ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿದುಬಂತು ಜನಸಾಗರ; ಎಳೆದರು ನುಡಿ ತೇರ

ಸಮ್ಮೇಳನ ಅಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಅವರಿಗೆ ಅಭಿಮಾನದ ಸ್ವಾಗತ ನೀಡಿದ ಧಾರವಾಡ ಮಂದಿ
Last Updated 4 ಜನವರಿ 2019, 20:10 IST
ಅಕ್ಷರ ಗಾತ್ರ

ಧಾರವಾಡ: 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಕ್ಕೆ ನುಡಿಜಾತ್ರೆಯ ತೇರನ್ನು ಸಾಗರದಂತೆ ಬಂದ ಧಾರಾನಗರಿಯ ನಾಗರಿಕರು ಅಭಿಮಾನದಿಂದ ಎಳೆದರು.

ಶುಕ್ರವಾರದಿಂದ ಆರಂಭವಾದ ಸಾಹಿತ್ಯ ಸಮ್ಮೇಳನದಲ್ಲಿಎಲ್ಲೆಲ್ಲೂ ಕನ್ನಡದ ಕಹಳೆ ಮೊಳಗಿತು. ಕನ್ನಡದ ಧ್ವಜದ ಬಣ್ಣವಾದ ಹಳದಿ ಮತ್ತು ಕೆಂಪು ತುಂಬಿದ್ದ ನಗರದಲ್ಲಿ ಎಲ್ಲೆಲ್ಲೂ ಕನ್ನಡದ್ದೇ ಕಂಪು ತುಂಬಿತ್ತು. ಸಮ್ಮೇಳನ ನಡೆಯುತ್ತಿರುವುದು ಕೃಷಿ ವಿಶ್ವವಿದ್ಯಾಲಯದ ಆವರಣವಾದರೂ, ಮೆರವಣಿಗೆ ಹೊರಟಿದ್ದು ಶತಮಾನ ಕಂಡ ಕರ್ನಾಟಕ ಕಾಲೇಜಿನಿಂದ.

ಬೆಳಿಗ್ಗೆ 8ಕ್ಕೆ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಧ್ವಜಾರೋಹಣ ನೆರವೇರಿತು. ರಾಷ್ಟ್ರಧ್ವಜವನ್ನು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ನೆರವೇರಿಸಿದರು. ಕನ್ನಡದ ಧ್ವಜವನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮನು ಬಳಿಗಾರ ಮತ್ತು ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅವರು ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು.

ನಗರದ ಹೃದಯಭಾಗದಲ್ಲಿರುವ ಕರ್ನಾಟಕ ಕಾಲೇಜು ಮೈದಾನಕ್ಕೆ 9ಕ್ಕೆ ಬಂದ ಸಮ್ಮೇಳನದ ಅಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಹಾಗೂ ಅವರ ಪತ್ನಿ ಸತ್ಯಭಾಮಾ ಕಂಬಾರ ಅವರೊಂದಿಗೆ ಇಡೀ ಕುಟುಂಬದ ಸದಸ್ಯರು ಅಧ್ಯಕ್ಷರ ಮೆರವಣಿಗೆ ನೋಡಲು ಬಂದಿದ್ದರು. ಕರ್ನಾಟಕ ಕಾಲೇಜಿನಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್‌ ಸ್ವಾಗತಿಸಿದರು. ಎನ್‌ಸಿಸಿ ದಳದಿಂದ ಗೌರವರಕ್ಷೆ ಸ್ವೀಕರಿಸಿದ ಕಂಬಾರರನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ.ದೇಶಪಾಂಡೆ, ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ, ಡಾ. ಮನು ಬಳಿಗಾರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚೈತ್ರಾ ಶಿರೂರ, ಸಂಸದ ಪ್ರಹ್ಲಾದ ಜೋಶಿ, ಶಾಸಕರಾದ ಶ್ರೀನಿವಾಸ ಮಾನೆ, ಅಮೃತ ದೇಸಾಯಿ, ಅರವಿಂದ ಬೆಲ್ಲದ ಇದ್ದರು.

ಭುವನೇಶ್ವರಿಗೆ ಪೂಜೆ ಸಲ್ಲಿಸಿದ ಕಂಬಾರರು ಕರ್ನಾಟಕ ಕಾಲೇಜು ಸಂಸ್ಥಾಪಕರಾದ ಸರ್ ಸಿದ್ದಪ್ಪ ಕಂಬಳಿ, ಅರಟಾಳ ರುದ್ರಗೌಡರು ಹಾಗೂ ರೊದ್ದ ಶ್ರೀನಿವಾಸ ರಾಯರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿದರು. ನಂತರ ಆಲಂಕೃತ ಸಾರೋಟಿನಲ್ಲಿ ಕಂಬಾರ ದಂಪತಿಯೊಂದಿಗೆ ಮನು ಬಳಿಗಾರ ಅವರನ್ನು ಗಣ್ಯರು ಕೂರಿಸಿ ಮೆರವಣಿಗೆಗೆ ಅಣಿಗೊಳಿಸಿದರು.

ಹಳದಿ, ಕೆಂಪು ಬಲೂನುಗಳುಳ್ಳ ಗುಚ್ಛಕ್ಕೆ ‘ಕನ್ನಡ ಉಳಿಸಿ’ ಎಂಬ ಫಲಕ ಕಟ್ಟಿ ಬಾನಿಗೆ ಹಾರಿಬಿಡಲಾಯಿತು. ಸಾರೋಟಿನ ಮುಂದೆಪೂರ್ಣ ಕುಂಭಹೊತ್ತ ಮಹಿಳೆಯರು, ಡೊಳ್ಳು, ಸೋಮನ ಕುಣಿತ, ವೀರಗಾಸೆ, ಜಗ್ಗಲಿಗೆ, ಕೋಲಾಟ, ಗೊಂಬೆ ಕುಣಿತ, ನಗಾರಿ ಮತ್ತಿತರ 60 ಕ್ಕೂ ಹೆಚ್ಚು ವೈವಿಧ್ಯಮಯ ಕಲೆಗಳ ಅನಾವರಣಗೊಂಡಿತು.

ಪ್ರಗತಿಪರರ ವಿರೋಧವಿದ್ದರೂ 1001 ಮಹಿಳೆಯರ ಪೂರ್ಣಕುಂಭ ಮೆರವಣಿಗೆ ಅದ್ಧೂರಿಯಾಗಿ ಮತ್ತು ಯಾರ ವಿರೋಧವೂ ಇಲ್ಲದೆ ನಡೆಯಿತು. ಬಿಸಿಲು ಏರುವುದರೊಳಗಾಗಿ ಪೂರ್ಣಕುಂಭವನ್ನು ಕೃಷಿ ವಿಶ್ವವಿದ್ಯಾಲಯ ತಲುಪಿಸುವ ಉದ್ದೇಶದಿಂದ ಮೆರವಣಿಗೆಗೆ ಚಾಲನೆ ನೀಡಿದ ನಂತರ ವೇಗವಾಗಿ ಕರೆದೊಯ್ಯಲಾಯಿತು. ಮಕ್ಕಳೂ ಬಿಸಿಲ ಝಳಕ್ಕೆ ಸುಸ್ತಾಗದಂತೆ ಮೆರವಣಿಗೆ ಸಮಿತಿ ವ್ಯವಸ್ಥೆ ಮಾಡಿತ್ತು.

ಅಲ್ಲಲ್ಲಿ ಕುಡಿಯುವ ನೀರು, ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಸಾಗುತ್ತಿರುವಾಗಲೇ ನೀರು ನೀಡಲಾಗುತ್ತಿತ್ತು. ಮಕ್ಕಳಿಗೂ ಸೇರಿದಂತೆ ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಚಾಕೊಲೇಟ್ ನೀಡುತ್ತಿದ್ದುದು ಕಂಡುಬಂತು. ಮೆರವಣಿಗೆ ಮಾರ್ಗದ ಇಕ್ಕೆಲೆಗಳಲ್ಲಿ ಜನರು ನಿಂತು ಜಾನಪದ ಕಲಾತಂಡಗಳ ಪ್ರದರ್ಶನ ವೀಕ್ಷಿಸಿದ್ದೂ ಅಲ್ಲದೆ, ತಮ್ಮ ಮೊಬೈಲ್‌ಗಳಲ್ಲಿ ದಾಖಲಿಸಿಕೊಂಡರು.

ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಸಾರ್ವಜನಿಕರು ಮತ್ತು ಕೆಲ ಸಂಘ ಸಂಸ್ಥೆಗಳು ರಂಗೋಲಿ ಬಿಡಿಸಿ ಸಮ್ಮೇಳನದ ಮೆರವಣಿಗೆಗೆ ಸ್ವಾಗತಕೋರಿದರು. ಮೆರವಣಿಗೆಯಲ್ಲಿ ಪಾಲ್ಗೊಂಡವರು ಪರಸ್ಪರ ಸಮ್ಮೇಳನದ ಶುಭಾಶಯ ಕೋರುತ್ತಿದ್ದುದ್ದು ಕಂಡುಬಂತು. ವಿವಿಧ ಜಿಲ್ಲೆಗಳಿಂದ ಬಂದಿದ್ದ ಕಲಾ ತಂಡಗಳು ಮೆರವಣಿಗೆಯ ಕಳೆಯನ್ನು ಹೆಚ್ಚಿಸಿದರು. ವಾದ್ಯಗಳ ನಾದಕ್ಕೆ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು.

ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಇತ್ಯಾದಿ ಘೋಷಣೆಗಳನ್ನು ಶಾಲಾ ವಿದ್ಯಾರ್ಥಿಗಳು ಕೂಗಿ ಕನ್ನಡದ ಜಾಗೃತಿ ಫಲಕ ಹಿಡಿದು ಇಡೀ ವಾತಾವರಣವನ್ನೇ ಕನ್ನಡಮಯವನ್ನಾಗಿಸಿದರು. ಕನ್ನಡದ ಬಾವುಟ ಬೀಸುತ್ತಾ ಸಮ್ಮೇಳನ ಅಧ್ಯಕ್ಷರಿಗೆ ಸ್ವಾಗತ ಕೋರಿದರು.

ಮೆರವಣಿಗೆ ಸಾಗಿದ ಐದು ಕಿಲೋ ಮೀಟರ್ ಉದ್ದಕ್ಕೂ ನೀರು, ತಿಂಡಿ ವ್ಯವಸ್ಥೆ ಮಾಡಲಾಗಿತ್ತು. ಮೆರವಣಿಗೆಗೂ ಮೊದಲು ಕೆಸಿಡಿ ಕಾಲೇಜು ಪಕ್ಕದಲ್ಲಿ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಕಲಾವಿದರು, ವಿದ್ಯಾರ್ಥಿಗಳು, ಭದ್ರತೆಗೆ ನಿಯೋಜನೆಗೊಂಡಿರುವ ಪೊಲೀಸರು ಉಪಾಹಾರ ಸೇವಿಸಿದರು.

ಸಮ್ಮೇಳನದ ಮಾರ್ಗದಲ್ಲಿ ಜನರು ನಿರಂತರ ಸಾಗುತ್ತಲೇ ಇದ್ದರು. ಮಧ್ಯಾಹ್ನ 1.25ಕ್ಕೆ ಮೆರವಣಿಗೆ ಕೃಷಿ ವಿವಿ ಆವರಣ ತಲುಪಿತು. ಮೆರವಣಿಗೆ ಸಾಗಿದರೂ ಸಮ್ಮೇಳನದತ್ತ ಸಾಗುತ್ತಿದ್ದ ಜನರ ಸಂಖ್ಯೆ ಇಳಿಮುಖವಾಗಿರಲಿಲ್ಲ.ಶಿಕ್ಷಣಕಾಶಿಯ ರಸ್ತೆಗಳಲ್ಲಿ 84ನೇ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಕನ್ನಡದ ಘೋಷ ಮೊಳಗಿತು.

ವಿದ್ಯಾವರ್ಧಕ ಸಂಘದಿಂದ ಸನ್ಮಾನ

ಮೆರವಣಿಗೆ ಮಾರ್ಗದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ವೇದಿಕೆ ನಿರ್ಮಿಸಿ ಡಾ. ಚಂದ್ರಶೇಖರ ಕಂಬಾರ ಅವರನ್ನು ಸನ್ಮಾನಿಸಿದರು. ಸಾರೋಟಿನಿಂದ ಕೆಳಗಿಳಿದ ಕಂಬಾರರನ್ನು ಸಂಘದ ಅಧ್ಯಕ್ಷ ಪಾಟೀಲ ಪುಟ್ಟಪ್ಪ ಹಾರ ಹಾಕಿ ಸನ್ಮಾನಿಸಿದರು. ಕಂಬಾರರು ಕೈಮುಗಿದು ಧನ್ಯವಾದ ಅರ್ಪಿಸಿದರು.

ಮರವಣಿಗೆಯಲ್ಲಿ ಶಿಕ್ಷಣಕಾಶಿಯ ವಿದ್ಯಾರ್ಥಿಗಳು

ವಿವಿಧ ಶಾಲೆಗಳ ಸುಮಾರು 20 ಸಾವಿರ ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಅವರಿಗೆ ಹಳದಿ, ಕೆಂಪು ಟಿ–ಶರ್ಟ್‌ಗಳನ್ನು ನೀಡಲಾಗಿತ್ತು. ಕನ್ನಡದ ಬಾವುಟ ಬೀಸುತ್ತ, ಕನ್ನಡ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಕ್ಲಾಸಿಕ್ ಇಂಟರ್‌ನ್ಯಾಷನಲ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT