ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧಾರಕ ಸುಧಾಕರ

Last Updated 27 ಫೆಬ್ರುವರಿ 2020, 19:50 IST
ಅಕ್ಷರ ಗಾತ್ರ

ಗೌರವರ್ಣ. ಮಟ್ಟಸವಾದ ಎತ್ತರ. ಕನ್ನಡಕದ ಹಿಂದಿನ ಕಣ್ಣುಗಳ ತೀಕ್ಷ್ಣ ನೋಟ. ಮಗುವಿನ ನಿಷ್ಕಲ್ಮಷ ನಗೆಯನ್ನು ನೆನಪಿಗೆ ತರುವಂಥ ಬಾಯಿ ತುಂಬ ನಗು, ಸ್ನೇಹಶೀಲ ವ್ಯಕ್ತಿತ್ವ...

ನಾಲ್ಕು ವೇದಗಳ ಸಾರವನ್ನು ಕೇವಲ 28ರ ವಯಸ್ಸಿನಲ್ಲಿಯೇ ಜೀರ್ಣಿಸಿಕೊಂಡು ‘ಚತುರ್ವೇದೀ’ ಎಂಬ ಕೌಟುಂಬಿಕ ನಾಮವನ್ನು ಅನ್ವರ್ಥಮಾಡಿಕೊಂಡ ಪ್ರತಿಭಾವಂತ ಸುಧಾಕರ ‘ಚತುರ್ವೇದಿ’ಗಳು ಶತಾಯುಷಿಯಾಗಿ ಬದುಕಿದವರು. ಕಡೆಯವರೆಗೂ ಬದುಕನ್ನು ಅತಿಯಾಗಿ ಪ್ರೀತಿಸುತ್ತಿದ್ದುದೇ ಇವರ ದೀರ್ಘ ಬದುಕಿನ ಗುಟ್ಟು.

ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿ, ವೇದಾಭ್ಯಾಸಕ್ಕಾಗಿಹರಿದ್ವಾರದ ಕಾಂಗಡಿ ಗುರುಕುಲಕ್ಕೆ ಹೊರಟ ಸುಧಾಕರರು ವೇದಾಧ್ಯಯನದ ನಂತರ ಸ್ವಾಮಿ ಶ್ರದ್ಧಾನಂದರ ಶಿಷ್ಯರಾಗಿ ಅವರ ಮಾರ್ಗದರ್ಶನದಲ್ಲಿದೇಶಸೇವೆಯ ಚಟುವಟಿಕೆಗಳಲ್ಲಿ ತೊಡಗಿಕೊಂಡದ್ದು ಅವರ ಬದುಕಿನ ಪ್ರಮುಖ ಹಂತ. ಆದರೂ ಅವರ ಮೊದಲ ಆಯ್ಕೆ ವೇದಗಳ ಪ್ರಸಾರ, ಪ್ರಚಾರ; ನಂತರ ದೇಶಸೇವೆ. ಎರಡನ್ನೂ ಅತ್ಯಂತ ಸಮರ್ಥವಾಗಿ ನಡೆಸಿಕೊಂಡುಹೋದ ಸುಧಾಕರರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು 13 ವರ್ಷಗಳಿಗೂ ಹೆಚ್ಚು ಕಾಲ ರಾಜಕೀಯ ಬಂದಿಯಾಗಿದ್ದುದು ಅವರ ದೇಶಪ್ರೇಮಕ್ಕೆ ನಿದರ್ಶನ.

ಕ್ರಾಂತಿಕಾರಕ ವಿಚಾರಧಾರೆಯನ್ನುಬೆಳೆಸಿಕೊಂಡಿದ್ದ ಇವರದ್ದು ಸಂಪೂರ್ಣವೈಚಾರಿಕ ಮನೋಭಾವ. ಜಾತಿ
ಭೇದವೂ ಸೇರಿದಂತೆ ಅನೇಕ ಮೂಢನಂಬಿಕೆಗಳನ್ನು ಬಲವಾಗಿ ವಿರೋಧಿಸುತ್ತಿದ್ದ ಇವರು ಸತ್ಯವನ್ನು ಹೇಳಲು ಯಾವಾಗಲೂ ಹಿಂಜರಿಯುತ್ತಿರಲಿಲ್ಲ. ಮಹಾತ್ಮಾ ಗಾಂಧೀಜಿಯವರು ಕೆಲವು ಸಲ ತಪ್ಪು ನಡೆ ಇಟ್ಟಾಗಲೂ ಅದನ್ನು ಅವರೆದುರೇ ಕಟುವಾದ ನುಡಿಗಳಿಂದ ಟೀಕಿಸುತ್ತಿದ್ದ ಎದೆಗಾರಿಕೆ ಇವರದ್ದು.

ಸಂಸ್ಕೃತ, ಕನ್ನಡ, ಹಿಂದಿ, ಇಂಗ್ಲಿಷ್‌ – ಈ ನಾಲ್ಕು ಭಾಷೆಗಳಲ್ಲಿ ಸಂಪೂರ್ಣ ಪ್ರಭುತ್ವ ಇವರದಾಗಿತ್ತು. ವೇದಗಳಿಗೆ ಸಂಬಂಧಿಸಿದಂತೆ ಸುಮಾರು ನಲವತ್ತು ಗ್ರಂಥಗಳನ್ನು ರಚಿಸಿದ್ದಾರೆ. ಜೀವನದ ಯಾವುದೇ ಸಮಸ್ಯೆಯನ್ನು ತಲೆಯಲ್ಲಿ ತುಂಬಿಕೊಂಡು ಇವರ ಬಳಿಗೆ ಬಂದವರೊಡನೆ ನಗುನಗುತ್ತ ಮಾತನಾಡಿ, ಸಮಸ್ಯೆಯ ವಿವರ ತಿಳಿದು, ಪರಿಹಾರವನ್ನು ತಿಳಿಸಿ ನಗುತ್ತ ತೆರಳುವಂತೆ ಮಾಡುತ್ತಿದ್ದುದು ಇವರ ವೈಶಿಷ್ಟ್ಯ. ‘ನಿನ್ನ ಬಳಿಗೆ ಅಳುತ್ತ ಬರುವವರನ್ನು ನಗುವಂತೆ ಮಾಡಿ ಕಳುಹಿಸು’ ಎಂಬ ತಮ್ಮ ಗುರು ಸ್ವಾಮಿ ಶ್ರದ್ಧಾನಂದರ ಆದೇಶವನ್ನು ಕಡೆಯವರೆಗೂ ಪಾಲಿಸಿದರು. ಅಂತೆಯೇ ಬಾಳಿದರು.

ವಾರಕ್ಕೊಮ್ಮೆ ಇವರ ಮನೆಯಲ್ಲಿ ನಡೆಯುತ್ತಿದ್ದ ಸತ್ಸಂಗದಲ್ಲಿ ಅಗ್ನಿಹೋತ್ರ, ನಂತರ ಯಾವುದಾದರೊಂದು ವೇದಮಂತ್ರದ ವಿವರಣೆ ಇರುತ್ತಿತ್ತು. ಅವಿರತವಾಗಿ ವೇದ ಪ್ರಸಾರವಾಗುತ್ತಿರಬೇಕೆಂಬುದು ಅವರ ಧ್ಯೇಯ. ಅವುಗಳು ಸಾರುವ ಸಾರ್ವಕಾಲಿಕ ಜೀವನ ಮೌಲ್ಯಗಳನ್ನು ಎಲ್ಲರೂ ತಿಳಿಯಬೇಕೆಂಬುದು ಅವರ ಅಪೇಕ್ಷೆ.

ಗಾಂಧೀಜಿಯವರು ಇವರ ಪಾಂಡಿತ್ಯಕ್ಕೆ, ಕ್ರಾಂತಿಕಾರಕ ವಿಚಾರಗಳಿಗೆ ಮಾರುಹೋಗಿದ್ದರೆ, ಇವರು ಗಾಂಧೀಜಿಯವರ ವಿಚಾರಧಾರೆಯಿಂದ ಆಕರ್ಷಿತರಾಗಿದ್ದರು. ಗಾಂಧೀಜಿಯವರನ್ನು ಹಲವು ಬಾರಿ ಖಂಡಿಸುತ್ತಿದ್ದರೂ ಅವರ ಪಾಲಿಗೆ ಇವರು ಪ್ರೀತಿಯ ‘ಕರ್ನಾಟಕೀ’ ಆಗಿದ್ದರು.

ಎರಡೂ ಕೈಗಳಲ್ಲಿ ಒಂದೇ ವೇಗದಲ್ಲಿ ಬರೆಯಬಲ್ಲವರಾಗಿದ್ದ ಚತುರ್ವೇದಿಗಳದ್ದು ನಿರಂತರ ಅಧ್ಯಯನಶೀಲ ಪ್ರವೃತ್ತಿಯಾಗಿತ್ತು. ಜೀವನದ ಎಷ್ಟೆಲ್ಲ ಕಷ್ಟಗಳನ್ನೂ ಎದುರಿಸಿಯೂ ಸಮಾಜಮುಖಿಯಾಗಿ, ಸಮಾಜಸುಧಾರಕರಾಗಿ ಅವರು ನೀಡಿದ ಕೊಡುಗೆ ದೊಡ್ಡದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT