ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ–ಧಾರವಾಡದಲ್ಲಿ ಮೈನಡುಗಿಸುವ ಚಳಿ: ಹೊದಿಕೆಯೊಂದಿಗೆ ಬನ್ನಿ..

Last Updated 2 ಜನವರಿ 2019, 20:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡದಲ್ಲಿ ಇದೇ 4ರಿಂದ ಮೂರು ದಿನ ನಡೆಯಲಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುತ್ತಿದ್ದೀರಾ? ಹಾಗಿದ್ದರೆ, ಬಟ್ಟೆಗಳೊಂದಿಗೆ ಚಳಿ ತಡೆಯುವಂತಹ ಹೊದಿಕೆ ತರುವುದನ್ನು ಮರೆಯಬೇಡಿ.

ನಾಲ್ಕೈದು ದಿನಗಳಿಂದ ಹುಬ್ಬಳ್ಳಿ, ಧಾರವಾಡ ಅವಳಿ ನಗರದಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದೆ. ರಾತ್ರಿ ವೇಳೆ 11ರಿಂದ 13 ಡಿಗ್ರಿ ಸೆಲ್ಸಿಯಸ್‌ ಇರುತ್ತಿದ್ದು, ತಣ್ಣನೇ ಗಾಳಿ ಬೀಸುತ್ತಿದೆ.

ಗಣ್ಯರು, ವಿಶೇಷ ಆಹ್ವಾನಿತರು, ಕೇಂದ್ರ ಸಾಹಿತ್ಯ ಪರಿಷತ್ತಿನ ಸಿಬ್ಬಂದಿಗೆ ಹುಬ್ಬಳ್ಳಿ– ಧಾರವಾಡದ ಹೋಟೆಲ್‌ಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಅವರಿಗೆ ಚಳಿ ಹೆಚ್ಚಿಗೆ ಬಾಧಿಸದು. ವಿವಿಧ ಜಿಲ್ಲೆಗಳ 16 ಸಾವಿರಕ್ಕೂ ಹೆಚ್ಚು ಮಂದಿ ಹೆಸರು ನೋಂದಾಯಿಸಿದ್ದಾರೆ. ಅವರಿಗೆ ವಸತಿ ನಿಲಯ, ಕಲ್ಯಾಣ ಮಂಟಪ, ಶಾಲೆಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಇಂತಹ ಕಡೆಗಳಲ್ಲಿ ಉಳಿದುಕೊಳ್ಳುವವರು ಚಳಿಯಿಂದ ಪಾರಾಗಲು ಹೊದಿಕೆ ತರುವುದು ಒಳ್ಳೆಯದು.

‘ಜಿಲ್ಲಾಡಳಿತದ ವತಿಯಿಂದ ಹಾಸಿಕೊಳ್ಳಲು ಜಮಖಾನ ಹಾಗೂ ಸ್ನಾನಕ್ಕೆ ಬಿಸಿ ನೀರು ಒದಗಿಸಲಾಗುತ್ತದೆ. ಹೊದಿಕೆಯನ್ನು ಅವರೇ ತರಬೇಕು. ಈ ವಿಷಯವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಿಗೆ ತಿಳಿಸಲಾಗಿದೆ’ ಎನ್ನುತ್ತಾರೆ ವಸತಿ ಸಮಿತಿಯ ಕಾರ್ಯದರ್ಶಿ ಅಜೀಜ್‌ ದೇಸಾಯಿ.

‘ಅವಳಿ ನಗರದ 87 ವಸತಿ ನಿಲಯಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಮೊದಲು ಅಲ್ಲಿನ ವಿದ್ಯಾರ್ಥಿಗಳನ್ನು ಊರಿಗೆ ಕಳುಹಿಸಿ ನೋಂದಾಯಿತ ಸದಸ್ಯರಿಗೆ ವಸತಿ ವ್ಯವಸ್ಥೆ ಮಾಡಲು ಯೋಜಿಸಲಾಗಿತ್ತು. ವಿದ್ಯಾರ್ಥಿಗಳನ್ನು ಊರಿಗೆ ಕಳುಹಿಸುವುದಕ್ಕೆ ವಿರೋಧ ವ್ಯಕ್ತವಾದ ಮೇಲೆ ಅವರೊಂದಿಗೆ ಸಾಹಿತ್ಯಾಸಕ್ತರಿಗೂ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ’ ಎಂದು ಅವರು ತಿಳಿಸಿದರು.

* ಸ್ವೆಟರ್ ಬಳಸಿ. ದಿನಕ್ಕೆ ನಾಲ್ಕೈದು ಬಾರಿ ಬಿಸಿಯಾದ ಚಹಾ, ಕಾಫಿ ಕುಡಿಯಿರಿ. ಕಾಯಿಸಿ ಆರಿಸಿದ ನೀರು ಕುಡಿಯಿರಿ
-ಡಾ.ಜಿ.ಬಿ. ಸತ್ತೂರ, ಹೃದ್ರೋಗ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT