ಖಾಸಗಿ ಶಿಕ್ಷಣ ಸಂಸ್ಥೆ ನಿಷೇಧಕ್ಕೆ ಸಿದ್ಧ: ಸಿ.ಎಂ

7
ಸಾಹಿತ್ಯ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಘೋಷಣೆ

ಖಾಸಗಿ ಶಿಕ್ಷಣ ಸಂಸ್ಥೆ ನಿಷೇಧಕ್ಕೆ ಸಿದ್ಧ: ಸಿ.ಎಂ

Published:
Updated:
Prajavani

ಅಂಬಿಕಾತನಯದತ್ತ ಪ್ರಧಾನ ವೇದಿಕೆ (ಧಾರವಾಡ): ‘ಬೆಳೆದು ನಿಂತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಸಮಾಜದಲ್ಲಿ ವರ್ಗ ತಾರತಮ್ಯ ಹೆಚ್ಚುತ್ತಿದೆ. ಜನರು ಬಯಸಿದರೆ ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಸಂಪೂರ್ಣವಾಗಿ ನಿಷೇಧಿಸಲು ನಾನು ಸಿದ್ಧ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಘೋಷಿಸಿದರು.

ಇಲ್ಲಿ ನಡೆಯುತ್ತಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿದ ಬಳಿಕ, ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಮತ್ತು ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ ಅವರ ಮಾತುಗಳಿಗೆ ತಮ್ಮ ಭಾಷಣದ ವೇಳೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ರಾಜ್ಯದಲ್ಲಿ ಯಾರೂ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವಂತಿಲ್ಲ ಎಂಬ ಕಾನೂನು ತರಲು ನಾನು ಸಿದ್ಧ’ ಎಂದರು.

‘ಖಾಸಗಿ ಶಾಲೆಗಳಿಂದ ಒಂದು ವರ್ಗದ ಜನರಿಗೆ ಉತ್ತಮ ಶಿಕ್ಷಣ ದೊರೆಯುತ್ತಿದೆ. ಬಡವರ ಮಕ್ಕಳಿಗೆ ಕಳಪೆ ಶಿಕ್ಷಣ ಸಿಗುತ್ತಿದೆ. ಈ ತಾರತಮ್ಯಕ್ಕೆ ಶಿಕ್ಷಣದಲ್ಲಿನ ವ್ಯತ್ಯಾಸವೇ ಕಾರಣ. ಹಿಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ರಾಜ್ಯದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ 13 ಲಕ್ಷದಷ್ಟು ಕುಸಿತ ವಾಗಿದ್ದು, ಖಾಸಗಿ ಶಾಲೆಗಳ ಪ್ರವೇಶಾತಿಯಲ್ಲಿ 15 ಲಕ್ಷ ಹೆಚ್ಚಳವಾಗಿದೆ. ಈ ಪರಿಸ್ಥಿತಿಗೆ ಈಗಿನ ಮೈತ್ರಿ ಸರ್ಕಾರ ಕಾರಣವೇ? ಸಮಸ್ಯೆಯ ಮೂಲ ಅರಿತು ಸರಿಪಡಿಸುವ ಕೆಲಸ ಆಗಬೇಕು’ ಎಂದು ಹೇಳಿದರು.

‘ಖಾಸಗಿ ಶಿಕ್ಷಣ ಸಂಸ್ಥೆಗಳು ಹಣ ಲಪಟಾಯಿಸುತ್ತಿವೆ. ಶಿಕ್ಷಣ ಹಕ್ಕು ಕಾಯ್ದೆಯ ಹೆಸರಿನಲ್ಲೂ ಲೂಟಿ ಮಾಡುತ್ತಿವೆ. ಶಾಲೆಗಳ ರಾಷ್ಟ್ರೀಕರಣಕ್ಕೆ ಈ ಸಾಹಿತ್ಯ ಸಮ್ಮೇಳನದಲ್ಲಿ ಒಕ್ಕೊರಲಿನ ನಿರ್ಣಯ ಮಾಡಿ. ಇಂಗ್ಲಿಷ್ ಮಾಧ್ಯಮದ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳ ರಾಷ್ಟ್ರೀಕರಣಕ್ಕೆ ನಾನು ಸಿದ್ಧನಿದ್ದೇನೆ’ ಎಂದರು.

ಹಿಂದೆ ಪರವಾನಗಿ ಇಲ್ಲದೇ ಖಾಸಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳು ನಡೆಯುತ್ತಿದ್ದವು. 2006ರಲ್ಲಿ ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಂತಹ 416 ಶಾಲೆಗಳನ್ನು ರದ್ದು ಮಾಡಲಾಗಿತ್ತು. ಅಂತಹ ಕಠಿಣ ನಿಲುವು ತಳೆಯಲು ಮೈತ್ರಿ ಸರ್ಕಾರ ಸಿದ್ಧವಿದೆ. ವಾಸ್ತವಾಂಶ ಆಧರಿಸಿದ ಸಲಹೆಗಳನ್ನು ನೀಡಿದರೆ ಲೋಪ ಸರಿಪಡಿಸಲು ರಾಜ್ಯ ಸರ್ಕಾರ ಹಿಂಜರಿಯುವುದಿಲ್ಲ ಎಂದು ಹೇಳಿದರು.

ಶೀಘ್ರದಲ್ಲಿ ಸಭೆ: ‘ಸರ್ಕಾರದಿಂದ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಆರಂಭಿಸುವ ಯೋಜನೆಯ ಹಿಂದೆ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶವಿದೆ. ಈ ವಿಚಾರದಲ್ಲಿ ಗೊಂದಲಕ್ಕೆ ಅವಕಾಶ ನೀಡುವುದಿಲ್ಲ. ಶೀಘ್ರದಲ್ಲಿ ಸಭೆ ಕರೆದು ಚರ್ಚಿಸುವೆ. ಡಾ.ಚಂದ್ರಶೇಖರ ಕಂಬಾರ, ಪ್ರೊ.ಚಂದ್ರಶೇಖರ ಪಾಟೀಲ, ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ (ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ), ಮನು ಬಳಿಗಾರ ಎಲ್ಲರನ್ನೂ ಸಭೆಗೆ ಕರೆಯುವೆ’ ಎಂದು ಚಂಪಾ ಅವರನ್ನುದ್ದೇಶಿಸಿ ಹೇಳಿದರು.

ಕನ್ನಡ ಭಾಷೆಗೆ ಧಕ್ಕೆ ತರಲು ತಮ್ಮ ಜೀವಿತಾವಧಿಯಲ್ಲಿ ಅವಕಾಶ ನೀಡುವುದಿಲ್ಲ. ಮೈತ್ರಿ ಧರ್ಮ ಪಾಲನೆಯ ವಿಚಾರದಲ್ಲೂ ಬದ್ಧತೆ ಇದೆ. ಮೈತ್ರಿ ಧರ್ಮಕ್ಕೆ ದ್ರೋಹ ಮಾಡುವುದಿಲ್ಲ. ರಚನಾತ್ಮಕ ಸಲಹೆಗಳನ್ನು ಸರ್ಕಾರ ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತದೆ ಎಂದರು.

ಚೆಲ್ಲಾಟ ಆಡಬಾರದು: ‘ಭಾಷೆ ಉಳಿಯಬೇಕು ಎಂಬ ವಿಚಾರದಲ್ಲಿ ನನ್ನ ಸಹಮತ ಇದೆ. ಆದರೆ, ಅದೇ ವಿಷಯವನ್ನು ಮುಂದಿಟ್ಟುಕೊಂಡು ಬಡವರು, ದುರ್ಬಲ ವರ್ಗದ ಯುವ ಜನರ ಬದುಕಿನ ಜೊತೆ ಚೆಲ್ಲಾಟ ಆಡಬಾರದು. ಆ ವರ್ಗದ ಮಕ್ಕಳು ಉದ್ಯೋಗ ಮತ್ತು ಗುಣಮಟ್ಟದ ಜೀವನ ನಡೆಸುವ ಅವಕಾಶಗಳಿಂದ ವಂಚಿತರಾಗದಂತೆ ಕ್ರಮ ವಹಿಸುವುದು ಅವಶ್ಯಕ’ ಎಂದು ಪ್ರತಿಪಾದಿಸಿದರು.

ಪ್ರಾಯೋಗಿಕವಾಗಿ ಜಾರಿ

‘ರಾಜ್ಯದಲ್ಲಿ ಇಂಗ್ಲಿಷ್‌ ಮಾಧ್ಯಮ ಸರ್ಕಾರಿ ಶಾಲೆಗಳನ್ನು ಪ್ರಾಯೋಗಿಕವಾಗಿ ಆರಂಭಿಸಲಾಗುತ್ತಿದೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಭಾಷಣದ ಲಿಖಿತ ಪ್ರತಿಯಲ್ಲಿ ಮುಖ್ಯಮಂತ್ರಿ ಈ ವಿಚಾರ ಉಲ್ಲೇಖಿಸಿದ್ದಾರೆ. ಆದರೆ, ಭಾಷಣದ ಕೊನೆಯಲ್ಲಿ ಈ ಭಾಗವನ್ನು ಅವರು ಓದಲಿಲ್ಲ.

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಶಾಲೆಗಳಿಗೆ ಬರುತ್ತಿದ್ದಾರೆ. ಉಳಿದವರು ಆರ್ಥಿಕ ಮುಗ್ಗಟ್ಟಿನ ಕಾರಣದಿಂದ ಬರುತ್ತಿದ್ದಾರೆ. ಮಕ್ಕಳ ಶಿಕ್ಷಣ ಮಾಧ್ಯಮದ ಆಯ್ಕೆ ಪೋಷಕರಿಗೇ ಬಿಟ್ಟದ್ದು ಎಂಬುದಾಗಿ ಸುಪ್ರೀಂಕೋರ್ಟ್ ಹೇಳಿದೆ’ ಎಂಬ ಮಾತುಗಳೂ ಅವರ ಭಾಷಣದ ಪ್ರತಿಯಲ್ಲಿವೆ.

ಇವನ್ನೂ ಓದಿ...

ಧ್ವಜಾರೋಹಣದ ಮೂಲಕ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ​

ಮೊಳಗಿತು ಕನ್ನಡದ ಕಹಳೆ: ಅದ್ದೂರಿ ಮೆರವಣಿಗೆಗೆ ವರ್ಣರಂಜಿತ ಚಾಲನೆ​

ಸಮ್ಮೇಳನ ಮೆರವಣಿಗೆಗೆ ಪೂರ್ಣಕುಂಭ ಸ್ವಾಗತ​

ಸಮ್ಮೇಳನ: ಹೊಸ ನೋಂದಣಿಗೆ ಅವಕಾಶಕ್ಕೆ ಆಗ್ರಹಿಸಿ ಕನ್ನಡಾಭಿಮಾನಿಗಳ ಧರಣಿ​

* ಮೊದಲು ಕನ್ನಡ, ನಂತರ ಉಳಿದದ್ದು: ಚಂದ್ರಶೇಖರ ಕಂಬಾರ ಸಂದರ್ಶನ

ಸಾಹಿತ್ಯ ಸಮ್ಮೇಳನದ ಪೂರ್ಣಕುಂಭ ಮೆರವಣಿಗೆಯಲ್ಲಿ ಪುರುಷರಿಗೂ ಅವಕಾಶ: ಮನು ಬಳಿಗಾರ

ಪೂರ್ಣಕುಂಭ ಸ್ವಾಗತ!

ಬರಹ ಇಷ್ಟವಾಯಿತೆ?

 • 21

  Happy
 • 2

  Amused
 • 0

  Sad
 • 0

  Frustrated
 • 8

  Angry

Comments:

0 comments

Write the first review for this !