ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಠೀರವ ಕ್ರೀಡಾಂಗಣದಲ್ಲಿ ಅದ್ದೂರಿ ರಾಜ್ಯೋತ್ಸವ :8 ಸಾವಿರ ಮಕ್ಕಳು ಭಾಗಿ

Last Updated 28 ಅಕ್ಟೋಬರ್ 2019, 14:42 IST
ಅಕ್ಷರ ಗಾತ್ರ

ಬೆಂಗಳೂರು: ಈ ಸಾಲಿನ 64ನೇ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಆಚರಣೆ ಕುರಿತಂತೆ ಸೋಮವಾರ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಚಿವ ಸುರೇಶ್‌ಕುಮಾರ್ ಸಭೆ ನಡೆಸಿದರು. ಇಲಾಖೆಯು ತೆಗೆದುಕೊಂಡಿರುವ ಪೂರ್ವಭಾವಿ ಕ್ರಮಗಳ ಕುರಿತಂತೆ ಪರಾಮರ್ಶಿಸಿದರು.

ವಿವಿಧ ಇಲಾಖೆಗಳ ಸಹಯೋಗದಲ್ಲಿ ನವೆಂಬರ್ 01ರಂದು ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಅಂದು ಸುಮಾರು 8000 ವಿದ್ಯಾರ್ಥಿಗಳು ಭಾಗವಹಿಸುವ ಮಕ್ಕಳ ಮೇಳವನ್ನು ಸಹ ಶಿಕ್ಷಣ ಇಲಾಖೆಯು ಆಯೋಜಿಸುತ್ತಿದ್ದು, ಸುಮಾರು 3.30 ಗಂಟೆಗಳ ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಹಿಸುತ್ತಿದ್ದಾರೆಂದು ಸಚಿವ ಸುರೇಶ್‌‌ಕುಮಾರ್ ಮಾಹಿತಿ ನೀಡಿದರು.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಪೂರ್ವಭಾವಿ ಸಿದ್ದತೆಯನ್ನು ಪರಿಶೀಲಿಸಲು ದಿನಾಂಕ 31/10/2019 ರಂದು ಕ್ರೀಡಾಂಗಣದಲ್ಲಿಯೇ ಅಧಿಕಾರಿಗಳ ಸಭೆಯನ್ನು ನಡೆಸಿ ಅಗತ್ಯ ಸೂಚನೆಗಳನ್ನು ನೀಡುವುದಾಗಿ ಸಚಿವ ಸುರೇಶ್‌ಕುಮಾರ್ ತಿಳಿಸಿದರು.

ಇದೇ ಸಂದರ್ಭದಲ್ಲಿ ದಿನಾಂಕ 23/10/2019 ಹಾಗೂ 24/10/2019ರ ಎರಡು ದಿನಗಳ ಬೆಳಗಾವಿ ಪ್ರವಾಸದ ಬಗ್ಗೆ ಮಾಹಿತಿ ನೀಡಿದ ಸಚಿವರು ಈ ವಿಭಾಗದ ಬಾಗಲಕೋಟೆ, ಚಿಕ್ಕೋಡಿ, ಬೆಳಗಾವಿ ಜಿಲ್ಲೆಗಳ ನೆರೆ ಪೀಡಿತ ಪ್ರದೇಶಗಳ ಹಲವಾರು ಶಾಲೆಗಳಿಗೆ ತಾವು ಭೇಟಿ ನೀಡಿದ್ದು ಈ ಶಾಲಾ ಕೊಠಡಿಗಳನ್ನು ಪುನರ್ ನಿರ್ಮಿಸಿ, ದುರಸ್ಥಿಗೆ ಬಿಡುಗಡೆಯಾಗಿರುವ ಅನುದಾನದಲ್ಲಿ ತುರ್ತು ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸೂಚನೆ ನೀಡಿರುವುದಾಗಿ ತಿಳಿಸಿದರು. ಶಾಲೆಗಳಲ್ಲಿ ನೀರು ನಿಂತಿರುವ ಹಿನ್ನೆಲೆಯಲ್ಲಿ ಈ ಶಾಲಾ ಕೊಠಡಿಗಳನ್ನು ಪ್ರವೇಶಿಸುವುದು ಸಹ ಕಷ್ಟಕರವಾಗಿರುವ ಹಿನ್ನೆಲೆಯಲ್ಲಿ ಪರ್ಯಾಯ ವ್ಯವಸ್ಥೆಗೆ ಸೂಚನೆ ನೀಡಲಾಗಿದೆ. ದುರಸ್ಥಿ ಕಾರ್ಯ ಪೂರ್ಣಗೊಳ್ಳುವರೆಗೆ ಶಾಲಾ ಚಟುವಟಿಕೆಗಳು ನಿರಂತರವಾಗಿ ನಡೆಯುವಲ್ಲಿ ಎಲ್ಲಾ ಕ್ರಮ ವಹಿಸಲಾಗಿದೆ ಎಂದರು.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಸರ್ಕಾರಿ ಶಾಲೆಯ ಮರು ನಿರ್ಮಾಣ ಕಾರ್ಯಕ್ಕೆ ಬೆಂಗಳೂರಿನ ಪಿ.ಇ.ಎಸ್. ಸಂಸ್ಥೆಯು ಮುಂದೆ ಬಂದಿದ್ದು, ಇಷ್ಟರಲ್ಲಿಯೇ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಸಚಿವರು ತಿಳಿಸಿದರು.

ಇದೇ ಅಕ್ಟೋಬರ್ 30ರಂದು ಕಲ್ಯಾಣ ಕರ್ನಾಟಕ ಪ್ರದೇಶದ ಪ್ರಾದೇಶಿಕ ಆಯುಕ್ತರು, ಅಪರ ಆಯುಕ್ತರು, ಜಿಲ್ಲಾ ಉಪ ನಿರ್ದೇಶಕರುಗಳು ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆಯನ್ನು ನಡೆಸಿ ಕಲ್ಯಾಣ ಕರ್ನಾಟಕ ಪ್ರದೇಶದ ಎಸ್.ಎಸ್.ಎಲ್.ಸಿ. ಫಲಿತಾಂಶವನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ಸಮಾಲೋಚನಾ ಸಭೆ ನಡೆಸಿ ನಿರ್ದೇಶನಗಳನ್ನು ನೀಡುವುದಾಗಿ ಸಚಿವರು ಮಾಹಿತಿ ನೀಡಿದರು. ಅಂತೆಯೇ ದಿನಾಂಕ 08/11/2019 ರಂದು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು, ಉಪ ನಿರ್ದೇಶಕರೊಂದಿಗೆ ವಿಡಿಯೋ ಸಂವಾದ ನಡೆಸಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಕ್ಕೆ ತೆಗೆದುಕೊಳ್ಳಬೇಕಾದ ಗುಣಾತ್ಮಕ ಕ್ರಮಗಳ ಕುರಿತಂತೆ ನಿರ್ದೇಶನಗಳನ್ನು ನೀಡುವುದಾಗಿ ಸಚಿವರು ತಿಳಿಸಿದರು.

ದಿನಾಂಕ 08/11/2019 ರಂದು ಶಿಕ್ಷಣ ಸಚಿವರು ತಮ್ಮ ಮಹಾತ್ಮಕಾಂಕ್ಷೆಯ 'ಸಂವೇದನ' ಸಾರ್ವಜನಿಕರೊಂದಿಗೆ ಶಿಕ್ಷಕರು, ವಿದ್ಯಾರ್ಥಿಗಳೊಂದಿಗೆ ಫೋನ್ ಇನ್ ಸಂವಾದ ನಡೆಸುವ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿರುವುದಾಗಿ ಘೋಷಿಸಿದರು. ಸಾರ್ವಜನಿಕರು, ವಿದ್ಯಾರ್ಥಿಗಳು, ಶಿಕ್ಷಕರು, ತಮ್ಮೊಂದಿಗೆ ನೇರವಾಗಿ ಮಾತನಾಡಿ ತಮ್ಮ ಕುಂದು ಕೊರತೆಗಳನ್ನು ಹಂಚಿಕೊಳ್ಳಬಹುದಾಗಿದೆಯೆಂದು ಸಚಿವ ಸುರೇಶ್‌‌ಕುಮಾರ್ ತಿಳಿಸಿದರು. ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರೊಂದಿಗೆ ಖುದ್ದಾಗಿ ಶಾಲಾ ಭೇಟಿಯನ್ನು ಕೈಗೊಂಡು ಕಡ್ಡಾಯ ಕನ್ನಡ ಕಲಿಕಾ ಕಾಯ್ದೆಯ 2015ರ ಸಮರ್ಪಕ ಅನುಷ್ಠಾನವಾಗುತ್ತಿರುವ ಬಗ್ಗೆ ಇಷ್ಟರಲ್ಲಿಯೇ ಪರಿಶೀಲನೆ ನಡೆಸುವುದಾಗಿ ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT