ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಸಾಮಾಜಿಕವಾಗಿ ಪ್ರಬಲ, ಸಾಂಸ್ಕೃತಿಕವಾಗಿ ದುರ್ಬಲ

ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕನ್ನಡದ ಸ್ಥಿತಿಗತಿ ಹೇಗಿದೆ?
Last Updated 31 ಅಕ್ಟೋಬರ್ 2019, 5:40 IST
ಅಕ್ಷರ ಗಾತ್ರ

ಚಾಮರಾಜನಗರ: ‘ಹಿಂದುಳಿದ ಜಿಲ್ಲೆ’ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳಲು ಪ್ರಯತ್ನಿಸುತ್ತಿರುವ ಗಡಿಜಿಲ್ಲೆ ಚಾಮರಾಜನಗರದಲ್ಲಿ ಕನ್ನಡದ ಸ್ಥಿತಿಗತಿ ಸಾಮಾಜಿಕವಾಗಿ ಉತ್ತಮವಾಗಿದ್ದರೂ, ಸಾಂಸ್ಕೃತಿಕವಾಗಿ ಇನ್ನಷ್ಟು ಸುಧಾರಿಸಬೇಕಿದೆ.

ಭೌಗೋಳಿಕವಾಗಿ ಹೇಳುವುದಾದರೆ, ಜಿಲ್ಲೆಯ ಗಡಿ ಭಾಗಗಳಲ್ಲಿ ನೆಲೆ ಕಂಡು ಕೊಳ್ಳುತ್ತಿರುವ ನೆರೆ ರಾಜ್ಯಗಳ ಜನರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಅಲ್ಲಿನ ಶ್ರೀಮಂತರು ಇಲ್ಲಿಗೆ ಬಂದು ಎಕರೆ‌ಗಟ್ಟಲೆ ಜಮೀನು ಖರೀದಿ ಮಾಡಿ ಕೃಷಿ ಮಾಡುತ್ತಿದ್ದಾರೆ.

ಜಿಲ್ಲೆಯು ಚಾಮರಾಜನಗರ ತಾಲ್ಲೂಕಿನಲ್ಲಿ ತಮಿಳುನಾಡು, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಕೇರಳ ಮತ್ತು ತಮಿಳುನಾಡು, ಹನೂರು ತಾಲ್ಲೂಕಿನಲ್ಲಿ ತಮಿಳುನಾಡು ರಾಜ್ಯದೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಇಲ್ಲಿ ಗಡಿ ವಿವಾದ ಇದುವರೆಗೆ ಉದ್ಭವಿಸಿಲ್ಲ.ತೀರಾ ಗಡಿ ಪ್ರದೇಶಗಳನ್ನು ಬಿಟ್ಟು ಉಳಿದ ಕಡೆಗಳಲ್ಲಿ ಜನರು ಕನ್ನಡವನ್ನೇ ಪ್ರಧಾನವಾಗಿ ಮಾತನಾಡುತ್ತಾರೆ. ಗಡಿ ಪ್ರದೇಶಗಳಲ್ಲೂ ಅಷ್ಟೇ; ಜನರು ಎರಡೂ ರಾಜ್ಯಗಳ ಭಾಷೆಗಳಲ್ಲೂ ಸಂವಹನ ನಡೆಸುತ್ತಾರೆ.

ಗಡಿಜಿಲ್ಲೆಯಲ್ಲಿ ಕನ್ನಡದ ವಾತಾವರಣಕ್ಕೆ ಧಕ್ಕೆಯಾಗಿಲ್ಲ ಎಂಬುದು ಕನ್ನಡ ಹೋರಾಟಗಾರರ ಅಂಬೋಣ.‘ನಮ್ಮಲ್ಲಿ ಬೆಳಗಾವಿಯ ಸ್ಥಿತಿ ಇಲ್ಲ. ಕನ್ನಡ ಸಂಘಟನೆಗಳು ಕನ್ನಡ ಪರ ಕೆಲಸದಲ್ಲಿ ನಿರತವಾಗಿವೆ. ಕನ್ನಡಕ್ಕೆ ಚ್ಯುತಿ ಬಂದಾಗಲೆಲ್ಲ ಹೋರಾಟ ಮಾಡುತ್ತಿವೆ’ ಎಂದು ಸಾಹಿತಿ ಸೋಮಶೇಖರ ಬಿಸಿಲ್ವಾಡಿ ಅವರು ಹೇಳುತ್ತಾರೆ.

‘ರಾಜ್ಯದಲ್ಲಿರುವ 19 ಗಡಿ ಜಿಲ್ಲೆಗಳ ಪೈಕಿ ಚಾಮರಾಜನಗರದಲ್ಲಿ ಕನ್ನಡ ಗಟ್ಟಿಯಾಗಿದೆ. ಮೂರು ಕಡೆಗಳಲ್ಲಿ ನೆರೆಯ ರಾಜ್ಯಗಳೊಂದಿಗೆ ಗಡಿಯನ್ನು ಹಂಚಿಕೊಂಡಿದ್ದರೂ ಕನ್ನಡದ ಕಾಳಜಿ ಇಲ್ಲಿ ಉಳಿದ ಕಡೆಗಳಿಂದ ಕಡೆಗಿಂತ ಹೆಚ್ಚಿದೆ’ ಎಂದು ಕನ್ನಡ ಹೋರಾಟಗಾರ ಚಾ.ರಂ.ಶ್ರೀನಿವಾಸ ಗೌಡ ಹೇಳುತ್ತಾರೆ.

ಸಾಂಸ್ಕೃತಿಕ ಕನ್ನಡ ಇಲ್ಲ: ಜನಪದ ಕಲೆಗಳ ತವರು ಎಂದೇ ಗುರುತಿಸಿಕೊಂಡಿರುವ ಚಾಮರಾಜನಗರ ಜಿಲ್ಲೆಯು ಮಂಟೇಸ್ವಾಮಿ ಕಾವ್ಯ, ಮಲೆ ಮಹದೇಶ್ವರ ಕಾವ್ಯಗಳ ತವರು. ಫಿನ್ಲೆಂಡ್‌ನ ‘ಕಲೇವಾಲ’ ಕಾವ್ಯದ ನಂತರ ಜಗತ್ತಿನ ಅತ್ಯಂತ ದೊಡ್ಡ ಕಾವ್ಯ ಎಂಬ ಹೆಗ್ಗಳಿಕೆ ಮಹದೇಶ್ವರ ಕಾವ್ಯಕ್ಕಿದೆ.ಜಿಲ್ಲೆ ಸಾಹಿತ್ಯಿಕವಾಗಿಯೂ ಶ್ರೀಮಂತವಾಗಿದೆ. 400–500 ವರ್ಷಗಳ ಹಿಂದೆಯೇ ಹಲವು ಶ್ರೇಷ್ಠ ಸಾಧಕರುಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ಮುಪ್ಪಿನ ಷಡಕ್ಷರಿ, ಸಂಚಿ ಹೊನ್ನಮ್ಮ, ತೋಂಟದ ಸಿದ್ಧಲಿಂಗಯ್ಯ ಯತಿ, ಷಡಕ್ಷರ ದೇವ... ಹೀಗೆ ಸಾಧಕರ ಪಟ್ಟಿ ಸಾಗುತ್ತದೆ. ಆದರೆ, ಅವರನ್ನು ಗುರುತಿಸುವ ಕೆಲಸ ಆಗಿಲ್ಲ.

‘ಅರಣ್ಯ ಪ್ರದೇಶ ಹೆಚ್ಚಿರುವ ಈ ಗಡಿ ಜಿಲ್ಲೆ ತೀವ್ರವಾದ ರಾಜಕೀಯ ಅಸಡ್ಡೆಗೆ ಗುರಿಯಾಗಿದೆ.ಸಾಹಿತ್ಯಿಕವಾಗಿ ಜಿಲ್ಲೆ ಶ್ರೀಮಂತವಾಗಿದೆ. ಕವಿ ಷಡಕ್ಷರಿ, ಸಂಚಿ ಹೊನ್ನಮ್ಮ, ತೋಂಟದ ಸಿದ್ಧಲಿಂಗಯ್ಯ ಯತಿ... ಮುಂತಾದ ಸಾಹಿತಿಗಳನ್ನು ಹಾಗೂ ಅವರ ಕೊಡುಗೆಗಳನ್ನು ಸ್ಮರಿಸುವ ಕೆಲಸ ಜಿಲ್ಲೆಯಲ್ಲಿ ನಡೆಯುತ್ತಿಲ್ಲ. ರಸ್ತೆ, ವೃತ್ತಗಳಿಗೆ ಇವರ ಹೆಸರುಗಳನ್ನು ಇಡಬೇಕು’ ಎಂದು ಪ್ರತಿಪಾದಿಸುತ್ತಾರೆ ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ.ಜಿ.ಎಸ್‌.ಜಯದೇವ.

‘ಕನ್ನಡ ಪರ ಸಂಘಟನೆಗಳು ಕನ್ನಡದ ಉಳಿವಿಗಾಗಿ ಕೆಲಸ ಮಾಡುತ್ತಿವೆ. ನಾಟಕಗಳು ಇಲ್ಲಿ ಈಗಲೂ ಜನಪ್ರಿಯ. ಸಾಮಾಜಿಕವಾಗಿ ಕನ್ನಡದ ಬಗ್ಗೆ ಅಸಡ್ಡೆ ಇಲ್ಲಿ ಕಂಡು ಬರುತ್ತಿಲ್ಲ. ಆದರೆ, ಚಾರಿತ್ರಿಕವಾಗಿ ಪ್ರಮುಖರಾಗಿರುವವರನ್ನು ಗುರುತಿಸಿ ಜನರಿಗೆ ಅವರ ಬಗ್ಗೆ ತಿಳಿ ಹೇಳುವ ಕೆಲಸ ಆಗಬೇಕು. ಹೊರಗಡೆಯಿಂದ ಸಾಹಿತಿಗಳನ್ನು ಕರೆಸಿ ಕಾರ್ಯಕ್ರಮಗಳನ್ನು ನಡೆಸಬೇಕು. ಜಿಲ್ಲೆಯ ಸಾಂಸ್ಕೃತಿಕ ಕನ್ನಡವನ್ನು ಜನಪ್ರಿಯಗೊಳಿಸಬೇಕು’ ಎಂದು ಅವರು ಅಭಿಪ್ರಾಯಪಡುತ್ತಾರೆ.

ಕನ್ನಡ ಭವನ ಬೇಕು: ‘ಬೇರೆ ಬೇರೆ ಜಿಲ್ಲೆಗಳಲ್ಲಿ ಕನ್ನಡ ಭವನ ಇದೆ. ನಮ್ಮಲ್ಲೂ ಕನ್ನಡಕ್ಕಾಗಿಯೇ ಪ್ರತ್ಯೇಕ ಭವನ ಬೇಕಾಗಿದೆ. ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸಿಲ್ಲ. ಗಡಿ ಜಿಲ್ಲೆಯಲ್ಲಿ ಕನ್ನಡ ಪರ ಕಾರ್ಯಕ್ರಮಗಳನ್ನು ಸರ್ಕಾರ ಹೆಚ್ಚು ನಡೆಸಬೇಕು. ವಿಶ್ವ ಕನ್ನಡ ಸಮ್ಮೇಳನ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸುತ್ತಾರೆ ಚಾರಂ ಶ್ರೀನಿವಾಸ ಗೌಡ.

ಹೇಗಿವೆ ಕನ್ನಡದ ಶಾಲೆಗಳು?: 2011ರ ಪ್ರಕಾರ ಶೇ 61.43ರಷ್ಟು ಸಾಕ್ಷರತೆ ಹೊಂದಿರುವ ಜಿಲ್ಲೆಯಲ್ಲಿ850ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿವೆ. ಹೆಚ್ಚು ಅಭಿವೃದ್ಧಿ ಕಾಣದ ಹಾಗೂ ಬಡವರೇ ಹೆಚ್ಚಾಗಿರುವ ಗ್ರಾಮೀಣ ಪ್ರದೇಶಗಳಿಂದಲೇ ಕೂಡಿರುವ ಜಿಲ್ಲೆಯಲ್ಲಿ ಜನರು ಈಗಲೂ ಸರ್ಕಾರಿ ಶಾಲೆಗಳನ್ನೇ ಹೆಚ್ಚು ಅವಲಂಬಿಸಿದ್ದಾರೆ. ಇನ್ನು ಕೆಲವು ವರ್ಷಗಳಲ್ಲಿ ಈ ಸ್ಥಿತಿ ಬದಲಾಗುವ ಮುನ್ಸೂಚನೆಯೂ ಈಗ ಕಾಣುತ್ತಿದೆ.

ಕೆಲವು ವರ್ಷಗಳಿಂದೀಚೆಗೆ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಹೆಚ್ಚು ಇಂಗ್ಲಿಷ್‌ ಮಾಧ್ಯಮ ಶಾಲೆಗಳು ಆರಂಭವಾಗುತ್ತಿವೆ. ಜನರು ಖಾಸಗಿ ಶಾಲೆಗಳತ್ತ ನಿಧಾನವಾಗಿ ಮುಖಮಾಡಲು ಆರಂಭಿಸಿದ್ದಾರೆ. ಪರಿಣಾಮವಾಗಿಗಡಿ ಪ್ರದೇಶ ಸೇರಿದಂತೆ ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ನಿಧಾನವಾಗಿ ಕಡಿಮೆಯಾಗಲು ಆರಂಭವಾಗಿದೆ.

‘ಗಡಿಯ ಹೊರಗಡೆ ಕನ್ನಡ ಶಾಲೆಗಳಿಗೆ ಈಗಾಗಲೇ ಕುತ್ತು ಬಂದಿದೆ. ಜಿಲ್ಲೆಯ ಗಡಿ ಪ್ರದೇಶಗಳಲ್ಲೂ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿವೆ. ನಮ್ಮಲ್ಲಿ ಶತಮಾನ ಪೂರೈಸಿರುವ ಹಲವು ಶಾಲೆಗಳು ಇವೆ. ಜಿಲ್ಲೆಯಲ್ಲಿ ಕನ್ನಡ ಉಳಿಯಬೇಕಾದರೆ, ಕನ್ನಡ ಶಾಲೆಗಳನ್ನು ಉಳಿಸಬೇಕು. ಕನ್ನಡ ಶಾಲೆಗಳು ಅಭಿವೃದ್ಧಿಯಾದರೆ ಕನ್ನಡವೂ ಅಭಿವೃದ್ಧಿಯಾಗುತ್ತದೆ’ ಎಂದು ಪ್ರೊ. ಜಯದೇವ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಗಡಿ ಪ್ರದೇಶಗಳಿಗೆ ಹೋಲಿಸಿದರೆ ಪಟ್ಟಣ, ನಗರ ಪ್ರದೇಶಗಳಲ್ಲಿ ಶಾಲೆಗಳು ಹೆಚ್ಚು ಮುಚ್ಚುತ್ತಿವೆ. ಗಡಿ ಭಾಗದ ಶಾಲೆಗಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆ ಹಲವು ಕಾರಣಗಳಿವೆ. ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ, ಸಮವಸ್ತ್ರ ಸೇರಿದಂತೆ ಹಲವು ಸೌಲಭ್ಯಗಳು ಕೊಡುತ್ತಿದ್ದರೂ ಪೋಷಕರು ಗುಣಮಟ್ಟದ ಶಿಕ್ಷಣ ಹಾಗೂ ಇಂಗ್ಲಿಷ್‌ ಶಿಕ್ಷಣವನ್ನು ಬಯಸುತ್ತಿದ್ದಾರೆ. ನಮ್ಮ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಪಟ್ಟಣದಲ್ಲಿರುವ ಖಾಸಗಿ ಶಾಲೆಗಳು ತಮ್ಮ ವಾಹನಗಳನ್ನು ಗ್ರಾಮೀಣ ಪ್ರದೇಶಗಳಿಗೂ ಕಳುಹಿಸುತ್ತಿವೆ. ಹಾಗಾಗಿ ಮಕ್ಕಳು ಖಾಸಗಿ ಶಾಲೆಗಳಿಗೆ ಸೇರುತ್ತಿದ್ದಾರೆ. ಇದರ ಜೊತೆಗೆ ಗಡಿ ಪ್ರದೇಶದಲ್ಲಿರುವ ಕುಟುಂಬಗಳು ವಿಸ್ತರಣೆಯಾಗುತ್ತಿಲ್ಲ. ಒಂದು ಕುಟುಂಬ ಒಬ್ಬ ಇಲ್ಲವೇ ಇಬ್ಬರು ಮಕ್ಕಳನ್ನು ಮಾತ್ರ ಹೊಂದಿರುತ್ತದೆ’ ಎಂಬುದು ಸೋಮಶೇಖರ ಬಿಸಲ್ವಾಡಿ ಅವರ ವಾದ.

‘ಗಡಿಯ ಹೊರಗೆ ಕನ್ನಡ ಶಾಲೆಗಳು ಮುಚ್ಚುತ್ತಿವೆ. ತಮಿಳುನಾಡಿನ ತಾಳವಾಡಿ ಸುತ್ತಮುತ್ತ 37 ಹಳ್ಳಿಗಳಿವೆ. ಕನ್ನಡಿಗರೇ ಇಲ್ಲಿ ಹೆಚ್ಚಾಗಿದ್ದಾರೆ. ಇಲ್ಲಿ 38 ಕನ್ನಡ ಶಾಲೆಗಳಿತ್ತು. ಈಗ ಅವು 28ಕ್ಕೆ ಇಳಿದಿವೆ’ ಎಂದು ಹೇಳುವ ಅವರು, ಇದಕ್ಕೆ ಕಾರಣವನ್ನೂ ನೀಡುತ್ತಿದ್ದಾರೆ.

‘ತಮಿಳುನಾಡಿನಲ್ಲಿ ಸರ್ಕಾರಿ ಕೆಲಸ ಸಿಗಬೇಕಾದರೆ ತಮಿಳು ಮಾಧ್ಯಮದಲ್ಲಿ ಓದುವುದು ಕಡ್ಡಾಯ. ಹಿಂದೆ ಕನ್ನಡ ಹಾಗೂ ಇತರ ಮಾಧ್ಯಮದವರಿಗಾಗಿ, ತಮಿಳನ್ನು ಕಲಿಯುವುದಕ್ಕಾಗಿ ಪ್ರಮಾಣಪತ್ರದ ಕೋರ್ಸ್‌ ಅನ್ನು ಅಲ್ಲಿನ ಸರ್ಕಾರ ಪರಿಚಯಿಸಿತ್ತು. ಕನ್ನಡ ವಿದ್ಯಾರ್ಥಿಗಳು ಅದರಲ್ಲಿ ಉತ್ತೀರ್ಣರಾಗಲು ಕಷ್ಟ ಪಡುತ್ತಿದ್ದರು. ಹೇಗೂ ತಮಿಳುನಾಡಿನಲ್ಲೇ ನೆಲೆಸಿರುವುದರಿಂದ, ಅಲ್ಲೇ ಜೀವನ ಮಾಡಬೇಕಾಗಿರುವುದರಿಂದ ಕನ್ನಡಿಗರು ಕೂಡ ತಮಿಳು ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಆರಂಭಿಸಿದರು. ‌ಇದರಿಂದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಯಿತು. ಹಾಗಾಗಿ ಕೆಲವು ಮುಚ್ಚಿ ಹೋದವು’ ಎಂದು ಅವರು ವಿವರಿಸುತ್ತಾರೆ.

ಗಡಿಪ್ರದೇಶಗಳಲ್ಲಿ ಹೊರ ರಾಜ್ಯದವರ ಕೃಷಿ

ಜಿಲ್ಲೆಯ ಗಡಿ ಪ್ರದೇಶದಲ್ಲಿ ನೆರೆ ರಾಜ್ಯದವರು ಭೂಮಿ ಖರೀದಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಚಾಮರಾಜನಗರ ತಾಲ್ಲೂಕಿಗೆ ಹೊಂದಿಕೊಂಡಿರುವ ತಾಳವಾಡಿ ಭಾಗದಲ್ಲಿ ತಮಿಳುನಾಡಿನವರು ಜಿಲ್ಲೆಯ ರೈತರ ಜಮೀನುಗಳನ್ನು ಗುತ್ತಿಗೆಗೆ ಪಡೆಯುತ್ತಿದ್ದಾರೆ. ಖರೀದಿಯೂ ಮಾಡುತ್ತಿದ್ದಾರೆ. ಗುಂಡ್ಲುಪೇಟೆ ತಾಲ್ಲೂಕಿನ ಗಡಿ ಪ್ರದೇಶದಲ್ಲಿ ಕೇರಳದವರು ಈ ರೀತಿ ಮಾಡುತ್ತಿದ್ದಾರೆ. ಹನೂರು ಭಾಗಗಳಲ್ಲಿ ಆಂಧ್ರ ಮತ್ತು ತಮಿಳುನಾಡಿನವರು ಜಮೀನು ಖರೀದಿಸಿ ಕೃಷಿ ಮಾಡುತ್ತಿದ್ದಾರೆ. ಸರ್ಕಾರದ ಜಾಗವನ್ನು ಒತ್ತುವರಿ ಮಾಡಿ ಕೃಷಿ ಮಾಡುತ್ತಿರುವ ಪ್ರಕರಣಗಳೂ ನಡೆದಿವೆ.

‘ಹೊರ ರಾಜ್ಯಗಳಿಂದ ಬರುವವರು 30 ಎಕರೆ, 40 ಎಕರೆ ಜಾಗ ಕೊಂಡು ಇಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ನಮ್ಮ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿ, ಅವರ ರಾಜ್ಯದ ವ್ಯವಸ್ಥೆಯಲ್ಲಿ ಕಂದಾಯ ಕಟ್ಟುವವರಿದ್ದಾರೆ.ಹೊಗೆನಕಲ್‌ ಜಲಪಾತದ ಬಳಿಯೂ ಇದೇ ಪರಿಸ್ಥಿತಿ ಇದೆ. ಅಲ್ಲಿ ಎರಡೂ ರಾಜ್ಯಗಳ ಗಡಿಯನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ. ಆದರೆ, ತಮಿಳುನಾಡಿನ ವ್ಯಾಪಾರಿಗಳು ನಮ್ಮ ಜಾಗಕ್ಕೆ ಅತಿಕ್ರಮಣ ಮಾಡುತ್ತಿದ್ದಾರೆ. ಅಲ್ಲಿನ ಸರ್ಕಾರಕ್ಕೆ ತೆರಿಗೆ ಕಟ್ಟುತ್ತಿದ್ದಾರೆ. ನಾವು ಹಲವು ವರ್ಷಗಳಿಂದ ಈ ವಿಚಾರವನ್ನು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದೇವೆ. ಸ್ಪಷ್ಟವಾದ ಗಡಿಯನ್ನು ಮತ್ತೆ ನಿಗದಿ ಮಾಡುವಂತೆ ಮನವಿ ಮಾಡುತ್ತಿದ್ದೇವೆ. ಯಾರೂ ಗಮನ ಹರಿಸುತ್ತಿಲ್ಲ. ಇದು ಅತ್ಯಂತ ಗಂಭೀರ ವಿಚಾರ. ಈಗ ಇದು ಸಮಸ್ಯೆಯಾಗಿ ಕಾಣದಿರಬಹುದು. ಮುಂದೊಂದು ದಿನ ರಾಜ್ಯಗಳ ನಡುವೆ ಬಿಕ್ಕಟ್ಟು ಉಂಟು ಮಾಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ’ ಎಂದು ಎಚ್ಚರಿಸುತ್ತಾರೆ ಸೋಮಶೇಖರ ಬಿಸಲ್ವಾಡಿ.

ಹೆಸರಿಗಷ್ಟೇ ಕನ್ನಡ ಅನುಷ್ಠಾನ ಸಮಿತಿ

ಜಿಲ್ಲಾಧಿಕಾರಿಗಳ ನೇತೃತ್ವದ ಕನ್ನಡ ಅನುಷ್ಠಾನ ಸಮಿತಿ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ ಎಂಬುದು ಸಾಹಿತಿಗಳ ಕೊರಗು. ‘ನಿಯಮಿತವಾಗಿ ಸಭೆ ನಡೆಸಿ ಜಿಲ್ಲೆಯಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸುವ ಜವಾಬ್ದಾರಿ ಸಮಿತಿಯ ಮೇಲಿದೆ. ಆದರೆ, ಈ ಸಮಿತಿ ಸಭೆಯನ್ನೇ ಸೇರುವುದಿಲ್ಲ’ ಎಂದು ದೂರುತ್ತಾರೆ ಸೋಮಶೇಖರ ಬಿಸಲ್ವಾಡಿ.

‌‘ನಾಮಫಲಕಗಳಲ್ಲಿ ಕನ್ನಡವನ್ನೇ ದೊಡ್ಡದಾಗಿ ಬರೆಯಬೇಕು ಎಂಬ ನಿಯಮ ಇದೆ. ಆದರೆ, ಬಹುತೇಕ ಮಳಿಗೆಗಳ ಫಲಕಗಳಲ್ಲಿ ಇಂಗ್ಲಿಷ್‌ ಅಕ್ಷರಗಳೇ ದೊಡ್ಡದಾಗಿ ಕಾಣುತ್ತದೆ. ಕಟ್ಟುನಿಟ್ಟಾಗಿ ನಿಯಮ ಪಾಲನೆ ಆಗುತ್ತಿಲ್ಲ. ಇದರ ಮೇಲ್ವಿಚಾರಣೆ ನಡೆಸಬೇಕಾದ ಸ್ಥಳೀಯ ಆಡಳಿತಗಳೂ ಸುಮ್ಮನಿವೆ’ ಎಂಬುದು ಅವರ ಆಪಾದನೆ.

ಬ್ಯಾಂಕ್‌ ವ್ಯವಹಾರಗಳು ಕಷ್ಟ

ಜಿಲ್ಲೆಯಲ್ಲಿರುವ ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ವ್ಯವಹಾರ ಮಾಡುವುದು ಕಷ್ಟಕರವಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಜನರು ಬ್ಯಾಂಕ್‌ ವಹಿವಾಟಿಗೆ ತುಂಬಾ ಕಷ್ಟ ಪಡುತ್ತಿದ್ದಾರೆ. ಎಸ್‌ಬಿಐ ಸೇರಿದಂತೆ ಬಹುತೇಕ ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಖಾಸಗಿ ಬ್ಯಾಂಕ್‌ಗಳಲ್ಲಿ ಹೊರ ರಾಜ್ಯದ ಸಿಬ್ಬಂದಿಯೇ ಅಧಿಕವಾಗಿದ್ದಾರೆ. ರಾಜ್ಯದವರು ಒಬ್ಬರೋ ಇಬ್ಬರೋ ಇರುತ್ತಾರೆ. ತ್ರಿಭಾಷಾ ಸೂತ್ರ ನಿಯಮ ಜಾರಿಯಲ್ಲಿದ್ದರೂ, ಬ್ಯಾಂಕುಗಳ ಠೇವಣಿ ಇಡುವ, ಹಣ ತೆಗೆಯುವ ರಸೀದಿಗಳನ್ನು ಇಂಗ್ಲಿಷ್‌ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ಮುದ್ರಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT