ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊಟಕ್ಕಾಗಿ ಪರದಾಡಿದ ಜನ!

Last Updated 5 ಜನವರಿ 2019, 7:14 IST
ಅಕ್ಷರ ಗಾತ್ರ

ಕೃಷಿ ವಿವಿ ಆವರಣ ಧಾರವಾಡ: ನಗರದಲ್ಲಿ ಶುಕ್ರವಾರ ಆರಂಭಗೊಂಡ 84 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೊದಲ ದಿನವೇ ಜನ ಊಟಕ್ಕಾಗಿ ಪರದಾಡುವಂತಾಯಿತು.

ಆಯೋಜಕರ ನಿರೀಕ್ಷೆ ಮೀರಿ ಜನ ಆಗಮಿಸಿದ್ದರಿಂದಾಗಿ ಊಟ ಆರಂಭಗೊಂಡ ಕೆಲವೇ ಹೊತ್ತಿನಲ್ಲಿ ಅಡುಗೆ ಖಾಲಿಯಾಗಿ, ಹಸಿದ ಜನ ಬ್ಯಾರಿಕೇಡ್‍ಗಳನ್ನು ಮುರಿದು ಒಳನುಗ್ಗಿದರು. ಹಸಿದವರನ್ನು ನಿಯಂತ್ರಿಸುವುದು ಪೊಲೀಸರಿಗೂ ಕಷ್ಟವಾಯಿತು.

ಕೆಲವರು ಪಾತ್ರೆಯೊಳಗಿನ ಅನ್ನವನ್ನು ತಮ್ಮ ತಟ್ಟೆಯಿಂದಲೇ ತುಂಬಿಕೊಂಡರು. ಆದರೆ ಸಾರು ಸೇರಿದಂತೆ ಉಳಿದ ಪದಾರ್ಥಗಳ ಕೊರತೆಯಿಂದಾಗಿ ಬರೀ ಅನ್ನ ಮಾತ್ರ ಊಟ ಮಾಡುವಂತಾಯಿತು.

ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಗಣ್ಯರು, ಪ್ರತಿನಿಧಿಗಳು ಮತ್ತು ಸಾರ್ವಜನಿಕರಿಗಾಗಿ ಆಹಾರ ಸಮಿತಿ ಮೂರು ಭೋಜನಾಂಗಣಗಳನ್ನು ವ್ಯವಸ್ಥೆ ಮಾಡಿತ್ತು. ಮೊದಲ ದಿನ ಸುಮಾರು 50 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುವುದು. ಇದಕ್ಕೂ ಹೆಚ್ಚು ಸಂಖ್ಯೆಯಲ್ಲಿ ಜನ ಬಂದರೂ ಅದಕ್ಕೆ ವ್ಯವಸ್ಥೆ ಇದೆ ಎಂದು ಸಮಿತಿ ಸಂಯೋಜಕರು ಹೇಳಿದ್ದರು.

ಆರಂಭದಲ್ಲಿ ಜನ ಹೆಚ್ಚಾದರೂ ಊಟಕ್ಕೆ ಕೊರತೆಯಾಗದಂತೆ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡಿರುವುದಾಗಿ ಆಹಾರ ಸಮಿತಿ ಹೇಳಿತ್ತು. ಅಲ್ಲದೇ ಸಮ್ಮೇಳನದಲ್ಲಿ ಊಟ, ವಸತಿ ಮತ್ತು ಸಾರಿಗೆ ವ್ಯವಸ್ಥೆ ಸಮರ್ಪಕವಾಗಿ ಆದರೆ ಅರ್ಧ ಸಮ್ಮೇಳನ ಯಶಸ್ವಿಯಾದಂತೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದರು. ಇದೆಲ್ಲವೂ ಮೊದಲ ದಿನವೇ ತಲೆಕೆಳಗಾಗಿ ತೊಂದರೆ ಅನುಭವಿಸುವಂತಾಯಿತು.

ಉಪಾಹಾರಕ್ಕೂ ಪರದಾಟ

ಸಮ್ಮೇಳನದಲ್ಲಿ ಭಾಗವಹಿಸಿದ್ದ ಹಲವರಿಗೆ ಬೆಳಿಗ್ಗೆ ಉಪಾಹಾರ ದೊರೆಯಲಿಲ್ಲ. ಹೀಗಾಗಿ, ಬಹುತೇಕ ಮಂದಿಗೆ ಅನ್ನ, ಸಾಂಬಾರ ನೀಡಿ ಸಂಘಟಕರು ಸಮಾಧಾನ ಮಾಡುವ ಪ್ರಯತ್ನ ಮಾಡಿದರು.

ನಿರೀಕ್ಷೆಗೂ ಮೀರಿ ಜನರು ಬಂದಿದ್ದರಿಂದ ಸಮಸ್ಯೆಯಾಯಿತು ಎಂದು ಸಂಘಟಕರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT