ಭಾಷಾ ನೀತಿಗೆ ಚೌಕಟ್ಟು ರೂಪಿಸುವುದು ಅಗತ್ಯ: ಚಂದ್ರಶೇಖರ ಕಂಬಾರ

7
ಅಖಿಲ ಭಾರತ 84ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ. ಚಂದ್ರಶೇಖರ ಕಂಬಾರ

ಭಾಷಾ ನೀತಿಗೆ ಚೌಕಟ್ಟು ರೂಪಿಸುವುದು ಅಗತ್ಯ: ಚಂದ್ರಶೇಖರ ಕಂಬಾರ

Published:
Updated:
Prajavani

ಧಾರವಾಡ: ‘ಭಾಷಾ ನೀತಿಗೆ ಸಮರ್ಪಕವಾದ ಚೌಕಟ್ಟು ರೂಪಿಸುವ ಅಗತ್ಯವಿದೆ’ ಎಂದು 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.‌‌

ನಗರಕ್ಕೆ ಗುರುವಾರ ಸಂಜೆ ಪತ್ನಿ ಸತ್ಯಭಾಮಾ ಕಂಬಾರ ಜತೆ ಆಗಮಿಸಿದ ಡಾ. ಚಂದ್ರಶೇಖರ ಕಂಬಾರ ಅವರನ್ನು ಸಾಹಿತ್ಯ ಭವನದಲ್ಲಿ ಆತ್ಮೀಯವಾಗಿ ಸ್ವಾಗತಿಸಿ ಗೌರವಿಸಲಾಯಿತು. ಬಳಿಕ ಮಾತನಾಡಿದ ಕಂಬಾರ, ಭಾಷಾ ಮಾಧ್ಯಮದ ಬಗೆಗಿನ ತಮ್ಮ  ಅಭಿಪ್ರಾಯ ಹಂಚಿಕೊಂಡರು. ಜೊತೆಗೆ, ಧಾರವಾಡ ನೆಲದಲ್ಲಿ ಕಳೆದ ಅಪರೂಪದ ಕ್ಷಣಗಳನ್ನು ನೆನಪಿನ ಬುತ್ತಿಯನ್ನು ಬಿಚ್ಚಿಟ್ಟರು.

‘ಭಾಷೆಗೆ ಚೌಕಟ್ಟು ಒದಗಿಸುವಲ್ಲಿ ಕೇಂದ್ರ ಸರ್ಕಾರದ ಪಾತ್ರ ಮುಖ್ಯ. ಕೇಂದ್ರ ಸರ್ಕಾರ ಇದುವರೆಗೆ ಸ್ಪಷ್ಟವಾದ ಭಾಷಾ ನೀತಿಯನ್ನು ರೂಪಿಸಿಲ್ಲ. ಈ ನೀತಿ ರೂಪಿಸುವಾಗ ರಾಜ್ಯ ಸರ್ಕಾರದ ಪಾತ್ರದ ಬಗ್ಗೆಯೂ ಚರ್ಚಿಸಬೇಕು. ಬಳಿಕವೇ ಭಾಷೆಗೆ ಚೌಕಟ್ಟು ಒದಗಿಸಲು ಸಾಧ್ಯ’ ಎಂದು ಅವರು ಪ್ರತಿಪಾದಿಸಿದರು.

‘ಸಾಹಿತ್ಮ ಸಮ್ಮೇಳನ ಎನ್ನುವುದು ಕನ್ನಡ ಹಬ್ಬ. ಇಲ್ಲಿ ಎಲ್ಲರೂ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಈ ಮೂಲಕ ಒಡನಾಟ ಬೆಳೆಯುತ್ತದೆ. ಎಷ್ಟೇ ವಿರೋಧಗಳು ಮತ್ತು ಭಿನ್ನಾಭಿಪ್ರಾಯಗಳಿದ್ದರೂ ನಾವೆಲ್ಲರೂ ಒಂದೇ. ಈ ರೀತಿಯ ಸಮ್ಮೇಳನ ಯಾವ ಭಾಷೆಯಲ್ಲೂ ನಡೆಯುವುದಿಲ್ಲ’ ಎಂದರು.

‘ಧಾರವಾಡದಲ್ಲಿ ನಡೆಯುತ್ತಿರುವ ಸಮ್ಮೇಳನಕ್ಕೆ ಅಧ್ಯಕ್ಷನಾಗಿರುವುದು ನನ್ನ ಸುದೈವ. ನನ್ನ ಬದುಕಿನ ಅತ್ಯಂತ ಅಪ್ರತಿಮ ಕ್ಷಣಗಳಿವು. ನಾನು ನಡೆದಾಡಿದ ನೆಲ ಇದು. ಮಹಾನುಭಾವರ ಕರ್ಮಭೂಮಿ ಇದು. ಜಾಗೃತ ಸ್ಥಳ ಇದು. ಈ ಪುಣ್ಯಭೂಮಿಯಲ್ಲಿ ನಡೆಯುತ್ತಿರುವ ಸಮ್ಮೇಳನದ ಅಧ್ಯಕ್ಷತೆ ಹೆಮ್ಮ ತಂದಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಕೃತಜ್ಞ’ ಎಂದು ನುಡಿದರು.

‘ಹಲವು ರಾಜ್ಯಗಳು ನನಗೆ ಪ್ರಶಸ್ತಿ ನೀಡಿವೆ. ಕೇರಳ ಮೂರು, ಮಧ್ಯಪ್ರದೇಶ ಎರಡು, ತಮಿಳುನಾಡು ಎರಡು ಪ್ರಶಸ್ತಿ ನೀಡಿವೆ. ಆದರೆ, ತವರು ಮನೆಯಲ್ಲಿ ದೊರೆಯುವ ಸನ್ಮಾನವೇ ಶ್ರೇಷ್ಠ. ಆಸ್ಸಾಂನಲ್ಲೂ ಗುರುವಾರವೇ ಪ್ರಶಸ್ತಿ ನೀಡುವವರಿದ್ದರು. ಸಮ್ಮೇಳನದ ಕಾರಣ ಅಲ್ಲಿಗೆ ಹೋಗಲಿಲ್ಲ’ ಎಂದರು.

‘ಧಾರವಾಡದಲ್ಲಿದ್ದಾಗ ನಾನು, ಎಂ.ಎಂ. ಕಲಬುರ್ಗಿ, ಚಂದ್ರಶೇಖರ ಪಾಟೀಲ, ಸಿದ್ಧಲಿಂಗ ಪಟ್ಟಣಶೆಟ್ಟಿ, ಡಾ ಗಿರಡ್ಡಿ ಗೋವಿಂದರಾಜ ಒಟ್ಟಿಗೇ ಇರುತ್ತಿದ್ದೆವು. ನಮ್ಮನ್ನು ಪಂಚ ಪಾಂಡವರು ಎಂದು ಕರೆಯುತ್ತಿದ್ದರು. ಆದರೆ, ದ್ರೌಪದಿ ಇರಲಿಲ್ಲ’ ಎಂದು ಚಟಾಕಿ ಹಾರಿಸಿದ ಕಂಬಾರ, ತಮ್ಮ ನಡುವೆ ನಡೆಯುತ್ತಿದ್ದ ಕನ್ನಡ ಸಾಹಿತ್ಯದ ಬಗೆಗಿನ ಚರ್ಚೆಗಳನ್ನು ಹಾಗೂ ತಮ್ಮ ಗುರುಗಳು ನೀಡಿದ ಮಾರ್ಗದರ್ಶನವನ್ನು ಸ್ಮರಿಸಿದರು.

ವಿವಾದ ಏಕೆ?’

ಸಮ್ಮೇಳನದ ಅಂಗವಾಗಿ ಆಯೋಜಿಸಿರುವ ಪೂರ್ಣಕುಂಭ ಮೆರವಣಿಗೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಂಬಾರ, ‘ಈಗಾಗಲೇ ಎಲ್ಲರೂ ಒಪ್ಪಿಕೊಂಡು ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರು ಸಹ ಸ್ಪಷ್ಟನೆ ನೀಡಿದ್ದಾರೆ. ಈ ವಿವಾದ ಮುಗಿದು ಹೋಗಿದೆ. ಹೀಗಿರುವಾಗ ಏಕೆ ವಿವಾದ ಸೃಷ್ಟಿಸುತ್ತೀರಿ?’ ಎಂದು ಕೇಳಿದರು.‌

ಬರಹ ಇಷ್ಟವಾಯಿತೆ?

 • 4

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !