ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಸಮ್ಮೇಳನ: ಮಹಿಳೆ, ಮಕ್ಕಳಿಗೆ ವಿಶೇಷ ಕಾಳಜಿ

Last Updated 3 ಜನವರಿ 2019, 9:51 IST
ಅಕ್ಷರ ಗಾತ್ರ

ಧಾರವಾಡ: 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವ ಮಹಿಳೆಯರ ಸುರಕ್ಷತೆ ಮತ್ತು ಮಕ್ಕಳ ಆರೈಕೆಗೆ ಜಿಲ್ಲಾಡಳಿತ ವಿಶೇಷ ಕಾಳಜಿ ವಹಿಸಿದೆ.

ಜ. 4ರಿಂದ ಮೂರು ದಿನಗಳ ಕಾಲ ನಡೆಯಲಿರುವ ಸಾಹಿತ್ಯ ಸಮ್ಮೇಳನದಲ್ಲಿ ಅಂದಾಜು 4 ಸಾವಿರ ಮಹಿಳಾ ಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದಾರೆ. ಅವರ ವಸತಿ, ಸಾರಿಗೆ, ಊಟೋಪಚಾರ, ವೈದ್ಯಕೀಯ ಸೌಲಭ್ಯಕ್ಕೆ ಜಿಲ್ಲಾಡಳಿತ ವಿಶೇಷ ವ್ಯವಸ್ಥೆ ಮಾಡಿದೆ.

ಪುಟ್ಟ ಮಕ್ಕಳೊಂದಿಗೆ ಬರುವ ತಾಯಂದಿರಿಗಾಗಿ ಹಾಲುಣಿಸುವ ಕೇಂದ್ರ ಸಿದ್ಧವಾಗುತ್ತಿದ್ದು, ಸುಮಾರು 25ರಿಂದ 30 ಮಹಿಳೆಯರು ಇರಬಹುದಾದ ಕೊಠಡಿಯನ್ನು ವೇದಿಕೆಯ ಸಮೀಪದಲ್ಲೇ ನಿರ್ಮಿಸಲಾಗುತ್ತಿದೆ. ಜತೆಗೆ ಮಹಿಳೆಯರಿಗಾಗಿಯೇ ಪ್ರತ್ಯೇಕ ಮಾಹಿತಿ ಕೇಂದ್ರ ತೆರೆಯಲಾಗುತ್ತಿದೆ.

ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ದೀಪಾ ಚೋಳನ್, ‘ಸಮ್ಮೇಳನಕ್ಕೆ ಬರುವ ಮಹಿಳೆಯರ ಸುರಕ್ಷತೆ ನಮ್ಮ ಹೊಣೆ. ಹೀಗಾಗಿ ಅವರು ತಂಗಲಿರುವ ಸ್ಥಳಗಳಲ್ಲಿ ಮಹಿಳಾ ನೋಡಲ್ ಅಧಿಕಾರಿಗಳು ಮತ್ತು ಭದ್ರತೆಗೆ ಮಹಿಳಾ ಕೆಡೆಟ್ಸ್‌ಗಳನ್ನೇ ನೇಮಿಸಲಾಗಿದೆ. ವೇದಿಕೆ ಬಳಿ ಪ್ರತ್ಯೇಕ ಆಸನ ವ್ಯವಸ್ಥೆ, ಊಟಕ್ಕೆ ಪ್ರತ್ಯೇಕ ಕೌಂಟರ್, ವಾಸ್ತವ್ಯ ಕಲ್ಪಿಸಿರುವ ಕೆಲ ಕಲ್ಯಾಣ ಮಂಟಪ, ವಿದ್ಯಾರ್ಥಿ ನಿಲಯವನ್ನು ಸಂಪೂರ್ಣ ಮಹಿಳೆಯರಿಗಾಗಿಯೇ ಮೀಸಲಿಡಲಾಗಿದೆ. ಅಲ್ಲಿ ಸಂಪೂರ್ಣ ಸುರಕ್ಷತೆಗೆ ಒತ್ತು ನೀಡಲಾಗುತ್ತಿದೆ’ ಎಂದರು.

‘ಮಹಿಳೆಯರಿಗಾಗಿ ಮಾಹಿತಿ ಕೇಂದ್ರ ತೆರೆಯಲಾಗುತ್ತಿದೆ. ಇಲ್ಲಿ ವಸತಿ, ಸಾರಿಗೆ, ಶೌಚಾಲಯ, ಊಟದ ಪ್ರಾಂಗಣದ ಮಾಹಿತಿ ಎಲ್ಲವೂ ಲಭ್ಯ. ಜತೆಗೆ ಅವರಿಗೆ ಆರೋಗ್ಯ ಸಂಬಂಧಿ ಸಮಸ್ಯೆಗಳಿದ್ದರೆ ಇಲ್ಲಿ ವೈದ್ಯರ ಮಾಹಿತಿ ಸಿಗಲಿದೆ. ಜತೆಗೆ ಸ್ಯಾನಿಟರಿ ಪ್ಯಾಡ್‌ ಕೂಡ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರಿಗೆ ಮಾಹಿತಿ ನೀಡಲು, ಅವರಿಗೆ ನೆರವಾಗಲು ಮಹಿಳಾ ಸ್ವಯಂ ಸೇವಕರನ್ನೇ ನೇಮಿಸಲಾಗುತ್ತಿದೆ’ ಎಂದರು.

‘ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಮಹಿಳಾ ಕಲಾವಿದರಿಗೆ ಅವರು ಹೋಗಬೇಕಾದ ಸಭಾಂಗಣದ ಮಾಹಿತಿ, ಅಲ್ಲಿಗೆ ಕರೆದೊಯ್ಯಲು ವಾಹನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಅವರಿಗೆ ಸಲ್ಲಬೇಕಾದ ಸಂಭಾವನೆಯನ್ನು ಆರ್‌ಟಿಜಿಎಸ್ ಮೂಲಕ ಶೀಘ್ರದಲ್ಲಿಯೇ ಖಾತೆಗೆ ಹಾಕಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಸಮ್ಮೇಳನ ಆಯೋಜನೆಗೊಂಡಿರುವ ಸ್ಥಳದಲ್ಲಿ ಮತ್ತು ನಗರದ ಹೃದಯಭಾಗಕ್ಕೆ ಬರುವ ಮಾರ್ಗಗಳಲ್ಲಿ ಹೆಚ್ಚಿನ ಬೆಳಕಿನ ವ್ಯವಸ್ಥೆ ಮಾಡಲಾಗಿದೆ’ ಎಂದು ಚೋಳನ್ ತಿಳಿಸಿದರು.

ಗಣ್ಯರಿಗೆ ಪ್ರತ್ಯೇಕ ಸಹಾಯಕರು

84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿಗಳಲ್ಲಿ ಭಾಗವಹಿಸುವ ಗಣ್ಯರಿಗೆ ತಲಾ ಒಬ್ಬ ಸಹಾಯಕರನ್ನು ನೀಡಲು ಕನ್ನಡ ಸಾಹಿತ್ಯ ಪರಿಷತ್ತು ನಿರ್ಧರಿಸಿದೆ. ಬರುವ ಅತಿಥಿಗಳಿಗೆ ವಾಸ್ತವ್ಯ, ಊಟೋಪಚಾರ, ವೇದಿಕೆ ಮತ್ತು ಕಾರ್ಯಕ್ರಮಗಳ ಮಾಹಿತಿ, ಅವರಿಗೆ ಆಸನ ಮತ್ತು ಸಾರಿಗೆ ವ್ಯವಸ್ಥೆ ಇತ್ಯಾದಿ ಮಾಹಿತಿ ಮತ್ತು ನೆರವು ನೀಡಲು ಈ ವ್ಯವಸ್ಥೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ. ಮನು ಬಳಿಗಾರ ತಿಳಿಸಿದರು.

* ಸಾಹಿತ್ಯ ಸಮ್ಮೇಳನ ನಡೆಯುವ ಮೂರೂ ದಿನ, ಕಾಲ ನಗರಕ್ಕೆ ಬರುವ ಮಹಿಳೆಯರು ನಿರ್ಭೀತಿಯಿಂದ ಇರುವಂತೆ ಮಾಡಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ
– ದೀಪಾ ಚೋಳನ್‌, ಜಿಲ್ಲಾಧಿಕಾರಿ

ಹಾಲುಣಿಸಲು ಪ್ರತ್ಯೇಕ ಕೊಠಡಿ

ಮಹಿಳೆಯರಿಗೆ ಪ್ರತ್ಯೇಕ ಆಸನ, ಊಟೋಪಚಾರ

ಮಹಿಳೆಯರ ಸುರಕ್ಷತೆಗೆ ಸಹಾಯವಾಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT