು ನಿಲ್ಲಿಸಲಾಗಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಶೈಕ್ಷಣಿಕ ಉದ್ದೇಶಕ್ಕೆ ಅನುಕೂಲ ಆಗುತ್ತಿದ್ದ ಕನ್ನಡ ಪುಸ್ತಕಗಳ ಖರೀದಿಯನ್ನು ಪುನರಾರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅಲ್ಲದೆ, 1202 ಸರ್ಕಾರಿ,637 ಅನುದಾನಿತ, 1936 ಅನುದಾನ ರಹಿತ, 165 ಬೈಫರ್ಕೇಟೆಡ್‌, 13 ಕಾರ್ಪೊರೇಷನ್‌ ಸೇರಿ ಒಟ್ಟು 3788 ಪಿಯು ಕಾಲೇಜುಗಳಲ್ಲೂ ಪಠ್ಯ ಪೂರಕ ಕನ್ನಡ ಪುಸ್ತಕಗಳ ಖರೀದಿ ನಿಲ್ಲಿಸಲಾಗಿದೆ. ಪದವಿ ಶಿಕ್ಷಣದಲ್ಲಿ 412 ಸರ್ಕಾರಿ, 325 ಅನುದಾನಿತ ಸೇರಿ ಒಟ್ಟು 737 ಪದವಿ ಕಾಲೇಜುಗಳಲ್ಲಿ ಪುಸ್ತಕ ಖರೀದಿ ಪ್ರಕ್ರಿಯೆಯನ್ನು ಉನ್ನತ ಶಿಕ್ಷಣ ಇಲಾಖೆ ಮೂಲಕ ಪಾರದರ್ಶಕವಾಗಿ ನಡೆಸಬೇಕು ಎಂದು ಹೇಳಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ಅಧೀನದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ಹಾಸ್ಟೆಲ್‌ಗಳಲ್ಲಿರುವ ಗ್ರಂಥಾಲಯಗಳು ಮತ್ತು ವಸತಿ ಶಾಲೆಗಳಿಗೆ ವರ್ಷಕ್ಕೆ ₹ 15 ಕೋಟಿ ಮೊತ್ತದ ಪುಸ್ತಕ ಖರೀದಿ ನಿಲ್ಲಿಸಲಾಗಿದೆ. ಇದನ್ನು ಮುಂದುವರಿಸಬೇಕು ಎಂದಿದ್ದಾರೆ.

ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಆ ಭಾಗದ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿಗಾಗಿ ಪುಸ್ತಕಗಳನ್ನು ಖರೀದಿಸುತ್ತಿತ್ತು. ಈಗ ಅದನ್ನೂ ನಿಲ್ಲಿಸಲಾಗಿದೆ. ಆ ಭಾಗದ ಲೇಖಕರು ಮತ್ತು ಪ್ರಕಾಶಕರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಖರೀದಿ ಪುನರಾರಂಭಿಸಬೇಕು ಎಂದು ಅವರು ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

ಕನ್ನಡ ಪುಸ್ತಕ ಪ್ರಾಧಿಕಾರ ಒಂದು ಪುಸ್ತಕ ₹7000 ಮೀರುವಂತಿಲ್ಲ ಎಂಬ ನಿಯಮದ ಮೇಲೆ ಪ್ರೋತ್ಸಾಹದಾಯಕ ಪುಸ್ತಕ ಖರೀದಿ ಯೋಜನೆ ರೂಪಿಸಿದೆ. ಅದನ್ನು ಹೆಚ್ಚಿಸಬೇಕಾದರೆ ಆಯವ್ಯಯದಲ್ಲಿ ಹೆಚ್ಚು ಹಣ ಮಂಜೂರು ಮಾಡಬೇಕಾಗುತ್ತದೆ. ಈ ಯೋಜನೆಯಡಿ ಪ್ರಾಧಿಕಾರ 2016 ರಿಂದ ಪುಸ್ತಕ ಖರೀದಿಸಬೇಕಾಗಿದೆ. ಅದಕ್ಕೆ ಅಗತ್ಯವಿರುವ ಹಣವನ್ನು ಪ್ರಾಧಿಕಾರಕ್ಕೆ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸಿಎಂ ಭೇಟಿಗೆ ನಿರ್ಧಾರ

ಶಿಕ್ಷಣ ಇಲಾಖೆಯೂ ಸೇರಿ ವಿವಿಧ ಇಲಾಖೆಗಳು ಪುಸ್ತಕ ಖರೀದಿ ಪುನರಾರಂಭಿಸುವಂತೆ ಮನವರಿಕೆ ಮಾಡಲು ಸಾಹಿತಿಗಳು ಮತ್ತು ಬರಹಗಾರ ನಿಯೋಗವೊಂದನ್ನು ಮುಖ್ಯಮಂತ್ರಿಯವರ ಬಳಿಗೆ ಕರೆದೊಯ್ಯಲಾಗುವುದು ಎಂದು ಕರ್ನಾಟಕ ಕನ್ನಡ ಬರಹಗಾರರು ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !