ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೃಭಾಷೆ ಉಳಿವಿಗೆ ಆಡಳಿತ, ಕನ್ನಡಿಗರ ಸಂಘರ್ಷ

‘ಕನ್ನಡ ಕಟ್ಟುವ ಕೆಲಸದಲ್ಲಿ ಇಂಗ್ಲಿಷ್ ಮಾಧ್ಯಮ ಎಂಬ ದೊಡ್ಡ ಬಂಡೆಗಲ್ಲು’
Last Updated 4 ಜನವರಿ 2019, 20:23 IST
ಅಕ್ಷರ ಗಾತ್ರ

ಡಾ.ಶಂ.ಬಾ.ಜೋಶಿ ವೇದಿಕೆ (ಧಾರವಾಡ): ‘ಬರುವ ವರ್ಷದಿಂದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆ ಪ್ರಾರಂಭಿಸುವುದಾಗಿ ಸರ್ಕಾರ ಹೇಳಿರುವ ಈ ಸಂದರ್ಭದಲ್ಲಿ ಆಡಳಿತ ಮತ್ತು ಕನ್ನಡಿಗರ ನಡುವೆ ಸಂಘರ್ಷ ಏರ್ಪಟ್ಟಿದೆ’ ಎಂದು ಸಂಶೋಧಕ ಡಾ. ಸಂಗಮೇಶ ಸವದತ್ತಿಮಠ ಅವರು ಅಭಿಪ್ರಾಯಪ್ಟರು.

84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ. ಶಂ.ಬಾ. ಜೋಶಿ ವೇದಿಕೆಯಲ್ಲಿ ಶುಕ್ರವಾರ ಜರುಗಿದ ‘ಕನ್ನಡ ಕಟ್ಟುವಿಕೆ: ಸಾಂಸ್ಥಿಕ ಸಾಧನೆಗಳು ಮತ್ತು ನಿರೀಕ್ಷೆಗಳು’ ಎಂಬ ವಿಷಯ ಕುರಿತು ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಆಡಳಿತದ ಬಳಿ ಅಧಿಕಾರ ಇದೆ ಆದರೆ ಕನ್ನಡ ಕಟ್ಟುವ ಕನಸು ಇಲ್ಲ. ಸಾಹಿತಿಗಳ ಬಳಿ ಕನಸಿದೆ ಆದರೆ ಅದನ್ನು ಸಾಕಾರಗೊಳಿಸಲು ಅಧಿಕಾರವಿಲ್ಲ. ಮಠಗಳು, ಸಂಘಸಂಸ್ಥೆಗಳು, ಕಲಾವಿದರು, ಸಾಹಿತಿಗಳು ಕನ್ನಡ ಕಟ್ಟುವ ಕ್ರಿಯೆಯಲ್ಲಿ ಹೆಚ್ಚು ತೊಡಗಿದ್ದರೂ, ಕನ್ನಡ ಸಂಕಷ್ಟದಲ್ಲೇ ಇದೆ’ ಎಂದರು.

‘ಒಂದೊಮ್ಮೆ ಸರ್ಕಾರ ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭಿಸಿದರೆ, ಕನ್ನಡ ದ್ವಿತೀಯ ಭಾಷೆ ಸ್ಥಾನಮಾನಕ್ಕೆ ಕುಸಿಯಲಿದೆ. ಆಧುನಿಕ ಯುಗದಲ್ಲಿ ಭಾಷೆ ಕಲಿಯಲು ಇಂಟರ್‌ನೆಟ್ ಲಭ್ಯ. ಇಂಗ್ಲಿಷ್ ಮಾಧ್ಯಮ ಬೇಕು ಎಂಬುದು ಪೋಷಕರ ಅಪೇಕ್ಷೆಯಾದರೆ ಖಾಸಗಿ ಶಾಲೆಗಳಿವೆ. ಆದರೆ ಕನ್ನಡವನ್ನು ಉಳಿಸಲು ಏಕೈಕ ಅವಕಾಶವಾಗಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಾತ್ರ ಕನ್ನಡ ಕಡ್ಡಾಯಗೊಳಿಸಬೇಕು’ ಎಂದು ಸವದತ್ತಿಮಠ ಆಗ್ರಹಿಸಿದರು.

ಅನುದಾನಿತ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯ ವಿಷಯ ಕುರಿತು ಮಾತನಾಡಿದ ಡಾ. ಜಿ.ಎಂ.ಹೆಗಡೆ, ‘ಕರ್ನಾಟಕ ವಿಶ್ವವಿದ್ಯಾಲಯವೂ ಸೇರಿದಂತೆ ನೆರರಾಜ್ಯಗಳಲ್ಲಿ ಇರುವ ವಿಶ್ವವಿದ್ಯಾಲಯಗಳಲ್ಲಿನ ಕನ್ನಡ ಅಧ್ಯಯನ ಪೀಠಗಳಿಗೆ ದಶಕಗಳಿಂದ ಕನ್ನಡ ಪ್ರಾಧ್ಯಾಪಕರ ನೇಮಕಾತಿಯೇ ನಡೆದಿಲ್ಲ. ಬನಾರಸ್, ಅಲಿಗಡ, ಮುಂಬೈ ವಿಶ್ವವಿದ್ಯಾಲಯದಲ್ಲಿರುವ ಕನ್ನಡ ಅಧ್ಯಯನ ಪೀಠಕ್ಕೆ ನೇಮಕಾತಿ ನಡೆದಿಲ್ಲರುವುದು ಒಂದೆಡೆಯಾದರೆ, ನೆರೆಯ ಕೇರಳ ತನ್ನ ವಿಶ್ವವಿದ್ಯಾಲಯದಲ್ಲಿ ತುಳು ಅಧ್ಯಯನ ಪೀಠ ಆರಂಭಿಸಿರುವುದು ಒಡೆದು ಆಳುವ ನೀತಿಯಾಗಿದೆ’ ಎಂದು ಆರೋಪಿಸಿದರು.

ಕ್ರೈಸ್ತ ಮಿಷನರಿಗಳ ಕೊಡುಗೆ ಕುರಿತು ಮಾತನಾಡಿದ ಡಾ. ಎ.ವಿ.ನಾವಡ ಅವರು, ‘ಕನ್ನಡವನ್ನು ಕಟ್ಟುವ ಕೆಲಸದಲ್ಲಿ ವಿದೇಶಿಯರ ಪ್ರಯತ್ನವನ್ನು ಮೆಚ್ಚಲೇ ಬೇಕು’ ಎಂದರು.

ನನ್ನ ಜೀವನದ ಕರಾಳ ದಿನ

ತಮ್ಮ ವಿಚಾರ ಮಂಡಣೆಗೂ ಮೊದಲು ಬೇಸರದಿಂದಲೇ ಮಾತು ಆರಂಭಿಸಿದ ಡಾ. ಎ.ವಿ.ನಾವಡ, ‘ನನ್ನ ಜೀವನದ ಅತ್ಯಂತ ಕರಾಳ ದಿನ ಇದಾಗಿದೆ’ ಎಂದರು.

‘ಒಂದೆಡೆ ಲಕ್ಷಗಟ್ಟಲೆ ಜನ, ಆದರೆ ಕನ್ನಡ ಕಟ್ಟುವಿಕೆ ಕುರಿತು ಚರ್ಚೆಗೆ ಬೆರಳೆಣಿಕೆಯಷ್ಟು ಜನರು. ಬಂದವರಿಗೆ ನೀರು ಕೊಡಲೂ ಇಲ್ಲಿ ಜನರಿಲ್ಲ. ಅತಿಥಿಗಳನ್ನು ಬರಮಾಡಿಕೊಳ್ಳಲೂ ಜನರಿಲ್ಲ. ಇಂಥ ಅವ್ಯವಸ್ಥೆಯ ಸಮ್ಮೇಳನ ನಾನು ನೋಡಿಲ್ಲ. ಇವರು ಆಳ್ವಾಸ್ ನುಡಿಸಿರಿ ಒಮ್ಮೆ ನೋಡಿ ಬನ್ನಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT